ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಅಂತಹ ಯಾವ ಬೆಳವಣಿಗೆಯೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ನ.22): ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಅಂತಹ ಯಾವ ಬೆಳವಣಿಗೆಯೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಬಹಳ ಊಹಾಪೋಹಗಳಿವೆ. ಆದರೆ ಯಾವುದೇ ತೀರ್ಮಾನವಿದ್ದರೂ ಅದನ್ನು ಹೈಕಮಾಂಡ್ ತೆಗೆದುಕೊಳ್ಳಬೇಕು. ಸ್ಥಳೀಯವಾಗಿ ಯಾರೂ ತೀರ್ಮಾನ ಮಾಡಲು ಅಗುವುದಿಲ್ಲ. ಹೈಕಮಾಂಡ್ ಬಿಟ್ಟು ನಮ್ಮಲ್ಲಿ ಏನೂ ನಡೆಯಲ್ಲ. ನಾವು ಏನೇ ಹೇಳಿಕೆ ಕೊಟ್ಟರೂ ಅದು ನಡೆಯಲ್ಲ. ಗೊಂದಲ ಇದ್ದರೆ ಪಕ್ಷದ ಹೈಕಮಾಂಡ್‌ನವರು ಬಗೆಹರಿಸುತ್ತಾರೆ ಎಂದರು.
ಶಿಕ್ಷಣದಿಂದ ಮಾತ್ರ ದೇಶ ಬಲಿಷ್ಠ
ದೇಶ ಬಲಿಷ್ಠವಾಗಲು ಶಿಕ್ಷಣವೊಂದೇ ಶಕ್ತಿ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅಭಿಪ್ರಾಯಿಸಿದ್ದಾರೆ. ಬಿದರಕಟ್ಟೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಶದಲ್ಲಿ ಪ್ರತಿವರ್ಷ 12 ಲಕ್ಷ ಎಂಜಿನಿಯರ್ ಹಾಗೂ ವೈದ್ಯ ಪದವೀಧರರು ಬರುತ್ತಿದ್ದಾರೆ. ಇದರಿಂದ ಜಗತ್ತಿನಾದ್ಯಂತ ಪ್ರತಿಭೆಗಳ ಮಹಾಪೂರವೇ ಹರಿಯುತ್ತಿದೆ. ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ ನೆಹರೂ ಅವರು ಶಿಕ್ಷಣಕ್ಕೆ ಒತ್ತು ನೀಡಿದ ಪರಿಣಾಮ ಎಂದ ಅವರು, ಪ್ರಾಚೀನ ಭಾರತದಿಂದಲೂ ತಕ್ಷಶಿಲಾ, ನಳಂದ ವಿಶ್ವವಿದ್ಯಾಲಯಗಳಿಂದಲೂ ದೇಶದಲ್ಲಿ ಶಿಕ್ಷಣ ಕ್ರಾಂತಿ ನಡೆದಿದೆ ಎಂದರು.
ಇಂದಿನ ಯುವ ಸಮುದಾಯ ಆಧುನಿಕ ಜಗತ್ತಿಗೆ ಒಗ್ಗಿಕೊಳ್ಳಬೇಕಿದೆ ಎಂದ ಅವರು, ಎಐ ಮತ್ತು ರೋಬೋಟಿಕ್ ತಂತ್ರಜ್ಞಾನದಂತಹ ಹೊಸ ಅನ್ವೇಷಣೆಗಳತ್ತ ಗಮನ ಹರಿಸಬೇಕು. ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದರು. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮೂರು ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು, ಪ್ರತಿ ತಾಲೂಕಿನಲ್ಲೂ ಪದವಿ ಕಾಲೇಜುಗಳು ಇದ್ದು, ಗ್ರಾಮೀಣ ಪ್ರದೇಶದ ಬಡವರಿಗೆ, ಪರಿಶಿಷ್ಟ ಹಾಗೂ ಹಿಂದುಳಿದ ಬಡ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಅನುಕೂಲವಾಗುತ್ತಿದೆ ಎಂದರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಹೆದ್ದಾರಿ ಸಂಪರ್ಕ ರಸ್ತೆ, ಬೋಧಕ ಸಿಬ್ಬಂದಿ ಸೇರಿದಂತೆ ಹಣಕಾಸಿನ ನೆರವು ಅಗತ್ಯವಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ನೆರವು ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಬೇಡಿಕೆಗಳು ಬರುತ್ತಿವೆ. ಆದರೆ ಭೌತಿಕ ಕಟ್ಟಡಗಳನ್ನು ಕಟ್ಟಿಸಿದಾಕ್ಷಣ ಜ್ಞಾನಕೇಂದ್ರ ಆಗುವುದಿಲ್ಲ. ಅದಕ್ಕೆ ಪೂರಕ ಮೂಭೂತ ಸೌಲಭ್ಯ, ಬೋಧಕ ಸಿಬ್ಬಂದಿ ಸೇರಿದಂತೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ 500 ಕೋಟಿ ರು.ಗಳ ವಿಸ್ತೃತ ಯೋಜನೆಯಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪೂರೈಸಲಾಗುವುದು ಎಂದರು. ರಾಜ್ಯದ ಬಡ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಕನಸಿನ ಮಾತಾಗಿತ್ತು. ಆದರೆ ರಾಜ್ಯ ಸರ್ಕಾರ ಬ್ರಿಟನ್ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದೇಶಿ ಶಿಕ್ಷಣ ಕೊಡಿಸಲು ಮುಂದಾಗಿದೆ.

