ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಅವರು ಬಹಿರಂಗ ಪಡಿಸಿದ್ದು, ಮತಗಳ್ಳತನ ಆಗಿರುವುದು ನಿಜ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.
ಬೆಂಗಳೂರು (ನ.07): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಅವರು ಬಹಿರಂಗ ಪಡಿಸಿದ್ದು, ಮತಗಳ್ಳತನ ಆಗಿರುವುದು ನಿಜ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್‌ಗಾಂಧಿ ಅವರು ಮತಗಳ್ಳತನಕ್ಕೆ ಸಂಬಂಧಿಸಿ ಟನ್‌ಗಟ್ಟಲೆ ದಾಖಲಾತಿಗಳನ್ನು ಪ್ರದರ್ಶಿಸಿ ಮತಗಳ್ಳತನ ಬಗ್ಗೆ ಆರೋಪ ಮಾಡಿದ್ದಾರೆ. ಅವರು ಕೇವಲ ಕಾಟಾಚಾರಕ್ಕೆ ಹೇಳಿಕೆ ನೀಡಿಲ್ಲ.
ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ್ದು, ಮತಗಳ್ಳತನ ಬಹಿರಂಗಪಡಿಸಿದ್ದಾರೆ ಎಂದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ಔತಣಕೂಟದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿಗೆ ಬಂದಾಗ ಕೆ.ಎನ್.ರಾಜಣ್ಣ ಮನೆಗೆ ಹೋಗುತ್ತಾರೆ. ಮನೆ ಊಟಕ್ಕೆ ಹೋಗುವುದು. ಈ ಬಾರಿಯೂ ಮುಖ್ಯಮಂತ್ರಿಯವರು ಹೋಗೋಣ ಎಂದು ಕರೆದಿದ್ದಾರೆ. ಹೀಗಾಗಿ ಊಟಕ್ಕೆ ಹೋಗೋಣ ಎಂದಿದ್ದೇನೆ. ಅಲ್ಲಿ, ಯಾವುದೇ ರಾಜಕೀಯ ಚರ್ಚೆ ಆಗಲ್ಲ. ಊಟ ಮಾಡಿ ಬರುವುದು ಅಷ್ಟೇ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ 10 ಸಾವಿರ ಕೋಟಿ
ತುಮಕೂರು ಜಿಲ್ಲೆಯಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆ ಜತೆಯಲ್ಲಿಯೇ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಂತೆಯೇ ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕನ್ನಡದ ನೆಲ ಮತ್ತು ಜಲ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದ ಅವರು, ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ಕುಂಠಿತವಾಗಿದ್ದ ಹಿನ್ನೆಲೆಯಲ್ಲಿ ಉದ್ಘಾಟನೆಗೆ ತಡವಾಗಿದ್ದ ತುಮಕೂರು ನಗರದ ಬಿದರಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವ ವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸನ್ನು ನವೆಂಬರ್ 7ರಂದು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅವರು ತಿಳಿಸಿದರು.
