ಚಿತ್ರದುರ್ಗ, [ಡಿ.17]: 2008ರಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ ಆಗಿದ್ದೆನು. ಪಕ್ಷೇತರ‌‌‌ ಶಾಸಕನಾಗಿದ್ದ ನಾನೇ ಮೊದಲ ವಿಕೆಟ್ ಆಗಿದ್ದೆನು.  ಮೊದಲ‌ ಕುರಿಯಾಗಿ ಹಳ್ಳಕ್ಕೆ ಬಿದ್ದಿದ್ದು ನಾನು ಎಂದು ಹೇಳುವ ಮೂಲಕ ಶಾಸಕ ಗೂಳಿಹಟ್ಟಿ ಶೇಖರ್ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಇಂದು [ಮಂಗಳವಾರ] ಮಾತನಾಡಿದ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, 2008ರಲ್ಲಿ ಸರ್ಕಾರ ಬರಲು ನಾನೇ ಕಾರಣ ಎಂದು ಎದೆ‌ತಟ್ಟಿ ಹೇಳುವೆ. ಈಗ ಸಿಎಂ ಲೆಫ್ಟ್, ರೈಟ್ ಇದ್ದವರು ಅಂದು ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ ಎಂದು ಟಾಂಗ್ ಕೊಟ್ಟರು.

ಬಿಜೆಪಿ ಸೇರಿ ತಪ್ಪು ಮಾಡಿದೆ : ಶಾಸಕ

17 ಜನರ ತ್ಯಾಗದಿಂದಾಗಿ ಈಗ ಬಿಜೆಪಿ ಸರ್ಕಾರ ಬಂದಿದೆ. 17 ಜನರಿಗೆ ನ್ಯಾಯ ನೀಡುವುದರ ಜತೆಗೆ ನನ್ನೂ ಪರಿಗಣಿಸಬೇಕು. ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದೇನೆ. 2008ರಲ್ಲಿ 3 ಶಾಸಕರು ಬೇಕಿದ್ದು, ಮೊದಲು ನಾನು ಬೆಂಬಲಿಸಿದ್ದೆ ಎಂದು ಹೇಳಿದರು.

2008 ಬಿಜೆಪಿ‌ ಸರ್ಕಾರದಲ್ಲಿ ನನಗೆ ಅನ್ಯಾಯ ಆಗಿತ್ತು. ಈಗ ಅನ್ಯಾಯ ಸರಿದೂಗಿಸಬೇಕಿದೆ. ಪ್ರಬಲ ಖಾತೆ, ಜಿಲ್ಲಾಉಸ್ತುವಾರಿ, ಮೆಡಿಕಲ್ ಕಾಲೇಜು, ಸಾವಿರಾರು ಕೋಟಿ ಅನುದಾನ ಯಾವುದೂ ಆಗ ಕೊಡಲಿಲ್ಲ. ನನಗಾದ ಅನ್ಯಾಯ ಈಗ ಸರಿಪಡಿಸಬೇಕೆಂದು ಕೇಳುತ್ತೇನೆ ಎಂದರು.

ಹನಿಟ್ರ್ಯಾಪ್‌ ಪ್ರಕರಣದಲ್ಲಿ ಗೂಳಿಹಟ್ಟು ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಆ ರೀತಿ‌ ಎಲ್ಲೂ ನಡೆದುಕೊಂಡಿಲ್ಲ, ಯಾರೂ ಬ್ಲಾಕ್‌ಮೇಲ್‌ ಮಾಡಿಲ್ಲ. ಮಂತ್ರಿಗಿರಿ ರೇಸ್ ನಿಂದ ಹಿಂದೆ ಸರಿಸಲು ಷಡ್ಯಂತ್ರ ರೂಪಿಸಿರಬಹುದು ಎಂದು ಸ್ಪಷ್ಟಪಡಿಸಿದರು.

ಹಿಂದೆಯೂ ವಿಧಾನಸೌಧದಲ್ಲಿ ಅಂಗಿ ಹರಿದುಕೊಂಡ‌ರೆಂದು ಅಪಪ್ರಚಾರ ಮಾಡಿದ್ದಾರೆ. ಚುನಾವಣೆ, ರಾಜಕಾರಣ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.

2008ರ ಬಿಜೆಪಿ ಸರ್ಕಾರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡೆದ್ದ 14 ಮಂದಿ ಶಾಸಕರ ಬಣದಲ್ಲಿ ಪಕ್ಷೇತರ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಪ್ರಮುಖರಾಗಿದ್ದರು. ವಿಧಾನಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ನಿರ್ಣಯದ ಪರ ಮತ ಹಾಕುವುದಕ್ಕೆ ಅವಕಾಶ ನೀಡದೇ ತಮ್ಮನ್ನು ಅನರ್ಹಗೊಳಿಸದರೆಂಬ ಕಾರಣಕ್ಕೆ ಶಾಸನಸಭೆಯ ಟೇಬಲ್ ಮೇಲೆ ನಿಂತು ಅಂಗಿ ಹರಿದು ಪ್ರತಿಭಟನೆ ನಡೆಸಿದ್ದರು.