ಕುಣಿಗಲ್ ಮತ್ತು ಮಾಗಡಿಗೆ ಕುಡಿಯುವ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಶೀಲನೆ ನಡೆಸಬೇಕು.
ಬೆಂಗಳೂರು (ಜು.05): ಕುಣಿಗಲ್ ಮತ್ತು ಮಾಗಡಿಗೆ ಕುಡಿಯುವ ನೀರು ಪೂರೈಸಲು ಅನುಷ್ಠಾನಗೊಳಿಸಲಾಗುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅನುಷ್ಠಾನದಲ್ಲಿನ ತಾಂತ್ರಿಕ ದೋಷಗಳ ಕುರಿತು ಮೊದಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಶೀಲನೆ ನಡೆಸಬೇಕು. ನಂತರ ಅಗತ್ಯವಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸದರಿ ಯೋಜನೆಗೆ ತುಮಕೂರು ಭಾಗದ ರೈತರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಯೋಜನೆ ವ್ಯಾಪ್ತಿಯ ವಿಧಾನಸಭೆ ಮತ್ತು ಲೋಕಸಭೆ ಸದಸ್ಯರೊಂದಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಸುರೇಶ್ ಗೌಡ, ಎಂ.ಟಿ. ಕೃಷ್ಣಪ್ಪ ಸೇರಿ ಇತರರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ವಿರೋಧಕ್ಕೆ ಕಾರಣಗಳನ್ನು ವಿವರಿಸಿದರು. ಪ್ರಮುಖವಾಗಿ ತುಮಕೂರಿಗೆ ನೀರು ಪೂರೈಸುವ ಹೇಮಾವತಿ ಕೆನಾಲ್‌ನಿಂದ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ಲಿಂಕ್ ಕೆನಾಲ್ ನಿರ್ಮಿಸಲಾಗುತ್ತಿದೆ. ಆದರೆ, ಹಾಲಿ ಇರುವ ಕೆನಾಲ್‌ಗಿಂತ ಕೆಳಭಾಗದಲ್ಲಿ (ಭೂಮಿ ಮೇಲ್ಮೈನ 10 ಅಡಿ ಆಳದಲ್ಲಿ) ನಿರ್ಮಿಸಲಾಗುತ್ತಿದೆ. ಇದರಿಂದಾಗಿ ನೀರು ಕುಣಿಗಲ್‌ಗೆ ಹೆಚ್ಚಾಗಿ ನೀರು ಹರಿಯಲಿದ್ದು, ಲಿಂಕ್ ಕೆನಾಲ್‌ಗಿಂತ ಮುಂದಿನ ಪ್ರದೇಶಗಳಿಗೆ ಕಡಿಮೆ ನೀರು ಪೂರೈಕೆಯಾಗಲಿದೆ ಎಂದರು.
ತಜ್ಞರ ಸಮಿತಿ ರಚನೆಗೆ ಒತ್ತಾಯ: ಅಧ್ಯಯನ ನಡೆಸಲು ಐಐಎಸ್ಸಿ, ಐಐಟಿಯ ತಜ್ಞರ ಸಮಿತಿ ರಚಿಸಬೇಕು. ಸಮಿತಿ ನೀಡುವ ವರದಿ ಆಧರಿಸಿ ಲಿಂಕ್ ಕೆನಾಲ್ ನಿರ್ಮಾಣ ಕೈಗೊಳ್ಳುವಂತೆ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದರು. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ಮೊದಲಿಗೆ ನಾನು ಕಾಮಗಾರಿ ಸ್ಥಳ ಪರಿಶೀಲಿಸುತ್ತೇನೆ. ಆ ವೇಳೆ ಯಾರನ್ನೂ ಕರೆದುಕೊಂಡು ಹೋಗುವುದಿಲ್ಲ. ಕಾಮಗಾರಿ ಸರಿಯಾದ ರೀತಿ ನಡೆಯದಿದ್ದರೆ, ತುಮಕೂರು ಜಿಲ್ಲೆಗೆ ಅನ್ಯಾಯವಾಗುವಂತಿದ್ದರೆ ಐಐಎಸ್ಸಿ, ಐಐಟಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದರು. ಅದಕ್ಕೆ ಎಲ್ಲ ಜನಪ್ರತಿನಿಧಿಗಳು ಸಮ್ಮತಿಸಿದರು.
ಕಟ್ಟಡ ನಕ್ಷೆ ಇಲ್ಲದೆ ಮನೆ ಕಟ್ಟಬೇಡಿ: ಕಟ್ಟಡ ನಕ್ಷೆ ಪಡೆಯದ, ಸ್ವಾಧೀನ ಪ್ರಮಾಣಪತ್ರವಿಲ್ಲದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಆದೇಶದಿಂದ ಜನರಿಗೆ ಎದುರಾಗುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ. ಅದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಲಿದೆ. ಸದ್ಯ ರಾಜ್ಯದಲ್ಲಿ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಪಡೆಯದೇ ಮನೆ ಕಟ್ಟಿಕೊಂಡಿರುವ ಮಾಹಿತಿಯಿದೆ.
ಅವರು ವಿದ್ಯುತ್ ಮತ್ತು ನೀರು ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆಲ್ಲ ಇದೀಗ ವಿದ್ಯುತ್ ಮತ್ತು ನೀರು ಸಂಪರ್ಕ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಆದೇಶ ವಿಚಾರದಲ್ಲಿ ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದೇನೆ ಎಂದು ಹೇಳಿದರು. ಕೆಲವರು ಈಗಾಗಲೇ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ಠೇವಣಿ ಪಾವತಿಸಿದ್ದಾರೆ. ಆ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಈ ವಿಚಾರವಾಗಿ ಯಾವ ರೀತಿ ಬಗೆಹರಿಸಲಿದ್ದಾರೆ ಎಂಬ ಮಾಹಿತಿ ಪಡೆಯುತ್ತೇವೆ. ಇನ್ನು ಮುಂದೆ ಕಟ್ಟಡ ನಕ್ಷೆ ಪಡೆಯದೆ ಯಾರೂ ಮನೆ ನಿರ್ಮಿಸಬೇಡಿ. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆ ಸಾಹಸಕ್ಕೆ ಕೈ ಹಾಕಬಾರದು. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದರೆ ಸಕ್ರಮ ಮಾಡುವುದು ಕಷ್ಟವಾಗಲಿದೆ ಎಂದು ತಿಳಿಸಿದರು.
