ಟಿಕೆಟ್ ಕೊಟ್ರೆ ಬಿಜೆಪಿಯಿಂದ, ಇಲ್ದಿದ್ರೆ ಪಕ್ಷೇತರನಾಗಿ ಸ್ಪರ್ಧೆ: ಗೂಳಿಹಟ್ಟಿ ಶೇಖರ್ ಖಡಕ್ ನುಡಿ
ವಿಧಾನಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಉಳಿದಿರುವಂತೆಯೇ ಬದಲಾದ ಸನ್ನಿವೇಶಗಳು ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದೆ.
ಹೊಸದುರ್ಗ(ಡಿ.13): ಟಿಕೆಟ್ ಕೊಟ್ರೆ ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ, ಇಲ್ಲದಿದ್ರೆ ಇಂಡಿಪೆಂಡೆಂಟ್ ಆಗಿ ನಿಲ್ಲೊದು ಗ್ಯಾರಂಟಿ. ಮುಂದೆ ಬರುವ ಲೋಕಸಭೆ ಚುನಾವಣೆಗೂ ನಿಂತುಕೊಳ್ತೇನೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಖಡಕ್ ಆಗಿ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಕಾರ್ಯಕರ್ತರಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದ್ದು, ಅವರೆಲ್ಲ ಮುಖಂಡರ ನಡುವೆ ಹಂಚಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ವಿಶ್ವಾಸ ಹೊಂದಿದ್ದು, ಟಿಕೆಟ್ ಕೊಟ್ರೆ ಬಿಜೆಪಿ ಇಲ್ಲದಿದ್ದರೆ ನನ್ನ ಹಾದಿ ನನಗೆ ಎಂಬ ಸಂದೇಶ ರವಾನಿಸಿದ್ದಾರೆ.
ಹೊಸದುರ್ಗ ವಿಧಾನಸಭೆ ಕ್ಷೇತ್ರ ಸಾಮಾನ್ಯವಾಗಿದ್ದರೂ ಪರಿಶಿಷ್ಟ ಜಾತಿಗೆ ಸೇರಿರುವ ಗೂಳಿಹಟ್ಟಿ ಶೇಖರ್ ಎರಡು ಬಾರಿ ಗೆದ್ದಿದ್ದಾರೆ. 2018ರಲ್ಲಿ ಗೆಲುವು ಸಾಧಿಸಿದ್ದ ಗೂಳಿಹಟ್ಟಿ ಶೇಖರ್ ಸಹಜವಾಗಿ ಬಿಜೆಪಿಯಿಂದ ಮರು ಸ್ಪರ್ಧೆ ಬಯಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕು ಬಿಜೆಪಿಯಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿವೆ. ಇತ್ತೀಚೆಗೆ ಪಕ್ಷದೊಳಗಿನ ಮುಸುಕಿನ ಗುದ್ದಾಟ ಆಕಾಂಕ್ಷಿಗಳ ಹೆಚ್ಚಳಕ್ಕೆ ಕಾರಣವಾಗಿತ್ತು.
CHITRADURGA: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಜೆಪಿ ಮುಖಂಡರ ಭಿನ್ನಮತ ಸ್ಪೋಟ
ವಿಧಾಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಉಳಿದಿರುವಂತೆಯೇ ಬದಲಾದ ಸನ್ನಿವೇಶಗಳು ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದೆ. ಸುದ್ದಿಗೋಷ್ಠಿ ನಡೆಸಿದ ಪ್ರಮುಖ ಮೂರು ಮಂದಿ ಧುರೀಣರು ವಿಭಿನ್ನ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ತಾಲೂಕು ರಾಜಕಾರಣದಲ್ಲಿ ಈ ಹೇಳಿಕೆಗಳು ಮಹತ್ವ ಪಡೆದಿವೆ.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಗೆಲುವು ಪಡೆದವನು. ಈಗ ಬಿಜೆಪಿ ಪಕ್ಷದಲ್ಲಿದ್ದೇನೆ. ಪಕ್ಷ ಗುರುತಿಸಿ ಮತ್ತೊಮ್ಮೆ ಟಿಕೆಟ್ ನೀಡಿದರೆ ಬಿಜೆಪಿಯಿಂದ ಕಣಕ್ಕಿಳಿಯುತ್ತೇನೆ. ನಿರಾಕರಿಸಿದರೆ ನನ್ನದೇ ಆದ ಸಂಘಟನೆ ಮಾಡಿಕೊಂಡು ಪಕ್ಷೇತರನಾಗಿ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ. ಮುಂದೆ ಬರುವ ಲೋಕಸಭಾ ಚುನಾವಣೆಗೂ ಸ್ಪರ್ಧಿಸುತ್ತೇನೆ. ಅಲ್ಲಿಯವರೆಗೂ ಪಕ್ಷದಲ್ಲಿ ಯಾವುದೇ ಗೊಂದಲಮಾಡುವುದು ಬೇಡ. ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಮುಂದಿನ ಮೂರು ತಿಂಗಳು ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಆಗಬಾರದೆಂದು ಮುಖಂಡರೆಲ್ಲ ತೀರ್ಮಾನಕ್ಕೆ ಬಂದಿದ್ದೇವೆ ಅಂತ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದ್ದಾರೆ.
Chitradurga News: ಹೊಸದುರ್ಗದಲ್ಲಿ ಪೊಲೀಸ್ ಠಾಣೆಗೆ ವೀರಶೈವರ ಮುತ್ತಿಗೆ
ಹೊಸದುರ್ಗ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಚುನಾವಣೆ ಸನಿಹವಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹಲವರು ಪಕ್ಷದ ಟಿಕೆಟ್ ಬಯಸಿದ್ದಾರೆ. ಪಕ್ಷ ಸೂಚನೆ ನೀಡಿದ್ದಲ್ಲಿ ರಾಜ್ಯದ ಯಾವ ಕ್ಷೇತದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧ ಅಂತ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದ್ದಾರೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಆತನನ್ನು ಗೆಲ್ಲಿಸಿಕೊಂಡು ಬರುತ್ತೇವೆ. 2018 ರಲ್ಲಿ ಪಕ್ಷದ ಟಿಕೆಟ್ ತ್ಯಾಗ ಮಾಡಿರುವೆ. ಟಿಕೆಟ್ ವಿಚಾರವಾಗಿ ಶಾಸಕರು ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಪಕ್ಷಕ್ಕೆ ಜಾತಿಗಿಂತ ನೀತಿ ಮುಖ್ಯ. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಚುನಾವಣೆ ಬಂದಾಗ ರಾಜಕಾರಣ ಮಾಡುತ್ತೇವೆ. ಈಗ ಪಕ್ಷ ಸಂಘಟನೆಯತ್ತ ಗಮನ ಹರಿಸುತ್ತೇವೆ ಅಂತ ರಾಜ್ಯ ಖನಿಜ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ತಿಳಿಸಿದ್ದಾರೆ.