ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!
ಮಂಗಳೂರು ಪೊಲೀಸರ ವಿರುದ್ದ ಭ್ರಷ್ಟಾಚಾರ ಆರೋಪ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೇ ನಾಳೆ (ಫೆ.09) ಮಂಗಳೂರಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಲಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಅಹವಾಲು ಸಲ್ಲಿಸುವಂತೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಫೆ.08): ಮಂಗಳೂರು ಪೊಲೀಸರ ವಿರುದ್ದ ಭ್ರಷ್ಟಾಚಾರ ಆರೋಪ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೇ ನಾಳೆ (ಫೆ.09) ಮಂಗಳೂರಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಲಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಅಹವಾಲು ಸಲ್ಲಿಸುವಂತೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಂಗಳೂರಿಗೆ ಆಗಮಿಸಲಿರುವ ಎಡಿಜಿಪಿ ಅಲೋಕ್ ಕುಮಾರ್ ಎರಡು ದಿನಗಳ ಕಾಲ ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಿದ್ದಾರೆ. ನಾಳೆ (ಫೆ.09) ಸಂಜೆ 7 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಂದುಕೊರತೆ ಆಲಿಸಲಿರುವ ಎಡಿಜಿಪಿ ಅಲೋಕ್, ಮಂಗಳೂರಿನ ಐಜಿಪಿ ಕಚೇರಿಯಲ್ಲಿ ವೈಯಕ್ತಿಕ ಮತ್ತು ಸಾರ್ವಜನಿಕ ದೂರುಗಳನ್ನು ಸ್ವೀಕಾರ ಮಾಡಲಿದ್ದಾರೆ. ನಾಡಿದ್ದು(ಫೆ.10) ಬೆಳಿಗ್ಗೆ 11 ಗಂಟೆಗೆ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದು, ಎರಡು ದಿನ ದ.ಕ ಜಿಲ್ಲಾ ಪೊಲೀಸ್ ಮತ್ತು ನಗರ ಕಮಿಷನರೇಟ್ ವ್ಯಾಪ್ತಿಯ ಕುಂದುಕೊರತೆ ಆಲಿಸಲಿದ್ದಾರೆ.
ಮಹಿಳೆಯರೇ ಬೈಕಿನಲ್ಲಿ ಹಿಂದೆ ಕೂರುವಾಗ ಎಚ್ಚರ ಎಚ್ಚರ: ಸೀರೆ ನೆರಿಗೆಯಿಂದ ಬೈಕಿನ ಚಕ್ರದ ಒಳಗೆ ಸಿಲುಕಿದ ಮಹಿಳೆ ಕಾಲು
ಸಾರ್ವಜನಿಕರು ನಿಗದಿ ಪಡಿಸಿದ ಸಮಯಕ್ಕೆ ಭೇಟಿಯಾಗಲು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮಂಗಳೂರು ಪೊಲೀಸರ ವಿರುದ್ದ ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಎಡಿಜಿಪಿ ಕುಂದು ಕೊರತೆ ಆಲಿಸಲಿರುವುದು ಮಹತ್ವ ಪಡೆದಿದೆ. ಉಳ್ಳಾಲ ಪೊಲೀಸರು ಮತ್ತು ಕಮಿಷನರ್ ಶಶಿಕುಮಾರ್ ವಿರುದ್ದವೂ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಬಗ್ಗೆ ದೂರು ನೀಡಿದ್ದು, ನಿರಂತರ ಆರೋಪದ ಬೆನ್ನಲ್ಲೇ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಎಡಿಜಿಪಿ ಮುಂದಾಗಿದ್ದಾರೆ ಎನ್ನಲಾಗಿದೆ.