ಬೆಂಗಳೂರು/ಚಿತ್ರದುರ್ಗ, [ಡಿ.23]: 2008ರಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ ಆಗಿದ್ದೆನು. ಪಕ್ಷೇತರ‌‌‌ ಶಾಸಕನಾಗಿದ್ದ ನಾನೇ ಮೊದಲ ವಿಕೆಟ್ ಆಗಿದ್ದೆನು. ಮೊದಲ‌ ಕುರಿಯಾಗಿ ಹಳ್ಳಕ್ಕೆ ಬಿದ್ದಿದ್ದು ನಾನು ಎಂದಿದ್ದ ಬಿಜೆಪಿ ಶಾಸಕ ಇದೀಗ ಒಂದು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಸಚಿವ ಸ್ಥಾನ ಸಿಗದಿರುವುದು ಖಾತ್ರಿಯಾಗಿರುವುದರಿಂದ  ಸ್ವಪಕ್ಷದ ವಿರುದ್ಧವೇ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಂಡಾಯದ ಬಾವುಟ ಹಾರಿಸಿದ್ದಾರೆ.

ಮೊದಲ‌ ಕುರಿಯಾಗಿ ಹಳ್ಳಕ್ಕೆ ಬಿದ್ದಿದ್ದು ನಾನೇ: ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ

2008ರಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರಲು ಮೊಟ್ಟ ಮೊದಲು ಬಿಜೆಪಿಗೆ ಬೆಂಬಲಿಸಿದ್ದ ಅಂದಿನ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್, ಬಳಿಕ ಬಿಜೆಪಿ ಸೇರಿದ್ದರು. ಅಲ್ಲದೇ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಆದ್ರೆ, ಇದೀಗ ಸಚಿವ ಸ್ಥಾನ ನೀಡದೇ ವಂಚಿಸಲಾಗ್ತಿದೆ ಎಂದು ಗೂಳಿಹಟ್ಟಿ ಶೇಖರ್ ಬಿಜೆಪಿ ವಿರುದ್ಧ ಸೆಡಿದೆದ್ದಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಹೊಸದುರ್ಗದ ಬನಶಂಕರಿ ಭವನದಲ್ಲಿ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಬಳಗದಿಂದ ಪ್ರತ್ಯೇಕ ಸಭೆ ನಡೆದಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು. 

ಗೂಳಿಹಟ್ಟಿ ಶೇಖರ್ ಆಡಿಯೋ ಸ್ಫೋಟ; ಸಿಎಂ ಪುತ್ರನ ವಿರುದ್ಧ ಗಂಭೀರ ಆರೋಪ!

ನಾನೊಬ್ಬ ಶಾಸಕನಾದರೂ ಬಿಜೆಪಿ ನನ್ನನ್ನು ಕಡೆಗಣಿಸುತ್ತಿದೆ ಎಂದು ಬೆಂಬಲಿಗರ ಸಭೆಯಲ್ಲಿ ತಮ್ಮ ಮನಸಿನ ನೋವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೊಸದುರ್ಗ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾಮಕಾವಸ್ಥೆಗೂ ಸಹ ಶಾಸಕರ ಅಭಿಪ್ರಾಯವನ್ನು ಕೇಳಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಅಲ್ಲದೆ ತೆರೆಮರೆಯಲ್ಲಿ ಅತೀ ಬೇಗ ಶಾಸಕರಾಗುವ ಬಯಕೆಯುಳ್ಳ ತಾಲೂಕಿನ ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಪಕ್ಷದ ವರಿಷ್ಠರಲ್ಲಿ ಚಾಡಿ ಹೇಳುತ್ತಿದ್ದಾರೆ. ಆದರೆ ಅವರಿಗೆ ಶಾಸಕರಾಗಲು ಅಷ್ಟೊಂದು ಬಯಕೆ ಇದ್ದರೆ ನನ್ನ ವಿರುದ್ಧ ಬಿಜೆಪಿಯಿಂದ ಸರ್ಧಿಸಲಿ ಅಂತ ಸವಾಲು ಹಾಕಿದರು.

'ನಾನು ಜೆಡಿಎಸ್‌ ಮೂಲದವ, ಬಿಜೆಪಿ ಸಿದ್ಧಾಂತ ಒಪ್ಪಲು ಕಷ್ಟವಾಗುತ್ತಿದೆ' 

ನಾನು ಇನ್ನೂ 3 ವರ್ಷ ಎಲ್ಲೂ ಹೋಗಲ್ಲ. ಎಷ್ಟೇ ಕಿರುಕುಳವಿದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಆದರೆ ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಸಾಧ್ಯತೆ ಇರುವ ಬಗ್ಗೆ ಗೂಳಿಹಟ್ಟಿ ಶೇಖರ್ ಸುಳಿವು ನೀಡಿದರು.  ಅವರ ಈ ಮಾತಿನ ಹಿಂದಿನ ಮರ್ಮವನ್ನು ನೋಡಿದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಂತಿದೆ. 

ಬಿಎಸ್‌ವೈ ವಿರುದ್ಧ ಬಹಿರಂಗವಾಗಿ ಅಸಮಾಧಾನ
2008ರಲ್ಲಿ ಸರ್ಕಾರ ಬರಲು ಬೆಂಬಲ ನೀಡಿದ್ದ ನನಗೆ ಮೆಡಿಕಲ್ ಕಾಲೇಜು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಹ ನೀಡಲಿಲ್ಲ. ಆದರೆ ಇದೀಗ ಬಿಜೆಪಿಗೆ ಸರ್ಕಾರ ಬರಲು ಕಾರಣರಾದ ಅನರ್ಹ ಶಾಸಕರಿಗೆ ರೆಡ್ ಕಾರ್ಪೆಟ್ ಹಾಕಿ ಬಿಜೆಪಿ ನಾಯಕರು ಸ್ವಾಗತಿಸಿದ್ದೂ, ಹಣ, ಅಧಿಕಾರ ನೀಡುತ್ತಿದ್ದಾರೆ. ಆದರೆ ನನಗೆ ಮಾತ್ರ ತಾರತಮ್ಯ ಮಾಡುತ್ತಿರುವ ಬಿಜೆಪಿ ನಾಯಕರು ತಮ್ಮನ್ನು ಸಹ 18ನೇ ಅನರ್ಹ ಶಾಸಕ ಅಂತ ಪರಿಗಣಿಸಿ ಸಚಿವ ಸ್ಥಾನ ನೀಡಲಿ ಎಂದು ಇತ್ತೀಚೆಗೆ ಗೂಳಿಹಟ್ಟಿ ಶೇಖರ್ ಆಕ್ರೋಶ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಶರ್ಟ್ ಹರಿದುಕೊಂಡು ಪ್ರತಿಭಟಿಸಿದ್ದ ಗೂಳಿಹಟ್ಟಿ
2008ರ ಬಿಜೆಪಿ ಸರ್ಕಾರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡೆದ್ದ 14 ಮಂದಿ ಶಾಸಕರ ಬಣದಲ್ಲಿ ಪಕ್ಷೇತರ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಪ್ರಮುಖರಾಗಿದ್ದರು. ವಿಧಾನಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ನಿರ್ಣಯದ ಪರ ಮತ ಹಾಕುವುದಕ್ಕೆ ಅವಕಾಶ ನೀಡದೇ ತಮ್ಮನ್ನು ಅನರ್ಹಗೊಳಿಸದರೆಂಬ ಕಾರಣಕ್ಕೆ ಶಾಸನಸಭೆಯ ಟೇಬಲ್ ಮೇಲೆ ನಿಂತು ಅಂಗಿ ಹರಿದು ಪ್ರತಿಭಟನೆ ನಡೆಸಿದ್ದರು. ಬಳಿಕ ಬದಲಾದ ರಾಜಕೀಯ ವಿದ್ಯಾಮನಗಳಿಂದ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ