ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿದೆ.
ಬೆಂಗಳೂರು : ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿದೆ.
ಅಷ್ಟೇ ಅಲ್ಲ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೂ ನಿರ್ದೇಶಿಸಿದೆ ಎನ್ನುತ್ತವೆ ಉನ್ನತ ಮೂಲಗಳು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ದಾಢಸಿ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ ಹೈಕಮಾಂಡ್ ಈ ರೀತಿ ಮೌನ ವಹಿಸಿರುವುದರ ಹಿಂದೆ ಬಿಹಾರ ಚುನಾವಣೆಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ.
ಅದು ಸಿದ್ದರಾಮಯ್ಯ ಅವರ ಹೇಳಿಕೆ. ಉಪ ಮುಖ್ಯಮಂತ್ರಿಯಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೆ ಅದು ರಾಷ್ಟ್ರಮಟ್ಟದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆಯಿದ್ದು, ಈ ಹಂತದಲ್ಲಿ ಒಬಿಸಿ ಸಮುದಾಯದ ನಾಯಕರೊಬ್ಬರ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳುವ ಮನಸ್ಸು ಹೈಕಮಾಂಡ್‌ಗೆ ಇಲ್ಲ.ಹೀಗಾಗಿ, ಅಕ್ಟೋಬರ್‌ವರೆಗೆ ಈ ಬಗ್ಗೆ ಹೈಕಮಾಂಡ್ ಮೌನ ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಮೂಲಗಳು.
ಡಿ.ಕೆ. ಶಿವಕುಮಾರ್ ಅವರ ಸಂಯಮದ ಪ್ರತಿಕ್ರಿಯೆ
ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆ, ಜವಾಬ್ದಾರಿ ನೀಡಿದೆ. ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಉಳಿದ ಯಾವ ವಿಚಾರಗಳಿಗೂ ನಾನು ಪ್ರತಿಕ್ರಿಯಿಸಲ್ಲ. ನನ್ನ ಗಮನವೇನಿದ್ದರೂ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಕಾಪಾಡುವುದರ ಕಡೆಗಿದೆ.
ಅಧಿಕಾರ ಹಂಚಿಕೆ ಒಪ್ಪಂದವಾಗಿಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಘಂಟಾಘೋಷದ ನುಡಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಯಮದ ಪ್ರತಿಕ್ರಿಯೆಯಿದು.
ಯಾವ ವಿಚಾರವಾದರೂ ಕಡ್ಡಿ ಮುರಿದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಸೇರಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅತ್ಯಂತ ಹಿಡಿತದ ಪ್ರತಿಕ್ರಿಯೆ ನೀಡಿದರು. ಜತೆಗೆ, ಪಕ್ಷ ಇದ್ದರಷ್ಟೇ ನಾನು. ಪಕ್ಷ ಇಲ್ಲದಿದ್ದರೆ ನಾನಿಲ್ಲ ಎಂದು ನುಡಿದರು.
ಇನ್ನು ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲು ಶಿವಕುಮಾರ್ ನಿರಾಕರಿಸಿದರು. ಶುಕ್ರವಾರ ಒಂದೇ ದಿನ ನಾಲ್ಕೈದು ಬಾರಿ ಮಾಧ್ಯಮಗಳಿಗೆ ಬೇರೆ ಬೇರೆ ವಿಚಾರಗಳಿಗೆ ಪ್ರತಿಕ್ರಿಯಿಸಿದರೂ, ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಯವಾಗಿಯೇ ತಿರಸ್ಕರಿಸಿದರು.
‘ಮಾಧ್ಯಮದವರು ಹೇಗೆ ತಿರುಗಿಸಿ ಕೇಳಿದರೂ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಮಾಧ್ಯಮಗಳ ಪ್ರಶ್ನೆಗೆ ಬಲಿಯಾಗುವುದಿಲ್ಲ. ಪಕ್ಷ ನನಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಜವಾಬ್ದಾರಿ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಧೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷದಿಂದ ಸ್ವೀಕರಿಸಿದ್ದೇವೆ. ಪಕ್ಷ ಸಂಘಟನೆಯತ್ತ ಹೆಚ್ಚಿನ ಗಮನಹರಿಸಿದ್ದೇನೆ. ಅವುಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.
