ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಇರುವುದಿಲ್ಲವೋ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಯುವ ಸಮುದಾಯಕ್ಕೆ ಕೌಶಲ್ಯಭಿವೃದ್ಧಿ ತರಬೇತಿ ನೀಡುವ ಸಂಬಂಧ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
 

I do not believe in any religion where there is no food for the hungry Says CM Siddaramaiah gvd

ಶಿವಮೊಗ್ಗ (ಜ.12): ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಯುವ ಸಮುದಾಯಕ್ಕೆ ಕೌಶಲ್ಯಭಿವೃದ್ಧಿ ತರಬೇತಿ ನೀಡುವ ಸಂಬಂಧ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ ಆಯೋಜಿಸಲಾದ ಸರ್ಕಾರದ ಐದನೇ ಗ್ಯಾರಂಟಿಯಾದ ‘ಯುವನಿಧಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಮಿತಿಯು ಯುವಕ, ಯುವತಿಯರಿಗೆ ಯಾವ ರೀತಿಯ ತರಬೇತಿ ಮತ್ತು ಎಷ್ಟು ಅವಧಿ ತರಬೇತಿ ಎಂಬ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಇದೇ ರೀತಿ ತರಬೇತಿ ಪಡೆದ ಯುವಸಮೂಹಕ್ಕೆ ಉದ್ಯೋಗ ಒದಗಿಸಲು ಉದ್ಯೋಗ ಮೇಳ ಕೂಡ ಆಯೋಜಿಸಲಾಗುತ್ತದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿ ಯುವ ಸಮುದಾಯದಲ್ಲಿ ಆತ್ಮಶಕ್ತಿ ಹೆಚ್ಚಿಸುವ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ಶಿವಮೊಗ್ಗ ಮಟ್ಟಿಗೆ ಐತಿಹಾಸಿಕ ದಿನ: ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳ ಜೊತೆಗೆ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಸರ್ಕಾರ ಅಧಿಕಾರ ಸ್ವೀಕರಿಸಿದ ದಿನವೇ ಮೊದಲ ಕ್ಯಾಬಿನೇಟ್‌ ಸಭೆ ನಡೆಸಿ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವ ನಿರ್ಧಾರ ಪ್ರಕಟಿಸಲಾಯಿತು. ನಾಲ್ಕು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದು, ಕೊನೆಯ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಇಂದು ಚಾಲನೆ ನೀಡುತ್ತಿದ್ದೇವೆ. ಇದು ಶಿವಮೊಗ್ಗದ ಮಟ್ಟಿಗೆ ಐತಿಹಾಸಿಕ ದಿನ ಎಂದರು. ಯುವನಿಧಿ ಯೋಜನೆ ಕುರಿತ ಭರವಸೆ ದಿನವೇ ಇದರ ನೀತಿ ನಿಯಮಗಳ ಬಗ್ಗೆ ಹೇಳಿದ್ದು, ಪದವಿ ಪಡೆದ 180 ದಿನಗಳ ಬಳಿಕವೂ ಕೆಲಸ ಸಿಗದೇ ಇದ್ದಲ್ಲಿ ಮಾತ್ರ ಯುವನಿಧಿ ಯೋಜನೆಗೆ ಅರ್ಹರಾಗುತ್ತಾರೆ. ಪದವೀಧದರಿಗೆ ₹3 ಸಾವಿರ ಮತ್ತು ಡಿಪ್ಲೊಮಾ ಪದವೀಧರರಿಗೆ ₹1500 ನೀಡಲಾಗುತ್ತದೆ. ಇವರಿಗೆ ಉದ್ಯೋಗ ಸಿಕ್ಕ ಬಳಿಕ ಈ ಯೋಜನೆಯ ಲಾಭ ನಿಂತು ಹೋಗುತ್ತದೆ ಎಂದು ಹೇಳಿದರು.

ಜ.22ರ ಬಳಿಕ ಅಯೋಧ್ಯೆಗೆ ನಾನೂ ಹೋಗ್ತೀನಿ, ನಾವೂ ಶ್ರೀರಾಮನ ಭಕ್ತರು: ಸಿಎಂ ಸಿದ್ದರಾಮಯ್ಯ

ಹಸಿದವರ ಮುಖದಲ್ಲೀಗ ನೆಮ್ಮದಿ: ಇಂದಿನ ಬೆಲೆ ಏರಿಕೆ, ಆರ್ಥಿಕ ಅಸಮಾನತೆಯಿಂದ ಜನ ತತ್ತರಿಸಿದ್ದಾರೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಬಡವರು, ರೈತರು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕಾಗಿದ್ದು, ಇದೇ ಉದ್ದೇಶದಿಂದ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದಾಗಿ ಇಂದು ಹಸಿದವರ ಮುಖದಲ್ಲಿ ನೆಮ್ಮದಿ ಕಾಣುತ್ತಿದೆ ಎಂದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಇರುವುದಿಲ್ಲವೋ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ ಎಂಬ ವಿವೇಕಾನಂದರ ಮಾತನ್ನೇ ನಮ್ಮ ಸರ್ಕಾರ ಕೂಡ ನಂಬಿದೆ. ಅಂತಹ ಧರ್ಮ ಧರ್ಮವೇ ಅಲ್ಲ. ವಿವೇಕಾನಂದರು ಯುವಕರ ಬಗ್ಗೆ ಕಾಳಜಿ ವಹಿಸಿದ್ದರು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕೂಡ ಯುವಕರ ಕುರಿತು ವಿಶೇಷ ಯೋಜನೆ ರೂಪಿಸಿದ್ದರು. ಆದರೆ. ದುರದೃಷ್ಟವೆಂದರೆ 2004-05 ರಲ್ಲಿ ನಿರುದ್ಯೋಗ ಸಮಸ್ಯೆ ಶೇ.5.5ರಷ್ಟು ಇದ್ದರೆ, ಇಂದು ಇದು ಶೇ.10.5ರಷ್ಟಕ್ಕೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಅಂಬೇಡ್ಕರ್‌ ಮಾತಲ್ಲಿ ನಂಬಿಕೆ: ಯುವಕರು ತಮಗೆ ಭವಿಷ್ಯ ಇಲ್ಲ ಎಂದು ಭ್ರಮನಿರಸನ ಆಗುತ್ತಿದ್ದಾರೆ. ಇದನ್ನು ನೀಗಿಸಲು ಯುವನಿಧಿ ಯೋಜನೆ ರೂಪಿಸಿದ್ದೇವೆ. ಕೇವಲ ಭಾಷಣ ಮಾಡಿದರೆ ಸಾಲದು. ಸಮಾಜದಲ್ಲಿ ವರ್ಗ, ಜಾತಿರಹಿತ ಸಮಾಜ ನಿರ್ಮಾಣ ಆಗಬೇಕು. ಎಲ್ಲರಿಗೂ ಆರ್ಥಿಕ ಶಕ್ತಿ ಸಿಗಬೇಕು. ಕೇವಲ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಲದು, ಆರ್ಥಿಕ ಸ್ವಾತಂತ್ರ್ಯ ಕೂಡ ಬೇಕು. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆ ಮಹಲು ಧ್ವಂಸಗೊಳ್ಳುತ್ತದೆ ಎಂಬ ಅಂಬೇಡ್ಕರ್‌ ಮಾತಿನಲ್ಲಿ ನಂಬಿಕೆ ಇಟ್ಟ ಸರ್ಕಾರ ನಮ್ಮದು ಎಂದ ಸಿದ್ದರಾಮಯ್ಯ, ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಕನಸಿನ ಅಭಿಯಾನ ಹೋರಾಟದ ನೆಲವಾದ ಶಿವಮೊಗ್ಗದಿಂದಲೇ ಆರಂಭವಾಗಲಿ ಎಂದು ಆಶಿಸಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಮಾತನಾಡಿ, ಯುವನಿಧಿ ಯೋಜನೆಗೆ ಈಗಾಗಲೇ ಸುಮಾರು 70 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದು, ಈ ವರ್ಷ ಪದವಿ ಮುಗಿಸಿರುವ ಸುಮಾರು 5 ಲಕ್ಷ ವಿದ್ಯಾರ್ಥಿಗಳೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪದವಿ, ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಯುವಕರು ಕೂಡ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು. ಯುವ ನಿರುದ್ಯೋಗಿಗಳಿಗೆ ಕೇವಲ ಭತ್ಯೆ ನೀಡುವುದಷ್ಟೇ ಅಲ್ಲ, ಯುವಜನತೆಗೆ ಕೌಶಲ್ಯ ತರಬೇತಿ ನೀಡಿ, ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು. ಯುವಜನತೆ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ಸೇವಾಸಿಂಧು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ವಾವಲಂಬನೆಯ ಯುವಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಿ ಪ್ರೋತ್ಸಾಹಿಸುವ ಈ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ಮಲೆನಾಡು ರೈತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಸಂಸದ ಬಿ.ವೈ,ರಾಘವೇಂದ್ರ ಮಾತನಾಡಿ, ಶಿವಮೊಗ್ಗದ ಕೃಷಿ ವಿವಿ ಅಭಿವೃದ್ಧಿ, ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ಫ್ರೀಡಂ ಪಾರ್ಕ್‌ಗೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್‌ ಆಜಾದ್‌ ಅವರ ಹೆಸರು ಇಡುವಂತೆ ಒತ್ತಾಯಿಸಿದರು.

ಮಗನಿಗೆ ಟಿಕೆಟ್‌ ಸಿಗದಿದ್ರೆ ಈಶ್ವರಪ್ಪ 2ನೇ ಯತ್ನಾಳ್: ಶಾಸಕ ಬೇಳೂರು ಗೋಪಾಲಕೃಷ್ಣ

ಕಾರ್ಯಕ್ರಮದಲ್ಲಿ ಯುವನಿಧಿ ಯೋಜನೆ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್‌ ನೀಡಲಾಯಿತು. ಸಚಿವರಾದ ಡಾ. ಎಂ.ಸಿ. ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ಎಸ್ ವೈದ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ, ಡಿ.ಜಿ.ಶಾಂತನಗೌಡ, ಶಾರದಾ ಪೂರ್ಯಾನಾಯ್ಕ್‌, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ, ಎಚ್.ಡಿ.ತಮ್ಮಯ್ಯ, ಭೀಮಣ್ಣ ನಾಯ್ಕ, ವಿಧಾನಪರಿಷತ್ತು ಸದಸ್ಯ ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್‌, ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios