ರಾಜ್ಯಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ!
ರಾಜ್ಯಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗುಟ್ಟು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ಫೆ.27): ರಾಜ್ಯಸಭಾ ಚುನಾವಣೆಯ ಫಲಿತಾಂಶ ನಿರೀಕ್ಷೆ ಇತ್ತು. ಬಿಜೆಪಿ ಹಾಗೂ ಜೆಡಿಎಸ್ ಮತಗಳು ಚದುರಿ ಹೋಗಬಾರದು ಅಂತ ಅಭ್ಯರ್ಥಿ ಹಾಕಿಸಿದ್ದೆವು. ಜೊತೆಗೆ, ನಮ್ಮ ಪಕ್ಷದ ಶಾಸಕರ ನಿಷ್ಠೆಯ ಬಗ್ಗೆ ಚಕಾರವೆತ್ತುತ್ತಿದ್ದವರಿಗೂ ಸೂಕ್ತ ಉತ್ತರ ಕೊಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡು ಅವರನ್ನು ಯಾಕೆ ಕಣಕ್ಕೆ ಇಳಿಸಿದ್ದೇವೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಇವತ್ತಿನ ಫಲಿತಾಂಶ ನಿರೀಕ್ಷೆ ಇತ್ತು. ಬಿಜೆಪಿ ಜೆಡಿಎಸ್ ನ ಮತಗಳು ಚದುರಿ ಹೋಗಬಾರದು ಅಂತ ಅಭ್ಯರ್ಥಿ ಹಾಕಿಸಿದ್ದೆವು. ಪಕ್ಷೇತರ ಅಭ್ಯರ್ಥಿಗಳನ್ನೂ ಒಳಗೊಂಡಂತೆ ನಾವು ಪ್ರಯತ್ನ ಪಟ್ಟೆವು. ಜೆಡಿಎಸ್ ಅನ್ನು ಮುಗಿಸಬೇಕು ಅಂತ, ನಮ್ಮ ಪಕ್ಷದ ಶಾಸಕರ ನಿಷ್ಟೆಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದಕ್ಕೆ ಸೂಕ್ತ ಉತ್ತರ ನಾವು ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿಪ್‌ನಿಂದ ಏನಾಗುತ್ತೆ? ವಜಾಕ್ಕೂ ಮುನ್ನವೇ ರಾಜೀನಾಮೆ ಕೊಡುವರೇ ಎಸ್.ಟಿ. ಸೋಮಶೇಖರ್!
ಕುಮಾರಸ್ವಾಮಿ ಅವರಿಗೆ ಆತ್ಮವೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರಿಗೆ ಏನಿದೆ ಅಂತಾ ಕೇಳಲು ಇಷ್ಟ ಪಡುತ್ತೇನೆ. ಈ ಆತ್ಮಸಾಕ್ಷಿ ಎಂಬ ವಿಚಾರ ಶುರುವಾಗಿದ್ದೇ ಕಾಂಗ್ರೆಸ್ ನಾಯಕರಿಂದ. ಅಧಿಕೃತವಾಗಿ ಸಂಜೀವರೆಡ್ಡಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿ, ನಂತರ ಬಂಡಾಯ ಅಭ್ಯರ್ಥಿಯನ್ನೂ ಕಾಂಗ್ರೆಸ್‌ನಿಂದ ನಿಲ್ಲಿಸಿದ್ದರು. ಈ ಮೂಲಕ ಆತ್ಮಸಾಕ್ಷಿಯ ಪದ ಹುಟ್ಟು ಹಾಕಿದ್ದೇ ಕಾಂಗ್ರೆಸ್‌ನವರು. ಕಾಂಗ್ರೆಸ್ ನಡವಳಿಕೆ ಅವರಿಗೆ ಹೊಸದೇನಲ್ಲ. 95ರಲ್ಲಿ ಬಿಜೆಪಿಯ 15 ಜನರನ್ನು ಅಡ್ಡ ಮತದಾನ ಮಾಡಿಸಿದ್ದರು. ನಮ್ಮ ಪಕ್ಷದ 7 ಜನರನ್ನು ಅಡ್ಡ ಮತದಾನ ಮಾಡಿಸಿದ್ದರು. ಅದೆಲ್ಲಾ ಕಣ್ಣ ಮುಂದೆಯೇ ಇದೆ. ಆತ್ಮ ಸಾಕ್ಷಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಾಗಲೀ, ಸಿದ್ದರಾಮಯ್ಯ ಅವರಿಗಾಗಲೀ ಇಲ್ಲ ಎಂದು ಹೇಳಿದರು.
ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ಹಲವು ನೋವುಗಳಿದ್ದವು. ಅವರು ಎಂದೂ ಪಕ್ಷಕ್ಕೆ ವಿರೋಧವಾಗಿ ನಡೆದುಕೊಂಡಿಲ್ಲ. ಅವರ ಕುಟುಂಬ ಮತ್ತು ನಮ್ಮ ಕುಟುಂಬದ ನಡುವೆ ಒಳ್ಳೆಯ ಸಂಬಂಧ ಇದೆ. ನಿನ್ನೆ ಅವರೇ ಬಂದು ಮಾತಾಡಿದ್ದಾರೆ. ಮಾದ್ಯಮಗಳ ಮುಂದೆ ಎಲ್ಲಾ ವಿಚಾರ ಹೇಳಲು ಸಾಧ್ಯವಿಲ್ಲ. ಈಗ ಶರಣಗೌಡ ಕಂದಕೂರು ಅವರಿಗೆ ಯಾವ ಅಸಮಾಧಾನ ಇಲ್ಲ. ಮೈತ್ರಿ ಪಕ್ಷಗಳಿಗೆ ಅವರ ಬಗ್ಗೆ ಇದ್ದ ಅನುಮಾನಗಳಿಗೆ ರಾಜ್ಯ ಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ಇವತ್ತು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಹೆಬ್ಬಾರ್ ನಿಮ್ಮ ಫೋನ್ ಸ್ವಿಚ್ ಆಫ್ ಬರ್ತಿದೆ; ಟಿವಿ ನೋಡ್ತಿದ್ರೆ ಬಂದು ಮೈತ್ರಿ ಅಭ್ಯರ್ಥಿಗೆ ಮತ ಹಾಕಿ: ಬಿಜೆಪಿ ಮನವಿ
ಇನ್ನು ಮೈತ್ರಿ ಹಿನ್ನಲೆಯಲ್ಲಿ ಎರಡೂ ಪಕ್ಷಗಳಿಗೆ ಒಂದು ವಿಶ್ವಾಸ ಮೂಡಿದೆ. ಪರಿಷತ್ ಚುನಾವಣೆ ಸೋಲು ಮತ್ತು ಇವತ್ತಿನ ಚುನಾವಣೆ ಸೋಲು ಮೈತ್ರಿಗೆ ತೊಂದರೆ ಆಗಲ್ಲ. ನಿಜವಾದ ಅಖಾಡ ಆರಂಭ ಆಗೋದೇ ಲೋಕಸಭಾ ಚುನಾವಣೆಯಲ್ಲಿ. ಕಾಂಗ್ರೆಸ್‌ವರ ಈ ಖುಷಿ ತಾತ್ಕಾಲಿಕ ಅಷ್ಟೇ. ಸ್ಥಾನ ಹೊಂದಾಣಿಕೆ ಎಲ್ಲಾ ಅತ್ಯಂತ ಸುಗಮವಾಗಿ ಆಗುತ್ತದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ಕೂಡಾ ಗೆಲ್ಲುತ್ತೇವೆ. ಮಂಡ್ಯ ಲೋಕಸಭಾ ವಿಚಾರದಲ್ಲಿ ಕೂಡಾ ಏನೂ ಸಮಸ್ಯೆ ಇಲ್ಲ. ಎಲ್ಲಾ ಸುಗಮವಾಗಿ ಬಗೆಹರಿಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.