ಸ್ಯಾಂಟ್ರೋ ರವಿಯನ್ನು ಗುಜರಾತ್‌ಗೆ ಕರೆಸಿಕೊಂಡಿದ್ದೇ ಗೃಹ ಸಚಿವರು: ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ
ನಾಪತ್ತೆಯಾಗಿ ಪೂನಾದಲ್ಲಿದ್ದ ಸ್ಯಾಂಟ್ರೋ ರವಿಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಗುಜರಾತ್‌ಗೆ ಕರೆಸಿಕೊಂಡು, ಕೆಲವೊಂದು ಭರವಸೆ ಕೊಟ್ಟು ಪೊಲೀಸರ ಕೈಗೆ ಸಿಗುವಂತೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು (ಜ.14): ರಾಜ್ಯದಲ್ಲಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆ ದಂಧೆ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿರುವ ಸ್ಯಾಂಟ್ರೋ ರವಿ ಪ್ರಕರಣವನ್ನು ನಾನು ಬಯಲಿಗೆ ಎಳೆಯದಿದ್ದರೆ ಬಿಜೆಪಿ ಸರ್ಕಾರ ಮುಚ್ಚಿ ಹಾಕುತ್ತಿತ್ತು. ದೂರು ದಾಖಲಿಸಿದ ಮೇಲೆ ನಾಪತ್ತೆಯಾಗಿ ಪೂನಾದಲ್ಲಿದ್ದ ಸ್ಯಾಂಟ್ರೋ ರವಿಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಗುಜರಾತ್‌ಗೆ ಕರೆಸಿಕೊಂಡು, ಕೆಲವೊಂದು ಭರವಸೆ ಕೊಟ್ಟು ಪೊಲೀಸರ ಕೈಗೆ ಸಿಗುವಂತೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ನನ್ನ ಕಾಲದಲ್ಲಿ ನನ್ನ ಚೇಂಬರ್ ಗೆ ಬ್ರೋಕರ್ ಗಳು ಬರಲು ಅವಕಾಶ ಕೊಡುತ್ತಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಬ್ರೋಕರ್ ಗಳಿಗೆ ಹೆಚ್ಚಿನ ಮಣೆ ಹಾಕಿದೆ. ನಾನು ಸುದ್ದಿಗೋಷ್ಠಿ ಮೂಲಕ ಸ್ಯಾಂಟ್ರೋ ರವಿಯ ಅಕ್ರಮಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಂತರ ಹಲವು ಪ್ರಕರಣಗಳು ದಾಖಲಾದವು. ಇದಾದ ನಂತರ ಪೊಲೀಸರು ಬಂಧನಕ್ಕೆ ಬಲೆ ಬೀಸಿದಾಗ ಸ್ಯಾಂಟ್ರೋ ರವಿ ನಾಪತ್ತೆಯಾಗಿ ಪೂನಾದಲ್ಲಿ ಅಡಗಿಕೊಂಡಿದ್ದನು. ಆದರೆ, ಪೂನಾದಿಂದ ಗುಜರಾತ್ ಗೆ ಯಾಕೆ ಕರೆಸ್ಕೊಂಡರು ಗೊತ್ತಿಲ್ಲ. ಅಲ್ಲಿ ಅವನಿಗೆ ಏನೇನು ಭರವಸೆ ಕೊಟ್ರು? ಇದೆಲ್ಲ ಹೊರಗೆ ಬರಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ.
ಸ್ಯಾಂಟ್ರೋ ರವಿಯನ್ನು ಸೇಫ್ ಮಾಡಲು ಸಚಿವ ಆಗರ ಜ್ಞಾನೇಂದ್ರ ಯತ್ನಿಸಿದ್ರಾ?: ಕುಮಾರಸ್ವಾಮಿ ಹೇಳಿದ್ದೇನು?
ಸರ್ಕಾರದಲ್ಲಿ ಸ್ಯಾಂಟ್ರೋ ರವಿಯಂಥವರು ತುಂಬಾ ಜನ ಇದ್ದಾರೆ: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇದ್ದಕ್ಕಿಂದಂತೆ ಗುಜರಾತ್ ಗೆ ಯಾಕೆ ಹೋದ್ರು? ಇತ್ತೀಚೆಗೆ ಗುಜರಾತಿನ ಸಬರಮತಿ ಆಶ್ರಮಕ್ಕೆ ಹೋಗಿ ಫೋಟೋ ತೆಗೆಸಿಕೊಂಡು ಕಳಿಸಿದ್ದಾರೆ. ಸರ್ಕಾರದಿಂದ ಸ್ಯಾಂಟ್ರೋ ರವಿ ಬಗ್ಗೆ ಎಲ್ಲದನ್ನೂ ತನಿಖೆ ಮಾಡ್ತೀವಿ ಎಂದು ಹೇಳಿದ್ದಾರಲ್ಲ, ಇದನ್ನೂ ತನಿಖೆ ಮಾಡಲಿ. ಈ ಸರ್ಕಾರದಲ್ಲಿ ಸ್ಯಾಂಟ್ರೋ ರವಿಯಂಥವರು ತುಂಬಾ ಜನ ಇದ್ದಾರೆ. ಕೆಲವು ಮಂತ್ರಿಗಳು, ರಾಜಕಾರಣಿಗಳಲ್ಲಿ ಸಂಪರ್ಕದಲ್ಲಿ ಇದ್ದಾರೆ. ನಾನು ಅಂದು ಹೇಳದೇ ಹೋಗಿದ್ದರೆ ಇದನ್ನು ಮುಚ್ಚಿ ಹಾಕುತ್ತಿದ್ದರು. ಗೃಹ ಸಚಿವರು ಸ್ಯಾಂಟ್ರೋ ರವಿಯನ್ನು ಕೇರಳ ಅಲ್ಲಿ, ಇಲ್ಲಿ ಹೋಗಿದ್ದ ಎಂದಿದ್ದರು. ಆದರೆ, ಈಗ ಯಾಕೆ ಗುಜರಾತ್‌ನಲ್ಲಿ ಸಿಕ್ಕಿದ್ದಾನೆ ಎಂದು ಪ್ರಶ್ನೆ ಮಾಡಿದರು.
ಪಾರದರ್ಶನ ತನಿಖೆ ಮಾಡಲಿ: ನಾನು ಹೇಳುವುದನ್ನು ಆರೋಪ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಆದರೆ, ನಾನ್ಯಾಕೆ ಮೊಸರಲ್ಲಿ ಕಲ್ಲು ಹುಡುಕಲಿ. ಪಾರದರ್ಶಕ ತನಿಖೆ ನಡೆಸ್ತಾ ಇದ್ದರೆ ಹೇಳಲಿ. ಪೂನಾದಿಂದ ಯಾಕೆ ಕರೆದುಕೊಂಡು ಹೋದರು. ಅವರು ಎಲ್ಲಿಂದ ಎಲ್ಲಿಗೆ ಫ್ಲೈಟ್ ಹತ್ತಿಸಿಕೊಂಡು ಹೋದರು? ಅದನ್ನು ಅವರೇ ಹೇಳಲಿ ನೋಡೋಣ. ಬಿಜೆಪಿಯವರು ಪಠಾಣ್ ಚಿತ್ರದ ಒಂದು ಹಾಡಿನಲ್ಲಿ ಕೇಸರಿ ಬಟ್ಟೆ ಧರಿಸಿದ್ದ ಕ್ಕೆ ದೊಡ್ಡ ಪ್ರತಿಭಟನೆ ಮಾಡಿದ್ದರು. ಆದರೆ, ಅದೇ ಕೇಸರಿ ವಸ್ತ್ರವನ್ನು (ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರ್ಪಡೆ) ಕೆಲವರ ಮೇಲೆ ಹಾಕ್ತಾ ಇದಾರಲ್ಲಾ ಎಂದು ಕುಮಾರಸ್ವಾಮಿ ಹೇಳಿದರು.
ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧ ಎಂದ ಕುಮಾರಸ್ವಾಮಿ:
ಹಾಸನದಲ್ಲಿ ಕುಟುಂಬದಿಂದ ಮತ್ತೊಬ್ಬರು ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಅವರು ಪ್ರವೋಕ್ ಮಾಡ್ತಿದ್ದಾರೆ ಅನ್ನೊದು ನನ್ನ ಅಭಿಪ್ರಾಯ. ಹಾಸನದಲ್ಲಿ ಚುನಾವಣೆ ಗೆಲ್ಲಲು ನಮ್ಮ ಕುಟುಂಬವ್ರೆ ನಿಲ್ಲಬೇಕಿಲ್ಲ. ಸಾಮಾನ್ಯ ಕಾರ್ಯಕರ್ತರು ಕೊಟ್ಟರೂ ಗೆಲ್ಲುತ್ತಾರೆ. ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲುವ ಶಕ್ತಿಯಿದೆ. ನಾವೇ 224 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಅಂತ ಏನೂ ಇಲ್ಲ. ಬೇರೆ ಸಣ್ಣಪುಟ್ಟ ಪಕ್ಷಗಳು ಮುಂದೆ ಬಂದ್ರೆ ಮೈತ್ರಿ ಮಾಡ್ಕೊಳ್ಳೋಕೆ ಮುಕ್ತವಾಗಿದ್ದೇವೆ. ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧ ಎಂದು ಕುಮಾರಸ್ವಾಮಿ ಸಂದೇಶ ನೀಡಿದ್ದಾರೆ.
ಸ್ಯಾಂಟ್ರೋ ರವಿ ಸಿಗಲು ಮೊದಲ ಪತ್ನಿ ಕಾರಣ: ಇಲ್ಲಿದೆ ಬಂಧನದ ರೋಚಕ ಕಥೆ
ನಾಯಕರನ್ನು ತಯಾರು ಮಾಡುವ ಪಕ್ಷ:
ನಮ್ಮ ಜೆಡಿಎಸ್ ಪಕ್ಷ ನಾಯಕರನ್ನು ತಯಾರು ಮಾಡುವ ಪಕ್ಷವಾಗಿದೆ. ನಮ್ಮಿಂದ ಹೋಗಿರೋರ ಚರಿತ್ರೆ ನೋಡಿ. ಬೇರೆ ಪಕ್ಷಗಳಿಗೆ ಹೋಗಿ ಏನಾಗಿದಾರೆ ಅವರೆಲ್ಲ. ನಮ್ಮಿಂದ ಯಾರೇ ಹೋದರೂ ನಮ್ಮ ಪಕ್ಷಕ್ಕೆ ಧಕ್ಕೆ ಆಗಿಲ್ಲ. ಇನ್ನು ಇನ್ನು ಕೆಲ ದಿನಗಳಲ್ಲಿ 50-60 ಸೀಟ್ ಗಳಿಗೆ ಎರಡನೆ ಪಟ್ಟಿ ಬಿಡುಗಡೆ ಮಾಡುತ್ತೇವೆ. ಹೊಸಬರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಡು ಬರುತ್ತೇವೆ ಎಂದು ಹೇಳಿದರು.