ಕಲಾದಗಿಯಲ್ಲಿಂದು ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಭಾಗಿ
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಶನಿವಾರದಂದು ಕಂದಾಯ ಸಚಿವ ಆರ್.ಅಶೋಕ ಅವರು ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ವಾಸ್ತವ್ಯ ಮಾಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು.
ಕಲಾದಗಿ (ಫೆ.25): ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಶನಿವಾರದಂದು ಕಂದಾಯ ಸಚಿವ ಆರ್.ಅಶೋಕ ಅವರು ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ವಾಸ್ತವ್ಯ ಮಾಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗಾಗಿ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಶನಿವಾರ ಬೆಳಗ್ಗೆ 11.30ಕ್ಕೆ ಕಂದಾಯ ಸಚಿವ ಆರ್.ಅಶೋಕ್ ಅವರು ಕಲಾದಗಿಗೆ ಆಗಮಿಸಲಿದ್ದಾರೆ. ಕಂದಾಯ ಸಚಿವರ ಅದ್ದೂರಿ ಸ್ವಾಗತಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಈ ಮಧ್ಯೆ, ಕಲಾದಗಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹನಮಂತ ಆರ್.ನಿರಾಣಿ, ಸಚಿವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸಚಿವರನ್ನು ಸ್ವಾಗತಿಸಲಿದ್ದಾರೆ. ನಂತರ, ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಚಿವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಪೂರ್ಣಕುಂಭ ಹೊತ್ತ 2,000 ಮಹಿಳೆಯರು, 25 ಎತ್ತಿನ ಬಂಡಿಗಳು, ವಿವಿಧ ವಾದ್ಯಮೇಳಗಳು, ವಿವಿಧ ಕಲಾಪ್ರಕಾರದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಸದನದಿಂದ ಬಿಎಸ್‌ವೈಗೆ ಪಕ್ಷಾತೀತ ಭಾವುಕ ವಿದಾಯ: ಗುಡ್‌ಬೈ ಬಿಎಸ್‌ವೈ
ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ಆಗಮಿಸಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಸಚಿವರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದ 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ನಂತರ, ಕಾರ್ಯಕ್ರಮ ಕುರಿತು ಮಾತನಾಡಲಿದ್ದಾರೆ. ಮುಖ್ಯ ವೇದಿಕೆಯಲ್ಲಿ ವಿವಿಧ ಇಲಾಖೆಯವರು ಹಾಕಿದ ಮಳಿಗೆಗಳನ್ನು ಸಚಿವರು ಉದ್ಘಾಟಿಸಲಿದ್ದಾರೆ. ನಂತರ, ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಪರಿಕರ ವಿತರಿಸುವ ಮೂಲಕ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎಂದು ತಿಳಿಸಿದರು.
ಈ ವೇಳೆ, ಸಚಿವರಾದ ಮುರುಗೇಶ್.ಆರ್.ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಸಂಜೆ 4ರಿಂದ 6 ಗಂಟೆಯವರೆಗೆ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಬಳಿಕ, ಗ್ರಾಮಸಭೆ ನಡೆಯಲಿದೆ. ಬಳಿಕ, ವಿವಿಧ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಖಜ್ಜಿಡೋಣಿಯಲ್ಲಿ ಸಚಿವರ ವಾಸ್ತವ್ಯ: ಖಜ್ಜಿಡೋಣಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಸಚಿವರು ವಾಸ್ತವ್ಯ ಮಾಡಲಿದ್ದಾರೆ. ಇವರ ಜೊತೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಟಿ.ಭೂಬಾಲನ್ ಸೇರಿದಂತೆ ಇತರ ಅಧಿಕಾರಿಗಳು ವಾಸ್ತವ್ಯ ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ ಮಕ್ಕಳೊಂದಿಗೆ ಸಚಿವರು ಯೋಗಾಭ್ಯಾಸ ಮಾಡಲಿದ್ದಾರೆ. ನಂತರ, ಬೆಳಗ್ಗೆ 7.30 ರಿಂದ 8 ವರೆಗೆ ಗ್ರಾಮದ ಜಗಲಿ ಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ.
ಎಚ್‌ಡಿಕೆಯದ್ದು ಬ್ರಿಟಿಷರ ರೀತಿ ಒಡೆದಾಳುವ ನೀತಿ: ಸಚಿವ ಅಶೋಕ್
ಈ ಸಂವಾದದಲ್ಲಿ 15,000 ಜನರು ಸೇರುವ ನಿರೀಕ್ಷೆ ಇದೆ. ನಂತರ, 9.30ಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೌತಿ ಖಾತಾ ಆಂದೋಲನ ನಡೆಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು. ಗ್ರಾಮವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಲಾದಗಿ ಗ್ರಾಮ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಡೆ ಬಿಜೆಪಿಯ ಬಾವುಟಗಳು ರಾರಾಜಿಸುತ್ತಿವೆ.