ನನ್ನ ಅಣ್ಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ, ಆದರೆ ಈಗಲೇ ಅಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.

 ಬೆಂಗಳೂರು (ಏ.8): ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು. ನನ್ನ ಅಣ್ಣ (ಡಿ.ಕೆ. ಶಿವಕುಮಾರ್‌) ಒಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿದೆ. ಆದರೆ, ಈಗಲೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಲ್ಲ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ ಹೇಳಿದರು.

ಮುಂದಿನ ಎರಡು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಡಾ. ಪರಮೇಶ್ವರ್‌ ನೀಡಿರುವ ಹೇಳಿಕೆ ಕುರಿತಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, ‘ಡಾ. ಪರಮೇಶ್ವರ್‌ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಆದರೂ ಗೃಹ ಸಚಿವರು ಅಧಿಕೃತವಾಗಿ ಹೇಳಿದ್ದಾರೆ. ಅವರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು. ಇನ್ನು, ನನ್ನ ಅಣ್ಣ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿಲ್ಲ ಎಂದು ನಾನು ಹೇಳಿಲ್ಲ. ಈಗಲೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಲ್ಲವಲ್ಲ. ಆಸೆಯಿದೆ ಎಂದು ಹೇಳಿದ್ದೇನೆ’ ಎಂದರು.

ಎರಡು ಕ್ಷೇತ್ರಗಳ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಬಾಗಲಕೋಟೆ, ದಾವಣಗೆರೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಭಾಗದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಸ್ಪಂದಿಸಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇನ್ನು, ಬಾಗಲಕೋಟೆಯಲ್ಲಿ ಸೋಲಾಗಲಿದೆ ಎಂಬುದೆಲ್ಲ ಊಹಾಪೋಹ. ಅತ್ಯಧಿಕ ಮತಗಳಿಂದ ಗೆಲ್ಲಲಿದ್ದೇವೆ ಎಂದು ತಿಳಿಸಿದರು.

ಎಂಪಿ ಕ್ಷೇತ್ರ ಹೆಚ್ಚಳದಿಂದ ರಾಜ್ಯಕ್ಕೆ ಅನ್ಯಾಯ:

ಲೋಕಸಭೆ, ವಿಧಾನಸಭೆ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಅದರಿಂದಾಗಿ ನಮ್ಮ ತೆರಿಗೆ ಹಣ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆಯಾಗಲಿದ್ದು, ದಕ್ಷಿಣ ರಾಜ್ಯಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌, ಈ ಹಿಂದಿನಿಂದಲೂ ಕ್ಷೇತ್ರ ಮರುವಿಂಗಡಣೆ ಕುರಿತಂತೆ ಹೇಳುತ್ತಲೇ ಬಂದಿದ್ದೇನೆ. ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಅದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಏ. 16ರಂದು ಲೋಕಸಭೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ವಿಧೇಯಕ ತರಲಿದೆ ಎಂಬುದನ್ನು ನೋಡಬೇಕು. ಒಟ್ಟಾರೆ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ತೆಗೆದುಕೊಂಡು ಹೋಗುವ ಹುನ್ನಾರ ಇದಾಗಿದೆ ಎಂದರು.

2011ರ ಜನಗಣತಿಯಂತೆ ವಿಂಗಡಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, 2011ರ ಜನಗಣತಿಯಂತೆ ಬೆಂಗಳೂರಿನಲ್ಲಿ 60ರಿಂದ 70 ಲಕ್ಷ ಜನಸಂಖ್ಯೆಯಿತ್ತು. ಈಗ 1.40 ಕೋಟಿಗೆ ತಲುಪಿದೆ. ಕರ್ನಾಟಕದ ಜನಸಂಖ್ಯೆ ಐದು ಕೋಟಿಯಿತ್ತು, ಈಗ ಏಳು ಕೋಟಿಗೂ ಮೀರಿದೆ. ಈ ಬಗ್ಗೆ ಎಲ್ಲ ಪಕ್ಷಗಳು ಚಿಂತನೆ ನಡೆಸಬೇಕು. ಕ್ಷೇತ್ರಗಳ ಸಂಖ್ಯೆಯಲ್ಲಿ ಅನ್ಯಾಯವಾಗುವುದರ ಜತೆಗೆ ಆರ್ಥಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ ಎಂದರು.

ದೇಶದಲ್ಲಿನ ಸಮಸ್ಯೆ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್‌, ಯುದ್ಧದಿಂದ ಸಾಕಷ್ಟು ಸಮಸ್ಯೆಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಅದರ ಬಗ್ಗೆ ಕೇಂದ್ರ ಸರ್ಕಾರ ತನ್ನ ಮೌನವನ್ನು ಮುರಿದಿಲ್ಲ. ಜನರಿಗೆ ಪ್ರಧಾನಿ ಅವರು ಬೇರೆ ಸಂದರ್ಭದಲ್ಲಿ ಸಂದೇಶ ನೀಡುತ್ತಾರೆ. ಆದರೆ, ಈವರೆಗೆ ಪ್ರಧಾನಿ ಸೇರಿದಂತೆ ಕೇಂದ್ರದ ಯಾವುದೇ ಸಚಿವರು ಪರಿಸ್ಥಿತಿ ಎದುರಿಸುವ ಬಗ್ಗೆ ಮಾತನಾಡಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಧಾನಿ ಅವರೇ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದರೆ ಯಾವುದೂ ಸರಿಯಿಲ್ಲ ಎನ್ನವ ಅನುಮಾನ ಉಂಟಾಗುತ್ತಿದೆ. ಬೆಲೆ ಏರಿಕೆಯಾಗಿದೆ, ಹಲವು ವಸ್ತುಗಳ ಅಭಾವ ಉಂಟಾಗಿದೆ. ಈ ರೀತಿ ಆದಾಗ ಕೃತಕವಾಗಿ ಸೃಷ್ಟಿಯಾಗಿರುವುದೇ ಅಥವಾ ಬೇರೆ ವಿಚಾರವಿದೆಯೇ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಕೇಂದ್ರ ಸರ್ಕಾರ ಎಚ್ಚರಿಕೆಯ ನಡೆಯನ್ನಿಡಬೇಕು ಎಂದರು.