ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮದ್ದೂರು (ಮೇ.09): ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಬೆಂಗಳೂರಿಂದ ತಾಲೂಕಿನ ಗೆಜ್ಜೆಲಗೆರೆ ಗ್ರಾಮದ ಸಮೀಪದ ಹೆಲಿಪ್ಯಾಡ್ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುವ ಮೂಲಕ ಭಯೋತ್ಪಾದಕರ ಅಡಗು ತಾಣಗಳನ್ನು ಧ್ವಂಸಗೊಳಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಜಲಾಶಯಗಳು, ರೈಲು ನಿಲ್ದಾಣ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಜೊತೆಗೆ ರಾಜ್ಯಾದ್ಯಂತ ಇರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡಲಾಗುತ್ತಿದೆ. ಕೆಲವರು ಮೈಸೂರಿನ ನ್ಯಾಯಾಲಯದ ಮರೆ ಹೋಗಿದ್ದಾರೆ. ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ನಮ್ಮ ದೇಶದ ಸೈನಿಕರ ಕ್ಷೇಮ ಮತ್ತು ಮುಂದೆ ನಡೆಯುವ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಪ್ರಾಣಾಪಾಯ ಆಗದೆ ಗೆಲುವು ಸಿಗಲಿ ಎಂದು ರಾಜ್ಯ ಸರ್ಕಾರದಿಂದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನಡೆಸಲು ಆದೇಶ ಮಾಡಲಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್‌ ತಿರಂಗಾ ಯಾತ್ರೆ: ಅಪರೇಷನ್‌ ಸಿಂದೂರ ಯೋಧರಿಗೆ ಬೆಂಬಲ

ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೀರಾವರಿ ನಿಗಮಗಳಿಗೆ ಜಲಸಂಪನ್ಮೂಲ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯದ ಪ್ರಮುಖ ಜಲಾಶಯಗಳು, ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ದಿನದ 24 ಗಂಟೆಯೂ ತೀವ್ರ ನಿಗಾ ಇಡಲಾಗುತ್ತಿದೆ. ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟಿಗೆ ಗುರುವಾರ ಸಂಜೆಯಿಂದಲೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. 

ಕೇಂದ್ರ ಕೈಗಾರಿಕೆ ಕಾವಲು ಪಡೆಯವರು ಅಣೆಕಟ್ಟಿಗೆ ಭದ್ರತೆ ಒದಗಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂನಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಬೋಟ್‌ ಮೂಲಕ ಡ್ಯಾಂನ ಹಿನ್ನೀರಿನಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಲ್ಲೂ ಭದ್ರತೆ ಬಿಗಿಗೊಳಿಸಲಾಗಿದ್ದು, ದಿನಕ್ಕೆ 5 ಸಲ ಡ್ಯಾಂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಡ್ಯದ ಕೆಆರ್‌ಎಸ್‌ ಜಲಾಶಯಕ್ಕೂ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಬೃಂದಾವನದ ವೀಕ್ಷಣೆಗೆ ಬರುವ ಪ್ರವಾಸಿಗರ ಮೇಲೆ ಪೊಲೀಸರು ತೀವ್ರ ನಿಗಾ ವಹಿಸುತ್ತಿದ್ದಾರೆ. 

ಪ್ರವಾಸಿಗರ ಬ್ಯಾಗ್ ಸಹಿತ ಎಲ್ಲಾ ವಸ್ತುಗಳನ್ನು ಪರೀಕ್ಷಿಸಿ ಒಳಗೆ ಕಳಿಸಲಾಗುತ್ತಿದೆ. ಕೊಡಗಿನ ಹಾರಂಗಿ, ಉತ್ತರ ಕನ್ನಡ ಜಿಲ್ಲೆಯ ಸುಪಾ, ಕದ್ರಾ, ಕೊಡಸಳ್ಳಿ, ಗೇರಸೊಪ್ಪ, ತಟ್ಟಿಹಳ್ಳಗಳಿಗೆ ಡಿಎಆರ್ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲೂ ಭದ್ರತೆ ಬಿಗಿಗೊಳಿಸಲಾಗಿದ್ದು, ಮೆಟಲ್‌ ಡಿಟೆಕ್ಟರ್‌ ಅಳವಡಿಸಿ, ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ, ದರೋಜಿ ಕರಡಿಧಾಮ, ಗುಡೇಕೊಟೆ ಕರಡಿ ಧಾಮ, ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿಯೂ ಪ್ರವಾಸಿಗರ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ದೇಶ, ವಿದೇಶಿ ಪ್ರವಾಸಿಗರಿಗೆ ಭದ್ರತೆ ಒದಗಿಸುವುದಕ್ಕಾಗಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಿಗೆ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಇಂದು ಸಂಪುಟ ಸಭೆ: ಜಾತಿಗಣತಿ ಭವಿಷ್ಯ ನಿರ್ಧಾರ? ವರದಿ ಬಗ್ಗೆ ಸಭೆಯಲ್ಲಿ ಚರ್ಚೆ

ಕೆಲ ಬಾರಿ ಸ್ಥಾವರ, ಜಲಾಶಯಗಳ ಮೇಲೆ ಉಗ್ರರ ದಾಳಿ ಆಗುವ ಸಾಧ್ಯತೆಗಳಿರುತ್ತವೆ. ಅಲ್ಲದೆ, ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ನೀಡಬೇಕಿದೆ. ಜಲಾಶಯಗಳಿಗೆ ಮಾತ್ರವಲ್ಲದೆ, ಬೃಹತ್‌ ಕೈಗಾರಿಕೆ, ವಿದ್ಯುತ್‌ ಸ್ಥಾವರಗಳಿಗೂ ಭದ್ರತೆ ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಎಲ್ಲ ನಿರ್ದೇಶನಗಳನ್ನೂ ಪಾಲಿಸಲಾಗುತ್ತದೆ.
- ಎಂ.ಬಿ.ಪಾಟೀಲ್‌, ಕೈಗಾರಿಕಾ ಸಚಿವ.