Asianet Suvarna News Asianet Suvarna News

India Gate: ಬೊಮ್ಮಾಯಿ ಹೊಸೆದ ಮೀಸಲು ಫಾರ್ಮುಲಾ

ಮುಂದಿನ ವಾರ ದಿಲ್ಲಿಯಲ್ಲಿ ಅಮಿತ್‌ ಶಾ ಕರ್ನಾಟಕದ ರಾಜಕೀಯಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಒಂದು ಮಹತ್ವದ ಸಭೆ ನಡೆಸುವ ಸಾಧ್ಯತೆಗಳಿವೆ. ಮೀಸಲಾತಿ ನಿರ್ಧಾರ, ಸಂಪುಟ ವಿಸ್ತರಣೆ, ಜಾತಿ ಸಮೀಕರಣಗಳು, ಚುನಾವಣೆ ತಯಾರಿ ಏನು ಹೇಗೆ ಎಂಬೆಲ್ಲ ವಿಷಯಗಳು ಚರ್ಚೆಗೆ ಬರಬಹುದು. ಮೂಲಗಳ ಪ್ರಕಾರ ರಾಜ್ಯದ ಚುನಾವಣೆಗೆ ಒಬ್ಬ ಖಡಕ್‌ ನಾಯಕನನ್ನು ಬಿಜೆಪಿ ಪ್ರಭಾರಿಯನ್ನಾಗಿ ನೇಮಿಸುವ ತೀರ್ಮಾನ ಶೀಘ್ರ ಆಗಲಿದೆ.

india gate article by prashanth natu over cm basavaraj bommai gvd
Author
First Published Dec 23, 2022, 7:06 AM IST

India Gate Column by Prashant Natu

ಸ್ವಾತಂತ್ರ್ಯ ಬಂದ ಹೊಸತರಲ್ಲಿ ವಿವಿಧ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದು ಅವುಗಳ ನಡುವೆ ಪೈಪೋಟಿ ಶುರುವಾಗಲಿ ಎನ್ನುವ ಆಶಯದಿಂದಲೇ ಶೋಷಿತ, ಪೀಡಿತ, ವಂಚಿತ ಸಮುದಾಯಗಳಿಗೆ ಮೀಸಲಾತಿ ಕೊಡುವ ತೀರ್ಮಾನ ಮಾಡಲಾಗಿತ್ತು. ಆದರೆ ನಮ್ಮ ರಾಜಕಾರಣಿಗಳಿಗೆ ಮೀಸಲಾತಿ ಎಂದರೆ ಸುಲಭವಾಗಿ ಕುಳಿತಲ್ಲಿಯೇ ರಾಜಕೀಯ ಲಾಭ ತರುವ ಬ್ರಹ್ಮಾಸ್ತ್ರ ಎಂದು ಮನವರಿಕೆ ಆಗಿ, ಸಮುದಾಯಗಳಿಗೆ ಮೀಸಲಾತಿ ಎಂದರೆ ಮಂತ್ರದಂಡ ಎಂದು ಬಿಂಬಿಸಿದ್ದರಿಂದ ಇವತ್ತು ಬಲಾಢ್ಯ ಸಮುದಾಯಗಳು ಕೂಡ ಪೈಪೋಟಿಯ ಜೊತೆಗೆ ಸಂಘರ್ಷಕ್ಕೂ ಇಳಿದಿವೆ. 

ರಾಜಕೀಯವಾಗಿ, ಸಾಮಾಜಿಕವಾಗಿ ಬಲಾಢ್ಯ ಆಗಿರುವ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳು ಕೂಡ ಮೀಸಲಾತಿ ಹೆಚ್ಚಿಸಿ ಎಂದು ಒತ್ತಡ ಹೇರುತ್ತಿರುವಾಗ, 2004ರಿಂದ ಲಿಂಗಾಯತ ವೋಟ್‌ಬ್ಯಾಂಕ್‌ ಒಟ್ಟಾಗಿ ವೋಟ್‌ ಹಾಕಿದಾಗ ಮಾತ್ರ ಅಧಿಕಾರ ಹಿಡಿದಿರುವ ಬಿಜೆಪಿ ಮೀಸಲಾತಿ ಹೋರಾಟಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು 2023ರ ಚುನಾವಣೆ ದೃಷ್ಟಿಯಿಂದ ಬಹಳ ಕುತೂಹಲಕಾರಿ. ಹಳೆಯ ಇತಿಹಾಸ ಕೆದಕಿದರೆ ಗೊತ್ತಾಗುತ್ತದೆ ಮೀಸಲಾತಿ ಪೊಲಿಟಿಕ್ಸ್‌ ಒಂದು ರೀತಿಯಲ್ಲಿ ಎರಡು ಅಲಗಿನ ಕತ್ತಿ ಇದ್ದ ಹಾಗೆ. ಲಾಭ ಆದರೆ ಯುದ್ಧಗಳನ್ನು ಗೆಲ್ಲಿಸಬಹುದು, ನಷ್ಟಆದರೆ ಇರುವ ಮನೆಗಳನ್ನು ಕೂಡ ಧ್ವಸ್ತಗೊಳಿಸಬಹುದು.

India Gate: ಬಿಜೆಪಿಗೀಗ ಬಿಎಸ್‌ವೈ ಮುನಿಸಿನ ಚಿಂತೆ!

ಬೊಮ್ಮಾಯಿ ಬಳಿಯ ವಿಕಲ್ಪಗಳು: 2023ರಲ್ಲಿ ಪಂಚಮಸಾಲಿಗಳನ್ನು ಅಸಮಾಧಾನಗೊಳಿಸಿ ಚುನಾವಣೆಗೆ ಹೋದರೆ ಲಿಂಗಾಯತ ವೋಟ್‌ಬ್ಯಾಂಕ್‌ ಒಟ್ಟಿಗೆ ಇರಿಸಿಕೊಳ್ಳುವುದು ಕಷ್ಟ. ಹೀಗಾಗಿ ಶತಾಯಗತಾಯ ಪಂಚಮಸಾಲಿಗಳ ಬೇಡಿಕೆ ಈಡೇರಿಸಬೇಕು ಅನ್ನುವ ಮನಸ್ಥಿತಿಯಲ್ಲಿ ಬೊಮ್ಮಾಯಿ ಇದ್ದಾರೆ. ಹೀಗಾಗಿ ಕಳೆದ ರವಿವಾರವೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮತ್ತು ಅಡ್ವೊಕೇಟ್‌ ಜನರಲ… ಪ್ರಭುಲಿಂಗ ನಾವದಗಿಯವರನ್ನು ಕರೆಸಿಕೊಂಡು ಕಾನೂನು ಸಾಧಕ ಬಾಧಕಗಳ ಚರ್ಚೆ ನಡೆಸಿದ್ದರು. ಮೂಲಗಳ ಪ್ರಕಾರ ಪಂಚಮ ಸಾಲಿಗಳನ್ನು ಮಾತ್ರ 2ಎಗೆ ಕರೆತಂದರೆ ಅದಕ್ಕೆ ಕಾನೂನು ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ. ಅಷ್ಟೇ ಅಲ್ಲ, ಆಗ ಒಂದು ಕಡೆ ಕುರುಬರು, ಈಡಿಗರು, ಇತರ ಹಿಂದುಳಿದ ಸಮುದಾಯಗಳು ಮುನಿಸಿಕೊಂಡು, ಜೊತೆಗೆ ಉಳಿದ ಲಿಂಗಾಯತ ಸಮುದಾಯಗಳು ಮತ್ತು ಒಕ್ಕಲಿಗರು ಕೂಡ ಸಿಟ್ಟು ಮಾಡಿಕೊಳ್ಳಬಹುದು ಎಂಬ ಆತಂಕ ಬಿಜೆಪಿಗಿದೆ. 

ಹೀಗಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಒಳಗೊಂಡ ರೈತಾಪಿ ಸಮುದಾಯಗಳನ್ನು ಒಂದು ಕಡೆ ಸೇರಿಸಿ ಒಟ್ಟಿಗೇ ಮೀಸಲಾತಿ ಕೊಡಬಹುದಾ ಎಂಬ ಚಿಂತನೆ ನಡೆಯುತ್ತಿದೆ. ಮೊದಲಿಗೆ ಮುಸ್ಲಿಮರ ಮೀಸಲಾತಿ ಕಡಿತಗೊಳಿಸುವ ಪ್ರಸ್ತಾಪ ಇತ್ತಾದರೂ ಕೂಡ ಅದು ಅನಗತ್ಯ ರಾಷ್ಟ್ರೀಯ ವಿವಾದ ಸೃಷ್ಟಿಸಬಹುದು. ಹೀಗಾಗಿ ಮೊದಲಿದ್ದ ಹಾಗೆ 2ಎನಲ್ಲಿ ಕುರುಬರು ಸೇರಿದಂತೆ 102 ಸಮುದಾಯಗಳನ್ನು ಮುಂದುವರೆಸಿ, ಉಳಿದ ಸಮುದಾಯಗಳನ್ನು ಒಟ್ಟಿಗೆ ತರಬಹುದಾ ಎಂಬ ಚಿಂತನೆ ಇದೆ. ಆದರೆ ಅದಕ್ಕೆ ಇನ್ನೂ ದಿಲ್ಲಿ ನಾಯಕರ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಬೊಮ್ಮಾಯಿ ಒಮ್ಮೆ ದಿಲ್ಲಿಗೆ ಹೋಗಿ ಅಮಿತ್‌ ಶಾ ಅವರನ್ನು ಭೇಟಿಯಾಗಿ ಬಂದ ಮೇಲೆಯೇ ಮೀಸಲಾತಿ ವರ್ಗೀಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲಿದೆ. ಅದೂ ಕೂಡ ಅಲ್ಲಿಗೇ ಮುಗಿಯುವುದಿಲ್ಲ. ಸರ್ವಪಕ್ಷಗಳ ಸಭೆ, ಕ್ಯಾಬಿನೆಟ್‌ ನಿರ್ಣಯದ ನಂತರ ವಿಧಾನ ಮಂಡಲದ ಒಪ್ಪಿಗೆಯೂ ಬೇಕಾಗುತ್ತದೆ.

ರೆಡ್ಡಿ ಬಗ್ಗೆ ಬಿಜೆಪಿ ನಿಲುವು ಏನು?: 2006ರಿಂದ 2011ರವರೆಗೆ ದಿನವೂ ರಾಜ್ಯದ ರಾಜಕಾರಣದಲ್ಲಿ ಸುದ್ದಿಯಲ್ಲಿರುತ್ತಿದ್ದ ಜನಾರ್ದನ ರೆಡ್ಡಿ 11 ವರ್ಷದ ವಿರಾಮದ ಬಳಿಕ ಮತ್ತೆ ರಾಜಕಾರಣದ ದೊಡ್ಡ ಪರದೆಯ ಮೇಲೆ ಮರಳುವ ಪ್ರಯತ್ನ ಮಾಡುತ್ತಿದ್ದಾರೆ. ತೆರೆಯ ಹಿಂದೆ ಜನಾರ್ದನ ರೆಡ್ಡಿಯವರನ್ನು ಬಿಜೆಪಿಗೆ ತೆಗೆದುಕೊಳ್ಳುವಂತೆ ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮೋದಿ ಮತ್ತು ಅಮಿತ್‌ ಶಾ ಒಪ್ಪುತ್ತಿಲ್ಲ. ಸ್ಥಳೀಯ ಕಾರಣಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರಿಗೆ ರೆಡ್ಡಿ ಬಿಜೆಪಿ ಪ್ರವೇಶದ ಬಗ್ಗೆ ಆಕ್ಷೇಪ ಇಲ್ಲ. ಆದರೆ ರೆಡ್ಡಿಯನ್ನು ಒಳಗೆ ಕರೆದುಕೊಂಡರೆ ಮಾಧ್ಯಮಗಳು ದೇಶದ ತುಂಬೆಲ್ಲ ಗಣಿ ಹಗರಣವನ್ನು ಪ್ರಸ್ತಾಪಿಸುತ್ತವೆ. ಅದು ಮೋದಿ ಇಮೇಜ್‌ಗೆ ಧಕ್ಕೆ ತರಬಹುದು. 

ಇಷ್ಟಕ್ಕೂ ರೆಡ್ಡಿ ಬರುವುದರಿಂದ ದೊಡ್ಡ ರಾಜಕೀಯ ಲಾಭವೇನೂ ಇಲ್ಲ ಎನ್ನುವುದು ದಿಲ್ಲಿ ನಾಯಕರ ಮನಸ್ಸಿನಲ್ಲಿದೆ. ಆದರೆ ಜೈಲಿನಿಂದ ಹೊರಗೆ ಬಂದ ನಂತರ ಖಾಲಿ ಇರುವ ರೆಡ್ಡಿಗೆ ಮರಳಿ ಪ್ರಭಾವ ಗಳಿಸಬೇಕಾದರೆ ರಾಜಕೀಯ ಅಧಿಕಾರ ಬೇಕು. ಹೀಗಾಗಿ ಗಂಗಾವತಿ ಗೃಹ ಪ್ರವೇಶ, ಹೊಸ ಪಾರ್ಟಿ ಸ್ಥಾಪನೆ ಅಂತೆಲ್ಲ ಓಡಾಡುತ್ತಿದ್ದಾರೆ. ಮೂಲಗಳ ಪ್ರಕಾರ ಜನಾರ್ದನ ರೆಡ್ಡಿ ಜೊತೆ ಮಾತನಾಡುವಂತೆ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪನವರಿಗೆ ಹೇಳಿದೆ. ವಾಲ್ಮೀಕಿ ವೋಟುಗಳನ್ನು ಸೆಳೆಯುವ ಶಕ್ತಿ ಇರುವ ಶ್ರೀರಾಮುಲು ಬಿಜೆಪಿಯಲ್ಲಿರುವಾಗ ಜನಾರ್ದನ ರೆಡ್ಡಿ ಒಬ್ಬರೇ ಏನೂ ಮಾಡಲಾರರು ಎಂಬ ಚಿಂತನೆ ದಿಲ್ಲಿ ನಾಯಕರಲ್ಲಿದೆ. ಹೀಗಾಗಿ ರೆಡ್ಡಿ ಬಗ್ಗೆ ಮಾಧ್ಯಮಗಳು ತಲೆ ಕೆಡಿಸಿಕೊಂಡಷ್ಟುಬಿಜೆಪಿಯ ದಿಲ್ಲಿ ನಾಯಕತ್ವ ಸದ್ಯಕ್ಕಂತೂ ಮಹತ್ವ ಕೊಡುತ್ತಿಲ್ಲ.

ರೆಡ್ಡಿ ಮಾತೇ ಬೇರೆ, ಆಂತರ‍್ಯ ಬೇರೆ: 2008 ನವೆಂಬರ್‌ 8ರ ಸಂಜೆ. ಸ್ಥಳ- ದಿಲ್ಲಿಯ ಮೌರ್ಯ ಶೆರಟಾನ್‌ ಪಂಚತಾರಾ ಹೋಟೆಲ್‌. ಲಾಬಿಯಲ್ಲಿ ನಾನು ಮತ್ತು ಕರ್ನಾಟಕ ಮೂಲದ ಆಂಗ್ಲ ಪತ್ರಕರ್ತರಾದ ಸೌಮ್ಯ ಅಜಿ ಮತ್ತು ಅನೂಪ್‌ ಕಾದು ಕುಳಿತಿದ್ದೆವು. ರೆಡ್ಡಿ ಆಪ್ತ ಸಹಾಯಕ ಅಲಿ ಖಾನ್‌ ಅವರು ಸಾಹೇಬರು ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಒಂದು ಗಂಟೆ ಕಾಯಿಸಿದ ಮೇಲೆ ರೆಡ್ಡಿ ಪೋರ್ಟಿಕೊದಲ್ಲಿ ಕಾರಿನಿಂದ ಇಳಿದರು. ಸಲಾಮು ಹೊಡೆದ ದ್ವಾರಪಾಲಕನಿಗೆ ದೊಡ್ಡ ನೋಟಿನ ಕಟ್ಟು ನೀಡಿದ ರೆಡ್ಡಿ ನಮ್ಮ ಬಳಿ ಬಂದವರೇ ಆಂಗ್ಲ ಪತ್ರಕರ್ತರಿಗೆ ‘ನಮ್ಮವರು ಎಂದು ಪಾರಿಜಾತ ಮನೆಗೆ ಕರೆದು ಸಂದರ್ಶನ ಕೊಟ್ಟೆ. ಈಗ ನೋಡಿ ಸುಷ್ಮಾ ಸ್ವರಾಜ್‌ ಮೇಡಂ ಕರೆದು ನಿನ್ನಿಂದಾಗಿ ನನ್ನ ಹೆಸರು ಹಾಳಾಯಿತು ಜನಾರ್ದನ ಎಂದು ಬೈದರು’ ಎಂದು ಹೇಳತೊಡಗಿದರು. 

ಆಗ 40 ಬಿಜೆಪಿ ಶಾಸಕರು ರೆಡ್ಡಿ ಸುಪರ್ದಿಯಲ್ಲಿ ಹೈದರಾಬಾದ್‌ನಲ್ಲಿದ್ದರು. ನಾನು ಮೆಲ್ಲನೆ ನಿಮ್ಮ ಬಳಿ ಎಷ್ಟುಹಣ ಇರಬಹುದು ಎಂದು ಕೇಳಿದೆ. ಅದಕ್ಕೆ ರೆಡ್ಡಿ, ‘1 ಅಂಕಿಯ ಮುಂದೆ ಸೊನ್ನೆಯ ಮೇಲೆ ಸೊನ್ನೆ ಹಚ್ಚುತ್ತಾ ಹೋಗಿ. ನಿಮ್ಮ ಎಣಿಕೆ ಮುಗಿಯಬಹುದು, ನನ್ನ ಬಳಿ ಅದಕ್ಕೂ ಜಾಸ್ತಿ ಹಣ ಇದೆ’ ಎಂದು ಉತ್ತರ ಕೊಟ್ಟರು. ಮಾತು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕಡೆ ತಿರುಗಿದಾಗ ತಮ್ಮ ಎಂದಿನ ನಾಟಕೀಯ ಸಿಟ್ಟಿನಲ್ಲಿ ರೆಡ್ಡಿ, ‘ಸುಷ್ಮಾ, ರಾಜನಾಥ್‌ರಿಗೆ ಹೇಳಿದ್ದೇನೆ ಯಜಮಾನ (ಯಡಿಯೂರಪ್ಪ)ರನ್ನು ತೆಗೆಯಬೇಕು ಎಂದು. 1999ರಲ್ಲಿ ಜಯಲಲಿತಾ ಇದೇ ಹೋಟೆಲ್ನ ಪ್ರೆಸಿಡೆಂಟ್‌ ಸೂಟ್‌ನಲ್ಲಿ ವಾಸ್ತವ್ಯ ಇದ್ದು ವಾಜಪೇಯಿ ಸರ್ಕಾರ ಬೀಳಿಸಿದ್ದರು. ನಾನು ಅಲ್ಲೇ ಬೇಕು ಎಂದು ರೂಮ್ ತೆಗೆದುಕೊಂಡಿದ್ದೇನೆ. ಯಜಮಾನರ ಸರ್ಕಾರ ತೆಗೆದೇ ಮುಂದಿನ ಮಾತು’ ಎಂದೆಲ್ಲ ಹೇಳಿದರು. ನಮ್ಮೆದುರು ಏನೇ ಹೇಳಿದರೂ ಕೂಡ ಯಡಿಯೂರಪ್ಪ ಬಳ್ಳಾರಿ ಆಡಳಿತದಲ್ಲಿ ಕೈಹಾಕಬಾರದು ಅನ್ನುವುದು ಮಾತ್ರ ರೆಡ್ಡಿಗಳ ಒಂದು ಅಂಶದ ಬೇಡಿಕೆ ಆಗಿತ್ತು. ತಾತ್ಪರ್ಯ ಇಷ್ಟೆ: ಜನಾರ್ದನ ರೆಡ್ಡಿ ಹೊರಗಡೆ ಏನೇ ಹೇಳಲಿ, ಒಳಗೆ ನಡೆಸುವ ಮಾತುಕತೆಯೇ ಬೇರೆ ಇರುತ್ತದೆ.

ಇನ್ನೊಮ್ಮೆ ರಾಜಕೀಯಕ್ಕೆ ಬರೋದಿಲ್ಲ!: 2011ರಲ್ಲಿ ಜೈಲಿಗೆ ಹೋದ ನಂತರ ಆರ್ಥಿಕ ಬಲಾಢ್ಯತೆ ಮತ್ತು ರಾಜಕೀಯ ಪ್ರಭಾವದಲ್ಲಿ ಮೆರೆದಿದ್ದ ರೆಡ್ಡಿ ಸಾಮ್ರಾಜ್ಯ ನೋಡನೋಡುತ್ತಲೇ ಕಣ್ಣಮುಂದೆಯೇ ಕುಸಿಯತೊಡಗಿತು. ಅದು ಎಲ್ಲಿಯವರೆಗೆ ಅಂದರೆ, ವಿಶೇಷ ವಿಮಾನದಲ್ಲಿ ದಿಲ್ಲಿಗೆ ಬಂದು ಹೋಗುತ್ತಿದ್ದ ಶ್ರೀರಾಮುಲು ದಿಲ್ಲಿಯಲ್ಲಿ ತಮ್ಮ ಸ್ಕೊಡಾ ಕಾರು ರಿಪೇರಿಗೆ ಕೊಟ್ಟು ಲಕ್ಷಗಟ್ಟಲೆ ಹಣ ಎಲ್ಲಿಂದ ತರುವುದು ಎಂದು ತಿಂಗಳುಗಟ್ಟಲೇ ಕಾರನ್ನು ಗ್ಯಾರೇಜ್‌ನಲ್ಲೇ ಬಿಟ್ಟಿದ್ದರು. ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಚ್‌ನಲ್ಲಿ ಪದೇ ಪದೇ ಮುಂದೂಡಿಕೆ ಆಗುತ್ತಿತ್ತು. 

India Gate: ಎಲೆಕ್ಷನ್‌ ಗೆಲ್ಲಲು ಮೋದಿ ಅಂದರೆ ಅಷ್ಟೇ ಸಾಕೆ?

ಕೊನೆಗೆ ಜಾಮೀನು ಅರ್ಜಿಯ ವಿಚಾರಣೆ ಮುಗಿದು ತೀರ್ಪು ನಿಗದಿಪಡಿಸಿದಾಗ ಪ್ರೇಕ್ಷಕರ ಗ್ಯಾಲರಿಯ ಮೊದಲ ಸಾಲಿನಲ್ಲಿ ಕುಳಿತಿದ್ದ ಸೋಮಶೇಖರ ರೆಡ್ಡಿ ಕೈಯಲ್ಲಿ ಹನೂಮಂತನ ಫೋಟೋ ಹಿಡಿದು ಕಣ್ಣೀರು ಹಾಕುತ್ತಾ ಹನುಮಾನ್‌ ಚಾಲೀಸಾ ಹೇಳುತ್ತಿದ್ದರು. ನನ್ನ ಕಡೆ ನೋಡುತ್ತಾ, ‘ಬಹಳ ಮಂದಿ ಬ್ಯುಸಿನೆಸ್‌ ಮಾಡುತ್ತಾರೆ, ದುಡ್ಡು ಮಾಡುತ್ತಾರೆ. ಆದರೆ ಅದರ ಜೊತೆಗೆ ರಾಜಕೀಯಕ್ಕೆ ಬಂದದ್ದು ನಮ್ಮ ಜನಾರ್ದನ ಮಾಡಿದ ಮೊದಲ ತಪ್ಪು. ರಾಮುಲು ಮಾತ್ರ ಪೊಲಿಟಿಕ್ಸ್‌ನಲ್ಲಿದ್ದರೆ ಸಾಕಿತ್ತು. ಗಣಿಯ ದುಡ್ಡು ಮತ್ತು ರಾಜಕೀಯದಿಂದ 15 ವರ್ಷದಲ್ಲಿ ಸ್ವರ್ಗ ನರಕ ಎರಡೂ ಅನುಭವಿಸಿಬಿಟ್ಟಿದ್ದೇವೆ. ಆ ಹನೂಮಂತ ಜನಾರ್ದನನನ್ನು ಬಿಡುಗಡೆ ಮಾಡಿಸಿದರೆ ಸಾಕು. ಇನ್ನೊಮ್ಮೆ ರಾಜಕೀಯದ ಕಡೆ ತಲೆ ಹಾಕಿಯೂ ಮಲಗೋದಿಲ್ಲ’ ಎಂದು ಹೇಳುತ್ತಾ ಮತ್ತೆ ಜೈ ಹನುಮಾನ ಜ್ಞಾನ ಗುಣಸಾಗರ ಅನ್ನತೊಡಗಿದರು. ಈಗ ನೋಡಿ ಅದೇ ಜನಾರ್ದನ ರೆಡ್ಡಿ ರಾಜಕೀಯದ ಬಾಗಿಲು ಪುನಃ ಬಡಿಯತೊಡಗಿದ್ದಾರೆ. ರಾಜಕೀಯವೇ ಹಾಗೆ, ಒಮ್ಮೆ ಅದರ ಹುಚ್ಚು ಹಿಡಿದರೆ ಜೀವನಪೂರ್ತಿ ಬಿಡುವುದಿಲ್ಲ.

ಕರ್ನಾಟಕದ ಬಗ್ಗೆ ಅಮಿತ್‌ ಶಾ ಸಭೆ: ಮುಂದಿನ ವಾರ ದಿಲ್ಲಿಯಲ್ಲಿ ಅಮಿತ್‌ ಶಾ ಕರ್ನಾಟಕದ ರಾಜಕೀಯಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಒಂದು ಮಹತ್ವದ ಸಭೆ ನಡೆಸುವ ಸಾಧ್ಯತೆಗಳಿವೆ. ಜೆ.ಪಿ.ನಡ್ಡಾ, ಆರ್‌ಎಸ್‌ಎಸ್‌ನ ಸಹ ಸರ ಕಾರ್ಯವಾಹ ಮುಕುಂದ್‌, ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕಟೀಲು ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಜೊತೆಗೆ ಮೀಸಲಾತಿ ನಿರ್ಧಾರ, ಸಂಪುಟ ವಿಸ್ತರಣೆ ಮಾಡಬೇಕಾ ಬೇಡವಾ, ಜಾತಿ ಸಮೀಕರಣಗಳು, ಚುನಾವಣೆ ತಯಾರಿ ಏನು ಹೇಗೆ ಈ ಎಲ್ಲ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ರಾಜ್ಯದ ಚುನಾವಣೆಗೆ ಒಬ್ಬ ಪ್ರಮುಖ ನಾಯಕರನ್ನು ಚುನಾವಣಾ ಪ್ರಭಾರಿಯನ್ನಾಗಿ ಕೂಡ ನೇಮಿಸುವ ತೀರ್ಮಾನ ಶೀಘ್ರದಲ್ಲಿ ಆಗಲಿದೆ. ಧರ್ಮೇಂದ್ರ ಪ್ರಧಾನ್‌, ಭೂಪೇಂದ್ರ ಯಾದವ್‌ ಹೆಸರುಗಳು ಕೇಳಿಬರುತ್ತಿವೆಯಾದರೂ ಇನ್ನೂ ಈ ಬಗ್ಗೆ ಅಧಿಕೃತ ತೀರ್ಮಾನ ಆಗಿಲ್ಲ.

Follow Us:
Download App:
  • android
  • ios