ಹೊಸದುರ್ಗ[ಆ.26]: ಸರ್ಕಾರ ಮತ್ತು ಪಕ್ಷದಿಂದ ನನಗೆ ಹಿನ್ನಡೆಯಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ನನ್ನನ್ನು ಅವಮಾನಿಸಲಾಗುತ್ತಿದೆ. ನಾನೇನು ಮಾಡಬೇಕು ನೀವೇ ಹೇಳಿ ಎಂದು ಶಾಸಕ ಗೂಳಿಹಟ್ಟಿಡಿ.ಶೇಖರ್‌ ಹೇಳಿದರು.

ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಕರೆದಿದ್ದ ಅಭಿಮಾನಿ, ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 14 ತಿಂಗಳಿಂದ ನನ್ನನ್ನು ಪಕ್ಷದಲ್ಲಿ ಅನುಮಾನದಿಂದ ನೋಡಿದರು. ತಾಲೂಕಿನ ಜನ ನನಗೆ ಅನ್ನ, ಹಣ, ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ ಎಂದರೂ ನಂಬಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ರೆಗ್ಯೂಲರ್‌ ಅನುದಾನ ಬರುತ್ತಿತ್ತು. ವಿಶೇಷ ಅನುದಾನ ಪಡೆಯಬೇಕಾದರೆ ಮಂತ್ರಿಗಳ ಬಳಿ ಹೋಗಬೇಕಿತ್ತು. ಮಂತ್ರಿಗಳ ಬಳಿ ಹೋದರೆ ಸುಖಾಸಮ್ಮನೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಇದರಿಂದ ನೊಂದು ನಾನು ಯಾರ ಬಳಿಗೂ ಹೋಗಲಿಲ್ಲ. ಹೀಗಾಗಿ, ತಾಲೂಕಿಗೆ ಯಾವುದೇ ವಿಶೇಷ ಅನುದಾನ ಬರಲಿಲ್ಲ. ಈಗಲಾದರೂ ನಮ್ಮ ಸರ್ಕಾರ ಬಂದಿದೆ. ವಿಶೇಷ ಅನುದಾನ ಸಿಗುತ್ತದೆಯೋ ಎಂದರೆ, ಈಗಲೂ ನನ್ನನ್ನು ಪಕ್ಷದಲ್ಲಿ ಹೀನಾಯವಾಗಿ ಕಾಣಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಬಲಿಗರೇ ಗಾಡ್‌ಫಾದರ್‌:

ರಾಜಕೀಯವಾಗಿ ನನಗೆ ಯಾರೂ ಗಾಡ್‌ಫಾದರ್‌ ಇಲ್ಲ. ನನ್ನ ಬೆಂಬಲಿಗರೇ ನನಗೆ ಗಾಡ್‌ಫಾದರ್‌. 2008ರಲ್ಲಿ ನನಗಾದ ಅನ್ಯಾಯವನ್ನು ಸರಿಪಡಿಸಿ ಎಂದಿದ್ದೆ ತಪ್ಪಾಯಿತಾ? ನಾನು ಸಚಿವ ಸ್ಥಾನ ಕೇಳಿದ್ದು ತಪ್ಪಾ? ವಿಶೇಷ ಅನುದಾನ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಬಳಿ ಯಾರು ಹೆಚ್ಚು ಹತ್ತಿರವಿರುತ್ತಾರೆ ಅಂತವರಿಗೆ ಮಾತ್ರ ನೂರಾರು ಕೋಟಿ ರು. ವಿಶೇಷ ಅನುದಾನ ಸಿಗುತ್ತದೆ. ಅದರಂತೆ ಹಿಂದಿನ ಶಾಸಕರು. ತಾಲೂಕಿಗೆ ನೂರಾರು ಕೋಟಿ ರು. ಅನುದಾನ ತಂದಿದ್ದಾರೆ. ಅವರಂತೆ ನಾನೂ ಇನ್ನೂ ಹೆಚ್ಚಿಗೆ ಅನುದಾನ ತರಬೇಕೆಂಬ ಆಸೆ ಇದೆ ಎಂದರು.

ಕಾನ್‌ಸ್ಟೇಬಲ್‌ ಕೂಡಾ ನನ್ನ ಮಾತು ಕೇಳ್ತಿಲ್ಲ:

ತಾಲೂಕಿನಲ್ಲಿ ಶಾಸಕನಾಗಿದ್ದರೂ ಒಬ್ಬ ಪೊಲೀಸ್‌ ಪೇದೆ ನನ್ನ ಮಾತು ಕೇಳುತ್ತಿಲ್ಲ. ಕಳೆದ 14 ತಿಂಗಳು ಮಾಜಿ ಶಾಸಕರ ಅಣತಿಯಂತೆ ಪೋಲೀಸ್‌ ಇಲಾಖೆ ನಡೆಯುತ್ತಿತ್ತು. ಈಗ ನಮ್ಮ ಸರ್ಕಾರವಿದೆ ಈಗಲಾದರೂ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳೋಣ ಎಂದರೆ, ಪಕ್ಷದ ಮುಖಂಡರು ಮೂಗು ತೂರಿಸುತ್ತಿದ್ದಾರೆ. ಹೀಗಾದರೆ, ನಾನು ಏಕೆ ಪಕ್ಷದ ಶಾಸಕನಾಗಿ ಇರಬೇಕು. ತಾಲೂಕಿನಲ್ಲಿ ನಾನು ಶಾಸಕನಾದ ಮೇಲೆ ಅಭಿವೃದ್ಧಿ ಕೆಲಸವಾಗಿಲ್ಲವಾದರೂ, ಜನ ಯಾವುದೇ ಗಲಾಟೆ, ಗದ್ದಲವಿಲ್ಲದೆ ನೆಮ್ಮದಿಯಿಂದ ಇದ್ದಾರೆ. ಅದೇ ನನಗೆ ನೆಮ್ಮದಿ ಎಂದರು.

ಚರ್ಚಿಸಿ ಮುಂದಿನ ನಿರ್ಧಾರ:

ನಾನು ಜೆಡಿಎಸ್‌ ಮೂಲದಿಂದ ಬಂದವನು. ನನಗೆ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಅದರಂತೆ ನನ್ನ ಬೆಂಬಲಿಗರಿಗೂ ಕಷ್ಟವಾಗುತ್ತಿದೆ. ಹೀಗಾಗಿ, ನಾನು ಮೊದಲು ಬೆಂಬಲಿಗರೊಂದಿಗೆ ಮಾತನಾಡಿ, ಅಭಿಪ್ರಾಯ ಪಡೆದು ನಂತರ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ತೀರ್ಮಾನ ಮಾಡಬೇಕೆಂದಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ನಾನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ನೀವು ಸಮರ್ಥಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಆದ ನೋವನ್ನು ಹೇಳಿಕೊಳ್ಳಲು ಈ ಸಭೆ ಕರೆದಿದ್ದೇನೆ ಎಂದರು.

ಬೆಂಬಲಿಗರಿದ್ದೇಕೆ? ಕಾರ್ಯಕರ್ತರ ಸಭೆ ನಡೆಸಿ

ಇದೇ ವೇಳೆ ಸಭೆಯಲ್ಲಿ ಬೆಂಬಲಿಗರ ಪರವಾಗಿ ಮಾತನಾಡಿದ ಪ್ರಹ್ಲಾದ್‌, ತಾಲೂಕಿನ ಬಿಜೆಪಿಯಲ್ಲಿ ಮೂರ್ನಾಲ್ಕು ಗುಂಪುಗಳಿವೆ. ಇದರಿಂದ ನಿಮಗೆ ಇರುಸು-ಮುರುಸು ಆಗುತ್ತಿರಬಹುದು. ಆದರೆ, ನೀವು ಈ ರೀತಿ ಪ್ರತ್ಯೇಕವಾಗಿ ಬೆಂಬಲಿಗರ ಸಭೆ ಕರೆಯುವ ಬದಲು ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಅಲ್ಲಿಯೇ ಚರ್ಚಿಸಬೇಕಿತ್ತು. ನೀವು ಈಗ ಬಿಜೆಪಿ ಪಕ್ಷದ ಶಾಸಕರು ಎನ್ನುವುದನ್ನು ಮರೆಯಬಾರದು. ನಿಮಗೆ ಸರ್ಕಾರ ಅಥವಾ ಪಕ್ಷದ ಮುಖಂಡರಿಂದ ಯಾವುದೇ ತೊಂದರೆಯಾದರೆ, ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅದನ್ನು ಬಿಟ್ಟು ಎಲ್ಲೆಂದರಲ್ಲಿ ಮನಬಂದತೆ ಹೇಳಿಕೆಗಳನ್ನು ನೀಡಬೇಡಿ ಎಂದು ಸಲಹೆ ನೀಡಿದರು.

ಶಾಸಕರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಲ್ಲ:

ಇನ್ನೇನು ಸಭೆ ಮುಗಿಯುವಷ್ಟರಲ್ಲಿ ಶಾಸಕರು ದಿಢೀರ್‌ ಸಭೆ ಕರೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದ ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಸ್‌.ಲಿಂಗಮೂರ್ತಿ ಮಾತನಾಡಿ, ಕಳೆದ 14 ತಿಂಗಳಿದಾಗಲೀ ಅಥವಾ ಇನ್ನು ಮುಂದೆಯಾಗಲಿ, ಶಾಸಕರ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಮೇಲೆ ಗೂಬೆ ಕೂರಿಸುವುದು ಬೇಡ. ನನ್ನ ಮನೆ ದೇವರು ಬನ ಶಂಕರಿ ದೇವಿಯ ಮೇಲಾಣೆ ತಾಲೂಕಿಗೆ ಗೂಳಿಹಟ್ಟಿಶೇಖರ್‌ ಅವರೋಬ್ಬರೇ ಶಾಸಕರು. ಅವರ ನಿರ್ದೇಶನದಂತೆಯೇ ತಾಲೂಕಿನ ಅಭಿವೃದ್ಧಿಯಾಗಲಿ. ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.