- Home
- News
- Politics
- ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀರಿಸಿ ಹೈಕಮಾಂಡ್! ಯಶವಂತರಾಯಗೌಡ ಪಾಟೀಲ ಮೊದಲ ವಿಕೆಟ್, 6 ಶಾಸಕರಿಂದ ಲೆಟರ್ ತಯಾರಿ!
ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀರಿಸಿ ಹೈಕಮಾಂಡ್! ಯಶವಂತರಾಯಗೌಡ ಪಾಟೀಲ ಮೊದಲ ವಿಕೆಟ್, 6 ಶಾಸಕರಿಂದ ಲೆಟರ್ ತಯಾರಿ!
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾರಣ ಹಲವು ಶಾಸಕರು ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ. ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಪತ್ರ ಸಲ್ಲಿಸಿದ್ದು, ಹಲವೆಡೆ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಲಾಕ್‌ಮೇಲ್‌ಗೆ ಬಗ್ಗದ ಹೈಕಮಾಂಡ್, ರಾಜೀನಾಮೆ ಸ್ವೀಕರಿಸಲು ಸೂಚಿಸಿದೆ.

ಬೆಂಗಳೂರು (ಆ.03): ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ (Karnataka Congress Government) ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನದ ಬೆಂಕಿ ಭುಗಿಲೆದ್ದಿದೆ. ಮಂತ್ರಿ ಸ್ಥಾನ (Ministerial Berth) ಸಿಗಲಿಲ್ಲ ಎಂಬ ಕಾರಣಕ್ಕೆ ಹಲವು ಹಿರಿಯ ಹಾಗೂ ನಿಷ್ಠಾವಂತ ಶಾಸಕರು ಬಹಿರಂಗವಾಗಿಯೇ ತಮ್ಮ ಆಕ್ರೋಶ ಹೊರಹಾಕಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಮತ್ತೊಂದೆಡೆ, ಶಾಸಕರ ಬೆಂಬಲಿಗರು ರಸ್ತೆಗಿಳಿದು ಉಗ್ರ ಪ್ರತಿಭಟನೆ (Protest) ನಡೆಸುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಬ್ಲಾಕ್‌ಮೇಲ್‌ಗೆ ಹೈಕಮಾಂಡ್ ಬ್ರೇಕ್!
ಸಚಿವ ಸ್ಥಾನ ವಂಚಿತ ಶಾಸಕರು ರಾಜೀನಾಮೆ ಬೆದರಿಕೆ ಒಡ್ಡುತ್ತಿರುವುದನ್ನು ಕಾಂಗ್ರೆಸ್ ಹೈಕಮಾಂಡ್ (Congress High Command) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹೈಕಮಾಂಡ್ ಸ್ಪಷ್ಟ ಸೂಚನೆ: 'ಯಾರಾದರೂ ರಾಜೀನಾಮೆ ನೀಡಿದರೆ ತಕ್ಷಣವೇ ಸ್ವೀಕರಿಸಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸೂಚನೆ ನೀಡಿದೆ. ಸಚಿವ ಸ್ಥಾನ ಸಿಗದವರಿಗೆ ಬೇರೆ ಬೇರೆ ನಿಗಮ-ಮಂಡಳಿ ಅಥವಾ ಪ್ರಾಧಿಕಾರಗಳ ಹುದ್ದೆ ನೀಡಲಾಗುವುದು, ಅದನ್ನು ಮೀರಿದರೆ ರಾಜೀನಾಮೆ ಅಂಗೀಕರಿಸಲು ಹೈಕಮಾಂಡ್ ನಿರ್ದಾಕ್ಷಿಣ್ಯ ನಿರ್ಧಾರ ತಳೆದಿದೆ.
1. ರುದ್ರಪ್ಪ ಲಮಾಣಿಗೆ ರಾಜೀನಾಮೆ ನೀಡಿದ ಯಶವಂತರಾಯಗೌಡ ಪಾಟೀಲ್!
ವಿಜಯಪುರ ಜಿಲ್ಲೆಯ (Vijayapura District) ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಅವರು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ತಮ್ಮ ರಾಜೀನಾಮೆ ಪತ್ರ (Resignation Letter) ಹಸ್ತಾಂತರಿಸಿದ್ದಾರೆ. ಇಂಡಿ ಕ್ಷೇತ್ರದ ನೂರಾರು ಬೆಂಬಲಿಗರು ಶಾಸಕರ ಭವನದ (Legislators House) ಮುಂದೆ ಜಮಾಯಿಸಿ 'ನಮಗೆ ನ್ಯಾಯ ಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿದರು.
2. ನಾಳೆ ಶಾಸಕ ಸ್ಥಾನಕ್ಕೆ ಬೇಳೂರು ಗೋಪಾಲಕೃಷ್ಣ ರಾಜೀನಾಮೆ!
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ (Beloor Gopalakrishna) ಅವರಿಗೆ ಮಂತ್ರಿ ಪಟ್ಟ ಸಿಗದಿರುವುದು ಅವರ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬೇಳೂರು ಗೋಪಾಲಕೃಷ್ಣ ಅವರ ಜನಪ್ರಿಯತೆಯನ್ನು ಸಹಿಸದೇ ಮಂತ್ರಿಗಿರಿ ತಪ್ಪಿಸಲಾಗಿದೆ ಎಂದು ಆರೋಪಿಸಿರುವ ಅವರ ಬೆಂಬಲಿಗರು, ಶಾಸಕರು ಪಕ್ಷ ತೊರೆದರೆ ತಾವೂ ಕಾಂಗ್ರೆಸ್ ತೊರೆಯುವುದಾಗಿ ಎಚ್ಚರಿಸಿದ್ದಾರೆ.
“ನನಗೆ ಮಂತ್ರಿ ಪದವಿ ಸಿಗುವ ಭಾರೀ ನಿರೀಕ್ಷೆಯಿತ್ತು. ಪಕ್ಷಕ್ಕಾಗಿ ಎಷ್ಟೇ ದುಡಿದರೂ ಬೆಲೆ ಸಿಗುತ್ತಿಲ್ಲ. ಕೇವಲ ಮಾಜಿ ಸಿಎಂ ಮಕ್ಕಳಿಗಷ್ಟೇ ಸಚಿವ ಸ್ಥಾನ ನೀಡುವುದಾದರೆ ನಾವೇಕೆ ಇರಬೇಕು? ಸಿದ್ದರಾಮಯ್ಯನವರು ತಮಗೆ ಬೇಕಾದವರಿಗೆ ಮಾತ್ರ ಸಚಿವ ಸ್ಥಾನ ಕೊಡಿಸಿದ್ದಾರೆ. ನಾನು ನಾಳೆ ಬೆಳಿಗ್ಗೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.”
— ಬೇಳೂರು ಗೋಪಾಲಕೃಷ್ಣ, ಶಾಸಕರು.
3. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಬೇಸರ: ಬಿಜೆಪಿಯಿಂದ 50 ಕೋಟಿ ಆಫರ್ ಬಂದಿತ್ತು!
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ (BK Sangamesh) ಕೂಡ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಸಂಗಮೇಶ್ ಹೇಳಿಕೆ: 2023ರಲ್ಲೇ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಹಿಂದೆ ಬಿಜೆಪಿ (BJP) ಯವರು 50 ಕೋಟಿ ರೂಪಾಯಿ ಹಾಗೂ ಸಚಿವ ಸ್ಥಾನ ನೀಡುವುದಾಗಿ ಆಫರ್ ನೀಡಿದ್ದರೂ ನಾನು ಪಕ್ಷಕ್ಕೆ ದ್ರೋಹ ಬಗೆಯಲಿಲ್ಲ. ಆದರೆ ಇಂದು ನಿಷ್ಠಾವಂತರಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಇಲ್ಲದಂತಾಗಿದೆ. ಕ್ಷೇತ್ರದ ಜನರ ಜೊತೆ ಚರ್ಚಿಸಿ ರಾಜೀನಾಮೆ ನಿರ್ಧಾರ ಕೈಗೊಳ್ಳುತ್ತೇನೆ.
4. ಕೊಪ್ಪಳ ಹಾಗೂ ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ!
ಕೊಪ್ಪಳದಲ್ಲಿ ಟೈರ್ ಗೆ ಬೆಂಕಿ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕೊಪ್ಪಳದ ಅಶೋಕ ವೃತ್ತದಲ್ಲಿ ಬೆಂಬಲಿಗರು ಟೈರ್‌ಗಳಿಗೆ ಬೆಂಕಿ ಹಚ್ಚಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ಪೆಟ್ರೋಲ್ ಸುರಿಯುವಾಗ ಬಾಟಲಿಗೇ ಬೆಂಕಿ ಹೊತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಎಂ.ಕೃಷ್ಣಪ್ಪಗೆ ಸಚಿವ ಸ್ಥಾನ ಮಿಸ್, ಡಿಕೆ ಪೋಸ್ಟರ್‌ಗೆ ಬೆಂಕಿ
ಬೆಂಗಳೂರಿನ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸೀನಿಯಾರಿಟಿ ಆಧಾರದಲ್ಲಿ ಎಂ.ಕೃಷ್ಣಪ್ಪ ಅವರಿಗಾಗಲೀ ಅಥವಾ ಹೊಸಬರ ಲೆಕ್ಕದಲ್ಲಿ ಪ್ರಿಯಾ ಕೃಷ್ಣ ಅವರಿಗಾಗಲೀ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಯಾರಿಗೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಬಾವಿ ವೃತ್ತದಲ್ಲಿ ಶಾಸಕರ ಅಭಿಮಾನಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು ಮತ್ತು ಮಂಡ್ಯದಲ್ಲಿ ತನ್ವೀರ್ ಸೇಠ್ ಬೆಂಬಲಿಗರ ಆಕ್ರೋಶ:
ಮೈಸೂರಿನ ಎನ್‌ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ (Tanveer Sait) ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುಸ್ಲಿಂ ಸಮುದಾಯ ಮತ್ತು ಬೆಂಬಲಿಗರು ಮಂಡ್ಯ ಹಾಗೂ ಮೈಸೂರಿನಲ್ಲಿ ಧರಣಿ ನಡೆಸಿದರು.
ಮೈಸೂರಿನ ಮಣಿಪಾಲ್ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಚ್ಚಿನ ನಾಯಕನಿಗೆ ಮಂತ್ರಿಗಿರಿ ತಪ್ಪಿದ್ದಕ್ಕೆ ಮನನೊಂದ ತನ್ವೀರ್ ಸೇಠ್ ಅಭಿಮಾನಿಯೊಬ್ಬ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದು, ಶಾಸಕ ತನ್ವೀರ್ ಸೇಠ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

