Asianet Suvarna News Asianet Suvarna News

ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್

ವಿಧಾನಸಭೆ ಚುನಾವಣೆಗೆ ಮಹೂರ್ತ ನಿಗಧಿಯಾದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಚುನವಣೆ ಗುಂಗು ಆವರಿಸಿಕೊಂಡಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಚುನಾವಣೆ ಕಾರ್ಯಗಳತ್ತ ಚಿತ್ತಹರಿಸಿದೆ. 

Implementation of Code Of Conduct from today Chikkamagaluru district Administration on High Alert gvd
Author
First Published Mar 29, 2023, 9:44 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.29): ವಿಧಾನಸಭೆ ಚುನಾವಣೆಗೆ ಮಹೂರ್ತ ನಿಗಧಿಯಾದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಚುನವಣೆ ಗುಂಗು ಆವರಿಸಿಕೊಂಡಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಚುನಾವಣೆ ಕಾರ್ಯಗಳತ್ತ ಚಿತ್ತಹರಿಸಿದೆ. ನೀತಿ ಸಂಹಿತೆಗಳ ಜಾರಿ, ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ಇಂದಿನಿಂದಲೇ ಕಣ್ಗಾವಲಿರಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಲ್ಲೆ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಜಿಲ್ಲೆಯ 18 ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಿದ್ದು ಇನ್ನು ಹೆಚ್ಚಿನ ಚೆಕ್ ಪೋಸ್ಟ್‌ಗಳನ್ನು ಹಾಕುವ ನಿಟ್ಟಿನಲ್ಲಿ ಪ್ಲಾನ್ ಹಾಕಿದೆ. ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಕಾರ್ಯವನ್ನು ಪೊಲೀಸರು, ಚುನಾವಣಾ ಸಿಬ್ಬಂದಿಗಳಿಂದ ಜಂಟಿಯಾಗಿ ನಡೆಸುತ್ತಿದ್ದಾರೆ. ಜಿಲ್ಲೆಯ 18 ಕಡೆಗಳಲ್ಲಿ ಹಾಕಿರುವ ಚೆಕ್ ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ಕೆಲಸವನ್ನು ನಿರ್ವಹಿಸಲು ಜಿಲ್ಲಾಡಳಿತ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. 

ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ತೀವ್ರ ಚರ್ಚೆ: ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ, ಗೆಲ್ಲುವ ಪಕ್ಷ ಯಾವುದು, ಸಧ್ಯಕ್ಕೆ ಯಾರು ಬಲಾಡ್ಯರು, ಏನೇನು ರಾಜಕೀಯ ಸ್ಥಿತ್ಯಂತರಗಳು ಘಟಿಸಬಹುದು ಎನ್ನುವ ಕುತೂಹಲಕಾರಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ.ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪ್ರಮುಖ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪೂರ್ಣಪ್ರಮಾಣದಲ್ಲಿ ಇನ್ನೂ ಅಂತಿಮಗೊಂಡಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಹೆಚ್ಚಿನ ಗೊಂದಲಗಳು ಕಂಡು ಬರುತ್ತಿದೆ.

ಸಿದ್ದರಾಮಯ್ಯ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಸ್ಪರ್ಧಿಸಲಿ: ಸಚಿವ ಸುಧಾಕರ್‌ ವ್ಯಂಗ್ಯ

ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಈ ಪೈಕಿ ಮೂಡಿಗೆರೆ ಕ್ಷೇತ್ರ ಮಾತ್ರ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಬಣರಾಜಕೀಯ ದಿನೇ ದಿನೇ ತಾರಕ್ಕೇರುತ್ತಿರುವುದು ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಅದನ್ನು ಹೊರತು ಪಡಿಸಿದರೆ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಸರತ್ತು: ಕನಿಷ್ಠ ಚುನಾವಣೆಗೆ ಮೂರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಬೇಕು ಎನ್ನುವ ಕಾಂಗ್ರೆಸ್ ಇರಾದೆ ಜಿಲ್ಲೆ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ಫಲಿಸಿಲ್ಲ. ಮೊದಲ ಪಟ್ಟಿಯಲ್ಲಿ ಶೃಂಗೇರಿಯ ಹಾಲಿ ಶಾಸಕ ಟಿ.ಡಿ.ರಾಜೇಗೌಡ  ಮಾತ್ರ ಟಿಕೆಟ್ ಗಿಟ್ಟಿಸಿಸದ್ದರೆ ಉಳಿದ ನಾಲ್ಕೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಈ ಹಂತದಲ್ಲೇ ಅಭ್ಯರ್ಥಿಗಳನ್ನು ಘೋಷಿಸಿದಲ್ಲಿ ಭಿನ್ನಮತ ಸ್ಪೋಟಗೊಂಡು ಪಕ್ಷಾಂತರಗಳು ಸಂಭವಿಸುವ ಭಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೊನೇ ಘಳಿಗೆಯಲ್ಲಿ ಪಟ್ಟಿ ಪ್ರಕಟಿಸುವ ಹಳೆಯ ಪದ್ಧತಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಇನ್ನು ಜೆಡಿಎಸ್‌ನಿಂದಲೂ ಶೃಂಗೇರಿ ಕ್ಷೇತ್ರಕ್ಕೆ ಅಧಿಕೃತವಾಗಿ ಸುಧಾಕರ್ ಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. 

ಯೋಗೇಶ್ವರ್‌ಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು ಹತಾಶರಾಗಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

ಚಿಕ್ಕಮಗಳೂರು ಕ್ಷೇತ್ರದಲ್ಲಿ ತಿಮ್ಮಶೆಟ್ಟಿ ಮತ್ತು ಮೂಡಿಗೆರೆ ಕ್ಷೇತ್ರಕ್ಕೆ ಬಿ.ಬಿ.ನಿಂಗಯ್ಯ ಹಾಗೂ ಕಡೂರು ಕ್ಷೇತ್ರಕ್ಕೆ ಬೆಂಗಳೂರು ಮೂಲದ ಸಿ.ಎಂ.ಧನಂಜಯ್ಯ ಅಭ್ಯರ್ಥಿ ಎಂದು ನಾಯಕರು ಹಿಂದೆ ಅನೌಪಚಾರಿಕವಾಗಿ ಹೇಳಿದ್ದಾರಾದರೂ ಅದರಲ್ಲೂ ಬದಲಾವಣೆಗಳಾಗುತ್ತದೆ. ಉಳಿದಂತೆ ತರೀಕೆರೆ ಕ್ಷೇತ್ರದ ಬಗ್ಗೆ ಉಳಿದ ಪಕ್ಷಗಳ ಬೆಳವಣಿಗೆಗಳನ್ನು ಗಮನಿಸಿ ನಿರ್ಧರಿಸಲು ತೀರ್ಮಾನಿಸಿದಂತಿದೆ.ಸಧ್ಯಕ್ಕೆ ಐದೂ ಕ್ಷೇತ್ರಗಳಲ್ಲಿ ಈ ಬೆಳವಣಿಗೆಗಳ ಸುತ್ತಲೂ ಬೇರೆ ಬೇರೆ ಅನಿಸಿಕೆಗಳು ಗಿರಕಿಹೊಡೆಯುತ್ತಿವೆ. ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಚ್ಚರಿಗಳು ಸಂಭವಿಸುವ ಸಾಧ್ಯತೆಗಳಿವೆ. ಸದ್ಯ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios