ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 5 ಲಕ್ಷ ಮನೆ ನಿರ್ಮಿಸಲಾಗುವುದು. ವಾಸ ಮಾಡಲು ಮನೆ ಇಲ್ಲ ಎಂದು ಯಾವುದೇ ಕುಟುಂಬ ಹೇಳಬಾರದು. ಆ ರೀತಿಯ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಫೆ.6) : ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 5 ಲಕ್ಷ ಮನೆ ನಿರ್ಮಿಸಲಾಗುವುದು. ವಾಸ ಮಾಡಲು ಮನೆ ಇಲ್ಲ ಎಂದು ಯಾವುದೇ ಕುಟುಂಬ ಹೇಳಬಾರದು. ಆ ರೀತಿಯ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಮನೆ ಇಲ್ಲ ಎಂದು ಯಾರೂ ಹೇಳಬಾರದು. ಆ ರೀತಿಯ ವಾತಾವರಣ ನಿರ್ಮಿಸಿ ಬಡವರಿಗೆ ಮನೆ ವಿತರಿಸಲಾಗುವುದು. ಅಷ್ಟೇ ಅಲ್ಲ, ಪ್ರತಿ ಕುಟುಂಬಕ್ಕೆ 15 ರಿಂದ 20 ಸಾವಿರ ರು. ಆದಾಯ ಬರುವಂತಹ ಕಾರ್ಯಕ್ರಮ ರೂಪಿಸಲು ಚಾಲನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಕ್ಷ ಸೇರುವಾಗಿನ ಉತ್ಸಾಹ ಸಂಘಟನೆಯಲ್ಲೂ ಇರಲಿ: ನಿಖಿಲ್ ಕುಮಾರಸ್ವಾಮಿ ಸಲಹೆ

ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಅಭಿವೃದ್ಧಿಗೆ ಕೋಟ್ಯಂತರ ರು. ಬಿಡುಗಡೆ ಮಾಡಿದ್ದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದೆಲ್ಲವನ್ನೂ ವಾಪಸ್‌ ಪಡೆದರು. ಈ ಭಾಗದ ಮಾಜಿ ಶಾಸಕ ಮತ್ತು ಸಂಸದ ಸದಾನಂದಗೌಡ ಸೇರಿಕೊಂಡು ಅನುದಾನಕ್ಕೆ ಕೊಕ್ಕೆ ಹಾಕಿದರು. ನಗರದ ಹೊರ ಭಾಗದ ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ರಚನೆ ಮಾಡಿ ಅಭಿವೃದ್ಧಿ ಮಾಡಿದ್ದು ನನ್ನ ಕಾಲದಲ್ಲಿ. ನಾವು ಆಗ ಲೂಟಿ ಮಾಡಿ ಅದರಲ್ಲಿ ಚುನಾವಣೆ ನಡೆಸಿದ್ದರೆ ಇಂದು ಬಿಜೆಪಿಯವರು ಮನೆಯಲ್ಲಿ ಇರುತ್ತಿದ್ದರು ಎಂದು ಟೀಕಿಸಿದರು.

ನಮ್ಮ ಕುಟುಂಬದ ಟಿಕೆಟ್‌ ಬಗ್ಗೆ ವರಿಷ್ಠರು ತೀರ್ಮಾನ

ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ಎಚ್‌.ಡಿ.ರೇವಣ್ಣನವರು ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರ ಗೊತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ 40-50 ಸ್ಥಾನಗಳಿಗೆ ಸೀಮಿತವಾಗಿಲ್ಲ. 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದೇ ನನ್ನ ಪುಣ್ಯ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿಯವರ ಮಗನಾಗಿ ಜನಿಸಿದ್ದು ನನ್ನ ಭಾಗ್ಯ ಎಂದರು.

ಜಿಟಿಡಿ ಪುತ್ರ, ನಿಖಿಲ್‌ ಹುಟ್ಟುಹಬ್ಬ ವೇಳೆ ಶಕ್ತಿಪ್ರದರ್ಶನ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಹುಟ್ಟುಹಬ್ಬ ಪ್ರಯುಕ್ತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಬೈಕ್‌ ರಾರ‍ಯಲಿ, ವೇದಿಕೆ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಬೃಹತ್‌ ಶಕ್ತಿ ಪ್ರದರ್ಶನ ನಡೆಸುವ ಮೂಲಕ ತಮ್ಮ ವಿರೋಧಿಗಳಿಗೆ ಜಿ.ಟಿ.ದೇವೇಗೌಡ ತಕ್ಕ ಸಂದೇಶ ರವಾನಿಸಿದರು.

ನಗರದ ಮಣಿಪಾಲ್‌ ಆಸ್ಪತ್ರೆ ಬಳಿಯಿಂದ ಆರಂಭವಾದ ಬೈಕ್‌ ರಾರ‍ಯಲಿ ಜಯಪುರದ ದಾರಿಪುರದವರೆಗೆ ನಡೆಯಿತು. ಸಿದ್ದಲಿಂಗಪುರ, ಹಿನ್ಕಲ್‌, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ, ಲಲಿತಾದ್ರಿಪುರ, ಜಯಪುರ, ಉದ್ಭೂರು ಸೇರಿದಂತೆ ಕ್ಷೇತ್ರದ ಮೂಲೆಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಬೈಕ್‌ ರಾರ‍ಯಲಿಯಲ್ಲಿ ಪಾಲ್ಗೊಂಡರು.

ಹೋಟೆಲ್‌ನಿಂದ ಆಡಳಿತ ನಡೆಸೋರಿಗೆ ಅಧಿಕಾರ ಬೇಡ: ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಸಿದ್ದು

ಸುಮಾರು 25 ಕಿ.ಮೀ. ದೂರದ ರಾರ‍ಯಲಿಯಲ್ಲಿ ಪಕ್ಷದ ಕಾರ್ಯಕರ್ತರು ಜೆಡಿಎಸ್‌ ಪರ ಘೋಷಣೆ ಕೂಗಿದರು. ಎಚ್‌.ಡಿ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಸಾರಿದರು. ಈ ವೇಳೆ ಜಿ.ಟಿ. ದೇವೇಗೌಡ, ನಿಖಿಲ್‌ ಕುಮಾರಸ್ವಾಮಿ ಮತ್ತು ಜಿ.ಡಿ. ಹರೀಶ್‌ಗೌಡ ಅವರ ಪರ ಘೋಷಣೆ ಮೊಳಗಿತು. ಹಲವೆಡೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು