Asianet Suvarna News Asianet Suvarna News

ಸಿದ್ದು 5 ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣ

ರಾಜಕಾರಣ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈಗಿನ ರಾಜಕಾರಣ ಐದು ವರ್ಷ ನಾನೇ ಸಿಎಂ ಎಂದು ಹೇಳುವಂತಹ ತಿರುವಿನಲ್ಲಿ ನಿಂತಿದೆ. ಇದೊಂದು ಪ್ರಜಾಪ್ರಭುತ್ವದ ಅನಾರೋಗ್ಯಕರ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಷಾದಿಸಿದರು. 

It is not right to say that I am the CM after 5 years Says SM Krishna gvd
Author
First Published Nov 4, 2023, 10:31 AM IST

ಮದ್ದೂರು (ನ.04): ರಾಜಕಾರಣ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈಗಿನ ರಾಜಕಾರಣ ಐದು ವರ್ಷ ನಾನೇ ಸಿಎಂ ಎಂದು ಹೇಳುವಂತಹ ತಿರುವಿನಲ್ಲಿ ನಿಂತಿದೆ. ಇದೊಂದು ಪ್ರಜಾಪ್ರಭುತ್ವದ ಅನಾರೋಗ್ಯಕರ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಷಾದಿಸಿದರು. ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ನಾನೇ ಸಿಎಂ ಎಂದು ಹೇಳುವ ಪ್ರಶ್ನೆ ಉದ್ಭವಿಸಬೇಕಿರಲಿಲ್ಲ. ಯೋಗ್ಯತೆ, ಸಾಧನೆ ಮತ್ತು ತಪಸ್ಸು ಇವುಗಳ ಆಧಾರದ ಮೇಲೆ ನಾಯಕತ್ವ ನಿರ್ಧಾರವಾಗುತ್ತದೆ. 

ಸಾಮಾಜಿಕ ಕಳಕಳಿ ಹೊಂದಿರುವಂತ ಹಾಗೂ ನ್ಯಾಯ ಸಮ್ಮತ ಮನೋಭಾವ ಹೊಂದಿರುವಂತ ವ್ಯಕ್ತಿಗಳು ರಾಜ್ಯದ ಮುಖ್ಯಮಂತ್ರಿಯಾಗಬೇಕೇ ಹೊರತು ಜಾತಿ ಆಧಾರದ ಮೇಲೆ ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಅಣಕ ಎಂದು ವ್ಯಂಗ್ಯವಾಡಿದರು. ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ. ಎಲ್ಲಿಯವರೆಗೆ ಕೊಡುವವರು ಮತ್ತು ತೆಗೆದುಕೊಳ್ಳುವವರು ತಮ್ಮ ಅಂತಃಕರಣ ಶುದ್ದಿಯಿಂದ ಹೆಜ್ಜೆಯನ್ನು ಇಡುವರೋ ಅದರ ಆಧಾರದ ಮೇಲೆ ಪ್ರಜಾಪ್ರಭುತ್ವದ ಭವಿಷ್ಯ ನಿಂತಿದೆ. ರಾಜಕಾರಣಿಗಳಾದವರು ತಮ್ಮ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರೆದಾಗ ದ್ವಂದ್ವಗಳಿಗೆ ಪರಿಹಾರ ಕಾಣಲು ಸಾಧ್ಯ. 

ವಿದ್ಯಾದಾನ ಮಾಡ್ಬೇಕಾಗಿದ್ದ ಶಿಕ್ಷಕನಿಂದ ಶಾಲೆಯಲ್ಲೇ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ

ಅಧಿಕಾರದ ಅಹಂನಲ್ಲಿ ಯಾರೂ ರಾಜಕೀಯ ಮೌಲ್ಯಗಳನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ನಾಲ್ಕು ರಾಜ್ಯಗಳ ರೈತ ಮುಖಂಡರು ಒಟ್ಟಿಗೆ ಸಭೆ ಸೇರಿ ಚರ್ಚಿಸಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಪ್ರಸ್ತುತ ರಾಜ್ಯ ಸರ್ಕಾರ ಅನಿವಾರ್ಯ ಹಾಗೂ ವಿಧಿ ಇಲ್ಲದೆ ತಮಿಳುನಾಡಿಗೆ ನೀರು ಬಿಡಬೇಕಾದ ಆದೇಶವನ್ನು ಅನುಸರಿಸಬೇಕಿದೆ ಎಂದರು. ನಾನು ರಾಜಕೀಯದಿಂದ ನಿವೃತ್ತಿ ಹೊಂದಿದ್ದೇನೆ. 

ಮುಂದಿನ ಯಾವ ಚುನಾವಣೆಯಲ್ಲೂ ಯಾವುದೇ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ನಿವೃತ್ತಿ ಜೀವನ ಸುಖಮಯವಾಗಿದೆ. ಆಯಾಸ, ಒತ್ತಡ ಎನ್ನುವುದು ಇಲ್ಲವೇ ಇಲ್ಲ. ನಿತ್ಯವೂ ನಿರಾಳವಾಗಿ ಪತ್ರಿಕೆಗಳನ್ನು ಓದುತ್ತೇನೆ. ಟಿವಿಗಳಲ್ಲಿ ಬರುವ ಸುದ್ದಿ ಸ್ವಾರಸ್ಯಗಳನ್ನು ನೋಡುತ್ತಾ ರಾಜಕೀಯ ಜಂಜಾಟಗಳಿಂದ ದೂರವಿದ್ದು, ಆರಾಮವಾಗಿ ಕಾಲ ಕಳೆಯುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮುಖಂಡರಾದ ಕೆ.ಆರ್.ಮಹೇಶ್, ನಾಗರಾಜು, ಸಿ.ನಾಗೇಗೌಡ, ವಿಜಯ್, ಶಿವಲಿಂಗಯ್ಯ, ತಮ್ಮಣ್ಣ ಇದ್ದರು.

 

ಬಹಿಷ್ಕಾರದಿಂದ ಬಳಲುತ್ತಿರುವ ಕಾಡಸಿದ್ದರು: ಆಧುನಿಕತೆಯಲ್ಲಿಯೂ ಇದೆಂಥಾ ಅವ್ಯವಸ್ಥೆ!

ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ. ನನ್ನ ಮಗಳಿಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಅವಳು ಮತ್ತು ಅವಳ ಮಕ್ಕಳು ಅವರದ್ದೇ ಆದ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರನ್ನೂ ಬಲವಂತವಾಗಿ ರಾಜಕಾರಣಕ್ಕೆ ಕರೆತರುವುದಿಲ್ಲ. ರಾಜಕಾರಣ ಪ್ರವೇಶ ಮಾಡಬೇಕೆಂಬುದು ಅವರಲ್ಲೇ ಹುಟ್ಟಬೇಕು. ರಾಜಕಾರಣಕ್ಕೆ ಬರುವಂತೆ ನಾನು ಸಲಹೆಯನ್ನು ಅಥವಾ ಒತ್ತಡವನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios