Asianet Suvarna News Asianet Suvarna News

ಹಿಂದೂ ಕಾರ್ಯಕರ್ತರು ಅಣಬೆಗಳು ಇದ್ದಂತೆ: ವಿವಾದಾತ್ಮಕ ಹೇಳಿಕೆ ಕೊಟ್ಟ ಪುತ್ತೂರು ಬಿಜೆಪಿ ಶಾಸಕ

ಚುನಾವಣೆ ಬಂದಾಗ ಹೊಸ ವ್ಯಕ್ತಿಗಳು ಹಣಬೆಗಳ ರೀತಿ ಹುಟ್ಟಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಹಿಂದೂ ಕಾರ್ಯಕರ್ತರನ್ನು ಅಣಬೆಗೆ ಹೋಲಿಸಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

Hindu Activists are like a mashroom Putturu MLA Sanjeev Matanduru said sat
Author
First Published Feb 9, 2023, 10:36 AM IST

ದಕ್ಷಿಣ ಕನ್ನಡ (ಫೆ.09): ನಾಡಿನ ಹಿಂದೂ ಕಾರ್ಯಕರ್ತರನ್ನು ಅಣಬೆಗೆ ಹೋಲಿಸುವ ಮೂಲಕ ಪುತ್ತೂರು ಶಾಸಕ ಸಂಜೀವ ಮಠಂದೂರು ಚುನಾವಣೆ ಹೊತ್ತಿನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನು ಶಾಸಕರ ವಿರುದ್ದ ಹಿಂದೂ ಸಂಘಟನೆಗಳು ಕಿಡಿಕಿಡಿಕಾರಿವೆ.

ಹೌದು, ಶಾಸಕ ಸಂಜೀವ ಮಠಂದೂರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಿಂದೂಗಳನ್ನು 'ಅಣಬೆ' ಗೆ ಹೋಲಿಸಿ ಮಾತನಾಡಿದ್ದಾರೆ. ಈಗ 'ಅಣಬೆ' ಹೇಳಿಕೆ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ  ಹಿಂದೂ ಮುಖಂಡ ಅರುಣ್ ಪುತ್ತಿಲ ಬೆಂಬಲಿಗರು ಕಟೌಟ್, ಬ್ಯಾನರ್ ಅಳವಡಿಸಿದ್ದರು. ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಅರುಣ್ ಪುತ್ತಿಲ ಅವರ ಕಟೌಟ್‌ ಮತ್ತು ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳಿದ್ದರೂ ಶಾಸಕ ಮಠಂದೂರು ಭಾವಚಿತ್ರ ಹಾಕಿರಲಿಲ್ಲ ಇದಕ್ಕೆ ಆಕ್ರೋಶ ವಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!

ಮಳೆ ಬಂದಾಗ ಎದ್ದು, ನಂತರ ಹೋಗುತ್ತವೆ: ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಬ್ಯಾನರ್ ಹಾಕಿದವರನ್ನ ಪರೋಕ್ಷವಾಗಿ ಅಣಬೆಗೆ ಹೋಲಿಸಿದ್ದಾರೆ. 'ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನೂ ಹೆಚ್ಚು ಅಲಂಕಾರಕ್ಕೆ ಮೆರಗು ಬರುತ್ತದೆ. ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಮಳೆ ಬಂದಾಗ ಅಣಬೆ ಹುಟ್ಟುತ್ತದೆ. ಆದರೆ, ಅದು ಭಾರೀ ಸಮಯ ಬಾಳಿಕೆ ಬರುವುದಿಲ್ಲ. ಪುನಃ ಮಳೆ ಹೋದಾಗ ಅಣಬೆಯು ಹೋಗುತ್ತದೆ' ಎಂದು ಹೇಳಿಕೆ ನೀಡಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ. 

ಬಿಜೆಪಿ ಅಭ್ಯರ್ಥಿ ಬದಲಿಸುವಂತೆ ಪಟ್ಟು: ಶಾಸಕರು ಅರುಣ್ ಪುತ್ತಿಲ ಅವರನ್ನೇ ಅಣಬೆಗೆ ಹೋಲಿಸಿದ್ದು ಎಂದು ಕಾರ್ಯಕರ್ತರು ಗರಂ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಶಾಸಕ ಮಠಂದೂರು ವಿರುದ್ದ ಕಾರ್ಯಕರ್ತರು ಮುಗಿಬಿದ್ದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಜೊತೆ ಕಾಣಿಸಿಕೊಂಡಿದ್ದ ಶಾಸಕ ಮಠಂದೂರು, ಅವರ ಪರವಾಗಿ ಪುತ್ತಿಲ ಅವರು ಚುನಾವಣಾ ಪ್ರಚಾರ ಕೈಗೊಂಡು ಗೆಲುವಿಗೆ ಭಾರಿ ಬೆಂಬಲ ನೀಡಿದ್ದರು. ಆದರೆ, ಈಗ ಅವರನ್ನೇ ತುಳಿಯಲು ಯತ್ನಿಸಲಾಗುತ್ತಿದೆ. ಕೂಡಲೇ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರನ್ನು ಬದಲಾಯಿಸುವಂತೆ ಆಗ್ರಹಿಸಿ ಕ್ಷೇತ್ರದ ಕಾರ್ಯಕರ್ತರು ಹೈಕಮಾಂಡ್‌ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಅಭಿಯಾನ: ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಅಭ್ಯರ್ಥಿ ಎಂಬ ಹೆಸರಿನಲ್ಲಿ ಅಭಿಯಾನ ಶುರುವಾಗಿದೆ. ಹಿಂದೂ ಸಂಘಟನೆಗಳು ಪುತ್ತೂರಿನ ಹಾಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ದವೇ ತೊಡೆ ತಟ್ಟಿದ್ದಾರೆ. 'ಒರ್ವ ಶ್ರೇಷ್ಠ ಮತ್ತು ದೂರದೃಷ್ಟಿಯ ಶಾಸಕನ ಅಗತ್ಯ ಇದೆ' ಎಂದು ಬರೆದುಕೊಂಡಿದ್ದಾರೆ. #Putthilaforputtur ಹ್ಯಾಷ್ ಟ್ಯಾಗ್ ನಡಿ ಫೇಸ್ ಬುಕ್ ಅಭಿಯಾನ ಶುರುವಾಗಿದೆ. 

ಮಂಗಳೂರು ಫುಡ್ ಪಾಯ್ಸನ್ ಕೇಸ್: ಸಿಟಿ ನರ್ಸಿಂಗ್ ಕಾಲೇಜು ವಿರುದ್ದ ಎಫ್ಐಆರ್

ಹಲವು ನಾಯಕರ ಹೆಸರು ಮುನ್ನೆಲೆಗೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಹಾಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ಅಭಿಯಾನ ಆರಂಭವಾಗಿದ್ದು, ಅರುಣ್ ಪುತ್ತಿಲ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಹಲವು ಆಕಾಂಕ್ಷಿಗಳ ಹೆಸರು ಕೂಡ ಕೇಳಿಬರುತ್ತಿದೆ. ಈ ಅಭಿಯಾನದಿಂದ ಅವರೆಲ್ಲರಿಗೂ ಇರಿಸು- ಮುರಿಸು ಪ್ರಾರಂಭವಾಗಿದೆ. ಮತ್ತೆ ಕೆಲವರು ಅಭಿಯಾನಕ್ಕೆ ವಿರೋಧಿಸಿ ಟ್ವೀಟ್‌ ಮತ್ತು ಮೆಸೇಜ್‌ಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಇನ್ನು ಶನಿವಾರ ಅಮಿತ್ ಶಾ ಪುತ್ತೂರು ಭೇಟಿ ವೇಳೆಯೂ ಆಕ್ರೋಶ ಭುಗಿಲೇಳುವ ಸಾಧ್ಯತೆಯಿದೆ.

Follow Us:
Download App:
  • android
  • ios