ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ನಿರ್ಧಾರ ಫೈನಲ್: ಸಿದ್ದು ಸ್ಪಷ್ಟನೆ
ಮುಂದಿನ 5 ವರ್ಷ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುತ್ತದೆ, ನಾನೇ ಮುಖ್ಯಮಂತ್ರಿ, ಮುಂದೆಯೂ ಮುಂದುವರಿಯುತ್ತೇನೆ ಎಂದಿದ್ದ ಸಿದ್ದರಾಮಯ್ಯ ಇದೀಗ, ’’ನಮ್ಮದು ಹೈಕಮಾಂಡ್ ಪಕ್ಷ, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೋ ನಾನು ಅದನ್ನು ಕೇಳುತ್ತೇನೆ’’ ಎಂದು ಸ್ಪಷ್ಟನೆ ನೀಡಿದ್ದಾರೆ.
ಗದಗ (ನ.04): ಮುಂದಿನ 5 ವರ್ಷ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುತ್ತದೆ, ನಾನೇ ಮುಖ್ಯಮಂತ್ರಿ, ಮುಂದೆಯೂ ಮುಂದುವರಿಯುತ್ತೇನೆ ಎಂದಿದ್ದ ಸಿದ್ದರಾಮಯ್ಯ ಇದೀಗ, ’’ನಮ್ಮದು ಹೈಕಮಾಂಡ್ ಪಕ್ಷ, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೋ ನಾನು ಅದನ್ನು ಕೇಳುತ್ತೇನೆ’’ ಎಂದು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುವೆ ಎಂದು ಹಂಪಿಯಲ್ಲಿ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಶುಕ್ರವಾರ, ‘ನೋಡ್ರೀ... ನಾನೊಂದು ಹೇಳ್ತೇನೆ, ನೀವೊಂದು ಬರೆಯುತ್ತೀರಿ.
ನಾನು ನಿನ್ನೆ ಏನು ಹೇಳಿದ್ದೆ, ನೀವು ಬರೆದಿದ್ದು ಏನು? ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತಾರೆ ಅದಕ್ಕೆ ನಾನು ಬದ್ಧ. ನಮ್ಮದು ಹೈಕಮಾಂಡ್ ಪಕ್ಷ ಎಂದಿದ್ದೆ. ಆದರೆ ನೀವು ಬರೆದಿದ್ದೇ ಬೇರೆ’ ಎಂದು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದರು.ಇದೇ ವೇಳೆ ಪತ್ರಕರ್ತರು ಮತ್ತೆ ಮುಖ್ಯಮಂತ್ರಿ ಗಾದಿ ಗೊಂದಲ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಬದಲಾವಣೆ ಕುರಿತಾಗಲಿ, ಡಾ.ಜಿ.ಪರಮೇಶ್ವರ್ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಬಗೆಗಾಗಲಿ ಪ್ರತಿಕ್ರಿಯಿಸಲ್ಲ ಎಂದರು.
ಸಿದ್ದು 5 ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣ
5 ವರ್ಷ ನಮ್ದೇ ಸರ್ಕಾರ, ನಾನೇ ಸಿಎಂ ಆಗಿರುವೆ: ಐದು ವರ್ಷ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರಲಿದೆ. ಈಗ ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸರ್ಕಾರ ಪತನ ಆಗಲಿದೆ, ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂಬ ಹೇಳಿಕೆಗಳಿಂದ ಸೃಷ್ಟಿಯಾಗಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ವರ್ಷ ಸುಭದ್ರ ಅಧಿಕಾರ ನೀಡಲಿದೆ. ಮುಂದೆಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಇದೇ ವೇಳೆ ಸರ್ಕಾರ ಪತನ ಆಗಲಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತ ಪ್ರಶ್ನೆಗೆ, ರಮೇಶ್ ಜಾರಕಿಹೊಳಿ (ಬಿಜೆಪಿಯವರು) ಸೋತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಿಜೆಪಿಯವರು ಅಧಿಕಾರ ಇಲ್ಲದೆ ಭ್ರಮನಿರಸನ ಆಗಿದ್ದಾರೆ. ಆಪರೇಷನ್ ಕಮಲ ಮಾಡಿ, ಒಮ್ಮೆ ಸಕ್ಸಸ್ ಆಗಿದ್ದಾರೆ. ಇದೀಗ ಮತ್ತೆ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ. ಆದರೆ ಈ ಬಾರಿ ಅವರು ಯಶಸ್ವಿಯಾಗಲ್ಲ. ರಾಜ್ಯದ ಜನ 136 ಸೀಟು ಕೊಟ್ಟು ನಮ್ಮನ್ನು ಗೆಲ್ಲಿಸಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದರು.
ಹೈಕಮಾಂಡ್ ನೀನು ಸಿಎಂ ಆಗು ಅಂದರೇ ನಾನು ಸಿದ್ಧನಿದ್ದೇನೆ: ಸಚಿವ ಪ್ರಿಯಾಂಕ್ ಖರ್ಗೆ
ನಮ್ಮದು ರಾಷ್ಟ್ರೀಯ ಪಕ್ಷ. ಏನೇ ತೀರ್ಮಾನ ಮಾಡಿದರೂ ಅದು ಹೈಕಮಾಂಡ್ ಮಟ್ಟದಲ್ಲೇ ಆಗಬೇಕು. ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತೂ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೆಲಸಕ್ಕೆ ಬಾರದವರ ಹೇಳಿಕೆ: ಏತನ್ಮಧ್ಯೆ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾರೋ ಕೆಲಸಕ್ಕೆ ಬಾರದವರು, ಆ ರೀತಿ ಹೇಳುತ್ತಾರೆ. ಇಂಥ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸುದ್ದಿಗಾರರಿಗೆ ಹೇಳಿದರು.