Asianet Suvarna News Asianet Suvarna News

ಹೋಟೆಲ್‌ನಿಂದ ಆಡಳಿತ ನಡೆಸೋರಿಗೆ ಅಧಿಕಾರ ಬೇಡ: ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಸಿದ್ದು

ನಾವು ಈ ಹಿಂದೆ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಜೆಡಿಎಸ್‌ಗೆ ಬೆಂಬಲ ನೀಡಿ ಎಚ್‌ಡಿಕೆ ಸರ್ಕಾರ ರಚನೆಯಾಗುವಂತೆ ಮಾಡಿದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡಲಾಗದೆ ಅಧಿಕಾರ ಕಳೆದುಕೊಂಡರು: ಸಿದ್ದರಾಮಯ್ಯ 

Siddaramaiah Slams Former CM HD Kumaraswamy grg
Author
First Published Feb 4, 2023, 11:30 PM IST

ಭಾಲ್ಕಿ(ಫೆ.04):  ಜನರಿಂದ ದೂರವುಳಿದು ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಉಳಿದು ಆಡಳಿತ ನಡೆಸಿದ ಎಚ್‌ಡಿ ಕುಮಾರಸ್ವಾಮಿ ಅವರು ಮಂತ್ರಿಗಳು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಧಿಕಾರ ಕಳೆದುಕೊಂಡು ಇದೀಗ ನಮ್ಮ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಅವರು ಶುಕ್ರವಾರ ಭಾಲ್ಕಿ ಪಟ್ಟಣದಲ್ಲಿ ನಡೆದ ಬೃಹತ್‌ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ನಾವು ಈ ಹಿಂದೆ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಜೆಡಿಎಸ್‌ಗೆ ಬೆಂಬಲ ನೀಡಿ ಎಚ್‌ಡಿಕೆ ಸರ್ಕಾರ ರಚನೆಯಾಗುವಂತೆ ಮಾಡಿದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡಲಾಗದೆ ಅಧಿಕಾರ ಕಳೆದುಕೊಂಡರು ಎಂದರು.

ಸರ್ಕಾರ ನಡೆಸಲಾಗದ ಕುಮಾರಸ್ವಾಮಿ, ಕೊಟ್ಟಕುದರೆಯನ್ನು ಏರದವ ಶೂರನೂ ಅಲ್ಲ ಧೀರನೂ ಅಲ್ಲ. ಈ ಬಾರಿ ಯಾವ ಕಾರಣಕ್ಕೂ ಬಿಜೆಪಿ ಮತ್ತು ಜೆಡಿಎಸ್‌ ಅಧಿಕಾರಕ್ಕೆ ಬರಕೂಡದು. ಸೂರ್ಯ ಪೂರ್ವದಲ್ಲಿ ಹುಟ್ಟುವದು ಎಷ್ಟುಸತ್ಯವೋ ಕಾಂಗ್ರೆಸ್‌ ಅಧಿಕಾರಕ್ಕೆ ಬರುವದೂ ಅಷ್ಟೇ ಸತ್ಯ. ಭಾಲ್ಕಿಯಲ್ಲಿ ಮತ್ತೆ ಈಶ್ವರ ಖಂಡ್ರೆ ಶಾಸಕಾರಿ ಆಯ್ಕೆಯಾಗಿ ಬರುವದು ಖಚಿತ. ಬಡವರ ಪರ ಕಾಳಜಿ ಹೊಂದಿದ, ಕೆಲವೇ ಕೆಲವು ಪ್ರಾಮಾಣಿಕ ರಾಜಕಾರಣಿಗಳಲ್ಲಿ ಈಶ್ವರ ಖಂಡ್ರೆ ಒಬ್ಬರು ಎಂದು ಬಣ್ಣಿಸಿದರು.

ಪ್ರಜಾಧ್ವನಿ ಯಾತ್ರೆ ಸಂದರ್ಭ ಬಿಜೆಪಿ ಪಾಪದ ಚಾರ್ಜ್‌ಶೀಟ್‌ ಬಿಚ್ಚಿಟ್ಟಿದ್ದೇವೆ: ಸಿದ್ದು

ಮೂರುವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಅನೈತಿಕತೆಯಿಂದ ಆಡಳಿತದ ಚುಕ್ಕಾಣಿ ಹಿಡಿದಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿಚ್ಛಳ ಬಹುಮತ ಸಿಗುವ ಎಲ್ಲ ಮುನ್ಸೂಚನೆಗಳು ಗೋಚರಿಸುತ್ತಿವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಕಾರ್ಯ ಯೋಜನೆಗಳನ್ನೇ ನಾವಿಂದು ಈ ಬಿಜೆಪಿ ಸರ್ಕಾರದ ದಿನಗಳಲ್ಲಿ ಮುಂದುವರೆಸಿಕೊಂಡು ಬಂದಿದ್ದು ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ದೂರಿದರು.

ಈ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಯಾಗದೇ ಕೇವಲ ಅಭಿವೃದ್ಧಿಪರ ಚಿಂತನೆಗಳು, ಕಾಂಗ್ರೆಸ್‌ನ ಯೋಜನೆಗಳಿಗೆ ಅಡ್ಡಿಯಾಗುವ ಮೂಲಕ ಬಡವರ ಅಭಿವೃದ್ಧಿಗೆ ಪೆಟ್ಟು ನೀಡುವಂಥ ಕೆಲಸದಲ್ಲಿ ಬಿಜೆಪಿಯವರು ಮಾಡುತ್ತಿದ್ದು ಅವರಿಗೆ ಜನರ ಮುಂದೆ ಬರುವಂಥ ಯಾವುದೇ ನೈತಿಕತೆ ಇಲ್ಲ ಎಂದರು.

ಧಮ್‌ ಇದ್ರೆ ಆರೋಪಗಳ ನ್ಯಾಯಾಂಗ ತನಿಖೆಗೆ ಸಿಎಂ ಆದೇಶಿಸಲಿ: ಸಿದ್ದರಾಮಯ್ಯ

ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿರುವ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಇರುವ ಬಿಜೆಪಿ ಸರ್ಕಾರದ ಆಡಳಿತವನ್ನು ಕಿತ್ತೊಸೆಯಲು ಬರುವ ಚುನಾವಣೆಯಲ್ಲಿ ಜನರು ಮುಂದಾಗಬೇಕಿದೆ ಎಂದು ಈಶ್ವರ ಖಂಡ್ರೆ ಎಂದರು.
ಭಾಲ್ಕಿಯಲ್ಲಿ ನಡೆದ ಈ ಬೃಹತ್‌ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರಲ್ಲದೆ ಸಿದ್ದರಾಮಯ್ಯ ಅವರ ಭಾಷಣದ ಮಧ್ಯ ಹೌದು ಹುಲಿಯಾ ಘೋಷಣೆಗಳು ಮೊಳಗಿದ್ದು ಹಾಗೂ ಈಶ್ವರ ಖಂಡ್ರೆ ಗೆಲುವು ಖಚಿತ ಎಂದು ಸಿದ್ದರಾಮಯ್ಯ ಹೇಳುತ್ತಲೇ 50ಸಾವಿರ ಲೀಡ್‌ನಿಂದ ಗೆಲ್ತಾರೆ ಎಂದು ಜನರಿಂದ ಘೋಷಣೆಗಳು ಕೇಳಿಬಂದವು,

ಕುರಿಯೊಂದಿಗೆ ಆಗಮಿಸಿದ ಅಭಿಮಾನಿಗಳು

ಬಸವಕಲ್ಯಾಣದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ವಿಜಯಸಿಂಗ್‌ ಅಭಿಮಾನಿಗಳು ಕುರಿಯನ್ನು ಹೊತ್ತು ತಂದು ಗಮನ ಸೆಳೆದರು. ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನೀಡಲು ತಂದಿದ್ದ ಕುರಿಯ ಮೈಮೇಲೆ ಸಿದ್ಧರಾಮಯ್ಯ ಹಾಗೂ ವಿಜಯಸಿಂಗ್‌ ಅವರ ಭಾವ ಚಿತ್ರದ ಫೋಟೋ ಹಾಕಿದ್ದರು.

Follow Us:
Download App:
  • android
  • ios