ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಅನಗತ್ಯ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಐಟಿ, ಇಡಿ ದಾಳಿಗಳನ್ನು ಕೇಂದ್ರದ ರಾಜಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಜುಲೈ.11): ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಅಭಿಪ್ರಾಯ ಸಂಗ್ರಹವೇ ಆಗಿಲ್ಲ, ಹೀಗಿರುವಾಗ ಸಂಖ್ಯಾಬಲದ ಚರ್ಚೆ ಯಾಕೆ? ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಐದು ವರ್ಷ ನಾನೇ ಸಿಎಂ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಿದ್ದರಾಮಯ್ಯನವರು ಹೈಕಮಾಂಡ್‌ನ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಡಿಕೆ ಶಿವಕುಮಾರ್ ಕೂಡ ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯ ಬಳಿಕ ನಾಯಕತ್ವ ಬದಲಾವಣೆಯಂತಹ ವಿಷಯಗಳ ಬಗ್ಗೆ ಯಾವುದೇ ಚರ್ಚೆಯಿಲ್ಲ ಎಂದರು.
ಕೆಲವು ಶಾಸಕರ ಅಸಮಾಧಾನ ಮತ್ತು ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹ ವಿಷಯಗಳನ್ನು ಮಾಧ್ಯಮದಲ್ಲಿ ಚರ್ಚಿಸದೇ, ಸೂಕ್ತ ವೇದಿಕೆಯಲ್ಲಿ ಮಾತನಾಡಬೇಕು. ಮಾಧ್ಯಮದವರು ಪ್ರಶ್ನೆ ಕೇಳದಿದ್ದರೆ, ಈ ಚರ್ಚೆಯೇ ಬರುವುದಿಲ್ಲ, ಅವರೇ ಸುಮ್ಮನಾಗುತ್ತದೆ ಎಂದರು.
ಐಟಿ, ಇಡಿ ಕೇಂದ್ರದ ಟೂಲ್ ಕಿಟ್:
ಸುಬ್ಬಾರೆಡ್ಡಿ ಮೇಲೆ ಐಟಿ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರವು ಐಟಿ ಮತ್ತು ಇಡಿ ಇಲಾಖೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇವರು ಎಷ್ಟು ಕೇಸ್‌ಗಳನ್ನು ದಾಖಲಿಸಿ, ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿದ್ದಾರೆ? ಬಿಜೆಪಿ ನಾಯಕರ ಮೇಲೆ ಐಟಿ ದಾಳಿಗಳು ಯಾಕೆ ನಡೆಯುತ್ತಿಲ್ಲ? ಎಂದು ಪ್ರಶ್ನಿಸಿದರು.
ವೈಎಸ್‌ಆರ್‌ಸಿಪಿ ನಾಯಕ ನಲ್ಲಾಪುರೆಡ್ಡಿ ಶ್ರೀನಿವಾಸ್ ರೆಡ್ಡಿ (ಸುಬ್ಬಾರೆಡ್ಡಿ) ಮೇಲಿನ ಐಟಿ ದಾಳಿಗೆ ಪ್ರತಿಕ್ರಿಯಿಸಿದ ಖರ್ಗೆ, ಈ ದಾಳಿ ಕೇಂದ್ರದ ರಾಜಕೀಯ ಕೈಗೊಂಬೆ ತಂತ್ರದ ಭಾಗವಾಗಿದೆ ಎಂದು ದೂರಿದರು. ಇಂತಹ ದಾಳಿಗಳು ರಾಜಕೀಯ ಉದ್ದೇಶದಿಂದ ನಡೆಯುತ್ತಿವೆ. ಬಿಜೆಪಿ ನಾಯಕರ ವಿರುದ್ಧ ಇಂತಹ ಕ್ರಮಗಳು ಯಾಕೆ ತೆಗೆದುಕೊಳ್ಳುವುದಿಲ್ಲ? ಎಂದು ಅವರು ಕಿಡಿಕಾರಿದರು.
ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯನ್ನು ಖರ್ಗೆ ತಳ್ಳಿಹಾಕಿದ್ದು, ರಾಜ್ಯ ಸರ್ಕಾರದ ಸ್ಥಿರತೆ ಮತ್ತು ಹೈಕಮಾಂಡ್‌ನ ತೀರ್ಮಾನಕ್ಕೆ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
