Asianet Suvarna News Asianet Suvarna News

ಅನುದಾನ ಇಲ್ಲದೆ ಆಟ ನಿಲ್ಲಿಸಿದ ಧಾರವಾಡ ರಂಗಾಯಣ: ಸಿಬ್ಬಂದಿಗೆ ಸಂಬಳವೂ ಇಲ್ಲ!

ನಾಡಿನ ರಂಗ ಸಂಸ್ಕೃತಿ ಶ್ರೀಮಂತಗೊಳಿಸಲು ಕಳೆದ 12 ವರ್ಷಗಳ ಹಿಂದೆ ಶುರುವಾದ ಧಾರವಾಡ ರಂಗಾಯಣಕ್ಕೆ ಇದೀಗ ಅನುದಾನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ಐದು ತಿಂಗಳಿಂದ ರಂಗಾಯಣ ತನ್ನ ರಂಗ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

Dharwad Rangayana activities break due to lack of funds gvd
Author
First Published Sep 21, 2023, 10:47 AM IST

ಬಸವರಾಜ ಹಿರೇಮಠ

ಧಾರವಾಡ (ಸೆ.21): ನಾಡಿನ ರಂಗ ಸಂಸ್ಕೃತಿ ಶ್ರೀಮಂತಗೊಳಿಸಲು ಕಳೆದ 12 ವರ್ಷಗಳ ಹಿಂದೆ ಶುರುವಾದ ಧಾರವಾಡ ರಂಗಾಯಣಕ್ಕೆ ಇದೀಗ ಅನುದಾನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ಐದು ತಿಂಗಳಿಂದ ರಂಗಾಯಣ ತನ್ನ ರಂಗ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ವಿಧಾನಸಭಾ ಚುನಾವಣೆ ನಂತರ ಹೊಸ ಸರ್ಕಾರ ಬಂದಾಗಿನಿಂದ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಜೊತೆಗೆ ನಯಾಪೈಸಾ ಅನುದಾನವೂ ಇಲ್ಲದ ಹಿನ್ನೆಲೆಯಲ್ಲಿ ಐದು ತಿಂಗಳಿಂದ ಯಾವುದೇ ರಂಗ ಚಟುವಟಿಕೆಗಳು ಇಲ್ಲದೇ ರಂಗಾಯಣದ ಆವರಣ ಬಣಗುಡುತ್ತಿದೆ.

ಕಾರಂತರ ಕೂಸು: ಹಿರಿಯ ರಂಗ ಚೇತನ ಬಿ.ವಿ. ಕಾರಂತರ ಕನಸಿನ ಕೂಸಾಗಿ ಮೈಸೂರು ರಂಗಾಯಣ ಆರಂಭವಾಯಿತು. ಅದರ ಭಾಗವಾಗಿ ಧಾರವಾಡದಲ್ಲಿ 2006ರಲ್ಲಿ ಶುರುವಾದರೂ 2011ರಲ್ಲಿ ಸ್ವಾಯತ್ತತೆ ಪಡೆಯಿತು. ನಟರಾಜ ಏಣಗಿ ಪ್ರಥಮ ನಿರ್ದೇಶಕರಾಗಿ ರಂಗಾಟ ಶುರು ಮಾಡಿದ ಧಾರವಾಡ ರಂಗಾಯಣವು ಚಿಣ್ಣರ ಮೇಳ, ಯುವ ರಂಗೋತ್ಸವ, ನವರಾತ್ರಿ ರಂಗೋತ್ಸವ, ರಂಗಧ್ವನಿ ರಾಷ್ಟ್ರೀಯ ರಂಗಸಂಗೀತ ಕಾರ್ಯಾಗಾರ ಸೇರಿದಂತೆ ಹತ್ತು ಹಲವು ನಾಟಕಗಳನ್ನು ಹೊರ ತಂದಿದೆ. ಜೊತೆಗೆ 50ಕ್ಕೂ ಹೆಚ್ಚು ರೆಪರ್ಟರಿ ಕಲಾವಿದರು ರಂಗಾಯಣದಿಂದ ಹೊರ ಬಂದಿದ್ದಾರೆ.

ವಿಶ್ವವಿಖ್ಯಾತ ಹಂಪಿಯಲ್ಲಿವೆ ಸಾಸಿವೆ ಕಾಳು, ಕಡಲೆ ಕಾಳು ಗಣಪತಿ: ಆದರೆ ಮೂರ್ತಿಗೆ ಪೂಜೆ ಭಾಗ್ಯವಿಲ್ಲ, ಏಕೆ?

ಚೆನ್ನಮ್ಮ ನಾಟಕವೇ ಕೊನೆ: ರಮೇಶ ಪರವೀನಾಯ್ಕರ ನಿರ್ದೇಶಕರಾಗಿದ್ದ ಸಮಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮಳ ಜೀವನ ಆಧಾರಿತ ಚೆನ್ನಮ್ಮ ನಾಟಕವೇ ರಂಗಾಯಣದ ಕೊನೆಯ ನಾಟಕ. ಅಲ್ಲಿಂದ ಯಾವುದೇ ಕಾರ್ಯಕ್ರಮ, ನಾಟಕ ಸಿದ್ಧತೆಗಳೂ ನಡೆದಿಲ್ಲ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ದಸರಾ ನಿಮಿತ್ತ ನವರಾತ್ರಿ ರಂಗೋತ್ಸವ ನಡೆಯುತ್ತಿತ್ತು. ಇದೀಗ ಅದು ಕನಸು ಮಾತ್ರ.

ಸಿಬ್ಬಂದಿಗೆ ಸಂಬಳವಿಲ್ಲ: ಆರಂಭದಲ್ಲಿ ಪ್ರತಿ ವರ್ಷ ಒಂದು ಕೋಟಿ ಅನುದಾನ ಪಡೆಯುತ್ತಿದ್ದ ಧಾರವಾಡ ರಂಗಾಯಣಕ್ಕೆ ನಿಧಾನವಾಗಿ ₹75 ಲಕ್ಷ, ₹50 ಲಕ್ಷದಿಂದ ಇದೀಗ ಕಳೆದ ಬಾರಿ ₹40 ಲಕ್ಷ ಅನುದಾನ ಬಂದಿದ್ದು, ಈ ವರ್ಷ ಅನುದಾನವೇ ಇಲ್ಲದಾಗಿದೆ. ಬೇಸರದ ಸಂಗತಿ ಏನೆಂದರೆ, ಎರಡ್ಮೂರು ತಿಂಗಳಿಂದ ಸಿಬ್ಬಂದಿ ಹಾಗೂ ರೆಪರ್ಟರಿ ಕಲಾವಿದರ ಸಂಬಳವಿಲ್ಲ. ಇನ್ನೂ ವಿಚಿತ್ರವೆಂದರೆ, ಕಳೆದ ಒಂದು ವರ್ಷದಿಂದ ಆಡಳಿತಾಧಿಕಾರಿಗಳಿಗೂ ಸಂಬಳ ಬಂದಿಲ್ಲ. ಹೀಗಾಗಿ, ರಂಗಾಯಣ ಬೇರೆ ಬೇರೆ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಭಾಭವನ ಬಾಡಿಗೆ ನೀಡುವ ಸಂಸ್ಥೆಯಾಗಿದ್ದು, ಬಾಡಿಗೆ ನೀಡಿದ್ದಕ್ಕೆ ಅವರ ಬ್ಯಾನರ್‌ನಲ್ಲಿ ರಂಗಾಯಣದ ಸಹಕಾರ ಎಂದು ಹಾಕಿಕೊಳ್ಳುವ ಸ್ಥಿತಿಗೆ ಬಂದಿದೆ.

ನಿರ್ದೇಶಕರನ್ನು ನೇಮಿಸಿ: ಬರೀ ರಂಗಾಯಣ ಮಾತ್ರವಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೂ ಸರ್ಕಾರ ಕಡೆಗಣಿಸಿದೆ. ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು, ರಂಗ ಕಾರ್ಯಕ್ರಮಗಳು ನಡೆಯುತ್ತಿಲ್ಲ. ತಾವು ನಿರ್ದೇಶಕರಿದ್ದಾಗ ಹೊಸ ನಾಟಕಗಳು, ಚಿಣ್ಣರ ಮೇಳ, ರಂಗ ತರಬೇತಿ ಸೇರಿದಂತೆ ಹಲವು ರಂಗ ಕಾರ್ಯಕ್ರಮಗಳನ್ನು ಮಾಡಿದ್ದು, ಇದೀಗ ರಂಗಾಯಣ ಸ್ತಬ್ದವಾಗಿದೆ. ಕೂಡಲೇ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಿಸಿ ಅನುದಾನ ನೀಡುವ ಮೂಲಕ ರಂಗಾಯಣದ ಆಶೋತ್ತರಗಳನ್ನು ಮುಂದುವರಿಸಬೇಕೆಂದು ಈ ಹಿಂದಿನ ನಿರ್ದೇಶಕರಾದ ರಮೇಶ ಪರವೀನಾಯ್ಕರ ಆಗ್ರಹಿಸಿದ್ದಾರೆ. ರಂಗಾಯಣದಲ್ಲಿ ಯಾವುದೇ ರಂಗ ಚಟುವಟಿಕೆ ನಡೆಯುತ್ತಿಲ್ಲವಾದ ಕಾರಣ ರೆಪರ್ಟರಿ ಕಲಾವಿದರು, ಸಿಬ್ಬಂದಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಕೂಡಲೇ ರಂಗಾಯಣ ಮತ್ತೆ ಕ್ರಿಯಾಶೀಲವಾಗಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ರಂಗಾಸಕ್ತರು ಆಗ್ರಹಿಸಿದ್ದಾರೆ.

ಬಿಜೆಪಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ನೆನಪಾಗಿದೆ: ಮಹದೇವಪ್ಪ

ರಂಗಾಯಣದ ಕಾರ್ಯ ಚಟುವಟಿಕೆಗಳು ಹಾಗೂ ಆಡಳಿತಕ್ಕಾಗಿ ₹1.50 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ, ರೆಪರ್ಟರಿ ಕಲಾವಿದರ, ಸಿಬ್ಬಂದಿ ಸಂಬಳ ಸೇರಿದಂತೆ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ಯಾವುದೇ ರಂಗಚಟುವಟಿಕೆಗಳು ನಡೆದಿಲ್ಲ. ಸರ್ಕಾರ ಹೊಸ ನಿರ್ದೇಶಕರನ್ನು ನೇಮಿಸಿ, ಅನುದಾನ ಕೊಡಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ.
- ಶಶಿಕಲಾ ಹುಡೇದಮನಿ, ರಂಗಾಯಣ ಆಡಳಿತಾಧಿಕಾರಿಗಳು.

Follow Us:
Download App:
  • android
  • ios