Asianet Suvarna News Asianet Suvarna News

ಬೆಳಗಾವಿ ಕಬಳಿಸಲು ಏಕನಾಥ ಶಿಂಧೆ ಆರೋಗ್ಯ ಅಸ್ತ್ರ: ಬಿಜೆಪಿ ನಾಯಕರ ಮೌನಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ

ತನ್ನ ಯೋಜನೆಯನ್ನು ಕರ್ನಾಟಕದ ನೆಲದಲ್ಲಿ ಜಾರಿಗೊಳಿಸುವ ವಿವಾದಾತ್ಮಕ ಹಾಗೂ ಪ್ರಚೋದನಾತ್ಮಕ ನಿರ್ಣಯವನ್ನು ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಏಕನಾಥ ಶಿಂಧೆ ನಿರ್ಧಾರದ ಬಗ್ಗೆ ಕೇಂದ್ರ ಬಿಜೆಪಿ ನಾಯಕರು ಮೌನವಹಿಸಿರುವುದು ಬೆಳಗಾವಿ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Implementation of Maharashtra Health Insurance in Belgaum border Why are BJP leaders silent rav
Author
First Published Apr 6, 2023, 10:43 AM IST

ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಳಗಾವಿ (ಏ.6): ತನ್ನ ಯೋಜನೆಯನ್ನು ಕರ್ನಾಟಕದ ನೆಲದಲ್ಲಿ ಜಾರಿಗೊಳಿಸುವ ವಿವಾದಾತ್ಮಕ ಹಾಗೂ ಪ್ರಚೋದನಾತ್ಮಕ ನಿರ್ಣಯವನ್ನು ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ. 

ಕೇಂದ್ರ ಸಚಿವ ಅಮಿತ್ ಶಾ(Amit Shah)ಸೂಚನೆ ಧಿಕ್ಕರಿಸಿ ಕರ್ನಾಟಕದಲ್ಲಿ ಆರೋಗ್ಯ ವಿಮೆ ಯೋಜನೆ(Health Insurance Scheme) ಜಾರಿಗೆಗೆ ಆದೇಶಿಸಿರುವ ಮಹಾರಾಷ್ಟ್ರ ನಡೆ ಕರ್ನಾಟಕದ ಆಕ್ರೋಶಕ್ಕೆ ಕಾರಣವಾಗಿದೆ. ಗಡಿಭಾಗದಲ್ಲಿ ಈ ಬೆಳವಣಿಗೆ ನಡೆಯುತ್ತಿದ್ದರೂ ಕೇಂದ್ರ ಬಿಜೆಪಿ(Karnataka BJP)ನಾಯಕರ ಮೌನವೂ ಅಚ್ಛರಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ವಿಮೆ ಕಿತಾಪತಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ: ಸಿಎಂ ಬೊಮ್ಮಾಯಿ ಕಿಡಿ

ಏನು ಆ ಯೋಜನೆ?

ಮಹಾತ್ಮಾ ಜ್ಯೋತಿರಾವ್ ಫುಲೆ ಆರೋಗ್ಯ ಯೋಜನೆ(Mahatma Jyoti Rao Phule Health Scheme) ಮಹಾರಾಷ್ಟ್ರದಲ್ಲಿ ಜಾರಿಯಲ್ಲಿದೆ. ಈ ಯೋಜನೆಯನ್ನು ಕರ್ನಾಟಕದ ಗಡಿಯಲ್ಲಿರುವ 865 ಗ್ರಾಮಗಳಿಗೆ ನೀಡಲು ಏಕನಾಥ ಶಿಂಧೆ(Maharashtra CM Eknath Shinde) ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕಾಗಿ 54 ಕೋಟಿ ರೂ. ಮೀಸಲಿಟ್ಟಿರುವ ಶಿಂಧೆ ಸರ್ಕಾರ ಎರಡು ದಿನಗಳ ಹಿಂದೆಯೇ ಯೋಜನೆ ಜಾರಿಗೆಗೆ ಆದೇಶಿಸಿದ್ದಾರೆ. 

ಕರ್ನಾಟಕ-ಮಹಾರಾಷ್ಟ್ರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಒಬ್ಬರಿಗೆ ಒಂದೂವರೆ ಲಕ್ಷದವರೆಗೆ ವಿಮೆ ಯೋಜನೆಯ ಲಾಭ ಪಡೆಯಬಹುದು. 996 ಕಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ. ಕರ್ನಾಟಕದ ಬೆಳಗಾವಿ, ಬೀದರ್, ಕಲಬುರ್ಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ 865 ಗ್ರಾಮಗಳ ನಿವಾಸಿಗಳಿಗೆ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ. ಏಕನಾಥ ಶಿಂಧೆ ನಿರ್ಧಾರಕ್ಕೆ ತಿರುಗೇಟು ನೀಡಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(CM Basavaraj Bommai), ನಾವೂ ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕರಿಗೆ ಆರೋಗ್ಯ ವಿಮೆ ಘೋಷಿಸಬೇಕಾಗುತ್ತದೆ ಎಂದು ಎಚ್ಛರಿಕೆ ನೀಡಿದ್ದಾರೆ.

ಶಿಂಧೆ ಕುತಂತ್ರವೇನು?

ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟದ ಮೂಲಕವೇ ಏಕನಾಥ ಶಿಂಧೆ ರಾಜಕೀಯ ಪ್ರವೇಶಿಸಿದವರು. 1985ರಲ್ಲಿ ಗಡಿ ಹೋರಾಟದ ಸಂಬಂಧ ಬೆಳಗಾವಿ(Belgum)ಯಲ್ಲಿ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದ ಏಕನಾಥ ಶಿಂಧೆ ಬಳ್ಳಾರಿ ಜೈಲೂ ಸೇರಿದವರು. ಗಡಿ ವಿವಾದವನ್ನೇ ಅಸ್ತ್ರವಾಗಿಸಿಕೊಂಡು ಮುಖ್ಯಮಂತ್ರಿಯಂಥ ಹುದ್ದೆಗೇರಿರುವ ಶಿಂಧೆ ಆರೋಗ್ಯ ವಿಮೆ ಯೋಜನೆಯ ಹಿಂಧೆ ದೊಡ್ಡ ಕುಂತ್ರವನ್ನೇ ಮಾಡಿದ್ದಾರೆ. ಈ ಯೋಜನೆ ಲಾಭ ಪಡೆಯುವ ಪ್ರತಿಯೊಬ್ಬರೂ ನಾನು ಮರಾಠಾ ಭಾಷಿಕ ಎಂಬ ಸ್ವಯಂ ಘೋಷನಾ ಪತ್ರ ನೀಡಬೇಕು. ಗಡಿಯಲ್ಲಿರುವ ಯಾರೇ ಈ ರೀತಿ ಘೋಷನಾ ಪತ್ರ ನೀಡಿದರೂ ಅವರಿಗೆ ಆರೋಗ್ಯ ವಿಮೆ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. 

ಮಹಾರಾಷ್ಟ್ರ ಪರ ದಾಖಲೆಗಳನ್ನು ಸೃಷ್ಟಿಸಲು ಸಿಎಂ ಏಕನಾಥ ಶಿಂಧೆ ಹುನ್ನಾರ ಮಾಡಿದ್ದು, ಇವುಗಳನ್ನು ಸುಪ್ರೀಂ ಕೋರ್ಟ್‍ಗೆ(Supreme court) ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ಗಡಿ ವಿವಾದ ಸುಪ್ರೀಂಕೋರ್ಟ್‍ನಲ್ಲಿದ್ದು, ಅಂತಿಮ ವಿಚಾರಣೆಯ ಹಂತದಲ್ಲಿದೆ. ಕರ್ನಾಟಕದ ಭಾಗದ ಮರಾಠಾ ಭಾಷಿಕರು ನಮ್ಮ ಪರ ಇದ್ದಾರೆ, ಅವರೆಲ್ಲ ಘೋಷನಾ ಪತ್ರವನ್ನೂ ನೀಡಿದ್ದಾರೆ ಎಂದು ಬಿಂಬಿಸಲು ಮಹಾರಾಷ್ಟ್ರ ಪ್ಲ್ಯಾನ್ ಮಾಡಿಕೊಂಡಿದೆ.

ಅಮಿತ್ ಶಾ ಆದೇಶ ಧಿಕ್ಕರಿಸಿದ ಶಿಂಧೆ!

ಗಡಿ ವಿವಾದ ಸಂಬಂಧ 2004ರಲ್ಲಿ ಮಹಾರಾಷ್ಟ್ರವೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ತೀರ್ಪು ಬರುವವರೆಗೆ ಕಾಯದೇ ಮಹಾರಾಷ್ಟ್ರ ನಾಯಕರು ಗಡಿ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ನಾಲ್ಕು ತಿಂಗಳ ಹಿಂದೆ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಕೇಂದ್ರ ಗೃಹಸಚಿವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದರು. ಗಡಿಯಲ್ಲಿ ಶಾಂತತೆ ಕಾಪಾಡಬೇಕು, ಕೋರ್ಟ್ ತೀರ್ಪು ಬರುವವರೆಗೆ ಪರಸ್ಪರರು ಪ್ರದೇಶಗಳ ಬಗ್ಗೆ ಬೇಡಿಕೆ ಇಡಬಾರದು ಎಂದು ತಾಕೀತು ಮಾಡಿದ್ದರು. ಶಾ ಸೂಚನೆಗಳನ್ನು ಕರ್ನಾಟಕ ಸಿಎಂ ಪಾಲಿಸುತ್ತಿದ್ದರೂ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಧಿಕ್ಕರಿಸುತ್ತಿದ್ದಾರೆ. ಅಲ್ಲದೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದು ಮಹಾರಾಷ್ಟ್ರದ ಯೋಜನೆ ಕರ್ನಾಟದಲ್ಲಿ ಜಾರಿಗೆಗೆ ಮಹಾರಾಷ್ಟ್ರ ಮುಂದಾಗಿದೆ. 

ಮಹಾರಾಷ್ಟ್ರದ ಹಳ್ಳಿಗಳಿಗೆ ಕನ್ನಡಿಗರು ನುಗ್ಗುತ್ತೇವೆ: ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ

ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಏಕನಾಥ ಶಿಂಧೆ ನಿರ್ಧಾರದ ಬಗ್ಗೆ ಕೇಂದ್ರ ಬಿಜೆಪಿ ನಾಯಕರು ಮೌನವಹಿಸಿರುವುದು ಬೆಳಗಾವಿ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಕುತಂತ್ರದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‍ಗೆ ಪ್ರತಿಕ್ರಿಯಿಸಿರುವ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ(ashok Chandaragi), ಮಹಾರಾಷ್ಟ್ರದ ವಿವಾದಾತ್ಮಕ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೇಂದ್ರ ಗೃಹಸಚಿವ ಅಮಿತ್ ಶಾ ಗಮನಕ್ಕೆ ತರಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಏಕನಾಥ ಶಿಂಧೆ ವಿರುದ್ಧ ಕೇಂದ್ರ ನಾಯಕರು ಕ್ರಮ ಜರುಗಿಸಬೇಕು. ಕರ್ನಾಟಕದ ಜನರಿಂದ ಸ್ವಯಂ ಘೋಷನಾ ಪತ್ರವನ್ನು ಮಹಾರಾಷ್ಟ್ರ ಪಡೆಯುತ್ತಿರುವುದು ಗಂಭೀರ ವಿಷಯ. ತಕ್ಷಣವೇ ಸಿಎಂ ಬೊಮ್ಮಾಯಿ ಜಾಗೃತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios