ನನಗೆ ಕುಣಿಗಲ್‌ ಮಾತ್ರವಲ್ಲ, ತುಮಕೂರಿನ ಎಲ್ಲ ತಾಲೂಕುಗಳೂ ಮುಖ್ಯ. ಹೇಮಾವತಿ ನದಿ ನೀರಿನ ವಿಚಾರವಾಗಿ ಯಾವುದೇ ತಾಲೂಕುಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು (ಜು.06): ನನಗೆ ಕುಣಿಗಲ್‌ ಮಾತ್ರವಲ್ಲ, ತುಮಕೂರಿನ ಎಲ್ಲ ತಾಲೂಕುಗಳೂ ಮುಖ್ಯ. ಹೇಮಾವತಿ ನದಿ ನೀರಿನ ವಿಚಾರವಾಗಿ ಯಾವುದೇ ತಾಲೂಕುಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್‌ ಕೆನಾಲ್‌ ವಿಚಾರವಾಗಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ. ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದೆ ತುಮಕೂರು ಭಾಗದ ಶಾಸಕರು ತಾಂತ್ರಿಕ ಸಮಿತಿ ರಚಿಸಿ ಎಂದು ಸಲಹೆ ನೀಡಿದ್ದರು. ಅದರಂತೆ ತಾಂತ್ರಿಕ ಸಮಿತಿ ರಚಿಸಿ, ಸಮಿತಿಯಿಂದ ವರದಿ ಬಂದ ನಂತರ ಕಾಮಗಾರಿ ಆರಂಭಿಸಲಾಯಿತು. ಆಗ ಪ್ರತಿಭಟನೆ ನಡೆಸಿದರು.

ಅಲ್ಲದೆ, ಕುಣಿಗಲ್‌ಗೆ ನೀರುಹರಿಸಲು ಪೈಪ್‌ಲೈನ್‌ ಬದಲು ಕಾಲುವೆ ನಿರ್ಮಿಸಿ, ಅದರ ಮೂಲಕ ನೀರು ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಆದರೆ, ಪೈಪ್‌ಲೈನ್‌ ಅಳವಡಿಸುವುದು ಸರ್ಕಾರದ ತಿರ್ಮಾನ ಎಂದರು. ಶುಕ್ರವಾರ ನಡೆಸಲಾದ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಐಐಎಸ್ಸಿ ತಜ್ಞರಿಂದ ಪರಿಶೀಲನೆಗೆ ಶಿಫಾರಸು ಮಾಡಿದ್ದಾರೆ. ಅದಕ್ಕೆ ಒಪ್ಪಿಗೆ ನೀಡಲಾಗಿದೆ. ನಾವು ಕುಣಿಗಲ್‌ ಮಾತ್ರವಲ್ಲ, ಇಡೀ ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಿದೆ. ಅದಕ್ಕೆ ಪೂರಕವಾಗಿ ಯೋನೆ ಸಿದ್ಧಪಡಿಸಿದ್ದೇವೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೀರು ಹಂಚಲಾಗುವುದು. ಜಿಲ್ಲೆಯ ಎಲ್ಲ ತಾಲೂಕಿನ ಹಿತ ಕಾಯಲಾಗುವುದು ಎಂದು ಹೇಳಿದರು.

ಹೇಳದೇ ಬಂದು ಕಾಮಗಾರಿ ಪರಿಶೀಲಿಸುವೆ: ಭದ್ರಾ ಡ್ಯಾಂ ಬಲದಂಡೆ ಬಳಿ ಕಾಮಗಾರಿಗೆ 2020ರಲ್ಲೇ ಭೂಮಿಪೂಜೆ ಮಾಡಿದ್ದು, ಈಗ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ವಿವಾದ ಎದ್ದಿದೆ. ಈ ಹಿನ್ನೆಲೆ ಶೀಘ್ರವೇ ನಾನೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರು, ಮುಖಂಡರ ನಿಯೋಗದಿಂದ ಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಕೈಗೊಂಡ ಕಾಮಗಾರಿ ಬಗ್ಗೆ ಅಹವಾಲು ಆಲಿಸಿ ಅವರು ಮಾತನಾಡಿದರು. ಭದ್ರಾ ಡ್ಯಾಂಗೆ ನಾನು ಯಾರಿಗೂ ಹೇಳದೇ, ದಿಢೀರನೇ ಬರುತ್ತೇನೆ. ಯಾವಾಗ ಬರುತ್ತೇನೆ, ಹೇಗೆ ಬರುತ್ತೇನೆಂದು ಯಾರಿಗೂ ಸಹ ತಿಳಿಸಲ್ಲ ಎಂದಿದ್ದಾರೆ.

ನಮಗೆ ಹೇಗೆ ಕೆಟ್ಟ ಹೆಸರು ಬರಲು ಸಾಧ್ಯ?: ನಾನು ಪರಿಶೀಲನೆಗೆ ಬರುವ ಸ್ವಲ್ಪ ಮುಂಚೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕರಿಗೆ ತಿಳಿಸುತ್ತೇನೆ. ಆದರೆ, ನೀವ್ಯಾರೂ ಅಲ್ಲಿಗೆ ಬರುವುದು ಬೇಡ. ಮುಂಚೆಯೇ ತಿಳಿಸಿಬಂದರೆ ಅಧಿಕಾರಿಗಳೂ ಎಚ್ಚೆತ್ತುಕೊಳ್ಳುತ್ತಾರೆ. ಈಗ ಕಾಮಗಾರಿ ವಿಚಾರ ನಮ್ಮ ಇಲಾಖೆಗೆ ಬರುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ ಹೋಗಿದೆ. ಬಹುಗ್ರಾಮ ಯೋಜನೆಗಳಡಿ ನೀರೊದಗಿಸಲು ಬಲದಂಡೆ ನಾಲೆಯ ಬಳಿ ಕಾಮಗಾರಿ ಕೈಗೊಳ್ಳುವ ಬಗ್ಗೆ 2020ರಲ್ಲೇ ಸಚಿವ ಸಂಪುಟದಲ್ಲೇ ನಿರ್ಧಾರ ಕೈಗೊಂಡು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಗುದ್ದಲಿ ಪೂಜೆ ಮಾಡಲಾಗಿದೆ. ಹಿಂದಿನ ಸರ್ಕಾರ ಮಾಡಿದ್ದ ಕಾಮಗಾರಿ ಅದು. ವಾಸ್ತವ ಹೀಗಿರುವಾಗ ನಮಗೆ ಹೇಗೆ ಕೆಟ್ಟ ಹೆಸರು ಬರಲು ಸಾಧ್ಯ ಎಂದು ಡಿಕೆಶಿ ಪ್ರಶ್ನಿಸಿದರು.