Hubli Riots: ಬಿಜೆಪಿಯೇ ಇಂಥಹ ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ: ಈಶ್ವರ್ ಖಂಡ್ರೆ

*ಗಲಭೆಯಲ್ಲಿ ಯಾರದ್ದೇ ಕೈವಾಡವಿದ್ದರೂ ಸೂಕ್ತ ಕ್ರಮ ಕೈಗೊಳ್ಳಿ
*ಹುಬ್ಬಳ್ಳಿ ಗಲಭೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ
*ಇದರ ಬಗ್ಗೆ ಸರ್ಕಾರವೇ ಆತ್ಮಾವಲೋಕನ ಮಾಡಿಕೊಳ್ಳಬೇಕು
*ಕಲಬುರಗಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ
 

Hubli Riots BJP government itself  promoting such incidents says Eshwara Khandre in Kalaburagi mnj

ಕಲಬುರಗಿ (ಏ. 17): "ಬಿಜೆಪಿ ಸರ್ಕಾರವೇ ಇಂಥಹ ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ, ಭಾವನಾತ್ಮಕ ವಿಚಾರ ಕೇಳಿಸುತ್ತಿದೆ. ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತಿ ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಜಗಳ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ" ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಹುಬ್ಬಳ್ಳಿ ಗಲಭೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು ಗಲಭೆಯಲ್ಲಿ ಯಾರದ್ದೇ ಕೈವಾಡ ಇರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ಯಾರೇ ಕಾನೂನು ಕೈಗೆತ್ತಿಕೊಂಡಿದ್ದರೂ, ಯಾರೇ ದಾಳಿ ಮಾಡಿದ್ದರೂ ಅದು ತಪ್ಪೇ ಆಗಿದೆ ಎಂದ ಖಂಡ್ರೆ, ಎಲ್ಲಾ ಜಾತಿ- ಜನಾಂಗದ ಜನರು ಪ್ರಚೋದನೆಗೆ ಒಳಗಾಗದೇ ಶಾಂತಿ- ಸಾಮರಸ್ಯ ಕಾಪಾಡಬೇಕು ಎಂದು ಆಗ್ರಹಿಸಿದರು. "ಯಾರೇ ತಪ್ಪು ಮಾಡಿರಲಿ ಅಂಥವರ ವಿರುದ್ಧ ಶಿಕ್ಷೆ ಆಗಬೇಕು, ಸರ್ಕಾರವೇ ಇಂಥದ್ದಕ್ಕೆ ಕುಮ್ಮಕ್ಕು ಕೊಡುತ್ತಿದೆ. ಹುಬ್ಬಳ್ಳಿ ಗಲಭೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಇದರ ಬಗ್ಗೆ ಸರ್ಕಾರವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನ ಯಾರೂ ಉದ್ರಿಕ್ತಗೊಳ್ಳಬಾರದು.  ಏನೇ ವಿಷಯಗಳಿದ್ದರೂ ಶಾಂತಿಯುತವಾಗಿ ಹೋರಾಟ ಮಾಡಬೇಕು" ಎಂದು ಈಶ್ವರ ಖಂಡ್ರೆ ಹೇಳಿದರು. 

ಘಟನೆ ಏನು?:  ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ನಡೆದಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು, ದ್ವೇಷಮಯ ವಾತಾವರಣ ಉಂಟಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟರ್‌ ಕೈವಾಡ: ಪ್ರಮೋದ್ ಮುತಾಲಿಕ್ ಆರೋಪ

ಕಠೀಣ ಕ್ರಮ: ಇನ್ನು  ಹುಬ್ಬಳ್ಳಿಯಲ್ಲಿ ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆಗುಕೊಳ್ಳಲಾಗುವುದು ಎಂದು  ಮಿಷನರ್‌ ಲಾಬೂರಾಮ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ 10 ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. ನಿನ್ನೆ ನಡೆದ ಹಿಂಸಾತ್ಮಕ ಘಟನೆಯಲ್ಲಿ ಪೊಲೀಸರು, ಸ್ಥಳೀಯರು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಏಳು ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಹೀಗಾಗಿ ಹೊರ ಜಿಲ್ಲೆಗಳಿಂದ ಪೊಲೀಸ್‌ ಪಡೆಗಳು ಆಗಮಿಸಿವೆ. ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಪೂರ್ವನಿಯೋಜಿತ ಕೃತ್ಯ?: ಇನ್ನು ಕಲ್ಲು ತೂರಾಟದಲ್ಲಿ ಭಾಗವಹಿಸಿದ್ದ ಯುವಕರೆಲ್ಲರೂ ಸುಮಾರು 20 ವಯಸ್ಸಿನವರಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಯಾರೂ ಕೂಡ 40-50  ವಯಸ್ಸಿನವರು ಇರಲಿಲ್ಲ, ಎಲ್ಲರೂ ಮುಖಕ್ಕೆ ಕಪ್ಪು ಬಟ್ಟೆಯನ್ನ ಕಟ್ಟಿಕೊಂಡಿದ್ದರು ಎಂದು ತಿಳಿದು ಬಂದಿದೆ. ತಮ್ಮ ಗುರುತು ಸಿಗದಿರಲು ಹೀಗೆ ಮಾಡಿದ್ದಾರೆ. ಹೀಗಾಗಿ ಇದೊಂದು ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

Latest Videos
Follow Us:
Download App:
  • android
  • ios