Asianet Suvarna News Asianet Suvarna News

ಭರವಸೆ ಈಡೇರಿಸದಿದ್ದರೆ ಮುಂದಿನ ಚುನಾವಣೆಗೆ ನಿಲ್ಲೋಲ್ಲ: ಸಚಿವ ಸುಧಾಕರ್‌

ಮತ ಕೊಟ್ಟ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಘನತೆ ತಂದುಕೊಟ್ಟಿದ್ದೇನೆ. ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಗೆ ಉದ್ಯೋಗ ನೀಡುವ ಭರವಸೆ ನೀಡುತ್ತದ್ದೇನೆ. ಭರವಸೆ ಈಡೇರಿಸದಿದ್ದಲ್ಲಿ 2028 ಕ್ಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಆಶ್ವಾಸನೆ ನೀಡಿದರು. 

If the promise is not fulfilled then do not stand for the next election Says Minsiter Dr K Sudhakar gvd
Author
First Published Apr 26, 2023, 8:42 PM IST

ಚಿಕ್ಕಬಳ್ಳಾಪುರ (ಏ.26): ಮತ ಕೊಟ್ಟ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಘನತೆ ತಂದುಕೊಟ್ಟಿದ್ದೇನೆ. ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಗೆ ಉದ್ಯೋಗ ನೀಡುವ ಭರವಸೆ ನೀಡುತ್ತದ್ದೇನೆ. ಭರವಸೆ ಈಡೇರಿಸದಿದ್ದಲ್ಲಿ 2028 ಕ್ಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಆಶ್ವಾಸನೆ ನೀಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಡಿಕಲ್‌ ಹೋಬಳಿಯ ಅರೂರು ಗ್ರಾಮದಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ನನ್ನ ಜನರ ಮಕ್ಕಳ ಭವಿಷ್ಯ ನನಗೆ ಮುಖ್ಯ, ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ, ಕೈಗಾರಿಕೆಗಳನ್ನು ಚಿಕ್ಕಬಳ್ಳಾಪುರಕ್ಕೆ ತರುತ್ತೇನೆ, ಮಂಡಿಕಲ್‌ ಹೋಬಳಿಯ ಪೆರೇಸಂದ್ರ ಭಾಗದಲ್ಲಿಯೂ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದರು.

ಅನ್ನ, ಉದ್ಯೋಗ ನೀಡುವ ಮಗನಾಗಬೇಕು: ರೈತ, ಶಿಕ್ಷಕನ ಕುಟುಂಬದಿಂದ ಬಂದಿರುವ ತಾವು ಸಚಿವನಾಗಿದ್ದೇನೆ. ನಾನು ಬಡವರಿಗೆ ಅನ್ನ ನೀಡುವ ಮಗನಾಗಬೇಕು, ನೊಂದವರಿಗೆ ಆರೋಗ್ಯ ನೀಡುವ ಮಗನಾಗಬೇಕು, ಬಡವರಿಗೆ ಆಶ್ರಯ ನೀಡುವ ಮಗನಾಗಬೇಕು ಎಂದು ಬಯಸಿದ್ದೇನೆ. ಇವುಗಳೆಲ್ಲವನ್ನೂ ಮಾಡುವ ಚೈತನ್ಯ ಮತ್ತು ಶಕ್ತಿ ನನಗಿದೆ. ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ. ತಮ್ಮನ್ನು ಕರ್ನಾಟಕದ ಮನೆಯ ಮಗ ಎಂದು ರಾಜ್ಯಕ್ಕೆ ಪರಿಚಯ ಮಾಡಿಸಿದ್ದು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಎಂದು ಕೃತಜ್ಞತೆ ಸಲ್ಲಿಸಿದರು.

ಚುನಾವಣೆಯಲ್ಲಿ ಮತ್ತೊಮ್ಮೆಎಚ್‌ಡಿಕೆಯನ್ನು ಜನ ಆರ್ಶಿವದಿಸಲಿದ್ದಾರೆ: ಅನಿತಾ ಕುಮಾರಸ್ವಾಮಿ

ಈ ಬಾರಿ ದಾಖಲೆ ಮಟ್ಟದಲ್ಲಿ ಜನ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಬಯಿಸಿ ಪ್ರಚಾರಕ್ಕೆ ಇಳಿದಿದ್ದೇನೆ. ತಾವು ಶಾಸಕರಾದ ನಂತರ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಕಾಣುತ್ತಿದ್ದೀರಿ. ನಿಮ್ಮೂರಿನಲ್ಲಿ ಸುಸಜ್ಜಿತ ನಂದಿ ವೈದ್ಯಕೀಯ ಕಾಲೇಜು ಕಾಣುತ್ತಿದೆ, ಈ ಕಾಲೇಜು ತರಲು ಮೂರುವರೆ ವರ್ಷದ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದೆ. ಸಚಿವನಾಗಿ ವೈದ್ಯಕೀಯ ಕಾಲೇಜು ತಂದೆ. ರಾಮನಗರಕ್ಕೂ ಸಚಿವನಾಗಿ ಮೆಡಿಕಲ್‌ ಕಾಲೇಜು ನೀಡಿದ್ದೇನೆ, ಈ ಶಕ್ತಿ ನೀಡಿದ್ದು ನೀವು ಎಂದರು.

ತಂದೆ ಹೇಳಿಕೊಟ್ಟ ಪಾಠ ಪಾಲನೆ: ಜಿಲ್ಲೆಯಲ್ಲಿ ಎಚ್‌ಎನ್‌ ವ್ಯಾಲಿ ನೀರು ಕೆರೆಗಳಿಗೆ ತುಂಬಿಸಿರುವುದು. ರೈತರ ಬಾಳಿನಲ್ಲಿ ಹೊಸ ಚಿಗುರು ಬರುವ ಪ್ರಯತ್ನ ಮಾಡಲಾಗಿದೆ. ರೈತ ಕುಟುಂಬದಿಂದ ಬಂದು ರೈತರ ಕಷ್ಟಅರಿತು, ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿದ್ದೇನೆ, ನಮಗೆ ಬೇಕಿರುವುದು ಮಳೆ, ಮಳೆಯಿಂದ ಕುಡಿಯಲು ಯೋಗ್ಯ ನೀರು ಸಿಗಲಿದೆ. ರೈತರ ಭೂಮಿ ಹಸಿರಾಗಲಿದೆ. ಜಾತಿ ಧರ್ಮ ನೋಡಿ ಮತ ಹಾಕಬೇಡಿ, ನನ್ನ ಜಾತಿ ಯಾವುದು ಗೊತ್ತಾ ರೈತರಿಗೆ ನೀರು ಕೊಟ್ಟಿರುವ ಜಾತಿ, ನನ್ನ ಧರ್ಮ ಶಾಲಾ ಕಾಲೇಜುಗಳನ್ನು ಮಾಡಿರುವುದು, ಎಲ್ಲರನ್ನು ಸಮಾನವಾಗಿ ನೋಡುವುದು ಸಾಮಾಜಿಕ ನ್ಯಾಯ ಕೊಡುವುದು ನನ್ನ ಧರ್ಮ, ನಮ್ಮ ತಂದೆ ನನಗೆ ಇಂತಹ ಒಳ್ಳೆ ನೀತಿ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.

ರೈತರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಹಳ್ಳಿಯಲ್ಲಿ ಶಾಲೆ ಮಾಡಿದ್ದೇನೆ, ಹಣ ಗಳಿಸಲು ನಾನು ಬೆಂಗಳೂರಿನಲ್ಲಿ ಶಾಲೆ ಮಾಡಲಿಲ್ಲ. ಸೇವೆ ಎಂದು ಹೇಳಿಕೊಳ್ಳುವವರು ರೈತರ ಮಕ್ಕಳಿಂದ ಲಕ್ಷಾಂತರ ರುಪಾಯಿ ಹಣ ಗಳಿಸುತ್ತಿರುವವರು ಸೇವೆ ಎನ್ನುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಾಗಲೀ, ಊರಲ್ಲಾಗಲೀ ಅವರು ಶಿಕ್ಷಣ ಸಂಸ್ಥೆಗಳನ್ನು ಮಾಡಿಲ್ಲ. ಸೇವೆ, ಪ್ರೀತಿ, ಕರುಣೆಯಿಂದ ಸೇವೆ ಒದಗಿಸುವ ನಿರ್ಮಲ ಮನಸ್ಸು ಇರುವವನು ಮಾತ್ರ ಚುನಾಯಿತ ಪ್ರತಿನಿಯಾಗಲು ಸಾಧ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಅವರಿಗೆ ತಿರುಗೇಟು ನೀಡಿದರು.

ಮೂರು ಜಿಲ್ಲೆಗಳಲ್ಲಿ ಪ್ರಚಾರ ಹೊಣೆ: ಅಹಂಕಾರದ ಮಾತು, ದರ್ಪದಿಂದ ಯಾರೂ ಚುನಾಯಿತ ಪ್ರತಿನಿ​ಧಿಯಾಗಲು ಸಾಧ್ಯವಿಲ್ಲ, ತಮಗೆ ಸಮಯದ ಅಭಾವ ಇದೆ, ಮೂರು ಜಿಲ್ಲೆಗಳ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿದ್ದಾರೆ. ಹಾಗಾಗಿ ನೀವೇ ಸುಧಾಕರ್‌ ಎಂದು ತಿಳಿದು ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು, ಐದು ವರ್ಷ ನಿಸ್ವಾರ್ಥತೆಯಿಂದ ಜನರ ಬದುಕು ಉತ್ತಮಗೊಳಿಸಲು ಶ್ರಮಿಸಿದ ಬಗ್ಗೆ ನೀವೇ ಮನವೊಲಿಸುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸಮುದಾಯ ಒಡೆಯುವ ಕೀಳು ರಾಜಕಾರಣಿ ನಾನಲ್ಲ: ಸಚಿವ ಸುಧಾಕರ್‌

ಕೋವಿಡ್‌ ಬಂದಾಗ ಎಲ್ಲಿದ್ದಿರಿ?: ತಮ್ಮನ್ನು ಟೀಕಿಸುವವರಿಗೆ ಉತ್ತರಿಸಿದ ಸಚಿವರು, ಕೋವಿಡ್‌ ಸಂದರ್ಭದಲ್ಲಿ ಇವರೆಲ್ಲರೂ ಎಲ್ಲಿದ್ದರು. ಈಗ ಮನೆ ಮನೆಗೆ ತೆರಳಿ ಕಾಲಿಗೆ ಬೀಳುತ್ತಿದ್ದಾರೆ. ಅವರ ಕಷ್ಟದಲ್ಲಿ ಅನ್ನ ಕೊಟ್ಟಉದಾಹರಣೆ ಇವರಿಗಿದೆಯೇ, ಕಳೆದ 10 ವರ್ಷದಿಂದ ಮನೆಯಲ್ಲಿದ್ದ ವ್ಯಕ್ತಿ ಈಗ ವಾಕಿಂಗ್‌ ಮಾಡಿದ್ದೇ ಮಾಡಿದ್ದು, ಅವರು ಬಹಳ ಪ್ರಯತ್ನ ಮಾಡುತ್ತಿದ್ದಾರೆ ಎರಡನೇ ಸ್ಥಾನಕ್ಕೆ ಬರಲು ಎಂದು ಪರೋಕ್ಷವಾಗಿ ಜೆಡಿಎಸ್‌ ವಿರುದ್ಧ ಲೇವಡಿ ಮಾಡಿದರು. ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳ ಲೀಡ್‌ ನೀಡಬೇಕು, ಅದಕ್ಕಾಗಿ ಮುಂದಿನ 15 ದಿನ ತಮ್ಮ ಪರ ಕೆಲಸ ಮಾಡಿ, ಮುಂದಿನ ಐದು ವರ್ಷ ನಿಮ್ಮ ಬದುಕು ಬಂಗಾರವಾಗುವ ರೀತಿಯಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಅವರು ಮನವಿ ಮಾಡಿದರು. 

ಮತಯಾಚನೆಯ ಸಮಯದಲ್ಲಿ ಸಚಿವ ಡಾ.ಕೆ.ಸುಧಾಕರ್‌ ರವರ ತಂದೆ ಪಿ.ಎನ್‌.ಕೇಶವರೆಡ್ಡಿ,ಮಾಜಿಶಾಸಕಿ ಅನುಸುಯಮ್ಮ, ಮುಖಂಡರಾದ ಚನ್ನಾರೆಡ್ಡಿ, ಚನ್ನಕೇಶವರೆಡ್ಡಿ,ವಕೀಲ ಆನಂದ್‌, ಹೆಚ್‌.ವಿ.ಸೋಮಶೇಖರ್‌ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios