Asianet Suvarna News Asianet Suvarna News

ಕಳಪೆ ಬಿತ್ತನೆ ಬೀಜ ಮಾರಿದರೆ ಪರವಾನಗಿ ರದ್ದು: ಚಲುವರಾಯಸ್ವಾಮಿ

ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಕಳಪೆ ಬೀಜ, ಗೊಬ್ಬರ ಮಾರಾಟಗಾರರ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 

If poor seed and fertilizer are sold license will be cancelled Says N Cheluvarayaswamy gvd
Author
First Published Jul 15, 2023, 12:58 PM IST

ವಿಧಾನ ಪರಿಷತ್‌ (ಜು.15): ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಕಳಪೆ ಬೀಜ, ಗೊಬ್ಬರ ಮಾರಾಟಗಾರರ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಸದನದಲ್ಲಿ ಶುಕ್ರವಾರ ಉತ್ತರಿಸಿದ ಸಚಿವರು, ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣ ದಳ ರಚನೆ ಮಾಡಲಾಗಿದೆ. 

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ 61 ಪ್ರಕರಣಗಳು ಹಾಗೂ ಕಳಪೆ ರಸಗೊಬ್ಬರ ಮಾರಿದ 26 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಕಳಪೆ ಗುಣಮಟ್ಟದ ರಸಗೊಬ್ಬರ ಮಾದರಿಗಳ ವಿರುದ್ಧ 187 ಪ್ರಕರಣ, ಕಡಿಮೆ ಗುಣಮಟ್ಟದ ಬೀಜಗಳ ವಿರುದ್ಧ 774 ಪ್ರಕರಣ ದಾಖಲಿಸಲಾಗಿದೆ. ಇನ್ನು 19 ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ: ಬೊಮ್ಮಾಯಿ

ಸಹಾಯಧನ ಹೆಚ್ಚಿಸಲು ಪರಿಶೀಲನೆ: ರೈತರಿಗೆ ಯಂತ್ರೋಪಕರಣಗಳ ಬಳಕೆ ಉತ್ತೇಜಿಸಲು ಹಾಗೂ ಇಂಧನ ವೆಚ್ಚ ಕಡಿಮೆ ಮಾಡಲು ರೈತ ಶಕ್ತಿ ಯೋಜನೆಯಡಿ ಡೀಸೆಲ್‌ ಖರೀದಿಗೆ ಪ್ರತಿ ಎಕರೆಗೆ 250 ರು.ನಂತೆ ನೀಡುವ ಸಹಾಯಧನವನ್ನು 500 ರು.ಗೆ ಹೆಚ್ಚಿಸಲು ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಕಾಂಗ್ರೆಸ್‌ ಸದಸ್ಯ ಎಂ.ನಾಗರಾಜ್‌ ಅವರ ಪ್ರಶ್ನೆಗೆ ಸಚಿವರು ತಿಳಿಸಿದರು.

ಎಚ್‌ಡಿಕೆ-ಚೆಲುವ ವಾಗ್ವಾದ: ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಇಲಾಖೆಯೊಂದರ ವರ್ಗಾವಣೆ ದರಪಟ್ಟಿವಿಚಾರವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಇದೀಗ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಜೆಡಿಎಸ್‌ ಸರ್ಕಾರದ ಅವಧಿಯಲ್ಲೂ ರೇಟ್‌ಕಾರ್ಡ್‌ ಇತ್ತು ಎಂದು ಸದನದಲ್ಲೇ ಆರೋಪಿಸಿದ್ದು, ಇದಕ್ಕೆ ತಾವು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಗೆ ಹಣ ಪಡೆದಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಸವಾಲು ಹಾಕಿದ ಘಟನೆ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವ ಸಂದರ್ಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, ‘ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ ಸದನದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೋ ರೇಟ್‌ಕಾರ್ಡ್‌ ಪ್ರದರ್ಶಿಸಿದರು. ಆದರೆ, ಅದನ್ನು ತಮಗೆ ನೀಡಲೇ ಇಲ್ಲ. ಅವರೇ ತೆಗೆದುಕೊಂಡು ಹೋದರು. ಕೊನೆಗೆ ಪತ್ರಿಕೆಗಳಲ್ಲಿ ಅದು ಮುದ್ರಣವಾಗಿದೆ’ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ‘ನೀವು ಅದನ್ನು ಕೇಳಲಿಲ್ಲ, ನಾನು ಕೊಡಲಿಲ್ಲ. ಪತ್ರಿಕೆಗಳಲ್ಲಿ ಅದು ಪ್ರಕಟವಾದರೆ ಅದಕ್ಕೆ ನಾನು ಹೊಣೆಯಲ್ಲ’ ಎಂದರು.

ಹಿಟ್ಲರ್‌ ಬಗ್ಗೆ ಮಾತನಾಡಿದ್ರೆ ನಿಮಗೇಕೆ ಕೋಪ: ಬಿಜೆಪಿಗೆ ಸಿದ್ದು ಪ್ರಶ್ನೆ

ಆಗ ಚೆಲುವರಾಯಸ್ವಾಮಿ ಅವರು, ‘2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ವರ್ಗಾವಣೆ ರೇಟ್‌ಕಾರ್ಡ್‌ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅಧಿಕಾರಿಗಳ ಹುದ್ದೆಯನ್ನಾಧರಿಸಿ 1 ಕೋಟಿಯಿಂದ 10 ಕೋಟಿ ರು.ವರೆಗೆ ದರ ನಿಗದಿ ಮಾಡಲಾಗಿತ್ತು. ಐಎಂಎ ಹಗರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ ವಿಜಯ್‌ಶಂಕರ್‌ ಅವರಿಗೆ ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯ ಆಶ್ವಾಸನೆ ನೀಡಿದ್ದರು. ಮಂಡ್ಯ ಮೂಲದ ಈ ನಿವೃತ್ತರಾಗಿರುವ ಕೆಎಎಸ್‌ ಅಧಿಕಾರಿಯೊಬ್ಬರನ್ನು ಒಂದೇ ವರ್ಷದಲ್ಲಿ 7 ಬಾರಿ ವರ್ಗಾವಣೆ ಮಾಡಿದ್ದರು. ಮುಖ್ಯಮಂತ್ರಿಗಳು ಒಪ್ಪಿದರೆ ಅವರ ಕಾಲದಲ್ಲಿ ಆಗಿರುವ ವರ್ಗಾವಣೆಯ ಪಟ್ಟಿಯೂ ಬಿಡುಗಡೆ ಮಾಡುವೆ’ ಎಂದು ಗುಡುಗಿದರು.

Follow Us:
Download App:
  • android
  • ios