ಕುಟುಂಬ ರಾಜಕೀಯ ಅಂತ್ಯಕ್ಕೆ ಮಸೂದೆ ತನ್ನಿ: ರೇವಣ್ಣ  ಪುತ್ರನ ರಾಜಕೀಯ ಪ್ರವೇಶಕ್ಕೆ ಟೀಕೆ ಬಗ್ಗೆ ಎಚ್ ಡಿ ರೇವಣ್ಣ ಕಿಡಿ

 ಸುವರ್ಣಸೌಧ (ಡಿ.16):  ಕುಟುಂಬ ರಾಜಕಾರಣಕ್ಕೆ (Family Politics) ಇತಿಶ್ರೀ ಹಾಡಲು ಮಸೂದೆ ತಂದು ರಾಷ್ಟ್ರೀಯ ಪಕ್ಷಗಳು ಇದಕ್ಕೆ ಒಪ್ಪಿಗೆ ಸೂಚಿಸಲಿ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಸವಾಲು ಹಾಕಿದ್ದಾರೆ. ತಮ್ಮ ಪುತ್ರ ಸೂರಜ್‌ ರೇವಣ್ಣ (Suraj Revanna) ರಾಜಕೀಯಕ್ಕೆ (Politics) ಪ್ರವೇಶಿಸಿದ ಹಿನ್ನೆಲೆಯಲ್ಲಿ ವ್ಯಕ್ತವಾದ ಟೀಕೆಗಳಿಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಟುಂಬ ರಾಜಕಾರಣಕ್ಕೆ ಇತಿ ಶ್ರೀ ಸಂಬಂಧ ಎರಡು ರಾಷ್ಟ್ರೀಯ ಪಕ್ಷಗಳು ಒಪ್ಪಿಗೆ ಸೂಚಿಸಿ ಮಸೂದೆ ತಂದು ಕೇಂದ್ರಕ್ಕೆ ಈ ಬಗ್ಗೆ ನಿರ್ಣಯ ಕಳುಹಿಸಲಿ. ನಾವು ಸಿದ್ಧ ಇದ್ದೇವೆ. ಇದು ಕುಟುಂಬ ರಾಜಕಾರಣವಲ್ಲ. ದೇವರ ಅನುಗ್ರಹ ಅಷ್ಟೇ. 2023ಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ದೇವರು ಶಕ್ತಿ ನೀಡುತ್ತಾನೆ ಎಂದರು.

ಎರಡು ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದರೆ ಮಾಡಿದ ಊಟ ಕರಗುವುದಿಲ್ಲ. ಅವರವರ ಶಕ್ತಿ ಮೇಲೆ ಗೆಲ್ಲುತ್ತಾರೆ. ಹಿಂದಿನ ಬಾಗಿಲಿನಿಂದ ಹೋಗುವುದಿಲ್ಲ. ನಾವು ಜನರ ಮುಂದೆ ಹೋಗಿದ್ದೇವೆ ಎಂದರು.

ಶಾಸಕರ ಸಭೆ : ಕೋವಿಡ್‌ (Covid) ಮೂರನೇ ಅಲೆಗೆ ಸರ್ಕಾರದ ಸಿದ್ಧತೆ, ಮಹದಾಯಿ, ಉತ್ತರ ಕರ್ನಾಟಕದ (North Karnataka) ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆಯಲು ಜೆಡಿಎಸ್‌ ಶಾಸಕರು ತೀರ್ಮಾನಿಸಿದ್ದಾರೆ.

ಜೆಡಿಎಸ್‌ (JDS) ಮುಖಂಡ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಕೃಷ್ಣಾ, ಮಹದಾಯಿ, ಕೋವಿಡ್‌ ವಿಚಾರ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಯಿತು.

ಗೆದ್ದ 25 ರಲ್ಲಿ 10 ಮಂದಿಗೆ ಕುಟುಂಬದ ನಂಟು : 

 ಚುನಾವಣೆ (Election) ನಡೆದ ವಿಧಾನ ಪರಿಷತ್ತಿನ 25 ಸ್ಥಾನಗಳ ಪೈಕಿ ರಾಜಕಾರಣಿಗಳ (Politics) ಸಂಬಂಧಿಕರೇ ಹತ್ತು ಮಂದಿ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಂದುವರಿದಂತಾಗಿದೆ. ಕಾಂಗ್ರೆಸ್‌ನಿಂದ (Congress) ಐದು, ಬಿಜೆಪಿಯಿಂದ ಮೂರು, ಜೆಡಿಎಸ್‌ನಿಂದ (JDS) ಒಬ್ಬರು, ಒಬ್ಬ ಪಕ್ಷೇತರರಿಗೆ ಕುಟುಂಬ ರಾಜಕಾರಣದ ಹಿನ್ನೆಲೆ ಇದೆ. ಕಾಂಗ್ರೆಸ್‌ (Congress) ಪೈಕಿ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಪುತ್ರ ಆರ್‌. ರಾಜೇಂದ್ರ ತುಮಕೂರು (Tumakuru) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಸಹೋದರ ಸಂಬಂಧಿ ಎಸ್‌. ರವಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಸಹೋದರ ಚನ್ನರಾಜು ಹಟ್ಟಿಹೊಳಿ ಅವರು ಬೆಳಗಾವಿ-ಚಿಕ್ಕೋಡಿ ಕ್ಷೇತ್ರದಿಂದ, ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸಹೋದರ ಸುನೀಲ್‌ಗೌಡ ಪಾಟೀಲ್‌ ವಿಜಯಪುರ ಕ್ಷೇತ್ರದಿಂದ ಹಾಗೂ ಶಾಸಕ ಅಮರೇಗೌಡ ಪಾಟೀಲ್‌ ಸಹೋದರ ಶರಣಗೌಡ ಪಾಟೀಲ್‌ ರಾಯಚೂರು-ಕೊಪ್ಪಳ ಕ್ಷೇತ್ರದಿಂದ ಜಯ ಗಳಿಸಿದ್ದಾರೆ.

ಬಿಜೆಪಿಯಿಂದ (BJP) ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸಹೋದರ ಪ್ರದೀಪ್‌ ಶೆಟ್ಟರ್‌ ಹುಬ್ಬಳ್ಳಿ - ಧಾರವಾಡ ಕ್ಷೇತ್ರದಿಂದ, ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಪುತ್ರ ಡಿ.ಎಸ್‌. ಅರುಣ್‌ ಶಿವಮೊಗ್ಗ (Shivamogga) ಹಾಗೂ ಶಾಸಕ ಅಪ್ಪಚ್ಚು ರಂಜನ್‌ ಸಹೋದರ ಸುಜಾ ಕುಶಾಲಪ್ಪ ಮಡಿಕೇರಿ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಜೆಡಿಎಸ್‌ ಪಕ್ಷದಿಂದ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ (HD Devegowda) ಮೊಮ್ಮಗ ಹಾಗೂ ಎಚ್‌.ಡಿ. ರೇವಣ್ಣ (HD Revanna) ಅವರ ಪುತ್ರ ಸೂರಜ್‌ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಈ ಮೂಲಕ ಸಂಸತ್‌, ವಿಧಾನಸಭೆ, ವಿಧಾನಪರಿಷತ್‌ ಮೂರು ಸದನಗಳಲ್ಲೂ ದೇವೇಗೌಡರ ಕುಟುಂಬದ ಕುಡಿಗಳು ಸದಸ್ಯರಾಗಿದ್ದಾರೆ.

ಇನ್ನು ಬಿಜೆಪಿಯ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ ಬೆಳಗಾವಿ-ಚಿಕ್ಕೋಡಿ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಎ. ಮಂಜು ಪುತ್ರ ಮಂಥರ್‌ಗೌಡ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದಾರೆ.

ಗೆದ್ದವರು : ರಾಜೇಂದ್ರ, ಎಸ್‌ ರವಿ, ಚನ್ನರಾಜು ಹಟ್ಟಿಹೊಳಿ, ಸುನೀಲ್‌ ಗೌಡ, ಶರಣಗೌಡ ಪಾಟೀಲ್‌, ಪ್ರದೀಪ್‌ ಶೆಟ್ಟರ್‌, ಅರುಣ್‌, ಸುಜಾ ಕುಶಾಲಪ್ಪ, ಸೂರಜ್‌ ರೇವಣ್ಣ, ಲಖನ್‌ ಜಾರಕಿಹೊಳಿ

ಬಿದ್ದವರು, ಮಂಥರ್‌ ಗೌಡ