ರಾಜಕೀಯ ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗವಾಗಿದ್ದು, ಶೀಘ್ರದಲ್ಲೇ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರು : ರಾಜಕೀಯ ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗವಾಗಿದ್ದು, ಶೀಘ್ರದಲ್ಲೇ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ 11 ವರ್ಷಗಳ ಪ್ರಧಾನಿ ಮೋದಿ ಆಡಳಿತದಲ್ಲಿ ಬಡತನವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿದೆ ಎಂದರು.
ವಿಕಾಸವೇ ನಮ್ಮ ಮಂತ್ರ, ಶಾಂತಿ-ಸುವ್ಯವಸ್ಥೆಯೇ ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಭಾರತ ಸದ್ಯ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ದೇಶವಾಗಿದ್ದು, ಇಷ್ಟರಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರ ಸಮರ್ಥ ಆಡಳಿತದಲ್ಲಿ ಭಾರತ ಬಡತನ ರೇಖೆ ಅಳಿಸಿ ಹಾಕುವತ್ತ ಮಹತ್ವದ ಹೆಜ್ಜೆಯಿರಿಸಿದೆ. 2011-12ರಲ್ಲಿ ಶೇ.27.1 ರಷ್ಟಿದ್ದ ಬಡತನ ಪ್ರಮಾಣ ಇದೀಗ ಅತ್ಯಂತ ಕನಿಷ್ಠಮಟ್ಟಕ್ಕೆ ಅಂದರೆ ಶೇ.5.3ಕ್ಕೆ ಇಳಿದಿದೆ. 26 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ. ಆರ್ಥಿಕವಾಗಿಯೂ ಅತಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ಖುದ್ದು ವಿಶ್ವ ಬ್ಯಾಂಕ್ ವರದಿಯೇ ಹೇಳಿದೆ. ಮೋದಿ ಸಾಧನೆ ಶೂನ್ಯ ಎನ್ನುವವರಿಗೆ ವಿಶ್ವಬ್ಯಾಂಕ್ ತಕ್ಕ ಉತ್ತರ ಕೊಟ್ಟಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರ ಸಮರ್ಥ ಆಡಳಿತ, ಅಭಿವೃದ್ಧಿ ಸಾಧನೆಗೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ಬಹುಶಃ ವಿರೋಧ ಪಕ್ಷದವರು ಆರೋಪ ಮಾಡಲಾರರು ಎಂದು ಭಾವಿಸಿದ್ದೇನೆ. ಇನ್ನಾದರೂ ಪ್ರಧಾನಿ ಬಗ್ಗೆ ವೃಥಾ ಆರೋಪ ನಿಲ್ಲಿಸಲಿ. ಯಾರ ಅವಧಿಯಲ್ಲಿ ಏನೇನು ಸಾಧನೆಯಾಗಿದೆ ಎಂಬುದನ್ನು ಅರಿತುಕೊಳ್ಳಲಿ. ಮೋದಿ ಅವರನ್ನು ಮತ್ತು ಮೋದಿ ಸರ್ಕಾರವನ್ನು ಜನರೇ ಹೀರೋ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದಲ್ಲೂ ಮುಂದಿದೆ. ತಾವೇ ಸಾಮಾಜಿಕ ಹರಿಕಾರರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದವರು ಸಂಪುಟದಲ್ಲಿ ಶೇ.20ರಷ್ಟು ಸ್ಥಾನಮಾನ ಸಹ ಹಿಂದುಳಿದವರಿಗೆ ಕೊಟ್ಟ ಉದಾಹರಣೆಯಿಲ್ಲ. ಆದರೆ, ಮೋದಿ ಸರ್ಕಾರ ಮಂತ್ರಿ ಮಂಡಳದಲ್ಲಿ ಶೇ.60ರಷ್ಟು ಎಸ್‌ಸಿ-ಎಸ್‌ಟಿಯವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯವನ್ನು ಮೆರೆದಿದೆ ಎಂದು ಜೋಶಿ ಹೇಳಿದರು.
ಭಾರತ ಹತ್ತು ವರ್ಷದ ಹಿಂದೆ ಆಮದು ಮೇಲೆ ಅವಲಂಬಿತವಾಗಿತ್ತು. ಆದರೆ ಇಂದು ರಫ್ತು ವಲಯದಲ್ಲಿ ವಿಶ್ವ ಪ್ರಸಿದ್ಧವಾಗಿದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಅಳವಡಿಸಿಕೊಂಡ ಪ್ರತಿಫಲವಾಗಿ 5000 ವಸ್ತು-ಉತ್ಪನ್ನಗಳನ್ನು ರಿಸರ್ವ್ ಮಾಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 25 ಸಾವಿರ ಕೋಟಿ ರು. ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿದೆ ಎಂದು ವಿವರಿಸಿದರು.
