ಅಡಿಕೆ ಬೆಳೆಗಾರರಿಗೆ ನೆರವಾಗಿ: ಸರ್ಕಾರಕ್ಕೆ ಎಚ್‌ಡಿಕೆ ಒತ್ತಾಯ
ಕೃಷಿಯನ್ನು ಕೇಂದ್ರ ಬಿಜೆಪಿ ಸರ್ಕಾರವು ಇನ್ನಿಲ್ಲದಷ್ಟುಕಡೆಗಣಿಸುತ್ತಿದೆ ಎನ್ನುವುದಕ್ಕೆ ಈಗ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳೇ ಸಾಕ್ಷಿ. ಹವಾಮಾನ ವೈಪರಿತ್ಯ ಮತ್ತು ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿಕರ ಬವಣೆ ಹೇಳ ತೀರದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.13): ಕೃಷಿಯನ್ನು ಕೇಂದ್ರ ಬಿಜೆಪಿ ಸರ್ಕಾರವು ಇನ್ನಿಲ್ಲದಷ್ಟು ಕಡೆಗಣಿಸುತ್ತಿದೆ ಎನ್ನುವುದಕ್ಕೆ ಈಗ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳೇ ಸಾಕ್ಷಿ. ಹವಾಮಾನ ವೈಪರಿತ್ಯ ಮತ್ತು ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿಕರ ಬವಣೆ ಹೇಳ ತೀರದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರಾವಳಿ, ಮಲೆನಾಡು, ಹಾಸನ, ಕೊಡಗು ಸೇರಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬೆಳೆ ತೆಗೆಯುವ ರಾಜ್ಯದ ರೈತರ ಬದುಕು ಕತ್ತಲೆಯಲ್ಲಿದೆ. ಅಡಿಕೆ ಬೆಳೆಯುವುದು ಎಂದರೆ ಕತ್ತಿಯ ಮೇಲಿನ ಸವಾರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅತಿವೃಷ್ಟಿ, ಅನಾವೃಷ್ಟಿಜತೆಗೆ ನಿರಂತರ ರೋಜರುಜಿನಗಳು ಬಾಧಿಸುತ್ತ ರೈತರನ್ನು ಕಿತ್ತು ತಿನ್ನುತ್ತಿವೆ. ರಾಜ್ಯ ಸರ್ಕಾರವು ಪರಿಣಾಮಕಾರಿ ಔಷಧಿ ಪತ್ತೆ ಹಚ್ಚಿ ಬೆಳೆಗಾರರಿಗೆ ಕಡಿಮೆ ದರದಲ್ಲಿ ಒದಗಿಸಬೇಕಿದೆ. ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿ ಕಡ್ಡಾಯದ ಅಮಿತ್ ಶಾ ವರದಿ ಆಘಾತಕಾರಿ: ಎಚ್.ಡಿ.ಕುಮಾರಸ್ವಾಮಿ
ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರ್ಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ನೆರೆ ದೇಶ ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕ್ರಮ ನಮ್ಮ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರವಷ್ಟೇ. ಅಡಿಕೆ ಬೆಳೆಯುತ್ತಾ ಅಡಕತ್ತರಿಯಲ್ಲಿ ಸಿಲುಕಿರುವ ರೈತರ ಹಿತ ಕಾಯುವುದು ರಾಜ್ಯ ಬಿಜೆಪಿ ಸರ್ಕಾರದ ಕರ್ತವ್ಯ. ಅವರ ಸಂಕಷ್ಟಕ್ಕೆ ಮಿಡಿಯುವುದು ಮಾತ್ರವಲ್ಲ, ಎಲ್ಲಾ ರೀತಿಯಲ್ಲಿಯೂ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಧುಗಿರಿಗೆ ವೀರಭದ್ರಯ್ಯನವರೇ ಅಭ್ಯರ್ಥಿ: ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಯಾರು ಆತಂಕ ಪಡುವ ಅಗತ್ಯವಿಲ್ಲ, ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನ ಮೇಲಿದ್ದು, ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಿಸುವುದಿಲ್ಲ, ವೀರಭದ್ರಯ್ಯ ಅವರೇ ಕ್ಯಾಂಡಿಡೇಟ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಇತ್ತೀಚೆಗೆ ಶಾಸಕ ವೀರಭದ್ರಯ್ಯ ಆರೋಗ್ಯ, ವೈಯಕ್ತಿಕ ಸಮಸ್ಯೆಗಳಿಂದಾಗಿ ಮಂಬರುವ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಇದರಿಂದ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆತಂಕಕ್ಕೆ ಒಳಗಾಗಿ ಭಾನುವಾರ ಮಧುಗಿರಿ ಕ್ಷೇತ್ರದಿಂದ ನೂರಾರು ಜನ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಹೋಗಿ ವೀರಭದ್ರಯ್ಯ ಅವರನ್ನೇ 2023ರ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಂ.ವಿ.ವೀರಭದ್ರಯ್ಯ ನಮ್ಮ ಮನೆ ಮಗ ಇದ್ದಂತೆ, ದೇವೇಗೌಡರು ನೀನು ಯಾರನ್ನು ಕೇಳಿ ಈ ತೀರ್ಮಾನ ಮಾಡಿದೆ ಎಂದು ಕೇಳಿದರೆ ಸಾಕು ಮತ್ತೆ ಕ್ಷೇತ್ರಕ್ಕೆ ವಾಪಸ್ ಮರಳುತ್ತಾರೆ. ಆತಂಕ ಬೇಡ, ವೀರಭದ್ರಯ್ಯ ಅತ್ಯಂತ ಸರಳ, ಸೂಕ್ಷ್ಮ ವ್ಯಕ್ತಿ, ಕಾರ್ಯಕರ್ತರಲ್ಲಿ ಈಗ ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಡಬಲ್ ಹುಮ್ಮಸ್ಸು ಬಂದಿದ್ದು, ಮಧುಗಿರಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಇದು ಕಾರ್ಯಕರ್ತರ ಆಶಯ ಕೂಡ, ಅದೇ ರೀತಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಜಿಲ್ಲೆಯ ಮತದಾರರು ಜೆಡಿಎಸ್ ಪಕ್ಷ ಮತ್ತು ದೇವೇಗೌಡರನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಗ್ದಾನ ಪೂರೈಸದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ
ಪುರಸಭೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಶಾಸಕ ಎಂ.ವಿ.ವೀರಭದ್ರಯ್ಯ ಸೋತಾಗಲೂ 60 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಗೆದ್ದಾಗ 88 ಸಾವಿರ ಮತ ಪಡೆದು ಪಕ್ಷ ಕಟ್ಟಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆಯವರಿಂದ ಗೆಲುವು ಸಾಧ್ಯವಿಲ್ಲ, 88 ಸಾವಿರ ಮತಗಳು ಬರಬೇಕಾದರೆ ಎಲ್ಲ ಸಮಾಜದವರು ಇತರೆ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರ ಫಲ, ವಿರೋಧ ಪಕ್ಷದವರು ಸಹ ಎಂ.ವಿ.ವೀರಭದ್ರಯ್ಯ ಆಡಳಿತವನ್ನು ಮೆಚ್ಚಿದ್ದಾರೆ ಎಂದರು.