Chitradurga: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಜೆಪಿ ಮುಖಂಡರ ಭಿನ್ನಮತ ಸ್ಪೋಟ
* ಶಾಸಕ ಗೂಳಿಹಟ್ಟಿ ಶೇಖರ್, ಬಿಜೆಪಿ ಮುಖಂಡ ಲಿಂಗಮೂರ್ತಿ ನಡುವೆ ಟಾಕ್ ವಾರ್.
* ಕಳಪೆ ರಸ್ತೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿರುವ ಆರೋಪ
* ಗುಂಪು ಕಟ್ಟಿಕೊಂಡು ಹೊಡದಾಡಿದ ಬೆಂಬಲಿಗರು
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.11) : ರಸ್ತೆ ಕಾಮಗಾರಿಯೊಂದು ಬಿಜೆಪಿ ನಾಯಕರ ವಾಕ್ಸಮರ ಹಾಗೂ ಫೈಟ್ ಗೆ ಕಾರಣವಾಗಿದೆ. ರಸ್ತೆ ಕಾಮಗಾರಿ ಕಳಪೆ ಎಂದು ಪ್ರಶ್ನಿಸಿದ್ದಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಸಮರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಮೂಲಕ ಹಾಲಿ ಶಾಸಕ ಹಾಗೂ ಮಾಜಿ ಖನಿಜ ನಿಗಮ ಅಧ್ಯಕ್ಷರ ನಡುವೆ ವಾಕ್ಸಮರಕ್ಕೂ ವೇದಿಕೆಯಾಗಿದೆ.
ರಸ್ತೆ ನಿರ್ಮಾಣ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಆರೋಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಸದ್ಗುರು ರಸ್ತೆಯಲ್ಲಿ ನಿನ್ನೆ ನಡೆದಿತ್ತು. ಪರಸ್ಪರ ಗಲಾಟೆ ಮಾಡಿಕೊಂಡ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗುಂಪು ಕಟ್ಟಿಕೊಂಡು ಬಂದು ಗೋಪಾಲ್ ಎಂಬುವವರ ಮೇಲೆ ಕ್ರಿಕೆಟ್ ಬ್ಯಾಟ್, ವಿಕೆಟ್ ನಿಂದ ಹಲ್ಲೆ ನಡೆಸಿದ ಆರೋಪ ಕಾಶೀನಾಥ್ ಎಂಬುವರಿಂದ ಹೊಸದುರ್ಗ ಠಾಣೆಗೆ ದೂರು ದಾಖಲಾಗಿತ್ತು. ದೂರು ನೀಡಿದ್ದ ಕಾಶೀನಾಥ್ ತಮ್ಮ ಹಾಗೂ ಮತ್ತಿತರರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಿದ್ದರು. ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ನಡೆದು, ಹೊಸದುರ್ಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಸಹ ನಡೆಸಲಾಗಿತ್ತು. ಹೊಸದುರ್ಗದಲ್ಲಿ ಕಳಪೆ ರಸ್ತೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಕೇಸ್ ಪ್ರಕರಣ ಬಿಜೆಪಿ ಮುಖಂಡರ ಮದ್ಯೆ ಭಿನ್ನಮತ ಸ್ಪೋಟಕ್ಕೆ ಕಾರಣವಾಗಿತ್ತು.
Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ
ಗೂಳಿಹಟ್ಟಿ ಶೇಖರ್ ವಿರುದ್ಧ ಆರೋಪ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಆಕ್ರೋಶ ಹೊರಹಾಕಿದ್ದ ಖನಿಜ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಕಿಡಿಕಾರಿದ್ದರು. ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆದಿದೆ. ರಂಗೇಶ, ವೃಷಬೇಂದ್ರ, ಕಾಶೀನಾಥ್ ಮತ್ತಿತರರ ಮೇಲೆ ಹಲ್ಲೆ ನಡೆಸಿದ ಗೂಂಡಾವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣಕ್ಕೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೊಣೆ ಎಂದು ಆರೋಪಿಸಿದ್ದರು. ಹೊಸದುರ್ಗದ ಇತಿಹಾಸದಲ್ಲೇ ಗೂಳಿಹಟ್ಟಿ ಶೇಖರ್ ಕಡು ಭ್ರಷ್ಟ ಶಾಸಕ. ಹಣ, ಊಟ ಕೊಟ್ಟು ಗೂಳಿಹಟ್ಟಿ ಶೇಖರ್ ಗೆ ಜನ ಮತ ಹಾಕಿದ್ದರು. ಶಾಸಕ ಗೂಳಿಹಟ್ಟಿ ಶೇಖರ್ ರಿಂದ ಜನರ ಮೇಲೆ ದೌರ್ಜನ್ಯ ನಡೆದಿದೆ. ಜನರ ಮೇಲೆ ಕೇಸ್ ಹಾಕಿಸಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದು, ಅವರಿಂದ ಒಂದು ರೀತಿ ಭಯೋತ್ಪಾದನೆ ಹೊಸದುರ್ಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದಿದ್ದರು.
ಗೂಳಿಹಟ್ಟಿ ಶೇಖರ್ ಅವರಿಂದ ಪ್ರತಿ ವಾಗ್ದಾಳಿ: ಪಕ್ಷದಲ್ಲಿ ಭಿನ್ನಮತ ಸ್ಪೋಟಕ್ಕೆ ಕಾರಣವಾದ ಈ ಗಲಾಟೆ ಕೇಸ್ ಆರೋಪದ ಕುರಿತು ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ ವಿರುದ್ಧ ಗುಡುಗಿದ್ದಾರೆ. ಕಡು ಭ್ರಷ್ಟ ಶಾಸಕ ಗೂಳಿಹಟ್ಟಿ ಶೇಖರ್ ಎಂದಿದ್ದ ಲಿಂಗಮೂರ್ತಿ ವಿರುದ್ಧ ಕಿಡಿಕಾರಿರುವ ಅವರು, ರಸ್ತೆ ಕಾಮಗಾರಿ ಮಾಡುತ್ತಿದ್ದ ಅಮಾಯಕ ಕಾರ್ಮಿಕರ ಮೇಲೆ ದೌರ್ಜನ್ಯ ಮೊದಲು ನಡೆದಿದೆ. ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಮೊದಲ ತಪ್ಪು ನಮ್ಮ ಬಿಜೆಪಿ ನಾಯಕರದ್ದು. ಮಹಾನ್ ನಾಯಕ ಎಸ್.ಲಿಂಗಮೂರ್ತಿ ನನ್ನ ಬಗ್ಗೆ ಮಾತಾಡಿ ಆರೋಪಿಸಿದ್ದಾರೆ. ಆದರೆ ಅವರೇ ಅಮಾಯಕರು ಬದುಕದಂತೆ ದೌರ್ಜನ್ಯ ಮಾಡುತ್ತಿರುವ ಮಹಾಭ್ರಷ್ಟ ಎಂಬುದು ರಾಜ್ಯಕ್ಕೆ ಗೊತ್ತಿದೆ ಎಂದು ಆರೋಪಿಸಿದರು.
ಜ.8ಕ್ಕೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ದಲಿತ ರ್‍ಯಾಲಿ
ರಾಜ್ಯದಲ್ಲಿ ನನ್ನ ಏಳಿಗೆ ಸಹಿಸದೆ ದುರುದ್ದೇಶದಿಂದ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ರಸ್ತೆ ಕಾಮಗಾರಿ ಗುತ್ತಿಗೆದಾರರು ಲಿಂಗಾಯತ ಸಮಾಜದವರು. ಗುತ್ತಿಗೆದಾರರ ಮೇಲಿನ ದ್ವೇಷಕ್ಕೆ ಕೂಲಿಕಾರರ ಮೇಲೆ ದೌರ್ಜನ್ಯ ನಡೆದಿದ್ದು, ಲಿಂಗಮೂರ್ತಿ ಅವರ ಇಸ್ಪೀಟ್ ಕ್ಲಬ್ ಬಂದ್ ಮಾಡಿದ್ದಕ್ಕೆ ಈ ಆಪಾದನೆ ಮಾಡಿರುವುದು ಸರಿಯಲ್ಲ. ನಮ್ಮವರು ಯಾರು ಜನರ ಮೇಲೆ ದೌರ್ಜನ್ಯ ಮಾಡುತ್ತಿಲ್ಲ. ಎಸ್ ಲಿಂಗಮೂರ್ತಿ ಅವರ ಗುಂಪಿನಿಂದಲೇ ಜನರ ಮೇಲೆ ದೌರ್ಜನ್ಯ ಎಂದು ಗೂಳಿಹಟ್ಟಿ ಶೇಖರ್ ತಮ್ಮ ಮೇಲಿನ ಆರೋಪಕ್ಕೆ ಕಿಡಿಕಾರಿದ್ದಾರೆ.
ಶೀತಲ ಸಮರ ಬಹಿರಂಗ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ನಾಯಕ ಎಸ್ ಲಿಂಗಮೂರ್ತಿ ಇಬ್ಬರು ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷೆಗಳು. ಇಬ್ಬರಿಗೂ ಈ ಮೊದಲಿನಿಂದ ಶೀತಲ ಸಮರ ನಡೆದೇ ಇತ್ತು. ಇದೀಗ ಈ ಪ್ರಕರಣದ ಮೂಲಕ ಅದು ಮತ್ತೊಮ್ಮೆ ಜಾಹೀರಾಗಿದೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿರುವುದರಿಂದ ಮುಂಬರುವ ಚುನಾವಣೆಯ ಮೇಲೂ ಈ ಘಟನೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಮಾತುಗಳು ಹೊಸದುರ್ಗ ಕ್ಷೇತ್ರದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ.