ಬೆಂಗಳೂರು, (ಅ.8): ಆರ್‌.ಆರ್. ನಗರ ಉಪಚುನಾವಣೆ ಟಿಕೆಟ್‌ಗಾಗಿ ಬಿಜೆಪಿ ಭಾರೀ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವ ಮುನಿರತ್ನ ಅವರಿಗೆ ಟಿಕೆಟ್ ಸಿಗುತ್ತೋ- ಇಲ್ವೋ ಎನ್ನುವ ಆತಂಕ ಶುರುವಾಗಿದೆ.

 ಒಂದೊಮ್ಮೆ ತಮಗೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಜೆಡಿಎಸ್ ಸೇರ್ಪಡೆಗೊಂಡು ಉಪ ಚುನಾವಣೆಗೆ ಕಣಕ್ಕಿಳಿಯುವ ಕುರಿತು ಮುನಿರತ್ನ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

RR ನಗರ, ಶಿರಾ ಬೈ ಎಲೆಕ್ಷನ್: ಬಿಜೆಪಿಗಿಂತ ಒಂದೆಜ್ಜೆ ಮುಂದೆ ಹೋದ ಕಾಂಗ್ರೆಸ್

ಮುನಿರತ್ನಗೆ ಬಿಜೆಪಿ ಟಿಕೆಟ್ ಸಿಗುವ ಬಗ್ಗೆ ಇನ್ನೂ ಖಾತರಿ ಇಲ್ಲ. ಅದಕ್ಕೆ ಕಾರಣ ಬಿಜೆಪಿ ರಾಜ್ಯ ಘಟಕ ಪಕ್ಷದ ವರಿಷ್ಟರಿಗೆ ಕಳುಹಿಸಿರುವ ಸಂಭಾವ್ಯ ಪಟ್ಟಿಯಲ್ಲಿ ಮುನಿರತ್ನ ಜೊತೆಗೆ ತುಳಸಿ ಮುನಿರಾಜುಗೌಡ ಅವರ ಹೆಸರು ಸೇರ್ಪಡೆಗೊಂಡಿರೋದು. ಹೇಳಿಕೇಳಿ ತುಳಸಿ ಮುನಿರಾಜುಗೌಡ ಆರಂಭದಿಂದಲೂ ಬಿಜೆಪಿಯಲ್ಲೇ ಪಳಗಿದವರು. ಇದರಿಂದ ಒಂದು ವೇಳೆ ಬಿಜೆಪಿ ಟಿಕೆಟ್ ಮಿಸ್ ಆದರೆ ಜೆಡಿಎಸ್‌ನಿಂದ ಅಖಾಡಕ್ಕಿಳಿಯಲು ಮುನಿರತ್ನ ಆಲೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮುನಿರತ್ನ ಪರ್ಯಾಯ ಮಾರ್ಗ ಬಂದ್
ಬಿಜೆಪಿಯಿಂದ ಟಿಕೆಟ್ ಸಿಗದೆ ಇದ್ದರೆ ಮಾಜಿ ಶಾಸಕ ಮುನಿರತ್ನ ಅವರು ಜೆಡಿಎಸ್‍ಗೆ ಬಂದರೆ ಟಿಕೆಟ್ ಕೊಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ  ಎಚ್‌ಡಿ ಕುಮಾರಸ್ವಾಮಿ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್‍ನಿಂದ ಮೂವರು ಆಕಾಂಕ್ಷಿಗಳನ್ನು ಅಂತಿಮ ಮಾಡಲಾಗಿದ್ದು, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟು ನಮ್ಮ ಕಾರ್ಯಕರ್ತರನ್ನು ಅನಾಥ ಮಾಡಲು ನಮಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ನಮ್ಮ ಪಕ್ಷದಿಂದ ಮೂರು ಮಂದಿಯ ಹೆಸರನ್ನು ಅಂತಿಮಗೊಳಿಸಲಾಗಿದೆ. ಬೇರೆ ಯಾರೂ ನಮ್ಮಲ್ಲಿ ಅರ್ಜಿ ಹಾಕಿಕೊಂಡಿಲ್ಲ. ಅಲ್ಲದೆ ಬೇರೆ ಯಾರಿಗೂ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಹೇಳುವ ಮೂಲಕ ಮುನಿರತ್ನ ಅವರ ಪರ್ಯಾಯ ಮಾರ್ಗವನ್ನು ಕುಮಾರಸ್ವಾಮಿ ಮುಚ್ಚಿದರು.

ರಾಜೇಶ್‍ಗೌಡ ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಅವರ ತಂದೆ ಕಾಂಗ್ರೆಸ್‍ನಿಂದ ಎರಡು ಬಾರಿ ಎಂಪಿ ಆಗಿದ್ದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಜಯಚಂದ್ರ ಅವರ ಮೇಲಿನ ಅಸಮಾಧಾನದಿಂದ ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿರಬಹುದು. ಈಗಲೂ ಅವರು ಕಾಂಗ್ರೆಸ್ ಪಕ್ಷದವರೇ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.