India Gate: ಅಮಿತ್ ಶಾಗೆ ರಮೇಶ್ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?
ಹಿಂದೆ ರಮೇಶ್ ಜಾರಕಿಹೊಳಿ ಸಿ.ಡಿ. ಬಂದಾಗ ಅವರಿಗೆ ಮುಜುಗರವಾದರೂ ಪತ್ನಿ ಮತ್ತು ಮಕ್ಕಳು ಮಾತ್ರ ಅವರ ಜೊತೆ ಗಟ್ಟಿಯಾಗಿ ಜೊತೆಗಿದ್ದರಂತೆ. ದೊಡ್ಡ ಮಗ ಅಮೋಘ ಗೋಕಾಕ ಕ್ಷೇತ್ರ ನೋಡಿಕೊಂಡರೆ, ಸಣ್ಣ ಮಗ 6 ತಿಂಗಳು ಹಗಲು ರಾತ್ರಿ ಜೊತೆಗೆ ಇರುತ್ತಿದ್ದನಂತೆ. ಒಮ್ಮೆ ಸ್ವತಃ ಡಿ.ಕೆ.ಶಿವಕುಮಾರ್ ಅಮೋಘನನ್ನು ಶೇಷಾದ್ರಿಪುರಂನ ಸಮಾನ ಸ್ನೇಹಿತರೊಬ್ಬರ ಮನೆಗೆ ಕರೆಸಿಕೊಂಡು ‘ನನಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಹೇಳಿದ್ದರಂತೆ.
ಗಾಯಗೊಂಡ ಹುಲಿಯ ಉಸಿರು ಗರ್ಜನೆಗಿಂತ ಘೋರವಾಗಿರುತ್ತದೆ. ಬಹುತೇಕ ರಮೇಶ್ ಜಾರಕಿಹೊಳಿ ಸ್ಥಿತಿ ಕೂಡ ಹಾಗೆಯೇ ಇದೆ. ಮನೆಯಲ್ಲಿ ಕುಳಿತರೆ ಸೋತುಹೋದ ಎಂಬ ಮೂದಲಿಕೆ, ಹೊರಗಡೆ ಬಂದು ಯುದ್ಧಕ್ಕೆ ನಿಂತರೆ ತನ್ನವರಿಂದಲೇ ಸಿಗದ ಪೂರ್ಣ ಬೆಂಬಲ. ಇದೆಲ್ಲದರ ಮಧ್ಯೆ ರಮೇಶ್ ಜಾರಕಿಹೊಳಿ ಬೆಂಗಳೂರಿನಿಂದ ದಿಲ್ಲಿಯವರೆಗೆ ಬಿಜೆಪಿ ನಾಯಕರ ಮನೆಗಳಿಗೆ ಎಡತಾಕಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಡಿ. ತಯಾರಿಕೆ ವಿಷಯದಲ್ಲಿ ಸಿಬಿಐ ತನಿಖೆಯ ಒತ್ತಡ ಹಾಕುತ್ತಿದ್ದಾರೆ. ಅಮಿತ್ ಶಾ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಡಿ.ಕೆ.ಶಿವಕುಮಾರ್ 50 ಕೋಟಿ ರು. ಖರ್ಚು ಮಾಡಿ ತಮ್ಮ ವಿರುದ್ಧ ಸಿ.ಡಿ. ತಯಾರು ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದನ್ನು ಕೇಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಬಿಜೆಪಿ ದಿಲ್ಲಿ ವರಿಷ್ಠರು ‘ಡಿಕೆಶಿ ಸಿ.ಡಿ. ಫ್ಯಾಕ್ಟರಿ’ ಎಂದು ನೀವು ಪ್ರಚಾರ ಮಾಡಲು ಏನೂ ಅಡ್ಡಿಯಿಲ್ಲ, ಚುನಾವಣೆ ಹೊಸ್ತಿಲಲ್ಲಿ ಅದು ಒಳ್ಳೆಯದು ಎಂದು ಹಸಿರು ನಿಶಾನೆ ಏನೋ ಕೊಟ್ಟಿದ್ದಾರೆ. ಆದರೆ ತನಿಖೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈಗ ಕೇಸ್ ಬುಕ್ ಮಾಡಿ ತನಿಖೆ ಮಾಡಲು ಹೊರಟರೆ ಡಿಕೆಶಿ ಪರ ಅನುಕಂಪ ಬಂದರೆ ಏನು ಮಾಡುವುದು ಎಂಬ ಜಿಜ್ಞಾಸೆ ಕೂಡ ಬಿಜೆಪಿ ನಾಯಕರಲ್ಲಿದೆ. ಜಾರಕಿಹೊಳಿ ಸ್ಥಿತಿ ನೋಡಿದರೆ ಡಿವಿಜಿ ಬರೆದ ‘ಏನದ್ಭುತ ಅಪಾರ ಶಕ್ತಿ ನಿರ್ಘಾತ, ಮಾನವನ ಗುರಿಯೇನು ಬೆಲೆಯೇನು ಮೊಗವೇನು? ಮಂಕುತಿಮ್ಮ’ ಕಗ್ಗ ನೆನಪಾಗುತ್ತದೆ.
ಜಾರಕಿಹೊಳಿ ವರ್ಸಸ್ ಉಳಿದವರು: ಕಾಂಗ್ರೆಸ್, ಜೆಡಿಎಸ್ ಸರ್ಕಾರ ಕೆಡವಿ ಬಿಜೆಪಿಗೆ ಬಂದರೂ ರಮೇಶ್ ಜಾರಕಿಹೊಳಿ ಒಂದು ರೀತಿಯಲ್ಲಿ ಬೆಳಗಾವಿ ಬಿಜೆಪಿಯಲ್ಲಿ ಏಕಾಂಗಿ. ಸಹೋದರರಾದ ಬಾಲಚಂದ್ರ ಮತ್ತು ಲಖನ್‌ರನ್ನು ಬಿಟ್ಟರೆ ಇವತ್ತು ಕೋರೆ, ಕವತಗಿಮಠ, ಲಕ್ಷ ್ಮಣ ಸವದಿ, ಜೊಲ್ಲೆ, ಅಭಯ ಪಾಟೀಲ್ ಹೀಗೆ ಯಾರೂ ಕೂಡ ಜಾರಕಿಹೊಳಿ ಜೊತೆಗಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಂಜಯ ಪಾಟೀಲ್ ಅವರು ಲಕ್ಷ್ಮೀ ಹೆಬ್ಬಾಳಕರ್‌ರನ್ನು ಸೋಲಿಸಲು ರಮೇಶ್ ಜಾರಕಿಹೊಳಿ ಸಹಾಯ ಮಾಡುತ್ತಾರೆ ಅಂದುಕೊಂಡಿದ್ದರು. ಆದರೆ ಈಗ ರಮೇಶ್ ಜಾರಕಿಹೊಳಿ ಲಕ್ಷ್ಮೇ ಹೆಬ್ಬಾಳಕರ್ ಸೋಲಬೇಕಾದರೆ ಜೈನ ಸಮುದಾಯಕ್ಕೆ ಸೇರಿದ ಸಂಜಯ ಪಾಟೀಲ್ ಬೇಡ, ಯಾರಾದರೂ ಮರಾಠಾ ಸಮುದಾಯದ ಅಭ್ಯರ್ಥಿ ಹಾಕಿ ಎಂದು ಹೇಳುತ್ತಿರುವುದು ಸಂಜಯ ಪಾಟೀಲ್ ಕೂಡ ದೂರ ಹೋಗುವಂತೆ ಮಾಡಿದೆ. ಇನ್ನು, ಶಶಿಕಲಾ ಜೊಲ್ಲೆ ವಿರುದ್ಧ ನಿಪ್ಪಾಣಿಯಲ್ಲಿ ತನ್ನ ಬ್ಯಾಂಕಿಂಗ್ ವ್ಯವಹಾರಗಳನ್ನು ನೋಡಿಕೊಳ್ಳುವ ಪಾಟೀಲ್ ರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಲು ರಮೇಶ್ ಜಾರಕಿಹೊಳಿ ಹೊರಟಿದ್ದಾರೆ ಎನ್ನಲಾಗಿದ್ದು, ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪಾರ್ಟಿಯವರು ಇರಲಿ, ತನ್ನ ಮಾತು ಕೇಳುವ ಶಾಸಕ ಆರಿಸಿ ಬರಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ. 2023ರಲ್ಲಿ ಒಂದೊಮ್ಮೆ ಅತಂತ್ರ ವಿಧಾನಸಭೆ ಬಂದರೆ ಜಾರಕಿಹೊಳಿ ಕುಟುಂಬ ಕಿಂಗ್ ಮೇಕರ್ ಆಗಿ ಹೊರಹೊಮ್ಮಬೇಕು ಎನ್ನುವ ಯೋಚನೆಯೂ ಇರಬಹುದು. ಇದನ್ನೆಲ್ಲ ನೋಡಿದರೆ ಬೆಳಗಾವಿ ಜಿಲ್ಲೆಯ ಚುನಾವಣೆಗಳು 2023ರ ಚುನಾವಣೆಯಲ್ಲಿ ಆಲ್ ಪಾರ್ಟಿ ಲಿಂಗಾಯತರು ವರ್ಸಸ್ ಜಾರಕಿಹೊಳಿ ಕುಟುಂಬ ಅನ್ನುವ ರೀತಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚು.
ಲಕ್ಷ್ಮೀ, ಡಿಕೆಶಿ ಮೇಲೆ ರಮೇಶ್ ಮುನಿಸಿಕೊಂಡಿದ್ದೇಕೆ?: ಹಾಗೆ ನೋಡಿದರೆ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಶಿಷ್ಯ ಆದರೆ, ರಮೇಶ್ ಜಾರಕಿಹೊಳಿ ಮಲ್ಲಿಕಾರ್ಜುನ ಖರ್ಗೆಗೆ ಬಹಳ ಆಪ್ತ. ಇನ್ನೊಂದು ಕಡೆ ಡಿಕೆಶಿ, ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ತೀರಾ ಆಪ್ತರಾಗಿದ್ದರು. 2018ರ ಫಲಿತಾಂಶ ಬರುವ ಹಿಂದಿನ ದಿನದವರೆಗೂ ಒಂದು ವೇಳೆ ಅತಂತ್ರ ಬಂದರೆ ತಾನು, ಮಹೇಶ್ ಕುಮತಳ್ಳಿ, ಶ್ರೀಮಂತ ಪಾಟೀಲ್ ಹಾಗೂ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಲ್ಲಿ ಎಲ್ಲಿ ಬಂದು ಭೇಟಿ ಮಾಡಬೇಕು ಅಂತೆಲ್ಲ ಮಾತನಾಡುತ್ತಿದ್ದರಂತೆ. ಆದರೆ ಯಾವಾಗ ಮರು ದಿನ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಪಕ್ಕಾ ಆಯಿತೋ ಏಕಾಂಗಿ ಆಗಿ ದಿಲ್ಲಿಗೆ ಹೋದ ಲಕ್ಷ್ಮಿ, ರಮೇಶ್‌ರನ್ನು ಮಂತ್ರಿ ಮಾಡಬೇಡಿ, ತನ್ನನ್ನು ಮಂತ್ರಿ ಮಾಡಿ ಎಂದು ದಿಲ್ಲಿ ನಾಯಕರ ಬಳಿ ಕೇಳಿಕೊಂಡರಂತೆ. ಆ ಸುದ್ದಿ ಕೇಳಿ ರಮೇಶ್ ಜಾರಕಿಹೊಳಿ ಹೃದಯ ಘಾಸಿಗೊಂಡಿತು. ಜಾರಕಿಹೊಳಿ ಆಪ್ತರು ಹೇಳುವ ಪ್ರಕಾರ ಡಿಕೆಶಿ, ಲಕ್ಷ್ಮಿ ಸೇರಿ ತನ್ನನ್ನು ರಾಜಕೀಯವಾಗಿ ಮುಗಿಸುತ್ತಾರೆ ಎಂದು ಅವರಿಗೆ ಅನ್ನಿಸಿತಂತೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಬೆಳಗಾವಿಗೆ ಬಂದಾಗ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ರಮೇಶ್ ಜಾರಕಿಹೊಳಿ, ಕೊಲ್ಲಾಪುರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಲೊಕೇಶನ್ ಗೊತ್ತಾಗುತ್ತದೆ ಎಂದು ತಮ್ಮ ಸರ್ಕಾರಿ ಕಾರಿನಲ್ಲಿ ಮೊಬೈಲ್ ಕೊಲ್ಲಾಪುರಕ್ಕೆ ಕಳಿಸಿ, ಇನ್ನೊಂದು ಖಾಸಗಿ ಕಾರಿನಲ್ಲಿ ಹೈದರಾಬಾದ್‌ಗೆ ಹೋಗಿ ಅಮಿತ್ ಶಾರನ್ನು ಭೇಟಿಯಾಗಿದ್ದರಂತೆ. ಸದಾ ಯುದ್ಧೋತ್ಸಾಹಿಗಳಿಗೆ ಶತ್ರುಗಳು ಬಹಳ. ಒಂದು ಯುದ್ಧ ಗೆದ್ದ ಮೇಲೆ ಶತ್ರುಗಳು ಛದ್ಮವೇಷ ಧರಿಸಿಯಾದರೂ ದಾಳಿ ನಡೆಸುವುದು ತೀರಾ ಸಹಜ. ರಮೇಶ್ ಜಾರಕಿಹೊಳಿ ಇದನ್ನು ಅರಿಯದೆ ಮೈಮರೆತಿದ್ದು ವಿಪರ್ಯಾಸ.
ಸಿ.ಡಿ. ಬಂದ ನಂತರ ಆಗಿದ್ದೇನು?: ರಮೇಶ್ ಜಾರಕಿಹೊಳಿ ಆಪ್ತರ ಬಳಿ ಹೇಳಿಕೊಂಡಿರುವ ಪ್ರಕಾರ ಸಿ.ಡಿ. ಹೊರಗೆ ಬರುವ ಒಂದು ತಿಂಗಳ ಮುಂಚೆಯೇ ಒಂದಿಬ್ಬರು ಬಂದು ನಮ್ಮ ಬಳಿ ಸಿ.ಡಿ. ಇದೆ ಎಂದು ಬೆದರಿಸಿದ್ದರಂತೆ. ಹೀಗಾಗಿ ರಮೇಶ್ ಏನಾದರೂ ಹೊರಗೆ ಬರುತ್ತದೆ ಅಂದುಕೊಂಡಿದ್ದರಂತೆ. ಆದರೆ ಯಾವಾಗ ಸಿ.ಡಿ. ಹೊರಗಡೆ ಬಂತೋ ಆಗ ರಮೇಶ್ 6 ತಿಂಗಳು ರಾಜ್ಯ ಇರಲಿ, ಕೇಂದ್ರ ಇರಲಿ ಯಾವ ನಾಯಕರನ್ನೂ ಭೇಟಿ ಆಗಲಿಲ್ಲವಂತೆ. ಆದರೆ ಸಿ.ಡಿ. ಬಂದು ಮುಜುಗರವಾದರೂ ಕೂಡ ಪತ್ನಿ ಮತ್ತು ಮಕ್ಕಳು ಮಾತ್ರ ಅವರ ಜೊತೆ ಗಟ್ಟಿಯಾಗಿ ಜೊತೆಗಿದ್ದರಂತೆ. ದೊಡ್ಡ ಮಗ ಅಮೋಘ ಗೋಕಾಕ ಕ್ಷೇತ್ರ ನೋಡಿಕೊಂಡರೆ, ಸಣ್ಣ ಮಗ 6 ತಿಂಗಳು ಹಗಲು ರಾತ್ರಿ ಜೊತೆಗೆ ನೆರಳಿನಂತೆ ಇರುತ್ತಿದ್ದನಂತೆ. ಒಮ್ಮೆ ಸ್ವತಃ ಡಿ.ಕೆ.ಶಿವಕುಮಾರ್ ರಮೇಶ್ ಜಾರಕಿಹೊಳಿ ಅವರ ದೊಡ್ಡ ಮಗನನ್ನು ಶೇಷಾದ್ರಿಪುರಂನ ಸಮಾನ ಸ್ನೇಹಿತರೊಬ್ಬರ ಮನೆಗೆ ಕರೆಸಿಕೊಂಡು ‘ನನಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಹೇಳಿಕೊಂಡರಂತೆ. ರಾಜಕಾರಣವೇ ಹಾಗೆ, ಇಲ್ಲಿ ಶಿಖರ ನೋಡಿದ ಬಹುತೇಕರು ಪಾತಾಳವನ್ನು ನೋಡಲೇಬೇಕು.
India Gate: ಬೊಮ್ಮಾಯಿ ಹೊಸೆದ ಮೀಸಲು ಫಾರ್ಮುಲಾ
ಸಂಸತ್ತಿನಲ್ಲಿ ರಾಗಿ ರೊಟ್ಟಿ: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಇನ್ನುಮುಂದೆ ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ಜೋಳದ ಸೂಪು, ರಾಗಿ ಅಂಬಲಿ, ಬಾಜರಾ ರೊಟ್ಟಿಹೀಗೆ ಸಿರಿಧಾನ್ಯದ ಬಹಳಷ್ಟುಆರೋಗ್ಯದಾಯಕ ತಿಂಡಿ ತಿನಿಸುಗಳು ಸಿಗಲಿವೆ. ಪ್ರಧಾನಿ ಮೋದಿ ಸಿರಿಧಾನ್ಯದ ತಿಂಡಿ ತಿನಿಸುಗಳನ್ನು ಜಿ-20 ಸಮಾವೇಶದಲ್ಲಿ ಉಣಬಡಿಸುವುದಾಗಿ ಹೇಳಿದ ನಂತರ ಸ್ಪೀಕರ್ ಓಂ ಬಿರ್ಲಾ ವಿಶೇಷ ಆಸ್ಥೆ ವಹಿಸಿ ಸಿರಿಧಾನ್ಯದ ನಾನಾ ತರಹದ ತಿಂಡಿ ತಿನಿಸುಗಳನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಕರೆದು ಹೇಳಿದ್ದಾರೆ. ಹೀಗಾಗಿ ಪ್ರಾಯೋಗಿಕವಾಗಿ ಸಂಸತ್ತಿನ ಉಪಾಹಾರ ಗೃಹದಲ್ಲಿ ಸಿರಿಧಾನ್ಯ ಕಾಣಿಸಿಕೊಂಡಿದೆ. ಹಿಂದೆ ದೇವೇಗೌಡರು ಪ್ರಧಾನಿ ಆಗಿದ್ದಾಗ ಏಕಾಏಕಿ ರಾಗಿ ಮುದ್ದೆ ಬಗ್ಗೆ ಉತ್ತರ ಭಾರತದ ಜನಕ್ಕೆ ಗೊತ್ತಾಗಿತ್ತು. ಆದರೆ ಈಗ ನಮ್ಮ ರಾಗಿ ಮತ್ತು ಜೋಳ ಸಂಸತ್ತಿಗೆ ತಲುಪಿದ್ದು, ಅದರಿಂದ ಉತ್ತರ ಭಾರತದಲ್ಲಿ ಮಾರುಕಟ್ಟೆಸೃಷ್ಟಿಯಾದರೆ ನಮ್ಮ ರೈತರಿಗೆ ಒಳ್ಳೆಯದೇ ಅಲ್ಲವೇ?
India Gate: ಬಿಜೆಪಿಗೀಗ ಬಿಎಸ್‌ವೈ ಮುನಿಸಿನ ಚಿಂತೆ!
ಸಂತೋಷ್ ಹುಟ್ಟುಹಬ್ಬ ಯಾವಾಗ?: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇವತ್ತಿನ ಬಿಜೆಪಿ ಸಂಘಟನೆಯಲ್ಲಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ನಂತರ ಅತಿ ಮಹತ್ವದ ವ್ಯಕ್ತಿ. ಮೊನ್ನೆ ಫೆಬ್ರವರಿ ಒಂದರಂದು ಸೋಶಿಯಲ್ ಮೀಡಿಯಾದಲ್ಲಿ ಬಿ.ಎಲ್. ಸಂತೋಷ್ ಹುಟ್ಟುಹಬ್ಬಕ್ಕೆ ಶುಭಾಶಯ ಎಂದು ನೂರಾರು ನಾಯಕರು ಸಂತೋಷ್ ಜೊತೆಗಿನ ಫೋಟೊ ಹಾಕಿ ಪೋಸ್ಟ್ ಹಾಕತೊಡಗಿದರು. ಆಗ ಬಿ.ಎಲ್. ಸಂತೋಷ್ ‘ಇವತ್ತು ನನ್ನ ಹುಟ್ಟುಹಬ್ಬ ಅಲ್ಲ, ಆದರೆ ಶುಭಾಶಯ ಕೋರಿದ್ದಕ್ಕೆ ಧನ್ಯವಾದ’ ಎಂದು ಮರು ಪೋಸ್ಟ್ ಹಾಕತೊಡಗಿದರು. ಬಿ.ಎಲ್. ಸಂತೋಷ್‌ರ ಆಪ್ತರಿಗೂ ಅವರ ಹುಟ್ಟುಹಬ್ಬ ಯಾವಾಗ ಎಂದು ಗೊತ್ತಿಲ್ಲ. ಯಾರಾದರೂ ಧೈರ್ಯ ಮಾಡಿ ಕೇಳಿದರೆ ಆರ್‌ಎಸ್‌ಎಸ್ ಪ್ರಚಾರಕರ ಹುಟ್ಟುಹಬ್ಬ ಆಚರಣೆ ಯಾಕೆ ಎಂದು ಮರು ಉತ್ತರ ಕೊಡುತ್ತಾರಂತೆ.