ಟ್ರಂಪ್‌ ಭೇಟಿಗೆ 250 ಕೋಟಿ ರೂ. ಖರ್ಚು ಯಾವ ಪುರು​ಷಾ​ರ್ಥ​ಕ್ಕೆ?: ಎಚ್‌ಡಿಕೆ| ಈ ದುಡ್ಡಲ್ಲಿ ಗುಜರಾತಿನ 10 ಹಳ್ಳಿ ಅಭಿವೃದ್ಧಿ ಮಾಡಬಹುದಿತ್ತಲ್ಲ?

ಚನ್ನಪಟ್ಟಣ[ಫೆ.26]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸ್ವಾಗತಕ್ಕಾಗಿ ನಡೆಸಿದ್ದ ಅದ್ಧೂರಿ ತಯಾರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಟ್ರಂಪ್‌ ಸ್ವಾಗತದ ಹೆಸರಿನಲ್ಲಿ ಕೇಂದ್ರಸರ್ಕಾರ 250 ಕೋಟಿ ರು. ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಖರ್ಚು ಮಾಡಿರೋ ದುಡ್ಡಲ್ಲಿ ಗುಜರಾತಿನ 10 ಹಳ್ಳಿಗಳನ್ನು ಅಭಿವೃದ್ಧಿ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.

ಸ್ವಕ್ಷೇತ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ /ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಮೆರಿಕ ಅಧ್ಯಕ್ಷರು ಭಾರತಕ್ಕೆ ಇದೇ ಮೊದಲು ಬರುತ್ತಿಲ್ಲ, ಈಗಾಗಲೇ 7 ಅಧ್ಯಕ್ಷರು ಬಂದು ಹೋಗಿದ್ದಾರೆ. ಈಗ ಟ್ರಂಪ್‌ ಬರುತ್ತಾರೆಂದು ಅವರು ಹೋಗುವ ರಸ್ತೆಯಲ್ಲಿನ ಸ್ಲಂಗೆ ಗೋಡೆ ಕಟ್ಟಿಕರೆದೊಯ್ಯುತ್ತಾರೆ ಎಂದರೆ ಇವರ ಮನಸ್ಥಿತಿ ಎಂತಹುದು. ಸ್ಲಂನಲ್ಲಿ ಗೋಡೆ ಮುಚ್ಚಿದ್ರಲ್ಲ ಆ ದುಡ್ಡಲ್ಲೇ ಸ್ಲಂ ಅಭಿವೃದ್ಧಿ ಮಾಡಬಹುದಿತ್ತು ಎಂದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ನಡೆಯಬೇಕಾದ್ರೆಬೇರೆ ದೇಶದ ಅಧ್ಯಕ್ಷರು ಬಂದು ಹೋಗುವುದು ಸಹಜ. ಈ ಹಿಂದೆ ಅಮೆರಿಕದ 6 ಅಧ್ಯಕ್ಷರು ಬಂದು ಭೇಟಿ ನೀಡಿ ಹೋಗಿದ್ದಾರೆ. ಆದರೆ ಮುಂದಿನ 5 ತಿಂಗಳಲ್ಲಿ ಅಮೆರಿಕದಲ್ಲಿ ಚುನಾವಣೆ ಇರುವುದುರಿಂದ ಡೊನಾಲ್ಡ… ಟ್ರಂಪ್‌ ಭಾರತಕ್ಕೆ ಬಂದಿದ್ದಾರೆ. ಅಮೆರಿಕದಲ್ಲಿರುವ ಭಾರತೀಯರ ಮೂಲದವರ ವೋಟ್‌ ಭದ್ರಪಡಿಸಿಕೊಳ್ಳಲು ಅವರು ನಮ್ಮ ದೇಶಕ್ಕೆ ಬಂದು ಭಾಷಣ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿದರು.

ಇವರ ಪ್ರವಾಸದಿಂದ ನಮ್ಮ ದೇಶಕ್ಕೆ ಏನು ಲಾಭ? ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಭವಿಷ್ಯದ ಪೀಳಿಗೆಗೆ ಇವರು ನೀಡುವ ಸಂದೇಶವಾದರೂ ಏನು ಎಂದು ವಾಗ್ದಾಳಿ ನಡೆಸಿದರು.