Asianet Suvarna News Asianet Suvarna News

ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೆ: ಎಚ್‌.ಡಿ.ಕುಮಾರಸ್ವಾಮಿ

ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದಾಗಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕಾಲೇಜುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. 

I gave priority to the education sector during my tenure Says HD Kumaraswamy gvd
Author
First Published Sep 21, 2023, 11:41 AM IST

ಚನ್ನಪಟ್ಟಣ (ಸೆ.21): ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದಾಗಲೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕಾಲೇಜುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಅವಧಿಯ 20 ತಿಂಗಳು ಹಾಗೂ 2ನೇ ಅವಧಿಯ 14 ತಿಂಗಳಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕ್ರಮ ಕೈಗೊಂಡಿದ್ದೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಅಷ್ಟೇ ಆಕಸ್ಮಿಕವಾಗಿ ನನಗೆ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು. ನಾನು ಮೊದಲ ಬಾರಿ ಸಿಎಂ ಆದಾಗ ಒಂದೇ ವರ್ಷದಲ್ಲಿ ರಾಜ್ಯಾದ್ಯಂತ 179 ಪ್ರಥಮ ದರ್ಜೆ ಕಾಲೇಜು ಆರಂಭಿಸಿದೆ. ಜತೆಗೆ 500 ಜ್ಯೂನಿಯರ್ ಕಾಲೇಜು, 1400ಕ್ಕೂ ಹೆಚ್ಚು ಪ್ರೌಢಶಾಲೆಗಳನ್ನು ಆರಂಭಿಸಿದೆ ಎಂದರು.

ಮಹಿಳಾ ಮೀಸಲು: ಇಂದು ದೇಶದಲ್ಲಿ ಮಹಿಳಾ ಮೀಸಲು ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಎರಡು ದಶಕಕ್ಕೂ ಮೊದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕನಸು ಕಂಡಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೆಯಕ ಜಾರಿಗೊಳಿಸಲು ಪ್ರಯತ್ನಿಸಿದ್ದರು. ಇದೀಗ ಈ ವಿಧೇಯಕಕ್ಕೆ ಅಂಕಿತ ಬೀಳುವ ಸಮಯ ಸನ್ನಿಹಿತವಾಗಿದೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ದೇವೇಗೌಡರು ಸಾಕಷ್ಟು ಕ್ರಮ ಕೈಗೊಂಡರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು ಕಲ್ಪಿಸಿದ್ದು ದೇವೇಗೌಡರ ಕೊಡುಗೆ ಎಂದರು.

ಬಿಜೆಪಿ- ಜೆಡಿಎಸ್ ಮೈತ್ರಿಗೆ ಠಕ್ಕರ್‌ ನೀಡಲು ಸಂಸದ ಡಿಕೆಸು ಮನೆಯಲ್ಲಿ ಸಭೆ

ಕಮಿಷನ್‌ಗಾಗಿ ಕಟ್ಟಡ ನಿರ್ಮಾಣ: ಮಾನವೀಯತೆ ಬೆಳೆಸಿ: ನಾವು ಇಂದು ಚಂದ್ರಯಾನ, ಸೂರ್ಯಯಾನದತ್ತ ಪಯಣ ಬೆಳೆಸಿದ್ದೇವೆ. ಆದರೆ, ಮಾನೀಯತೆಯನ್ನೇ ಮರೆಯುತ್ತಿದ್ದೇವೆ. ಸಣ್ಣ ಸಣ್ಣ ವಿಚಾರಕ್ಕೆ ಕುಟುಂಬಗಳ ಮಧ್ಯೆ ವೈಮನಸ್ಸು ಬೆಳೆಯುತ್ತಿದೆ. ಶಿಕ್ಷಕರು ಮಕ್ಕಳಲ್ಲಿ ಉತ್ತಮ ಆಲೋಚನೆಗಳನ್ನು ಬಿತ್ತಬೇಕು ಎಂದು ಸಲಹೆ ನೀಡಿದರು. 

ಗುರುಭವನ ನಿರ್ಮಾಣ: ತಾಲೂಕಿನಲ್ಲಿ ಆದಷ್ಟು ಬೇಗ ಶಿಕ್ಷಕರ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಇನ್ನೊಂದು ವರ್ಷದಲ್ಲಿ ಗುರುಭವನ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಶಿಕ್ಷಕರ ದಿನಾಚರಣೆಯನ್ನು ಅಲ್ಲೇ ಆಚರಿಸಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಂದ್ರ, ತಾಪಂ ಇಒ ಶಿವಕುಮಾರ್, ಪೌರಾಯುಕ್ತ ಪುಟ್ಟಸ್ವಾಮಿ, ನಗರಸಭೆ ಅಧ್ಯಕ್ಷ ಪ್ರಶಾಂತ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ, ಬಿಇಒ ಮರೀಗೌಡ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕುಸುಮಲತಾ, ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಚಂದ್ರಶೇಖರ್ಇ ಇತರರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯಲ್ಲಿ ಅಶಿಸ್ತು ತಾಂಡವ!: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅವ್ಯವಸ್ಥೆಯ ಅಗಾರವಾಗಿತ್ತು. ಮಕ್ಕಳಿಗೆ ಶಿಕ್ಷಣ ಕಲಿಸಬೇಕಾದ ಶಿಕ್ಷಕರೇ ಅಶಿಸ್ತಿನಿಂದ ವರ್ತಿಸಿದ್ದು, ಸಾಕಷ್ಟು ಟೀಕೆಗೆ ಕಾರಣವಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕುರ್ಚಿಗಳು ಕಮ್ಮಿ ಜನ ಜಾಸ್ತಿ ಎಂಬಂತ ವಾತಾವರಣ ನಿರ್ಮಾಣವಾಗಿತ್ತು. ಖುದ್ದು ಬಿಇಒ ಮರೀಗೌಡ ಕೆಲ ಕಾಲ ಕುರ್ಚಿ ಇಲ್ಲದ ಕಾರಣ ವೇದಿಕೆಯಲ್ಲಿ ನಿಲ್ಲುವಂತಾಗಿತ್ತು. ಇನ್ನು ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ತಾಪಂ ಇಒ ಸೇರಿದಂತೆ ಬಹುತೇಕ ಪ್ರಮುಖ ಅಧಿಕಾರಿಗಳು ಹಿಂದಿನ ಆಸನದಲ್ಲಿ ಕುಳಿತಿದ್ದರೆ, ಮಿಕ್ಕವರು ಮುಂದಿನ ಸಾಲಿನಲ್ಲಿ ವಿರಾಜಮಾನರಾಗಿದ್ದರು.

ಅನುದಾನ ಇಲ್ಲದೆ ಆಟ ನಿಲ್ಲಿಸಿದ ಧಾರವಾಡ ರಂಗಾಯಣ: ಸಿಬ್ಬಂದಿಗೆ ಸಂಬಳವೂ ಇಲ್ಲ!

ಕಾರ್ಯಕ್ರಮದಲ್ಲಿ ವೇದಿಕೆ ಏರಿ ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪೋಟೋ ತೆಗೆಸಿಕೊಳ್ಳಲು ಶಿಕ್ಷಕರು ಚಿಕ್ಕಮಕ್ಕಳಂತೆ ಮುಗಿಬಿದ್ದರು. ವೇದಿಕೆಯಿಂದ ಇಳಿದು ಕಾರ್ಯಕ್ರಮ ಸೂಸುತ್ರವಾಗಿ ನಡೆಯಲು ಅನುವು ಮಾಡಿಕೊಡುವಂತೆ ನಿರೂಪಕರು ಮನವಿ ಮಾಡುತ್ತಲೇ ಇದ್ದರು. ಸನ್ಮಾನ ಕಾರ್ಯಕ್ರಮ ನಡೆಯುವಾಗಲೇ ಅರ್ಧಕ್ಕರ್ಧ ಶಿಕ್ಷಕರು ಊಟಕ್ಕೆ ಎದ್ದು ಹೋದ ಪರಿಣಾಮ ಅರ್ಧಕ್ಕೂ ಹೆಚ್ಚು ಕುಚಿರ್ಗಳು ಖಾಲಿಯಾಗಿದ್ದವು. ಕಾರ್ಯಕ್ರಮ ಮುಗಿದ ನಂತರ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ನೀಡುವ ಎಚ್ಚರಿಕೆ ನೀಡಿದ್ದು, ಕಾರ್ಯಕ್ರಮದ ಅವ್ಯವಸ್ಥೆಗೆ ಸಾಕ್ಷಿಯಾಗಿತ್ತು.

Follow Us:
Download App:
  • android
  • ios