ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಚರ್ಚೆಗಳು ಕೇವಲ ವೈಯಕ್ತಿಕ ಅಭಿಪ್ರಾಯವಾಗಿದ್ದು, ಹೈಕಮಾಂಡ್ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. 

ಮೈಸೂರು (ಏ.7): ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಇನ್ನೂ ಎರಡು ವರ್ಷ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ದರು ತಾನೇ?. ಈ ಬಾರಿಯೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028, ಅದನ್ನ ಮುಗಿಸಬೇಕು ತಾನೇ?. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬೀಸಿದರು.

ಹೈಕಮಾಂಡ್ ಯಾವ ಗೊಂದಲಗಳನ್ನು ಸೃಷ್ಟಿ ಮಾಡಿಲ್ಲ. ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ?. ಹೈಕಮಾಂಡ್‌ನವರು ಯಾವತ್ತಾದರೂ ಬದಲಾವಣೆ ಬಗ್ಗೆ ಮಾತನಾಡಿದ್ದಾರಾ?. ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂಬುದು ಎಂದು ಅವರು ಸ್ಪಷ್ಟಪಡಿಸಿದರು.

ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಹೈಕಮಾಂಡ್ ಯಾವತ್ತಾದ್ರು ಇದರ ಬಗ್ಗೆ ಮಾತನಾಡಿದರೆ ಆಗ ಇದಕ್ಕೆ ಒಂದು ಅರ್ಥ ಬರುತ್ತದೆ‌. ಅಲ್ಲಿಯವರೆಗೆ ಯಾರು ಏನೇ ಮಾತನಾಡಿದರೂ ಅದು ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಡಿಸಿಎಂ ಆಗಿದ್ದಾರೆ, ಅವರು ನಮ್ಮ ನಾಯಕರು. ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ, ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು. ಅದರಲ್ಲಿ ನಾನು ಅರ್ಹ, ಇನ್ನೊಬ್ಬರು ಅರ್ಹ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದರು.

ಎರಡು ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ:

ಉಪ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಸೂಚಿ ಅಲ್ಲ. ಉಪ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ನೀಡುವ ಮಾರ್ಕ್ಸ್ ಕೂಡ ಅಲ್ಲ. ಅದರ ಫಲಿತಾಂಶದ ಮೇಲೆ ಯಾವ ಬದಲಾವಣೆಯೂ ಆಗುವುದಿಲ್ಲ. ಎರಡು ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಜನ ನಮ್ಮ ಪರವಾಗಿ ತೀರ್ಪು ಕೊಡುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಮೀರಿಯೂ ಈ ಸರ್ಕಾರದ ಆಡಳಿತದ ದಕ್ಷತೆಗೆ ಜನ ಮತ ಹಾಕುತ್ತಾರೆ. ಬಿಜೆಪಿಯವರು ಇಲ್ಲ, ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಜನ ನಮ್ಮ ಪರವಾಗಿದ್ದಾರೆ ಎಂದು ಅವರು ಹೇಳಿದರು.

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲು ಮಾಡಲು ಬರುವುದಿಲ್ಲ. ಆಹಾರ ಇಲಾಖೆ ಮಾಹಿತಿ ಕೊಟ್ಟರೆ ಪೊಲೀಸರು ದಾಳಿ ಮಾಡಿ ಕೇಸ್ ಹಾಕುತ್ತಾರೆ. ಆಹಾರ ಇಲಾಖೆಯ ಗಮನಕ್ಕೆ ಈ ವಿಚಾರ ಬಂದ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ಆಗ ಮಾತ್ರ ಪೊಲೀಸರು ಕ್ರಮ ವಹಿಸಲು ಸಾಧ್ಯ. ಪೊಲೀಸರೇ ದಾಳಿ ಮಾಡುವುದು, ಸುಮೋಟೊ ಕೇಸ್ ದಾಖಲಿಸಲು ಸಾಧ್ಯವಿಲ್ಲ.

- ಡಾ.ಜಿ.ಪರಮೇಶ್ವರ, ಗೃಹ ಸಚಿವ.