ಸಮುದಾಯ ಒಡೆಯುವ ಕೀಳು ರಾಜಕಾರಣಿ ನಾನಲ್ಲ: ಸಚಿವ ಸುಧಾಕರ್
ನನ್ನ ಸಾರ್ವಜನಿಕ ಬದುಕಿನಲ್ಲಿ ಎಲ್ಲಾ ಸಮುದಾಯ, ಧರ್ಮದ ನಡುವೆ ತಾರತಮ್ಯ ಮಾಡದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಎಲ್ಲಾ ಸಮಾಜಕ್ಕೂ ಸಾಧ್ಯವಿರುವ ಎಲ್ಲ ನೆರವು, ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಏ.15): ನನ್ನ ಸಾರ್ವಜನಿಕ ಬದುಕಿನಲ್ಲಿ ಎಲ್ಲಾ ಸಮುದಾಯ, ಧರ್ಮದ ನಡುವೆ ತಾರತಮ್ಯ ಮಾಡದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಎಲ್ಲಾ ಸಮಾಜಕ್ಕೂ ಸಾಧ್ಯವಿರುವ ಎಲ್ಲ ನೆರವು, ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಕುರುಬ ಸಮುದಾಯದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿರುವ ಹಾಲುಮತಸ್ಥ ಸಮುದಾಯದ ಕೆಲ ಮುಖಂಡರು ಒಬ್ಬ ವ್ಯಕ್ತಿಗೆ ಸಮುದಾಯವನ್ನು ಸೀಮಿತ ಮಾಡುವ ಕೆಲಸ ಮಾಡುತ್ತಿದ್ದು, ಹಲವು ಮುಖಂಡರನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಬಿಜೆಪಿಯಲ್ಲಿ ನಾಲ್ವರು ಸಚಿವರಿದ್ದರು: ಎಂ.ಟಿ.ಬಿ. ನಾಗರಾಜ್ ಅವರು ಸಮುದಾಯಕ್ಕಾಗಿ ಎಷ್ಟುಶ್ರಮಿಸಿದ್ದಾರೆ, ಅವರನ್ನು ಸೋಲಿಸಿದವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆರ್. ಶಂಕರ್, ಎಚ್. ವಿಶ್ವನಾಥ್ ಅವರಿಗೆ ಏನಾಯಿತು ಎಂಬುದನ್ನು ಸಮುದಾಯದ ಮುಖಂಡರು ಅರಿಯಬೇಕು. ಎಂಟಿಬಿ ನಾಗರಾಜು, ಎಚ್. ವಿಶ್ವನಾಥ್, ಆರ್. ಶಂಕರ್ ಇವರೆಲ್ಲ ಹಾಲುಮತಸ್ಥರಲ್ಲವೇ, ಅನೇಕ ಮುಖಂಡರನ್ನು ಬೆಳೆಸುವ ಕೆಲಸ ಸಮುದಾಯ ಮಾಡಬೇಕು, ಒಬ್ಬರನ್ನೇ ನೆಚ್ಚಿಕೊಂಡರೆ ಸಮುದಾಯಕ್ಕೆ ಅನ್ಯಾಯವಾಗಲಿದೆ. ಈ ಸಮುದಾಯದ ನಾಯಕರು ಎಲ್ಲ ಪಕ್ಷಗಳಲ್ಲಿ ಇದ್ದಾರೆ ಎಂದರು.
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್
ಆರ್.ಶಂಕರ್, ಬೈರತಿ ಬಸವರಾಜ, ಈಶ್ವರಪ್ಪ ಮತ್ತು ಎಂಟಿಬಿ ನಾಗರಾಜ್ ಸೇರಿ ನಾಲ್ಕು ಮಂದಿ ಸಂಪುಟ ದರ್ಜೆ ಸಚಿವರಿದ್ದರು. ಆದರೂ ಬಿಜೆಪಿಯನ್ನು ಟೀಕೆ ಮಾಡುತ್ತಾರೆ, ಟೀಕೆ ಮಾಡುವವರಿಗೆ ಹೇಳುತ್ತೇನೆ, ಇದನ್ನು ಪರಾಮರ್ಶೆ ಮಾಡುವ ತಿಳಿವಳಿಕೆ ಸಮುದಾಯದವರಲ್ಲಿದೆ. ಯಾವುದೇ ಕಾರಣಕ್ಕೂ ಕೇವಲ ಒಂದು ವ್ಯಕ್ತಿಯ ಆದರ್ಶವನ್ನು ನಂಬಿಕೊಳ್ಳುವ ಕೆಲಸ ಮಾಡಬೇಡಿ. ಸಮುದಾಯಕ್ಕೆ ಯಾರು ಕೆಲಸ ಮಾಡುತ್ತಾರೆ, ಯಾರು ನಿಮಗೆ ನೆರವಾಗುತ್ತಾರೆ ಅವರೇ ನಿಮ್ಮ ಸಹೋದರ ಎಂದು ಭಾವಿಸುವಂತೆ ಕೋರಿದರು. ಇಡೀ ದೇಶದಲ್ಲಿ ಹಾಲು ಮತ ಸಮುದಾಯಕ್ಕೆ ವಿಶೇಷ ಗೌರವ ಇದೆ, ಹಿಂದುಳಿದ ಸಮುದಾಯವಾಗಿದ್ದರೂ ಪ್ರಬಲ ಸಮುದಾಯವಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅನೇಕರು ಶ್ರಮದಿಂದ ಪ್ರಗತಿ ಕಂಡಿದ್ದಾರೆ. ಹಾಲು ಮತಸ್ಥ ಸಮುದಾಯ ಬೆವರನ್ನು ನಂಬಿ ಅಭಿವೃದ್ಧಿಯಾಗಿರುವ ಸಮುದಾಯ ಎಂದು ಹೇಳಿದರು.
ಶೇ.90ರಷ್ಟು ಮಂದಿ ಬಿಜೆಪಿಗೆ ಬೆಂಬಲ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲುಮತಸ್ಥ ಸಮುದಾಯದ ಶೇ.90 ರಷ್ಟುಮಂದಿ ಬಿಜೆಪಿ ಪರ ಇದ್ದಾರೆ. ಉಳಿದ ಶೇ.10 ರಷ್ಟುಮಂದಿ ಮಾತ್ರ ಬೇರೆ ಕಡೆ ಇದ್ದಾರೆ. ಕಾಂಗ್ರೆಸ್ ಪರ ಇರುವ ಶೇ.10 ಮಂದಿ ತಮ್ಮ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಇದಕ್ಕೆ ಸ್ಪಷ್ಟನೆ ನೀಡಲೇಬೇಕಿದೆ ಎಂದರು. ತಾವು ಜಾತಿಯನ್ನು ಒಡೆಯುತ್ತಿರುವುದಾಗಿ ಮತ್ತು ಸಮುದಾಯಕ್ಕೆ ಏನೂ ಮಾಡಿಲ್ಲ ಎಂದು ಅವರು ಸುದ್ದಿಗೋಷ್ಠಿ ಯಲ್ಲಿ ಆರೋಪಿಸಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವುದು ಯಾವುದೇ ರಾಜಕಾರಣಿಯ ಜವಾಬ್ದಾರಿ.
2015ರ ಜಿಪಂ ಚುನಾವಣೆ ಸಮಯದಲ್ಲಿ ನಂದಿ ಕ್ಷೇತ್ರದಿಂದ ಶಂಕರ್ ಅವರಿಗೆ ಟಿಕೆಟ್ ನೀಡಲು ಬಯಸಿದ್ದೆ. ಆದರೆ ಇಂದು ಕಾಂಗ್ರೆಸ್ ನಲ್ಲಿರುವವರು ಶಂಕರ್ ಅವರಿಗೆ ಟಿಕೆಟ್ ನೀಡದಂತೆ ಅಡ್ಡಿಪಡಿಸಿದರು ಎಂದರು. ಈ ವೇಳೆ ರಂಗಪ್ಪ, ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಶ್ರೀನಿವಾಸ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ, ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ, ನಗರಸಭಾ ಅಧ್ಯಕ್ಷ ಆನಂದರೆಡ್ಡಿ, ಮರಿಸ್ವಾಮಿ, ಡಾ. ಚಂದ್ರು, ಕೂಡಾ ನಿರ್ದೇಶಕ ಅರುಣ, ಶ್ರೀನಾಥ, ದೇವರಾಜ ಅರಸು ಅಭಿವೃದ್ಧಿ ಮಂಡಳಿ ನಿರ್ದೇಶಕ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎರಡು ಕಡೆ ಭೂಮಿ ಮಂಜೂರು: ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಾವುದೇ ಭರವಸೆ ನೀಡುವಂತಿಲ್ಲ. ಆದರೆ ನಿಮ್ಮ ಮನವಿಗಳನ್ನು ಬದ್ಧತೆಯಿಂದ ನಿಮ್ಮ ಪರವಾಗಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಅಲ್ಲದೆ ಕಳೆದ 75 ವರ್ಷದಲ್ಲಿ ಸುಮಾರು 12 ಮಂದಿ ಶಾಸಕರಾಗಿದ್ದು, ಯಾವುದೇ ಶಾಸಕ ಒಂದು ಗುಂಟೆ ಭೂಮಿ ಈ ಸಮುದಾಯಕ್ಕೆ ನೀಡಿದ ಉದಾಹರಣೆ ಇಲ್ಲ. ಆದರೆ ತಾವು ಕ್ಷೇತ್ರದ ಎರಡು ಕಡೆ ಜಮೀನು ನೀಡಿದ್ದೇನೆ. ಮಂಚೇನಹಳ್ಳಿ ತಾಲೂಕಿನಲ್ಲಿ 1 ಎಕರೆ ಭೂಮಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಅರ್ಧ ಎಕರೆ ಭೂಮಿ ಮಂಜೂರು ಮಾಡಿಸಲಾಗಿದೆ.
10 ವರ್ಷದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವೆ: ಸಚಿವ ಸುಧಾಕರ್
ಮುಂದಿನ ಅವಧಿಯಲ್ಲಿ ನಿಮ್ಮ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ, ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸ ಕಳೆದುಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.