ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಕಸರತ್ತು..!

ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಕಸರತ್ತು ಶುರುವಾಗಿದೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಆ ಸ್ಥಾನಕ್ಕಾಗಿ ಕೆಲವರು ಪೈಪೋಟಿ ನಡೆಸಿದ್ರೆ, ಇನ್ನೂ ಕೆಲವರು ಪರಿಶಿಷ್ಟ ಪಂಗಡಕ್ಕೆ ಮೀಸಲು ಆಗುವ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣು ಹಾಕಿ ಕೈ ಟಿಕೆಟ್ ಪಡೆಯಲು ನಾನಾ ಶತಪ್ರಯತ್ನ ಶುರು ಮಾಡಿದ್ದಾರೆ. 

Huge Competition of Raichur Yadgir Lok Sabha Constituency Congress Ticket  grg

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಡಿ.29):  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ನಾನಾ ಪ್ರಯತ್ನ ಮುಂದುವರೆಸಿದೆ. ಅದರ ಭಾಗವಾಗಿ ಗೆಲುವ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ. ಸೂಕ್ತ ಅಭ್ಯರ್ಥಿಗಳನ್ನ ಗುರುತಿಸಿ ಎಂದು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಚಿವರನ್ನ ಅಥವಾ ಹಿರಿಯ ಮುಖಂಡರನ್ನ ನಿಯೋಜನೆ ಸಹ ಮಾಡಿದೆ. ಹೀಗಾಗಿ ನಿಯೋಜನೆಗೊಂಡ ವೀಕ್ಷಕರು ಈಗಾಗಲೇ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿ ಆಕಾಂಕ್ಷಿಗಳ ಅರ್ಜಿಗಳನ್ನ ಸ್ವೀಕಾರ ಮಾಡಿದ್ದಾರೆ. 

ಅದರಂತೆ ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಕಸರತ್ತು ಶುರುವಾಗಿದೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಆ ಸ್ಥಾನಕ್ಕಾಗಿ ಕೆಲವರು ಪೈಪೋಟಿ ನಡೆಸಿದ್ರೆ, ಇನ್ನೂ ಕೆಲವರು ಪರಿಶಿಷ್ಟ ಪಂಗಡಕ್ಕೆ (ST) ಮೀಸಲು ಆಗುವ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣು ಹಾಕಿ ಕೈ ಟಿಕೆಟ್ ಪಡೆಯಲು ನಾನಾ ಶತಪ್ರಯತ್ನ ಶುರು ಮಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಹೈಕಮಾಂಡ್ ಈಗಿನ ಹಾಲಿ ಶಾಸಕರಿಗೆ ಕಣಕ್ಕೆ ಇಳಿಸಬೇಕು ಎಂಬ ಚಿಂತನೆಯೂ ಮಾಡುತ್ತಿದೆ. ಆದ್ರೆ ಹಾಲಿ ಶಾಸಕರು ಮಾತ್ರ ನಮಗೆ ಲೋಕಸಭಾ ಸಹವಾಸವೇ ಬೇಡ.. ಈಗ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ‌ಇದೆ. ಅಷ್ಟೇ ಸಾಕು ಅಂತ ಇದ್ರೆ ಇದರ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಪತ್ನಿಯ ತಮ್ಮನಾದ ರವಿ ಪಾಟೀಲ್ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನನಗೆ ‌ನೀಡಿ ಅಂತ ಕೇಳಲು ಶುರು ‌ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ರಾಯಚೂರಿಗೆ ಆಗಮಿಸಿದ ವೀಕ್ಷಕರ ತಂಡದೊಂದಿಗೆ ರವಿಪಾಟೀಲ್ ಒಂದು ಸುತ್ತು ಮಾತುಕತೆ ಸಹ ಮಾಡಿದ್ದು, ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ಓಡಾಟ ನಡೆಸಿದ್ದಾರೆ. 

ಯಡಿಯೂರಪ್ಪ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲಿಲ್ಲ: ಯತ್ನಾಳ

ಯಾರು ಈ ರವಿ ಕುಮಾರ್ ಪಾಟೀಲ್?:

ರವಿಕುಮಾರ್ ಪಾಟೀಲ್ ಗಿಂತ ಇಡೀ ಲೋಕಸಭಾ ಕ್ಷೇತ್ರದಲ್ಲಿ ರವಿ ಪಾಟೀಲ್ ಎಂದೇ ಹೆಸರುವಾಸಿ, ಇವರು ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನವರು. ತಂದೆ ಸರ್ಕಾರಿ ನೌಕರರಾಗಿದ್ರು. ಹೀಗಾಗಿ ಮಾನ್ವಿಯಲ್ಲಿಯೇ ಶಿಕ್ಷಣ ಆರಂಭಿಸಿ ಬಿ.ಇ, ಎಂ.ಬಿ.ಎ ಮತ್ತು ಎಲ್. ಎಲ್.ಬಿ. ಪದವಿ ಮುಗಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದಲ್ಲೇ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ಬೆಳೆದವರು. ಮುಂದೇ ರವಿಕುಮಾರ್ ಪಾಟೀಲ್ ಅವರ ಹಿರಿಯ ಅಕ್ಕನವರಿಗೆ ಈಗಿನ ಹಾಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಕೊಟ್ಟು ವಿವಾಹ ಮಾಡಿದ್ರು. 

ಹೀಗಾಗಿ ರಾಯಚೂರು ಮತ್ತು ಬೆಳಗಾವಿ ಸಂಬಂಧ ಶುರುವಾಯ್ತು. ರವಿಕುಮಾರ್ ಪಾಟೀಲ್ 2005 ರಿಂದ 2012ರವರೆಗೆ ಖಾಸಗಿ ಚಾನೆಲ್ ವೊಂದರ ಉಪಾಧ್ಯಕ್ಷರಾಗಿದ್ರು.  2016ರಲ್ಲಿ ರವಿಪಾಟೀಲ್ ಪೌಂಢೇಷನ್ ಆರಂಭಿಸಿದ್ರು. ಪೌಂಢೇಷನ್ ಅಡಿಯಲ್ಲಿ ಹತ್ತಾರು ಸಮಾಜಮುಖಿ ಕೆಲಸ ಮಾಡುತ್ತಾ ಜನರ ಒಡನಾಟದಲ್ಲಿ ಇದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಬೆಳೆದ ರವಿ ಪಾಟೀಲ್. 2016-17ರಲ್ಲಿ  ಜಿ.ಪಂ. ಚುನಾವಣೆ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಆ ಬಳಿಕ  2018ರಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು 34,250 ಮತಗಳು ಪಡೆದು ಸೋಲು ಆಗಿತ್ತು. ಆ ಬಳಿಕ ಕೆಲ ದಿನಗಳ ಕಾಲ ರಾಜಕೀಯದಿಂದ ಅಂತರ ಕಾಪಾಡಿಕೊಂಡು ತಾವು ಆಯ್ತು, ತಮ್ಮ ವ್ಯವಹಾರ ಆಯ್ತು ಅಂತ ಇದ್ರು. ಆದ್ರೆ ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆ ನೋಡಿಕೊಂಡು 2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡ ದೇವದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೇಳಿದ್ರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಬೇರೆಯವರಿಗೆ ನೀಡಿತ್ತು. ಆದ್ರೂ ರವಿಕುಮಾರ್ ಪಾಟೀಲ್ ಕಾಂಗ್ರೆಸ್ ಸಂಘಟನೆ ಮಾಡುತ್ತಾ ಜನರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. 

8 ವಿಧಾನಸಭಾ ಕ್ಷೇತ್ರದಲ್ಲಿ ಒಡನಾಟ ಇಟ್ಟುಕೊಂಡ ರವಿ ಪಾಟೀಲ್:

ರಾಯಚೂರು- ಯಾದಗಿರಿ ಜಿಲ್ಲೆಯೂ ಸೇರಿ ರಾಯಚೂರು ಲೋಕಸಭಾ ಕ್ಷೇತ್ರ ಆಗುತ್ತೆ. ರಾಯಚೂರು ಜಿಲ್ಲೆಯ ಐದು ವಿಧಾನಸಭಾ ‌ಕ್ಷೇತ್ರಗಳಾದ ರಾಯಚೂರು ‌ನಗರ, ರಾಯಚೂರು ಗ್ರಾಮೀಣ, ದೇವದುರ್ಗ, ಲಿಂಗಸೂಗೂರು ಹಾಗೂ ಮಾನ್ವಿ ತಾಲೂಕು ರಾಯಚೂರು ಜಿಲ್ಲೆಯಲ್ಲಿ ಬರುತ್ತವೆ. ಇನ್ನುಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ ಯಾದಗಿರಿ, ಶಹಾಪುರ ಮತ್ತು ಸುರಪುರ ಯಾದಗಿರಿ ಜಿಲ್ಲೆಯಲ್ಲಿ ‌ಬರುತ್ತವೆ. ರವಿಕುಮಾರ್ ಪಾಟೀಲ್ ಅವರಿಗೆ 8 ವಿಧಾನಸಭಾ ಕ್ಷೇತ್ರದಲ್ಲಿ ಒಡನಾಟವಿದೆ. ರವಿಕುಮಾರ್ ಪಾಟೀಲ್ ಹುಟ್ಟಿ ಬೆಳೆದಿದ್ದು ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ. ತಮ್ಮ ರಾಜಕೀಯ ಜೀವನ ಆರಂಭಿಸಿದ್ದು, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ, ತಮ್ಮ ಪೌಂಢೇಷನ್  ಚಟುವಟಿಕೆ ಮಾಡಿದ್ದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ, ಸುರಪುರ ವಿಧಾನಸಭಾ ಕ್ಷೇತ್ರವೂ ರವಿಕುಮಾರ್ ಪಾಟೀಲ್ ಅವರ ತಾಯಿ ತವರು ಮನೆ. ಇನ್ನೂ ಶಹಾಪೂರ ವಿಧಾನಸಭಾ ಕ್ಷೇತ್ರವೂ ರವಿಕುಮಾರ್ ಪಾಟೀಲ್ ಅವರ ಪತ್ನಿ ತವರು ಕ್ಷೇತ್ರ. ಇನ್ನೂ ಯಾದಗಿರಿ ಮತ್ತು ಲಿಂಗಸೂಗೂರು ಕ್ಷೇತ್ರವೂ ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳ ಪಡೆ ಇರುವ ಕ್ಷೇತ್ರ. ದೇವದುರ್ಗ ವಿಧಾನಸಭಾ ಕ್ಷೇತ್ರವೂ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ವೇಳೆ ಓಡಾಟ ಮಾಡಿದ ಕ್ಷೇತ್ರವಾಗಿದೆ. ಹೀಗಾಗಿ ಇಡೀ ರಾಯಚೂರು ಲೋಕಸಭಾ ಕ್ಷೇತ್ರದ ತುಂಬಾ ರವಿಕುಮಾರ್ ಪಾಟೀಲ್ ಚಿರಪರಿಚಿತರು. 

ಕರ್ನಾಟಕದಲ್ಲಿ ಆರ್ಥಿಕ ಬಿಕ್ಕಟ್ಟು: ಸರ್ಕಾರ ಶ್ವೇತಪತ್ರ ಹೊರಡಿಸಲಿ, ಈಶ್ವರಪ್ಪ

ಟಿಕೆಟ್ ಸಿಗುವ ಭರವಸೆಯಲ್ಲಿ ಕ್ಷೇತ್ರದಲ್ಲಿ ರವಿ ಪಾಟೀಲ್ ಓಡಾಟ:

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ರವಿ ಪಾಟೀಲ್. ಜಿ.ಪಂ. ಮತ್ತು ವಿಧಾನಸಭಾ ಚುನಾವಣೆ ಸೋತರು ಸಹ, ಈ ಬಾರಿ ಕಾಂಗ್ರೆಸ್ ‌ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದು ಗೆಲುವು ಸಾಧಿಸಬೇಕೆಂದು ಟಿಕೆಟ್ ಗಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತಾ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಕೊಡಿ ಎಂದು ಮನವಿ ಮಾಡುತ್ತಾ ಓಟ ಶುರು ಮಾಡಿದ್ದಾರೆ.

ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನನಗೆ ‌ನೀಡುತ್ತೆ ಎಂಬ ಭರವಸೆ ಇಟ್ಟುಕೊಂಡು 8 ವಿಧಾನಸಭಾ ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ. ಅಲ್ಲದೇ ತಮ್ಮ ರವಿ ಪಾಟೀಲ್ ಪೌಂಢೇಷನ್ ನಿಂದ ಹತ್ತಾರು ಸಮಾಜ ಮುಖಿ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುತ್ತಾ ಪ್ರಚಾರ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಕಾಂಗ್ರೆಸ್ ನ ಹಿರಿಯ ಮತ್ತು ಕಿರಿಯ ‌ಕಾರ್ಯಕರ್ತರನ್ನ ಭೇಟಿ ಮಾಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕೆಲ ಕಾಂಗ್ರೆಸ್ ‌ಹೈಕಮಾಂಡ್ ನಾಯಕರನ್ನು ಸಹ ಭೇಟಿ ‌ಮಾಡಿ ಟಿಕೆಟ್ ‌ನೀಡುವಂತೆ ಮನವಿ ಸಹ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios