Asianet Suvarna News Asianet Suvarna News

ಜ.22ರ ಬಳಿಕ ಅಯೋಧ್ಯೆಗೆ ನಾನೂ ಹೋಗ್ತೀನಿ, ನಾವೂ ಶ್ರೀರಾಮನ ಭಕ್ತರು: ಸಿಎಂ ಸಿದ್ದರಾಮಯ್ಯ

ಶ್ರೀರಾಮಚಂದ್ರನ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಇಲ್ಲ. ನಾವೂ ಶ್ರೀರಾಮನ ಭಕ್ತರು. ಜ.22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

I will also go to Ayodhya after Jan 22 Says CM Siddaramaiah At Shivamogga gvd
Author
First Published Jan 13, 2024, 4:23 AM IST

ಶಿವಮೊಗ್ಗ (ಜ.13): ಶ್ರೀರಾಮಚಂದ್ರನ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಇಲ್ಲ. ನಾವೂ ಶ್ರೀರಾಮನ ಭಕ್ತರು. ಜ.22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರವುಳಿಯುವುದಾಗಿ ಕಾಂಗ್ರೆಸ್‌ ಪಕ್ಷ ನಿರ್ಧಾರ ಕೈಗೊಂಡ ಬೆನ್ನಲ್ಲೇ ಬಿಜೆಪಿಯಿಂದ ಕೇಳಿಬರುತ್ತಿರುವ ಟೀಕೆಗಳ ಕುರಿತಾಗಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ಮತ್ತು ಶ್ರೀರಾಮಚಂದ್ರನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಈ ರಾಜಕೀಯವನ್ನಷ್ಟೇ ನಾವು ವಿರೋಧಿಸುತ್ತೇವೆ. ನಾನು ಅಯೋಧ್ಯೆಗೆ ಹೋಗುತ್ತೇನೆ, ನಮ್ಮ ಕಾರ್ಯಕರ್ತರೂ ಹೋಗುತ್ತಾರೆ ಎಂದರು.

ನಾವೂ ರಾಮಭಕ್ತರೇ- ಸಿದ್ದು: ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾಗೂ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವ್ಯಾರೂ ಶ್ರೀ ರಾಮಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿ ಶ್ರೀ ರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ. ಶ್ರೀ ರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ. ನಾವೆಲ್ಲರೂ ಶ್ರೀ ರಾಮಚಂದ್ರನ ಭಕ್ತರೇ. ಬಿಜೆಪಿ ಮಾತ್ರ ರಾಜಕೀಯವಾಗಿ ರಾಮನನ್ನು ಬಳಸಿಕೊಳ್ಳುತ್ತಿದೆ ಮತ್ತು ಮಾತನಾಡುತ್ತಿದೆ. ಅದಕ್ಕೆ ಯಾವುದೇ ಔಷಧಿ ಇಲ್ಲ ಎಂದರು. 

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸೋಲು: ಜನಾರ್ದನ ರೆಡ್ಡಿ

ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್‌ ಪಕ್ಷದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕೆ ಮಾತ್ರ ನಾವು ವಿರೋಧವಾಗಿದ್ದೇವೆ. ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು. ರಾಮಮಂದಿರ ಉದ್ಘಾಟನೆ ದಿನದಂದು ರಾಜ್ಯದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆ ಮಾಡುವಂತೆ ನಾನು ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ? ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ? ನಮ್ಮಲ್ಲಿರುವ ಶ್ರೀ ರಾಮನಿಗೆ ಬೆಲೆ ಇಲ್ಲವೇ? ಹೀಗಾಗಿ ಇಲ್ಲಿನ ದೇವಸ್ಥಾನಗಳಲ್ಲೂ ಪೂಜೆ ನಡೆಯಲಿದೆ ಎಂದು ಹೇಳಿದರು.

ಅಕ್ಕಿ ಕೊಡದವರಿಂದ ಅಕ್ಷತೆ: ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ಹಸಿವು ಮುಕ್ತ ಕರ್ನಾಟಕದ ಉದ್ದೇಶದಿಂದ ಜಾರಿಗೊಳಿಸಲಾದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರ ಅಕ್ಕಿ ನೀಡಲಿಲ್ಲ. ಆದರೆ, ಈಗ ಧರ್ಮದ ಹೆಸರಿನಲ್ಲಿ ಅಕ್ಷತೆಯ ಗಂಟನ್ನು ಮನೆಮನೆಗೆ ಕಳುಹಿಸುತ್ತಿರುವುದನ್ನು ನೋಡಿದರೆ ಬಿಜೆಪಿಯವರಿಗೆ ಧರ್ಮದ ನೈಜ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ಧರ್ಮ ಈ ಜಗತ್ತಿನಲ್ಲಿ ಯಾವುದೂ ಇಲ್ಲ. 

ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡೋದನ್ನು ನಿಲ್ಲಿಸಿ: ಶಾಸಕ ಪ್ರದೀಪ್‌ ಈಶ್ವರ್‌ ಎಚ್ಚರಿಕೆ

ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಬಿಜೆಪಿಗರು ಧರ್ಮದ ಕುರಿತಂತೆ ಮಾತನಾಡುತ್ತಿರುವುದನ್ನು ನೋಡಿ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿ, ಬಿಜೆಪಿಯವರು ಶ್ರೀ ರಾಮನನ್ನು ಮತ್ತು ರಾಮಮಂದಿರವನ್ನು ಕೊಂಡುಕೊಂಡಂತಾಡುತ್ತಿದ್ದಾರೆ. ಶ್ರೀ ರಾಮಮಂದಿರ ಉದ್ಘಾಟನೆಯನ್ನು ಪಕ್ಷಾತೀತ, ಧರ್ಮಾತೀತವಾಗಿ ಮಾಡಬೇಕಿತ್ತು. ಆದರೆ, ಬಿಜೆಪಿ ಅದಕ್ಕ ರಾಜಕೀಯ ಬಣ್ಣ ಬಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios