ಮಾರ್ಚ್ 15-16 ರಂದು ಬಿಜೆಪಿ ತನ್ನ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಘೋಷಿಸಲಿದೆ. ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು. ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವನತಿ ಶ್ರೀನಿವಾಸನ್ ಹೆಸರು ಮುಂಚೂಣಿಯಲ್ಲಿದೆ. ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ಆಯ್ಕೆ ನಡೆಯುವ ಸಾಧ್ಯತೆ ಇದೆ. ಅಣ್ಣಾಮಲೈ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.

ನವದೆಹಲಿ (ಮಾ.4): 13 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಚುನಾವಣೆಗಳು ಮುಗಿದ ನಂತರ ಮಾರ್ಚ್ 15 ಅಥವಾ 16 ರ ಮಧ್ಯಭಾಗದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಘೋಷಿಸಲಿದೆ. ಜೆಪಿ ನಡ್ಡಾ ಅವರ ಉತ್ತರಾಧಿಕಾರಿಯ ಬಗ್ಗೆ ಆಂತರಿಕ ಒಮ್ಮತವನ್ನು ನಿರ್ಮಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ

ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ರಾಜಕೀಯ ಕಣ ರಂಗೇರಲು ಆರಂಭವಾಗಿದೆ. ಆಡಳಿತಾರೂಢ ಡಿಎಂಕೆ ಮೊದಲಿಗೆ ಚುನಾವಣಾ ಕಾರ್ಯ ಆರಂಭಿಸಿದೆ. ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ತವಕದಲ್ಲಿದೆ.

ಡಿಎಂಕೆ ಗೆಟೌಟ್ ಮೋದಿ ಅಭಿಯಾನಕ್ಕೆ ಅಣ್ಣಾಮಲೈ ತಿರುಗೇಟು, ಹೊಸ ಅಲೆ ಶುರು

ಬಿಜೆಪಿಯ ಹೊಸ ಯೋಜನೆ: ಇದೇ ರೀತಿ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾಗಿರುವ ಎಐಎಡಿಎಂಕೆ ಈ ಬಾರಿ ಅವಕಾಶ ಕೈತಪ್ಪಿ ಹೋಗಬಾರದು ಎಂದು ಪಣತೊಟ್ಟಿದೆ. ಅಲ್ಲದೆ ತಮಿಳುನಾಡಿನಲ್ಲಿ ನೆಲೆಯೂರಲು ಹವಣಿಸುತ್ತಿರುವ ಬಿಜೆಪಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗೆಲ್ಲಬೇಕೆಂಬ ಒತ್ತಡದಲ್ಲಿದೆ. ಇದಕ್ಕಾಗಿ ಬಲವಾದ ಮೈತ್ರಿಕೂಟ ರಚಿಸಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ ಎಐಎಡಿಎಂಕೆ (ADMK) ಹೊರಬಿದ್ದಿದೆ. ಇದರಿಂದ ಎಐಎಡಿಎಂಕೆ ಮತ್ತೆ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ನಾಯಕತ್ವ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಈ ನಡುವೆ, ಕೊಯಮತ್ತೂರು ಶಾಸಕರೂ, ತಮಿಳುನಾಡು ಬಿಜೆಪಿ ಹಿರಿಯ ನಾಯಕಿಯೂ ಆಗಿರುವ ವನತಿ ಶ್ರೀನಿವಾಸನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರ ಅಧಿಕಾರಾವಧಿ ಮುಗಿದಿದೆ. ಇದರಿಂದ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ. ಕಳೆದ ಜನವರಿ ತಿಂಗಳಲ್ಲೇ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಿತ್ತು. ಆದರೆ ದೆಹಲಿ ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಕಾರಣಗಳಿಂದ ಇದು ವಿಳಂಬವಾಗಿದೆ. 

ಮುಖ್ಯಮಂತ್ರಿ ಮಕ್ಕಳು ಹಿಂದಿ ಓದ್ಬಹುದು, ನಮ್ಮ ಮಕ್ಕಳಿಗೆ ಯಾಕೆ ಓದಬಾರದು? ಅಣ್ಣಾಮಲೈ ಪ್ರಶ್ನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರೇಸ್‌ನಲ್ಲಿ ವನತಿ ಶ್ರೀನಿವಾಸನ್?:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಜಿ.ಕಿಶನ್ ರೆಡ್ಡಿ, ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಇದ್ದಾರೆ. ಈ ಪೈಕಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ (Vanathi Srinivasan) ಸಹ ಇದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸುವುದು ಬಿಜೆಪಿಯ ವಾಡಿಕೆ. ಅಲ್ಲದೆ ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಪಾತ್ರ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಅದರಂತೆ ಆರ್‌ಎಸ್‌ಎಸ್ ಸಂಘಟನೆಯ ಶಿಫಾರಸ್ಸಿನ ಮೇರೆಗೆ ಮೇಲೆ ತಿಳಿಸಿದ ನಾಲ್ವರು ರಾಷ್ಟ್ರೀಯ ಅಧ್ಯಕ್ಷರ ರೇಸ್‌ನಲ್ಲಿದ್ದಾರೆ. ಈ ಬಾರಿ ದಕ್ಷಿಣ ರಾಜ್ಯಗಳಿಗೆ ಸೇರಿದವರನ್ನು, ಅದೂ ಒಬ್ಬ ಮಹಿಳೆಯನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ತರಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದ್ದು, ಹಾಗಾಗಿ ಪುರಂದೇಶ್ವರಿ, ವನತಿ ಶ್ರೀನಿವಾಸನ್ ಅವರು ರಾಷ್ಟ್ರೀಯ ಅಧ್ಯಕ್ಷರ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ರಾಜಕೀಯ ಮೂಲಗಳಿಂದ ಹೊರಬಿದ್ದಿರುವ ಮಾಹಿತಿ.

ವನತಿ ಶ್ರೀನಿವಾಸನ್‌ಗೆ ಹೆಸರು ಮುಂಚೂಣಿಯಲ್ಲಿರಲು ಕಾರಣವೇನು?:
ವನತಿ ಶ್ರೀನಿವಾಸನ್ ಅವರು ದೀರ್ಘಕಾಲದಿಂದ ತಮಿಳುನಾಡು ಬಿಜೆಪಿಗಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ಎಲ್.ಮುರುಗನ್ ನಂತರ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಸ್ಥಾನವನ್ನು ಅಣ್ಣಾಮಲೈ (Annamalai) ಕಸಿದುಕೊಂಡರು. ಇದರಿಂದ ದೀರ್ಘಕಾಲದಿಂದ ದೊಡ್ಡ ಹುದ್ದೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿರುವ ವನತಿ ಶ್ರೀನಿವಾಸನ್‌ಗೆ ಗೌರವ ನೀಡುವ ಸಲುವಾಗಿ ಮತ್ತು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. 

ವನತಿ ಶ್ರೀನಿವಾಸನ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿದರೆ, ''ತಮಿಳುನಾಡಿನ ಮಹಿಳೆಯನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದೇವೆ'' ಎಂದು ಹೆಮ್ಮೆಯಿಂದ ಹೇಳಿಕೊಂಡು ಮಹಿಳೆಯರನ್ನು ಮತ್ತು ಬ್ರಾಹ್ಮಣ ಸಮುದಾಯದವರನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಭಾವಿಸಿದೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಾರೆ. ಇದೇ ರೀತಿ ಅಣ್ಣಾಮಲೈ ಅವರು ದೀರ್ಘಕಾಲದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರನ್ನು ಸಹ ಕೇಂದ್ರ ಸಚಿವರನ್ನಾಗಿ ಮಾಡಲು ಬಿಜೆಪಿ ನಾಯಕತ್ವ ನಿರ್ಧರಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. 

ಕೇಂದ್ರ ಸಚಿವರಾಗುವ ಅಣ್ಣಾಮಲೈ?:
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಬಿಜೆಪಿ ಎಂದಿಗೂ ತಪ್ಪಿಲ್ಲ. ಉದಾಹರಣೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ತಮಿಳಿಸೈ ಸೌಂದರರಾಜನ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಯಿತು. ಎಲ್.ಮುರುಗನ್ ಅವರನ್ನು ಕೇಂದ್ರ ಸಹಾಯಕ ಸಚಿವರನ್ನಾಗಿ ನೇಮಿಸಲಾಯಿತು. ಇದೇ ರೀತಿ ಅಣ್ಣಾಮಲೈ ಅವರಿಗೂ ದೊಡ್ಡ ಗೌರವ ನೀಡಲು ಬಿಜೆಪಿ ನಿರ್ಧರಿಸಿದೆ.

ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಇಂದು ಮೂಲೆ ಮೂಲೆಗೂ ಬಿಜೆಪಿ ತಲುಪಲು ಪ್ರಮುಖ ಕಾರಣ ಅಣ್ಣಾಮಲೈ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೇಳಬೇಕೆಂದರೆ ಹಿಂದಿನ ಬಿಜೆಪಿ ಅಧ್ಯಕ್ಷರಿಗಿಂತ ಡಿಎಂಕೆ ಮೇಲೆ ಅಟ್ಯಾಕ್ ಮಾಡುವುದು, ಸರ್ಕಾರದ ತಪ್ಪುಗಳನ್ನು ಪಟ್ಟಿ ಮಾಡುವುದು, ಹೋರಾಟಗಳನ್ನು ಮಾಡುವುದು ಎಲ್ಲದರಲ್ಲೂ ಅಣ್ಣಾಮಲೈ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಜಯ್, ಸೀಮಾನ್ ಇರುವಾಗ ಅಣ್ಣಾಮಲೈ ಯಾಕೆ?:
ಇದು ಒಂದು ಕಡೆಯಾದರೆ, ನಾಮ್ ತಮಿಳರ್ ಪಕ್ಷದ ಸೀಮಾನ್ ಮತ್ತು ತವೆಕ ವಿಜಯ್ (Vijay and Seeman) ಬಿಜೆಪಿಯ ಬಿ ಟೀಂಗಳು ಮತ್ತು ಬಿಜೆಪಿಯೇ ಇವರನ್ನು ಕಣಕ್ಕಿಳಿಸಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದ್ದರಿಂದ ಅಣ್ಣಾಮಲೈ ಬದಲಿಗೆ ವಿಜಯ್, ಸೀಮಾನ್ ಅವರನ್ನು ಕಣಕ್ಕಿಳಿಸಿರುವುದರಿಂದ ಇನ್ನು ಮುಂದೆ ಅಣ್ಣಾಮಲೈ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಬಹುದು ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.