India Gate: ಬಿಜೆಪಿಗೀಗ ಬಿಎಸ್‌ವೈ ಮುನಿಸಿನ ಚಿಂತೆ!

ಈಗ ಒಂದು ವೇಳೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿದರೂ ಕೂಡ ಒಂದೋ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ತರಬೇಕು, ಅಥವಾ ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಕಾಯಬೇಕು. ಏನೇ ಆದರೂ ಅಲ್ಲಿಯವರೆಗೆ ಕರ್ನಾಟಕದ ಚುನಾವಣೆಗಳು ಮುಗಿದುಹೋಗಿರುತ್ತವೆ.

india gate article by prashanth natu over bs yediyurappa gvd

India Gate Column by Prashant Natu

ರಾಜಕಾರಣದ ಇನ್ನೊಂದು ಹೆಸರೇ ಯಾದವೀ ಕಲಹ. ವಿಘಟನೆ, ತಿಕ್ಕಾಟ, ಅಸಮಾಧಾನ, ಬೇಸರ, ಮೋಹ, ಬೆಸುಗೆ ಇವು ಇಲ್ಲದ ರಾಜಕಾರಣ ಅಪರೂಪ. ಕರ್ನಾಟಕದಲ್ಲಂತೂ ದೇವರಾಜ ಅರಸರ ಮೊದಲನೇ ಅವಧಿ, ಎಸ್‌.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಸರ್ಕಾರದ ಕಾಲ ಖಂಡಗಳನ್ನು ಬಿಟ್ಟರೆ ಪ್ರತಿ ಸರ್ಕಾರದಲ್ಲೂ ತಿಕ್ಕಾಟ, ಬೇಸರ, ಭಿನ್ನಮತ, ತನ್ನಿಮಿತ್ತ ಮುಖ್ಯಮಂತ್ರಿ ಬದಲಾವಣೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಈಗ ನೋಡಿ, ಒಂದು ಕಡೆ ಕಾಂಗ್ರೆಸ್‌ನಲ್ಲಿ ಸಿದ್ದು ಮತ್ತು ಇತರರ ನಡುವೆ ಗುದ್ದಾಟ ದಿನಂಪ್ರತಿ ನಡೆಯುತ್ತಿದ್ದರೆ ಆಡಳಿತಾರೂಢ ಬಿಜೆಪಿಯಲ್ಲೂ ಕೂಡ ಯಡಿಯೂರಪ್ಪ ತುಂಬಾ ಖುಷಿಯಲ್ಲೇನೂ ಇಲ್ಲ. ತಮ್ಮ ಮೇಲೆ ಪಕ್ಷದವರೇ ಕೆಲವರು ದಾಳಿ ನಡೆಸುತ್ತಿದ್ದರೂ ಕೂಡ ರಾಜ್ಯ ಅಧ್ಯಕ್ಷರಾಗಲಿ ಮುಖ್ಯಮಂತ್ರಿಗಳಾಗಲಿ ತಮ್ಮ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿಲ್ಲ ಎನ್ನುವುದು ಯಡಿಯೂರಪ್ಪ ಬೇಸರಗೊಳ್ಳಲು ಮುಖ್ಯ ಕಾರಣ. 

ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋಗಿದ್ದ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎದುರು ಮತ್ತು ಆರ್‌ಎಸ್‌ಎಸ್‌ ಸಹ ಸರ ಕಾರ್ಯವಾಹ ಮುಕುಂದ್‌ ಎದುರು ಬೇಸರಕ್ಕೆ ಕಾರಣಗಳನ್ನು ಕೂಡ ಹೇಳಿ ಬಂದಿದ್ದಾರೆ. ಹೀಗಾಗಿಯೇ ದಿಲ್ಲಿಗೆ ಬಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌ರನ್ನು ಕರೆಸಿಕೊಂಡು ಮಾತನಾಡಿರುವ ಕೇಂದ್ರ ಗ್ರಹ ಸಚಿವ ಅಮಿತ್‌ ಶಾ, ಯಾವುದೇ ಆಂತರಿಕ ಕಲಹಕ್ಕೂ ಅವಕಾಶ ಕೊಡದಂತೆ 4 ತಿಂಗಳು ಸಂಭಾಳಿಸಿ ಎಂದು ಹೇಳಿದ್ದಾರೆ. ಹೀಗಾಗಿಯೋ ಏನೋ ದಿಲ್ಲಿಯಿಂದ ಕೊಪ್ಪಳಕ್ಕೆ ಬಂದಕೂಡಲೇ ಯಡಿಯೂರಪ್ಪನವರ ಕಾರಿನ ಹಿಂಬದಿಯಲ್ಲಿ ಕುಳಿತ ಬೊಮ್ಮಾಯಿ ಕೊಪ್ಪಳದ ವೇದಿಕೆಯಲ್ಲಿಯೂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳುತ್ತಿದ್ದರು.

India Gate: ಎಲೆಕ್ಷನ್‌ ಗೆಲ್ಲಲು ಮೋದಿ ಅಂದರೆ ಅಷ್ಟೇ ಸಾಕೆ?

ಯಡಿಯೂರಪ್ಪ ಬೇಸರಕ್ಕೆ 3 ಕಾರಣ: ವಿಜಯಪುರದಲ್ಲಿ ಯತ್ನಾಳ ಪದೇಪದೇ ವೈಯಕ್ತಿಕ ವಾಗ್ದಾಳಿ ನಡೆಸಿದರೂ ಕೂಡ ಬೊಮ್ಮಾಯಿ, ಕಟೀಲು ತಮ್ಮ ಪರವಾಗಿ ನಿಲ್ಲುವುದಿಲ್ಲ ಎನ್ನುವ ಬಿಎಸ್‌ವೈ ಅಸಮಾಧಾನ ತುಂಬಾ ಹಳೆಯದು. ಆದರೆ ಕೆಲ ದಿನಗಳ ಹಿಂದೆ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ವಿರುದ್ಧ ಮಾತಾಡಿದರೂ ಪಾರ್ಟಿ ತಮ್ಮ ಪರವಾಗಿ ನಿಲ್ಲುತ್ತಿಲ್ಲ ಎಂಬ ಬೇಸರ ಬಿಎಸ್‌ವೈಯನ್ನು ಕಾಡುತ್ತಿದೆ. ಎರಡನೇ ಕಾರಣ, ವಿಧಾನಸೌಧದ ಎದುರು ನಡೆದ ವಾಲ್ಮೀಕಿ ಜಯಂತಿಯಲ್ಲಿ ಸ್ವಾಮೀಜಿಯೊಬ್ಬರು ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಯಡಿಯೂರಪ್ಪ ಸರ್ಕಾರ ಏನೂ ಮಾಡಲಿಲ್ಲ ಎಂದು ಹೇಳಿದ್ದನ್ನು ಪಕ್ಷದವರು ಬಲವಾಗಿ ಖಂಡಿಸಲಿಲ್ಲ ಎಂಬುದು. ಬೇಸರಕ್ಕೆ ಮೂರನೇ ಕಾರಣ, ಚಾಮರಾಜನಗರದಲ್ಲಿ ಜನಸ್ಪಂದನೆ ಯಾತ್ರೆ ಫಿಕ್ಸ್‌ ಆಗಿ ಯಡಿಯೂರಪ್ಪ ಬರುತ್ತಾರೆ ಅನ್ನುವುದು ಪಕ್ಕಾ ಆದಾಗ ಮುಖ್ಯಮಂತ್ರಿ ಬೊಮ್ಮಾಯಿ ಬಳಿ ಹೋದ ಸಚಿವ ಸೋಮಣ್ಣ, ಯಾತ್ರೆ ಬೇಡ ಅಭಿವೃದ್ಧಿ ಯೋಜನೆ ಉದ್ಘಾಟನೆ ಅಷ್ಟೇ ಮಾಡೋಣ ಎಂದು ಹೇಳಿ ಯಡಿಯೂರಪ್ಪ ಬರದಂತೆ ಮಾಡಿದರು ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿದೆ. ಸೋಮಣ್ಣ ಹೀಗೆ ಮಾಡಿದರೂ ಬೊಮ್ಮಾಯಿ ಏನೂ ಮಾತನಾಡದೇ ಒಬ್ಬರೇ ಹೋಗಿ ಬಂದಿದ್ದಾರೆ ಎಂದು ಬಿಎಸ್‌ವೈ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ತಮ್ಮ ವಿರುದ್ಧ ಮಾತಾಡಿದವರನ್ನು ದೂರ ಇಡುವ ಬದಲು ಬೊಮ್ಮಾಯಿ ಅವರ ಹೆಗಲ ಮೇಲೆ ಹೋಗಿ ಕೈಹಾಕುತ್ತಾರೆ ಅನ್ನುವುದೇ ಯಡಿಯೂರಪ್ಪ ಬೇಸರಕ್ಕೆ ಮುಖ್ಯ ಕಾರಣ ಎಂಬ ಮಾತು ಕೇಳಿಬರುತ್ತಿವೆ.

ಸಂಪುಟ ಸರ್ಕಸ್‌ ಕಥೆ ಏನು?: ಬೆಕ್ಕಿನ ಕನಸಲ್ಲಿ ಯಾವಾಗಲೂ ಇಲಿಯೇ ಇರುತ್ತದೆಯಂತೆ. ಹಾಗೆ ಕರ್ನಾಟಕದ ಬಿಜೆಪಿ ಶಾಸಕರು ಸದಾ ಕಾಲ ಕೇಳುವ ಪ್ರಶ್ನೆ ಒಂದೇ, ‘ಸಂಪುಟ ವಿಸ್ತರಣೆ ಆಗುತ್ತಾ?’ ಚುನಾವಣೆಗೆ ಮೊದಲು ಒಂದು ಸಣ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ಆಲೋಚನೆ ಸ್ಥಳೀಯ ಆರ್‌ಎಸ್‌ಎಸ್‌ನಲ್ಲಿದೆ. ಕಳೆದ ವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದ ಆರ್‌ಎಸ್‌ಎಸ್‌ ಸಹ ಸರ ಕಾರ್ಯವಾಹ ಮುಕುಂದ್‌ ಅವರು ಕೆಲ ಸಣ್ಣ ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಬೊಮ್ಮಾಯಿ ಅವರಿಗೆ ವಿನಾಕಾರಣ ಜೇನುಗೂಡಿಗೆ ಕೈಹಾಕುವ ಮನಸ್ಸು ಇದ್ದಂತಿಲ್ಲ. ಇನ್ನು ಎಲ್ಲಿ ತಮ್ಮನ್ನು ವಿರೋಧಿಸುವ ಯತ್ನಾಳ, ಈಶ್ವರಪ್ಪ, ಸಿ.ಪಿ.ಯೋಗೇಶ್ವರ್‌, ಅರವಿಂದ ಬೆಲ್ಲದರನ್ನು ಮಂತ್ರಿ ಮಾಡುತ್ತಾರೋ ಎಂದು ಯಡಿಯೂರಪ್ಪ ಅವರಿಗೂ ಮನಸ್ಸು ಇಲ್ಲ. ಆದರೆ ಹಿಂದುಳಿದ ವರ್ಗಗಳಾದ ಕುರುಬರು, ಗೊಲ್ಲರು, ಗಂಗಾಮತಸ್ಥರು, ವಾಲ್ಮೀಕಿಗಳು ಮತ್ತು ಪಂಚಮಸಾಲಿಗಳಿಗೆ ಪ್ರಾತಿನಿಧ್ಯ ಕೊಟ್ಟರೆ ಒಳ್ಳೆಯದಾಗುತ್ತದೆ ಎಂಬ ಚಿಂತನೆ ಆರ್‌ಎಸ್‌ಎಸ್‌ನಲ್ಲಿದೆ. ಆದರೆ ಇದಕ್ಕೆ ಪ್ರಧಾನಿ ಮೋದಿ ಒಪ್ಪಿಗೆ ಬೇಕು. ಹಿಮಾಚಲದಲ್ಲಿ ಬಣ ಕಿತ್ತಾಟದಿಂದ ಆಗಿರುವ ಸೋಲಿನ ನಂತರ ಮೋದಿ ಇದಕ್ಕೆಲ್ಲ ಒಪ್ಪಿಗೆ ಕೊಡುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಗೊತ್ತಿರುವುದು ಅಮಿತ್‌ ಶಾಗೆ ಮಾತ್ರ.

ಅಮಿತ್‌ ಶಾ ಸಿಸ್ಟಮ್ ಹೇಗೆ?: ಇನ್ನೇನು ಹೊಸ ವರ್ಷದ ಆರಂಭದಿಂದ ಅಮಿತ್‌ ಶಾ ಕರ್ನಾಟಕಕ್ಕೆ ಹೆಚ್ಚೆಚ್ಚು ಬರುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಎರಡು ತಿಂಗಳ ಹಿಂದೆ ಅಮಿತ್‌ ಶಾ ಬೆಂಗಳೂರಿಗೆ ಬಂದಿದ್ದರು. ಬಿಬಿಎಂಪಿ ಚುನಾವಣೆ ಮಾಡಬೇಕಾ, ಬೇಡವಾ ಅನ್ನುವ ಬಗ್ಗೆ ಚರ್ಚೆ ನಡೆದಿತ್ತು. ಆಗ ಸಮಯ ತೆಗೆದುಕೊಳ್ಳದೇ ಒಬ್ಬ ಹಿರಿಯ ಶಾಸಕ ಶಾ ಪಕ್ಕದಲ್ಲಿ ಬಂದು ಕುಳಿತರು. ಆ ಶಾಸಕ ಮಹಾಶಯರು 15 ನಿಮಿಷ ಅಲ್ಲಿ ಕುಳಿತಿರುವತನಕ ಅಮಿತ್‌ ಶಾ ತುಟಿಪಿಟಕ್‌ ಅನ್ನಲಿಲ್ಲ. ಅಷ್ಟೇ ಅಲ್ಲ, ಶಾಸಕರ ಜೊತೆ ಒಂದು ಶಬ್ದವೂ ಮಾತನಾಡಲಿಲ್ಲವಂತೆ. ಕೊನೆಗೆ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಏನೋ ಮೀಟಿಂಗ್‌ ನಡೆದಿದೆ, ತುಸು ಆಚೆಗೆ ಹೋಗಿ ಎಂದು ಹೇಳಬೇಕಾಯಿತಂತೆ. 2017ರಲ್ಲಿ ಅಮಿತ್‌ ಶಾ ಶಿವಮೊಗ್ಗಕ್ಕೆ ಹೋದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಮುನಿಸು ಜೋರಿತ್ತು. 

ಈಶ್ವರಪ್ಪ ಮನೆಗೆ ಅಮಿತ್‌ ಶಾ ಹೋಗೋದು, ಅಲ್ಲಿ ಯಡಿಯೂರಪ್ಪ ಕೂಡ ಬರುವುದು, ಅಲ್ಲಿ ಸಂಧಾನ ಅಂತೆಲ್ಲ ಪ್ಲಾನ್‌ ಆಗಿತ್ತಂತೆ. ಅಮಿತ್‌ ಶಾ ಬಂದರು. ಒಂದು ಪಕ್ಕದಲ್ಲಿ ಯಡಿಯೂರಪ್ಪ, ಇನ್ನೊಂದು ಬದಿ ಈಶ್ವರಪ್ಪ. ಇಬ್ಬರೂ ತಮ್ಮ ಅಹವಾಲು ಹಿಡಿದು ಕುಳಿತಿದ್ದರು. ಆದರೆ ಅಮಿತ್‌ ಶಾ ಟೀವಿ ನೋಡುತ್ತಾ ಕುಳಿತಿದ್ದರಂತೆ. 10, 15 ನಿಮಿಷ ಆದರೂ ಮಾತಿಲ್ಲ, ಕಥೆಯಿಲ್ಲ. ಯಾರೋ ಬಂದು ಹೊರಗಡೆ ಪತ್ರಕರ್ತರು ಕಾಯುತ್ತಿದ್ದಾರೆ ಎಂದು ಹೇಳಿದರಂತೆ. ‘ಚಲೋ ಜಾಯೆಂಗೆ’ ಎಂದು ಎದ್ದ ಅಮಿತ್‌ ಶಾ ಇಬ್ಬರ ಕೈಮೇಲೆತ್ತಿ ಕ್ಯಾಮೆರಾಗೆ ಪೋಸ್‌ ಕೊಟ್ಟು ವಿಜಯ ಸಂಕೇತ ತೋರಿಸಿ ಕಾರು ಹತ್ತಿ ಹೋದರಂತೆ. ಯಥಾಪ್ರಕಾರ ಮಾಧ್ಯಮಗಳಲ್ಲಿ ಹಾಗೆ ಸಂಧಾನ, ಹೀಗೆ ಸಂಧಾನ ಅಂತೆಲ್ಲ ಬರೆದಿದ್ದೇ ಬರೆದಿದ್ದು. ತಾತ್ಪರ್ಯ ಇಷ್ಟೇ, ಮೋದಿ ಮತ್ತು ಅಮಿತ್‌ ಶಾಗೆ ಜನರಿಗೆ ಮೆಸೇಜ್‌ ಏನು ಕೊಡಬೇಕಿದೆಯೋ ಕೊಟ್ಟು ಹೋಗಬೇಕು ಅನ್ನುವುದು ಮುಖ್ಯವೇ ಹೊರತು, ರಾಜಕೀಯದಲ್ಲಿ ಎಂದೂ ಮುಗಿಯದ ಸಿಟ್ಟು, ಸೆಡವು, ಮುನಿಸು, ಬೇಸರ, ಅಸಮಾಧಾನಕ್ಕೆ ಅವರ ರಾಜಕೀಯ ಕೋಶದಲ್ಲಿ ಜಾಗ ಇಲ್ಲ.

ಒಳ ಮೀಸಲಾತಿ ಸದ್ದು ಈಗೇಕೆ?: 4 ವರ್ಷದ ಬಿಜೆಪಿ ಸರ್ಕಾರದ ವಿರುದ್ಧ ಇರಬಹುದಾದ ಆಡಳಿತ ವಿರೋಧಿ ಅಲೆ ತಡೆಯಲು ರಾಜ್ಯ ಬಿಜೆಪಿ ಕಂಡುಕೊಂಡಿರುವ ಹೊಸ ಮಾರ್ಗ ‘ಮೀಸಲಾತಿ’ ಎಂಬ ಮಂತ್ರದಂಡದ ಮೂಲಕ ಜಾತಿ ಸಮೀಕರಣಗಳನ್ನು ಗಟ್ಟಿಗೊಳಿಸುವುದು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹೈಕಮಾಂಡ್‌ ಹಾಕಿರುವ ಲೆಕ್ಕಾಚಾರದ ಪ್ರಕಾರ ಕಿತ್ತೂರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ 17 ಜಿಲ್ಲೆಗಳಲ್ಲಿ ಲಿಂಗಾಯತರ ಗಟ್ಟಿವೋಟ್‌ಬ್ಯಾಂಕ್‌ ಜೊತೆಗೆ ವಾಲ್ಮೀಕಿಗಳು ಮತ್ತು ದಲಿತ ಎಡಗೈ ಜೊತೆಗೆ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳು ಸೇರಿಕೊಂಡರೆ ಕಳೆದ ಬಾರಿಯಷ್ಟೇ ಅಥವಾ ಇನ್ನೂ ಹೆಚ್ಚಾಗಿ ಗೆಲ್ಲಬಹುದು. ದಿಲ್ಲಿ ಮೂಲಗಳು ಹೇಳುತ್ತಿರುವ ಪ್ರಕಾರ ಆರ್‌ಎಸ್‌ಎಸ್‌ನ ಹಿರಿಯ ನಾಯಕರ ಒತ್ತಡದ ಕಾರಣದಿಂದಲೇ ಬಿಜೆಪಿ ಹೈಕಮಾಂಡ್‌ನಿಂದ ಬೊಮ್ಮಾಯಿ ಅವರಿಗೆ ಮೀಸಲಾತಿ ಹೆಚ್ಚಳ ಮತ್ತು ಒಳ ಮೀಸಲಾತಿಯ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಸೂಚನೆ ಕೊಡಲಾಗಿತ್ತು. 

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೂಲಗಳು ಹೇಳುತ್ತಿರುವ ಪ್ರಕಾರ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ದಲಿತ ಸಮುದಾಯದಲ್ಲಿ ಎಲ್ಲರೂ ಒಪ್ಪುವ ಸಾಧ್ಯತೆ ಕಡಿಮೆ. ಇದಕ್ಕೆ ಬದಲಾಗಿ ಬೋವಿ, ಲಂಬಾಣಿ, ಕೊರಚ, ಕೊರಮರಂಥ 23 ಲಕ್ಷದಷ್ಟಿರುವ ಸ್ಪೃಶ್ಯ ಸಮುದಾಯಗಳಿಗೆ ಸದಾಶಿವ ಆಯೋಗ ಹೇಳಿದ ಶೇ.3ಕ್ಕೆ ಬದಲಾಗಿ 4 ಪ್ರತಿಶತ ಮೀಸಲಾತಿ ಕೊಟ್ಟು, 31 ಲಕ್ಷ ಇರುವ ದಲಿತ ಎಡಗೈಗೆ 6.5 ಪ್ರತಿಶತ ಮೀಸಲಾತಿ ಕೊಟ್ಟು, 29 ಲಕ್ಷ ಇರುವ ದಲಿತ ಬಲಗೈಗೆ 5.5 ಪ್ರತಿಶತ ಮೀಸಲಾತಿ ಕೊಟ್ಟು, ಉಳಿದ ಸಣ್ಣ ಸಣ್ಣ ದಲಿತ ಸಮುದಾಯಗಳಿಗೆ ಶೇ.1 ಮೀಸಲಾತಿ ಸೇರಿ, ಒಟ್ಟು 17 ಪ್ರತಿಶತ ಮೀಸಲಾತಿ ಹಂಚಿಕೆ ಮಾಡುವ ನಿರ್ಣಯವನ್ನು ಸಂಪುಟ ಉಪ ಸಮಿತಿ ತೆಗೆದುಕೊಂಡರೆ ಎಲ್ಲರೂ ಸಮಾಧಾನ ಆಗಬಹುದು.

India Gate: ಮೋದಿ, ಶಾ ಬರ್ತಾರೆ, ಎಲ್ಲ ಸರಿ ಮಾಡ್ತಾರೆ!

ಒಳ ಮೀಸಲಾತಿ ನಿಜಕ್ಕೂ ಸಾಧ್ಯವೇ?: ಪಂಜಾಬ್‌ ಮತ್ತು ಹರ್ಯಾಣದಲ್ಲಿ 1975ರ ಆಸುಪಾಸಿನಲ್ಲಿ ಸರ್ಕಾರಿ ಆದೇಶದ ಮೂಲಕ ದಲಿತರಿಗೆ ಒಳ ಮೀಸಲಾತಿ ನೀಡಲಾಗಿತ್ತು. ಆದರೆ ಆ ಬಗ್ಗೆ ಅತಿ ಹೆಚ್ಚು ಚರ್ಚೆ ನಡೆದಿದ್ದು 1996ರಲ್ಲಿ. ಅವಿಭಜಿತ ಆಂಧ್ರದಲ್ಲಿ ಶುರುವಾದ ದಲಿತ ಎಡಗೈ ಮಾದಿಗ ಸಮುದಾಯದ ಹೋರಾಟದ ಮೂಲಕ. ದಲಿತ ಬಲಗೈ ಸಮುದಾಯಗಳಾದ ಮಾಲಾ ಮತ್ತು ಆದಿ ಆಂಧ್ರರು ತಮ್ಮ ಅವಕಾಶ ಕಸಿದುಕೊಳ್ಳುತ್ತಿದ್ದಾರೆ ಎಂದು ಮಾದಿಗ ಸಮುದಾಯ ಚಳವಳಿ ಆರಂಭಿಸಿತ್ತು. ಹೀಗಾಗಿ ಒತ್ತಡಕ್ಕೆ ಮಣಿದ ಆಂಧ್ರ ಸರ್ಕಾರ 2000ರಲ್ಲಿ ದಲಿತರಲ್ಲಿ ಒಳ ಮೀಸಲಾತಿ ಘೋಷಿಸಿತು. ಇದರ ವಿರುದ್ಧ ಮಾಲಾಗಳು ಕೋರ್ಟ್‌ಗೆ ಹೋದರು. 2005ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಒಳಗೊಂಡ 5 ನ್ಯಾಯಮೂರ್ತಿಗಳ ಪೀಠ, ದಲಿತರೆಲ್ಲರೂ ಒಂದೇ ಗುಂಪು, ಸಮ ಶೋಷಿತರು ಎಂದು ಹೇಳಿರುವ ಸಂವಿಧಾನದ 341ನೇ ವಿಧಿಯನ್ನು ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಅದು ಸಂಸತ್ತಿನ ಪರಮಾಧಿಕಾರ ಎಂದು ತೀರ್ಪು ನೀಡಿತು. 

ಆಗ ಆಂಧ್ರದ ಜೊತೆಗೆ ಪಂಜಾಬ್, ಹರ್ಯಾಣ ನೀಡಿದ ಒಳ ಮೀಸಲಾತಿಗಳು ಕೂಡ ರದ್ದಾದವು. ತೀರಾ ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಪಂಜಾಬ್ ಸರ್ಕಾರದ ಒಳ ಮೀಸಲಾತಿ ಪ್ರಕರಣ ಬಂದಾಗ ನ್ಯಾಯಮೂರ್ತಿ ಅರುಣ ಮಿಶ್ರಾ ಅಧ್ಯಕ್ಷತೆಯ ಪಂಚ ಸದಸ್ಯರ ಪೀಠ, ಒಳ ಮೀಸಲಾತಿ ಕೊಡುವುದು ಸಂವಿಧಾನದ 341ನೇ ವಿಧಿ ಉಲ್ಲಂಘನೆ ಅಲ್ಲ ಎಂದು ಅಭಿಪ್ರಾಯ ಹೇಳಿತ್ತಾದರೂ ಇದು 7 ಅಥವಾ 9 ಸದಸ್ಯರ ವಿಸ್ತೃತ ಪೀಠ ತೆಗೆದುಕೊಳ್ಳಬೇಕಾದ ನಿರ್ಣಯ ಎಂದು ತೀರ್ಪು ನೀಡಿತು. ಈಗ ಒಂದು ವೇಳೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿದರೂ ಕೂಡ ಒಂದೋ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ತರಬೇಕು, ಅಥವಾ ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಕಾಯಬೇಕು. ಏನೇ ಆದರೂ ಅಲ್ಲಿಯವರೆಗೆ ಕರ್ನಾಟಕದ ಚುನಾವಣೆಗಳು ಮುಗಿದುಹೋಗಿರುತ್ತವೆ ನೋಡಿ.

Latest Videos
Follow Us:
Download App:
  • android
  • ios