Asianet Suvarna News Asianet Suvarna News

ಯಡಿಯೂರಪ್ಪ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲಿಲ್ಲ: ಯತ್ನಾಳ

ಬೊಮ್ಮಾಯಿಯವರಿಗೆ ತಲೆ ತುಂಬಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬಾರದು ಹಾಗೂ ಬಸನಗೌಡ ಯತ್ನಾಳರಿಗೆ ಮಂತ್ರಿ ಮಾಡಬಾರದು ಎಂದು ಹೇಳಿದ್ದೇ ಯಡಿಯೂರಪ್ಪನವರು: ಶಾಸಕ ಬಸನಗೌಡ ಪಾಟೀಲ ಯತ್ನಾಳ 

BS Yediyurappa did not give 2A Reservation to Panchamasali Says Basanagouda Patil Yatnal grg
Author
First Published Dec 26, 2023, 12:27 PM IST

ಲಿಂಗಸುಗೂರು(ಡಿ.26):  ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬಹುದಿತ್ತು. ಆದರೆ, ಆ ಕೆಲಸ ಅವರು ಮಾಡಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಾಲೂಕಿನ ಯರಡೋಣ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಸಮಾವೇಶವ ಉದ್ದೇಶಿಸಿ ಮಾತನಾಡಿದ ಅವರು, ಬೊಮ್ಮಾಯಿಯವರಿಗೆ ತಲೆ ತುಂಬಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬಾರದು ಹಾಗೂ ಬಸನಗೌಡ ಯತ್ನಾಳರಿಗೆ ಮಂತ್ರಿ ಮಾಡಬಾರದು ಎಂದು ಹೇಳಿದ್ದೇ ಯಡಿಯೂರಪ್ಪನವರು ಎಂದು ಆರೋಪಿಸಿದರು.

ನಮ್ಮ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫೆಬ್ರವರಿ ತಿಂಗಳಲ್ಲಿ ಬೃಹತ್ ಸಮಾವೇಶ ಮಾಡಿ 10 ಲಕ್ಷ ಜನ ಸೇರಿಸಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸಲಾಗುವುದು ಎಂದರು.

ರಾಯಚೂರು: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ್ ಕಿಡಿ

ಮುಖ್ಯಮಂತ್ರಿಗಳು ಕಳೆದ ಬೆಳಗಾವಿ ಅಧಿವೇಶನ ಮುಗಿದ ನಂತರ ವಾರದೊಳಗೆ ತಜ್ಞರ ಸಲಹೆ ಪಡೆದು ಮೀಸಲಾತಿ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಜನವರಿ 20ರವರೆಗೆ ಗಡುವು ನೀಡಿದ್ದು, ಅಷ್ಟರೊಳಗೆ ಸರ್ಕಾರ ಸ್ಪಷ್ಟವಾದ ನಿರ್ಧಾರ ಪ್ರಕಟಿಸಬೇಕು ಎಂದರು.

ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಲೋಕಸಭೆ ಚುನಾವಣೆ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಕು. ಬಸನಗೌಡ ಯತ್ನಾಳರ ಮಾತಿಗೆ ಬೆಲೆಕೊಟ್ಟು ಹೋರಾಟ ಮಾಡಲು ನಾನು ಬೆಳಗಾವಿ, ಬೆಂಗಳೂರು, ಕೂಡಲ ಸಂಗಮ, ಇಂದು ಯರಡೋಣಿಗೂ ಬಂದಿದ್ದೇನೆ. ಆದ್ದರಿಂದ ರಾಯಚೂರು ಜಿಲ್ಲೆಯ ಸಮಾಜದವರು ನಿರಂತರವಾಗಿ ಹೋರಾಟಕ್ಕೆ ಬೆಂಬಲ ಕೊಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. 2ಎ ಮೀಸಲಾತಿ ಸರ್ಕಾರ ನೀಡಿದರೆ ಬಡಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರಕಿಸಿಕೊಟ್ಟಂತಾಗುತ್ತದೆ ಎಂದರು.

ಚಂದ್ರಮೌನೇಶ ತಾತ, ಅಮರೇಶ ತಾವರಗೇರಾ, ಶಂಕರಗೌಡ ಅಮರಾವತಿ, ಅಮರೇಶ ಹಿರೇ ಹೆಸರೂರು, ವಿಜಯಕುಮಾರ ಹೊಸಗೌಡರು, ಮಹಾಂತೇಶ ಪಾಟೀಲ ಮುದಗಲ್, ವಿಜಯಲಕ್ಷ್ಮೀ ಗುಂಡಸಾಗರ, ಗೌರಮ್ಮ ಮಟ್ಟಿ, ರುದ್ರಗೌಡ, ಅಯ್ಯಪ್ಪ ವಕೀಲ, ಬಾಬುರಾವ ಸೇಗುಣಸಿ, ಸಂಗಮೇಶ ಉಪಸ್ಥಿತರಿದ್ದರು.

Follow Us:
Download App:
  • android
  • ios