ಚುನಾವಣಾ ರಾಜಕೀಯಕ್ಕಷ್ಟೆ ವಿದಾಯ: ಬಿ.ಎಸ್‌.ಯಡಿಯೂರಪ್ಪ

ನಾನು ಚುನಾವಣಾ ರಾಜಕೀಯಕ್ಕಷ್ಟೇ ವಿದಾಯ ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

I am saying goodbye to electoral politics says bs yediyurappa gvd

ವಿಧಾನಸಭೆ (ಫೆ.25): ನಾನು ಚುನಾವಣಾ ರಾಜಕೀಯಕ್ಕಷ್ಟೇ ವಿದಾಯ ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 15ನೇ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ಅವರು, ಆರೆಸ್ಸೆಸ್‌, ಬಿಜೆಪಿ ಮತ್ತು ಶಿಕಾರಿಪುರ ಕ್ಷೇತ್ರದ ಜನರ ಗುಣಗಾನ ಮಾಡಿದರು.

ನಾನು ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಆರೆಸ್ಸೆಸ್‌ ನೀಡಿದ ತರಬೇತಿ, ನಮ್ಮ ಪಕ್ಷ ನೀಡಿದ ಅವಕಾಶಗಳು ಹಾಗೂ ಶಿಕಾರಿಪುರ ಕ್ಷೇತ್ರದ ಜನರ ಬೆಂಬಲ ಕಾರಣ. ಪಕ್ಷ ನನಗೆ ಅನೇಕ ಅವಕಾಶಗಳನ್ನು ನೀಡಿದೆ. ಶಿಕಾರಿಪುರದ ಪುರಸಭಾ ಸದಸ್ಯನಾಗಿ ಮುಖ್ಯಮಂತ್ರಿ ಹುದ್ದೆವರೆಗೂ ಬಂದಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡ ಯಡಿಯೂರಪ್ಪ ಅವರು, ಶಿಕಾರಿಪುರದ ಜನರಿಗೆ ನಾನು ಚಿರಋುಣಿ. ಅವರ ಆಶೀರ್ವಾದದಿಂದಲೇ ನನಗೆ ಎಲ್ಲವೂ ಸಿಕ್ಕಿದೆ. ಜನರ ಋುಣ ತೀರಿಸುವ ಕೆಲಸ ಮುಂದುವರೆಸುತ್ತೇನೆ. 

ಸದನದಿಂದ ಬಿಎಸ್‌ವೈಗೆ ಪಕ್ಷಾತೀತ ಭಾವುಕ ವಿದಾಯ: ಗುಡ್‌ಬೈ ಬಿಎಸ್‌ವೈ

ನಾನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಬದುಕಿನ ಕೊನೆಯ ಉಸಿರಿರುವವರೆಗೂ ಬಿಜೆಪಿಗಾಗಿ ದುಡಿಯುತ್ತೇನೆ. ಮುಂದಿನ ಚುನಾವಣೆಯಲ್ಲೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದರು. ರಾಜ್ಯದಲ್ಲಿ ಸರಿಯಾದ ರಸ್ತೆಗಳು ಇಲ್ಲದಿದ್ದ ಕಾಲದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಂತಹ ಹಿರಿಯರ ಜೊತೆ ಸೇರಿ ಪಕ್ಷ ಕಟ್ಟಿದ್ದೇನೆ. ಆಗ ಪಕ್ಷದಲ್ಲಿ ಯಾರೂ ಇರಲಿಲ್ಲ. 

ವಿಧಾನಸಭೆಗೆ ಬಿಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ರೈತರ ಪರವಾಗಿ ಹೋರಾಟ ಮಾಡಿದ ಕ್ಷಣಗಳು, ಬಗರ್‌ ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸಲು ಮಾಡಿದ ಹೋರಾಟ ಹಾಗೂ ಕಷ್ಟದಲ್ಲಿ ಪಕ್ಷ ಕಟ್ಟಿದ್ದನ್ನು ಯಡಿಯೂರಪ್ಪ ನೆನಪಿಸಿಕೊಂಡರು. ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಲವು ಶಾಸಕರ ಜತೆ ಸೇರಿ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌, ಮಹಾತ್ಮಗಾಂಧಿ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಿ, ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದರು.

ಸಿದ್ದರಾಮಯ್ಯ ಸಹಕಾರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ನಮ್ಮ ಸರ್ಕಾರಕ್ಕೆ ಸಾಕಷ್ಟುಸಲಹೆಗಳನ್ನು ನೀಡಿದ್ದಾರೆ. ಕಲಾಪದಲ್ಲಿ ಅವರು ಚರ್ಚಿಸುವ ವೇಳೆ ಸಾಕಷ್ಟುಸಿದ್ಧತೆ ಮಾಡಿಕೊಂಡು, ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದರು. ಅಗತ್ಯ ಬಿದ್ದಾಗ ಸದನಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ಇದರಿಂದ ಸಾಕಷ್ಟುಲಾಭವಾಗಿದೆ ಎಂದು ಯಡಿಯೂರಪ್ಪ ಹೇಳಿದರು. ಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಈಗ ಅಧ್ಯಕ್ಷರಾಗಿ ಉತ್ತಮ ಕಾರ್ಯ ಮಾಡಿದ್ದೀರಿ. ಮುಂದೆ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ನಿಮ್ಮ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆಯಿರಿ ಎಂದು ಆಶಿಸಿದರು.

ಬೊಮ್ಮಾಯಿ ಉತ್ತಮ ಕೆಲಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಸರ್ವೇ ಸಾಮಾನ್ಯ. ಆದರೂ ರಾಜ್ಯವನ್ನು ಅಭಿವೃದ್ಧಿ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಇದೇ ವೇಳೆ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಬೊಮ್ಮಾಯಿ ಅವರಿಗೆ ಸಚಿವರು, ಶಾಸಕರು ಬೆಂಬಲ ಕೊಟ್ಟಿದ್ದಾರೆ. ಅನೇಕ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪರಿಶಿಷ್ಟಜಾತಿ, ಪರಿಶಿಷ್ಟವರ್ಗಕ್ಕೆ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿ ಭಾಷಣವನ್ನು ಮುಕ್ತಾಯಗೊಳಿಸಿದರು.

80ನೇ ಹುಟ್ಟುಹಬ್ಬಕ್ಕೆ ಮೋದಿ ಆಗಮನ ಸಂತಸ: ಇದೇ ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ 80 ವರ್ಷ ತುಂಬುವ ದಿನವೇ ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡುವುದಾಗಿ ಹೇಳಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ, ತೃಪ್ತಿ ತಂದಿದೆ ಎಂದು ಇದೇ ವೇಳೆ ಯಡಿಯೂರಪ್ಪ ಹೇಳಿದರು.

ಕಲಾದಗಿಯಲ್ಲಿಂದು ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ: ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಭಾಗಿ

ದೇವೇಗೌಡರು ಆದರ್ಶ: ನಮಗೆಲ್ಲರಿಗೂ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಆದರ್ಶಪ್ರಾಯರು ಎಂದು ಯಡಿಯೂರಪ್ಪ ಮುಕ್ತಕಂಠದಿಂದ ಪ್ರಶಂಸಿಸಿದರು. ಅವರು ಈ ವಯಸ್ಸಿನಲ್ಲೂ ದೇಶದ ಬಗ್ಗೆ ಚಿಂತನೆ, ಮಾರ್ಗದರ್ಶನ ಮಾಡುತ್ತಿರುವುದು ನಿಜಕ್ಕೂ ದೊಡ್ಡವಿಷಯ. ದೇವೇಗೌಡರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios