ಕ್ರಷರ್‌ ಉದ್ಯಮದ ಜಿಎಸ್‌ಟಿ ವಂಚನೆ ವಿಚಾರವಾಗಿ ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಮತ್ತು ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ನಡುವೆ ತೀವ್ರ ಜಟಾಪಟಿ ನಡೆದು, ವೈಯಕ್ತಿಕ ಕದನಕ್ಕಿಳಿದ ಪ್ರಸಂಗ ಜರುಗಿತು.

ವಿಧಾನಸಭೆ (ಜು.15): ಕ್ರಷರ್‌ ಉದ್ಯಮದ ಜಿಎಸ್‌ಟಿ ವಂಚನೆ ವಿಚಾರವಾಗಿ ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಮತ್ತು ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ನಡುವೆ ತೀವ್ರ ಜಟಾಪಟಿ ನಡೆದು, ವೈಯಕ್ತಿಕ ಕದನಕ್ಕಿಳಿದ ಪ್ರಸಂಗ ಜರುಗಿತು. ಶುಕ್ರವಾರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕದ ಕುರಿತು ರೇವಣ್ಣ ಮಾತನಾಡುತ್ತಿದ್ದ ವೇಳೆ ಕ್ರಷರ್‌ ಉದ್ಯಮದಿಂದ ಸರಿಯಾದ ಜಿಎಸ್‌ಟಿ ಪಾವತಿಯಾಗಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಕ್ರಷರ್‌ ಮಾಲೀಕರನ್ನು ಬಿಗಿಗೊಳಿಸಿದರೆ ಕೋಟ್ಯಂತರ ರು. ಬರಲಿದ್ದು, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ 10 ಕೋಟಿ ರು. ಅನುದಾನ ನೀಡಬಹುದು ಎಂದು ಹೇಳಿದರು.

ರೇವಣ್ಣ ಪ್ರಸ್ತಾಪಕ್ಕೆ ಸಿಡಿಮಿಡಿಗೊಂಡ ಶಿವಲಿಂಗೇಗೌಡ, ನನ್ನದೂ ಒಂದು ಕ್ರಷರ್‌ ಇದೆ. ನನ್ನನ್ನು ಉದ್ದೇಶಿಸಿಯೇ ಪರೋಕ್ಷವಾಗಿ ಹೇಳುತ್ತಿದ್ದಾರೆ. ನಾನು ಎಷ್ಟುಜಿಎಸ್‌ಟಿ ಮತ್ತು ರಾಯಲ್ಟಿಪಾವತಿಸುತ್ತಿದ್ದೇನೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಿ ಎಂದು ಪ್ರತ್ಯುತ್ತರ ನೀಡಿದರು. ಇದಕ್ಕೆ ತಿರುಗೇಟು ನೀಡಿದ ರೇವಣ್ಣ, ಯಾರು ಕ್ರಷರ್‌ ಇಟ್ಟುಕೊಂಡಿದ್ದಾರೆ ಎಂಬುದು ನನಗೆ ಮುಖ್ಯವಲ್ಲ. ಕ್ರಷರ್‌ ಉದ್ಯಮದಿಂದ ಜಿಎಸ್‌ಟಿ ವಂಚನೆಯಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ ಎಂದರು. ಇದಕ್ಕೆ ಆಕ್ರೋಶಗೊಂಡ ಶಿವಲಿಂಗೇಗೌಡ, ನೀವು ಎಷ್ಟುಖರ್ಚು ಮಾಡುತ್ತಿದ್ದೀರಿ ಹೇಳಿ? 

ನಡು ರಸ್ತೆಯಲ್ಲಿ ಯೋಧನ ಪತ್ನಿ ಏಕಾಂಗಿ ಹೋರಾಟ: ಯಾಕೆ ಗೊತ್ತಾ?

ಬಿಡದಿಯ ಒಂದು ಬದಿಯಲ್ಲಿ ಎಷ್ಟು ಕ್ರಷರ್‌ ನಡೆಯುತ್ತಿದೆ ಎಂಬುದು ಗೊತ್ತು. ಅವರು ಒಂದು ದಿನ ಹೊಡೆಯುವಷ್ಟು, ನಾವು ವರ್ಷದಲ್ಲಿ ಹೊಡೆಯುವುದಿಲ್ಲ ಎಂದರು. ಇಬ್ಬರ ನಡುವೆ ವೈಯಕ್ತಿಕ ಟೀಕಾಪ್ರಹಾರ ನಡೆಯುತ್ತಿದ್ದನ್ನು ಗಮನಿಸಿದ ಕಾಂಗ್ರೆಸ್‌ ಸದಸ್ಯ ಜಯಚಂದ್ರ ಸೇರಿದಂತೆ ಇತರರು ಮಧ್ಯಪ್ರವೇಶಿಸಿ, ವೈಯಕ್ತಿಕ ವಿಚಾರವನ್ನು ಇಲ್ಲಿ ತರುವುದು ಬೇಡ ಎಂದು ಇಬ್ಬರನ್ನೂ ಸಮಾಧಾನ ಮಾಡಿ ವಿಷಯವನ್ನು ತಣ್ಣಗಾಗಿಸಿದರು.

ಎಚ್‌ಡಿಕೆ ವಿರುದ್ಧ ಶಿವಲಿಂಗೇಗೌಡ ಆಕ್ರೋಶ: ಹಾಸನ ಜಿಲ್ಲೆಯ ಶಾಸಕ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆದಿರುವುದಕ್ಕೆ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ಸದನದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ವಿಷಯ ಕುರಿತು ಮಾತನಾಡುತ್ತಿದ್ದ ವೇಳೆ ಕುಮಾರಸ್ವಾಮಿ ಅವರು, ಶಿವಲಿಂಗೇಗೌಡ ಅವರನ್ನು ಉದ್ದೇಶಿಸಿ ಹೆಸರು ಕರೆಯದೆ ಹಾಸನ ಜಿಲ್ಲೆಯ ಶಾಸಕರು ಎಂದು ಕರೆದರು. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ‘ನಾವು ಬಡವರ ಮಕ್ಕಳು. ಹೆಸರು ಇಟ್ಟುಕೊಂಡು ಬಂದಿದ್ದೇವೆ. ನನ್ನನ್ನು ಯಾಕೆ ಹಾಸನ ಶಾಸಕರು ಎಂದು ಕರಿತೀರಿ. ಹೆಸರು ಹಿಡಿದು ಕರೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಕಣ, ಕಣದಲ್ಲೂ ಹಿಂದೂ ವಿರೋಧಿ ಗುಣವಿದೆ: ಮುತಾಲಿಕ್‌

ನಿಮಗೆ 10 ಲಕ್ಷ ಜನರು ಹೆಸರು ಹಿಡಿದು ಕರೆದರೆ, ನನಗೆ ಎರಡು ಲಕ್ಷ ಜನವಾದರೂ ಹೆಸರು ಹಿಡಿದು ಕರೆಯುತ್ತಾರೆ. ಐದು ಲಕ್ಷ ಜನ ನಿಮ್ಮ ಜತೆ ಸೆಲ್ಪಿ ತೆಗೆದುಕೊಂಡರೆ, ನಮ್ಮ ಜತೆಗೂ ಸೆಲ್ಪಿ ತೆಗೆದುಕೊಂಡ ಜನರಿದ್ದಾರೆ. ನಿಮ್ಮನ್ನು ನಾವು ಎರಡು ಬಾರಿ ಮುಖ್ಯಮಂತ್ರಿ ಮಾಡಿಲ್ಲವೇ? ಕಾರಣಾಂತರಗಳಿಂದ ನಮ್ಮ-ನಿಮ್ಮ ವಿಶ್ವಾಸ ಕಳೆದುಹೋಗಿರಬಹುದು. ಅದೇ ಕಾರಣಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ ಎಂದು ಕುಮಾರಸ್ವಾಮಿ ಮಾತಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕೊನೆಗೆ, ‘ಆಯ್ತು ಇರಿ ಶಿವಲಿಂಗೇಗೌಡರೇ’ ಎಂದು ಹೆಸರು ಕರೆದು ಕೊಬ್ಬರಿ ವಿಚಾರದ ಬಗ್ಗೆ ಮಾತು ಮುಂದುವರಿಸಿದರು.