Asianet Suvarna News Asianet Suvarna News

ಮಂಗಳೂರು ಫುಡ್ ಪಾಯ್ಸನ್ ಕೇಸ್: ಸಿಟಿ ನರ್ಸಿಂಗ್ ಕಾಲೇಜು ವಿರುದ್ದ ಎಫ್ಐಆರ್

ನಗರದ ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಫುಡ್ ಪಾಯ್ಸನ್ ಪ್ರಕರಣ ಸಂಬಂಧ ಸಿಟಿ ಹಾಸ್ಪಿಟಲ್ ಮತ್ತು ಸಿಟಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.

Mangalore Food Poisoning Case FIR against City Nursing College sat
Author
First Published Feb 7, 2023, 7:06 PM IST

ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಫೆ.07): ನಗರದ ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಫುಡ್ ಪಾಯ್ಸನ್ ಪ್ರಕರಣ ಸಂಬಂಧ ಸಿಟಿ ಹಾಸ್ಪಿಟಲ್ ಮತ್ತು ಸಿಟಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಡಳಿತ ಮಂಡಳಿ ವಿರುದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ದೂರು ನೀಡಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ವಾಂತಿ ಭೇದಿ ಕಂಡು ಬಂದರೂ ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ ಆರೋಪ ಮಾಡಲಾಗಿದೆ. ಶಕ್ತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುಧಾಂಶು ಹಾಸ್ಟೆಲ್ ಗೆ ಭೇಟಿ ನೀಡಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಆರೋಗ್ಯಾಧಿಕಾರಿ ಸೂಚನೆ ನಿರ್ಲಕ್ಷಿಸಿರುವ ಬಗ್ಗೆ ಪ್ರಕರಣದಲ್ಲಿ ಉಲ್ಲೇಖ ಮಾಡಲಾಗಿದೆ. 

Mangaluru: ಫುಡ್ ಪಾಯ್ಸನ್‌ಗೆ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಆಡಳಿತ ಮಂಡಳಿ: ಸಿಟಿ ನರ್ಸಿಂಗ್ ಕಾಲೇಜು ಮತ್ತು ಸಿಟಿ ಹಾಸ್ಪಿಟಲ್ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಜಿಲ್ಲಾಡಳಿತಕ್ಕೆ ಸೂಕ್ತ ಮಾಹಿತಿ ನೀಡದೇ ನಿರ್ಲಕ್ಷ್ಯ ಆರೋಪ ವ್ಯಕ್ತವಾಗಿದೆ. ಒಟ್ಟು 231 ವಿದ್ಯಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದರು.‌ ಇವರಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 116 ವಿದ್ಯಾರ್ಥಿಗಳು ಸದ್ಯ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 115 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹಾಸ್ಟೆಲ್‌ಗೆ ಪ್ರತ್ಯೇಕ ವೈದ್ಯಕೀಯ ತಂಡ ನಿಯೋಜನೆ: ಆಸ್ಪತ್ರೆಗೆ ಭೇಟಿ ನೀಡಿರುವ ಅಧಿಕಾರಿಗಳ ತಂಡ ಈಗಾಗಲೇ ವಿದ್ಯಾರ್ಥಿಗಳು ವಾಸಿಸುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ವಿಶೇಷ ವೈದ್ಯಕೀಯ ತಂಡವನ್ನು ಅಂಬುಲೆನ್ಸ್ ಸಹಿತ ಕಳುಹಿಸಿ ಉಳಿದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದೆ. ಆಹಾರ ಸುರಕ್ಷತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್, ಜಂಟಿಯಾಗಿ ಆಹಾರ ತಯಾರಿಸುವ ಅಡುಗೆ ಕೋಣೆಗೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿ ಆಡುಗೆ ಮಾಡಿ ಇಟ್ಟಿದ್ದ ವಿವಿಧ ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. 

ಇನ್ನು ಹಾಸ್ಟೆಲ್‌ನಲ್ಲಿ ಪೆಟ್ಟಿಗೆಯಲ್ಲಿಟ್ಟ ಮಾಂಸ ಹಾಗೂ ಇತರೆ ಆಹಾರ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ನೀರಿನ ಮಾದರಿ ಹಾಗೂ ತಕ್ಷಣದಿಂದ ಅಡುಗೆ ಮನೆಯಲ್ಲಿ ಆಹಾರ ತಯಾರಿಸದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಮುಂದಿನ ಆದೇಶದವರಗೆ ನಿರ್ಬಂಧಿಸಲಾಗಿದೆ. ಜೊತೆಗೆ ಮಕ್ಕಳಿಗೆ ಶುದ್ಧ ಆಹಾರ ಹಾಗೂ ನೀರನ್ನು ಪೂರೈಸುವಂತೆ ಸೂಚಿಸಲಾಗಿದೆ.

100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ:  
ಮಂಗಳೂರು (ಫೆ.06): ನಗರದ ಸಿಟಿ ನರ್ಸಿಂಗ್ ಹಾಸ್ಟೆಲ್‌ನಲ್ಲಿ ಫುಡ್ ಪಾಯಿಸನ್ ಸಂಭವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಶಕ್ತಿ‌ನಗರ ಬಳಿಯ ಸಿಟಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ ಸಿಟಿ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದು, ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ 137 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಫುಡ್ ಪಾಯಿಸನ್‌ನಿಂದ ವಾಂತಿ, ಹೊಟ್ಟೆ ನೋವು ಮತ್ತು ಬೇಧಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಬಸ್ಸು ಹಾಗೂ ಅಂಬ್ಯುಲೆನ್ಸ್ ಗಳ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಗರದ ಕದ್ರಿ ಬಳಿಯ ಸಿಟಿ ಆಸ್ಪತ್ರೆ, ಕೆಎಂಸಿ, ಫಾದರ್ ಮುಲ್ಲರ್, ಎಜೆ ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾಲೇಜು ಆಡಳಿತ ಮಂಡಳಿ ವಿರುದ್ದ ನಿರ್ಲಕ್ಷ್ಯ ಆರೋಪ ವ್ಯಕ್ತವಾಗಿದ್ದು, ಆಸ್ಪತ್ರೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ. 

Follow Us:
Download App:
  • android
  • ios