Asianet Suvarna News Asianet Suvarna News

ಚುನಾವಣೆ ಹೊತ್ತಲ್ಲಿ ಹೆಚ್‌ಡಿ ಕುಮಾರಸ್ವಾಮಿ ಬಿಟ್ಟ ಬ್ರಾಹ್ಮಣಾಸ್ತ್ರದ ಗುಟ್ಟೇನು?

ಬ್ರಾಹ್ಮಣ ಸಿಎಂ, ಪ್ರಹ್ಲಾದ್ ಜೋಶಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ, ಗಾಂಧಿ ಕೋಂದ ಗೋಡ್ಸೆ ವಂಶಸ್ಥರು ಅನ್ನೋ ಹೆಚ್‌ಡಿಕೆ ಬಾಣ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬ್ರಾಹ್ಮಣರ ಮತ ಜೆಡಿಎಸ್‌ಗೆ ಬೇಕಿಲ್ಲ, ಆದರೆ ಲಿಂಗಾಯಿತ ಹಾಗೂ ಒಕ್ಕಲಿಗರ ಮತ ಬಿಜೆಪಿಯಿಂದ ಚದುರಿಸಲು ಈ ಅಸ್ತ್ರ ಪ್ರಯೋಗಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಹೆಚ್‌ಡಿಕೆ ಬ್ರಾಹ್ಮಣ ಅಸ್ತ್ರದ ಹಿಂದಿನ ರಾಜಕೀಯ ಉದ್ದೇಶವೇನು? ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ ಬಿಜೆಪಿ ಮೇಲೆ ಅಸ್ತ್ರ ಪ್ರಯೋಗಿಸಿದ್ರಾ ಕುಮಾರಸ್ವಾಮಿ? ಇಲ್ಲಿದೆ ರಾಜಕೀಯ ಒಳಸುಳಿ.

HD kumaraswamy attacks BJP prahlad Joshi and remark on brahmin CM create huge turmoil Ahead of Karnataka election ckm
Author
First Published Feb 8, 2023, 9:43 PM IST

ವರದಿ: ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್

ಜಾತಿ ಅಳಿಯಬೇಕು,  ಉತ್ತಮ ಸಮಾಜ ನಿರ್ಮಾಣ ಆಗಬೇಕು. ಜಾತ್ಯಾತೀತ ತತ್ವದಡಿ ಬದುಕು ಕಟ್ಟಿಕೊಳ್ಳಬೇಕು ಎಂದು ಉಗ್ರ ಭಾಷಣ ಮಾಡುವ ರಾಜಕಾರಣಿಗಳೇ, ಯಾವ ಕಾರಣಕ್ಕೂ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಬಿಡುವುದಿಲ್ಲ ಅನ್ನೋದು ಸರ್ವಕಾಲಿಕ ಸತ್ಯ. ಬಹುತೇಕ ರಾಜಕೀಯ ನಾಯಕರು ಮೈಕ್ ಮುಂದೆ ನಿಂತು ಹೇಳೋದು ಕೇವಲ ಪ್ರಚಾರ. ಆದರೆ ಅಂತರಂಗ ಬೇರೆಯದ್ದೇ ಇರುತ್ತದೆ. ಟಿಕೆಟ್ ನೀಡುವಾಗ ಯಾವ ಕ್ಷೇತ್ರದಲ್ಲಿ ಯಾವ ಜಾತಿಯ ಸಮುದಾಯಗಳ ಮತ ಹೆಚ್ಚಿದೆ ಎಂದು ಸರ್ವೆ ಮಾಡಿಯೆ ಟಿಕೆಟ್ ನೀಡುತ್ತಾರೆ. ಹೀಗಾಗಿಯೇ ಹೇಳಿದ್ದು, ಮದುವೆ ಮಾಡಿಸುವಾಗ ಹೆತ್ತವರು ಜಾತಿ ನೋಡದೆ ಮಕ್ಕಳ ಮದುವೆ ಮಾಡಲು ಒಪ್ಪಬಹುದು. ಆದರೆ ರಾಜಕೀಯ ನಾಯಕರು ಎನಿಸಿಕೊಂಡವರು ಜಾತಿ ನೋಡದೆ ಟಿಕೆಟ್ ನೀಡುವುದಿಲ್ಲ

ಕುಮಾರಸ್ವಾಮಿ ಬ್ರಾಹ್ಮಣರ ಗುರಿಯಾಗಿಸಿ ಯಾಕೆ ಹೇಳಿಕೆ ನೀಡಿದರು?
ಕಳೆದ ಎರಡು ಮೂರು ದಿನಗಳಿಂದ ಮಾಜಿ‌ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೀಡಿದ ಬ್ರಾಹ್ಮಣರ ಕುರಿತ ಹೇಳಿಕೆ ರಾಜ್ಯ ರಾಜಕೀಯದ ಸೆನ್ಸೇಶನಲ್ ಮ್ಯಾಟರ್. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನು ಟೀಕಿಸುವ ಸಮಯದಲ್ಲಿ ಕುಮಾರಸ್ವಾಮಿ ನೀಡಿದ ಹೇಳಿಕೆ ರಾಜಕೀಯವಾಗಿ ಬಹಳ ಸೂಕ್ಷ್ಮ ಸಂಗತಿ. ಪ್ರಹ್ಲಾದ್ ಜೋಷಿ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಮತ್ತು ಎಂಟು ಮಂದಿ ಡಿಸಿಎಂ ಆಗಿ ನೇಮಕ ಆಗುತ್ತಾರೆ. ಆರ್‌ಎಸ್‌ಎಸ್ ನಾಯಕರು ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದರ ಉದ್ದೇಶದ ಹಿಂದೆ ನಿಶ್ಚಿತವಾಗಿ ರಾಜಕೀಯ ಲೆಕ್ಕಾಚಾರಗಳು ಅಡಗಿವೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ತಕ್ಷಣಕ್ಕೆ ಯೋಚಿಸದೆ ನೀಡಿದ ಹೇಳಿಕೆ ರೀತಿ ಈ ಮಾತು ಕಾಣುವುದಿಲ್ಲ. ಈ ಹೇಳಿಕೆ ನೀಡುವಾಗ ಕುಮಾರಸ್ವಾಮಿ ಅನೇಕ ಬಾರಿ ಯೋಚಿಸಿ ಅಳೆದು ತೂಗಿ ಹೇಳಿದಂತೆ ಇದೆ. ಯಾವ ದಾಳ ಉರುಳಿಸಿದರೆ ಯಾವ ಸಾಮ್ರಾಜ್ಯ ಅಲ್ಲಾಡಿಸಬಹುದು ಎಂದು ಆಳವಾಗಿ ಯೋಚಿಸಿ, ಚರ್ಚಿಸಿ ಕುಮಾರಸ್ವಾಮಿ ಪೇಶ್ವೆ ಬ್ರಾಹ್ಮಣಾಸ್ತ್ರ ಉರುಳಿಸಿದ್ದಾರೆ.

ಒಳ ಮೀಸಲಾತಿ: ಬೊಮ್ಮಾಯಿ ಸರ್ಕಾರಕ್ಕೆ ಸಿಗುತ್ತಾ ಬೂಸ್ಟರ್ ಡೋಸ್?

ಕುಮಾರಸ್ವಾಮಿ ಲೆಕ್ಕಾಚಾರ ಏನು ?
ರಾಜ್ಯದಲ್ಲಿ ಬಿಜೆಪಿ ಜೊತೆ ಬಲವಾಗಿ ನಿಂತಿರುವ ಸಮುದಾಯ ಲಿಂಗಾಯತ. ರಾಜ್ಯದಲ್ಲಿ ಕಾಂಗ್ರೆಸ್ ವೀರೇಂದ್ರ ಪಾಟೀಲ್‌ರನ್ನು ಅವಮಾನ ಮಾಡಿತು ಎಂಬ ಕಾರಣಕ್ಕೆ ಲಿಂಗಾಯತರು ಇನ್ನೂ ಕೂಡ ಕಾಂಗ್ರೆಸ್ ಜೊತೆ ಸಂಪೂರ್ಣವಾಗಿ ನಿಂತಿಲ್ಲ. ಈಗ  ಅದೇ ಲಿಂಗಾಯತ  ಸಮುದಾಯ ಜೊತೆಗೆ ಇತ್ತಿಚೀನ ದಿನಗಳಲ್ಲಿ ಬಿಜೆಪಿ ಕಡೆಗೆ ವಾಲುತ್ತಿರುವ  ಒಕ್ಕಲಿಗರ ಮನಸ್ಸನ್ನು ಡೈವರ್ಟ್ ಮಾಡುವ ಉದ್ದೇಶದಿಂದ ಕುಮಾರಸ್ವಾಮಿ ಹೀಗೆ ಬ್ರಾಹ್ಮಣ ಅಸ್ತ್ರ ಪ್ರಯೋಗ ಮಾಡಿದಂತಿದೆ. ಅರ್ಥಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ‌ ಲಿಂಗಾಯತರು ಸಿಎಂ ಆಗೋದಿಲ್ಲ. ಒಕ್ಕಲಿಗರಿಗೂ ಅವಕಾಶ ಇಲ್ಲ. ಬ್ರಾಹ್ಮಣರನ್ನು ಸಿಎಂ ಮಾಡ್ತಾರೆ ಎನ್ನುವ ಸುದ್ದಿಯನ್ನು ತೇಲಿ ಬಿಟ್ಟರೆ ಬಹುಸಂಖ್ಯಾತ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯದ ಮತಗಳು ವಿಭಜನೆ ಆಗಿ ಬಿಜೆಪಿಗೆ ರಾಜಕೀಯ ಏಟು ನೀಡಬಹುದು ಅನ್ನೋದು ಕುಮಾರಸ್ವಾಮಿಯ ಮಾಸ್ಟರ್ ಪ್ಲಾನ್ ಅನ್ನೋ ವಿಮರ್ಷೆ ಸತ್ಯಕ್ಕೆ ಹತ್ತಿರವಾಗಿದೆ. 

ಬಿಜೆಪಿ ಮೇಲೆ ಇರುವ ಸಹಜ ಆರೋಪ ಏನು.? 
ಮೇಲ್ವರ್ಗದ ಪಾರ್ಟಿ. ಬ್ರಾಹ್ಮಣರ ಹಿಡಿತದಲ್ಲಿ ಇರುವ ಪಕ್ಷ. ಆರ್‌ಎಸ್‌ಎಸ್ ಪ್ರಮುಖರೆಲ್ಲರೂ ಬ್ರಾಹ್ಮಣರು, ಮುಂದೆ ರಾಜ್ಯದ ಮುಖ್ಯಮಂತ್ರಿಯು ಬ್ರಾಹ್ಮಣರೇ ಆಗುತ್ತಾರೆ ಎಂಬ ನರೆಟೀವ್ ಸೆಟ್ ಮಾಡಿದರೆ, ಮತದಾರ ಬಿಜೆಪಿ ಜೊತೆ ನಿಲ್ಲುವಾಗ ಒಮ್ಮೆ ಯೋಚನೆ ಮಾಡುತ್ತಾರೆ. ಕುಮಾರಸ್ವಾಮಿಯ ಈ  ಗಣಿತ ಲೆಕ್ಕಾಚಾರ ಇಲ್ಲಿಯ ತನಕ ಸರಿಯಾಗಿದೆ.  ಪ್ರಹ್ಲಾದ್ ಜೋಷಿಗೆ ವೈಯಕ್ತಿಕವಾಗಿ ಆಟ್ಯಾಕ್ ಮಾಡಬೇಕು. ಅವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪದೇ ಪದೇ ತಾನು ಹೇಳಬೇಕು. ಅದಕ್ಕೆ ತಕ್ಕಂತೆ ಬಿಜೆಪಿಗರು ಪ್ರಹ್ಲಾದ್ ಜೋಷಿಯನ್ನು ಸಮರ್ಥನೆ ಮಾಡಿಕೊಳ್ಳುವ ಬರದಲ್ಲಿ, ಪ್ರಹ್ಲಾದ್ ಜೋಷಿ ಸಿಎಂ ಅಭ್ಯರ್ಥಿ ಆಗಲು ಯೋಗ್ಯರು ಎನ್ನುವ ಉತ್ತರವನ್ನು ಬಿಜೆಪಿಗರಿಂದ ಪಡೆದರೆ ತನ್ನ ಕಾರ್ಯ ಸಿದ್ಧಿಯಾಗುತ್ತದೆ ಎನ್ನುವ ರಾಜಕೀಯ ಚತುರ ನಡೆ ಕುಮಾರಸ್ವಾಮಿಯವರದ್ದು.!

 

Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!

ಹಳೆ ಮೈಸೂರು ಕಲ್ಯಾಣ ಕರ್ನಾಟಕ ಗುರಿ.
ಹಳೆ ಮೈಸೂರು ಜಿಲ್ಲೆಗಳಾದ ಮಂಡ್ಯ, ರಾಮನಗರ, ಮೈಸೂರು, ಹಾಸನ ಚಾಮರಾಜನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ, ತುಮಕೂರು ಈ ಎಲ್ಲಾ ಜಿಲ್ಲೆಗಳಲ್ಲಿ ಲಿಂಗಾಯತ ದಲಿತ ಮತ್ತು ಒಕ್ಕಲಿಗ ಮತಗಳೇ ನಿರ್ಣಾಯಕ.‌ ಹಳೆ ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್ ಗೆ ಹಿಡಿತ ಇದೆ.‌ ಕಳೆದ ಬಾರಿ ಹಳೆ ಮೈಸೂರು ಜಿಲ್ಲೆಯ 89 ಕ್ಷೇತ್ರಗಳಲ್ಲಿ ಜೆಡಿಎಸ್ 33 ಸ್ಥಾನ ಗಳಿಸಿತ್ತು. ಈಗ ಬಿಜೆಪಿ ಈ‌ ಪ್ರಮುಖ‌ ಜಿಲ್ಲೆಗಳಲ್ಲಿ ತನ್ನ ಸಂಘಟನಾ ಜಾಲ ಬಲ ಪಡಿಸಲು ಮೋದಿ ಮೊರೆ ಹೋಗಿದೆ. ಅಭಿವೃದ್ಧಿ ಹೆಸರಲ್ಲಿ ಚುನಾವಣೆ ಕಾರ್ಯತಂತ್ರ ಹೆಣೆಯುತ್ತಿದೆ. ಜೊತೆಗೆ ಅನ್ಯ ಪಕ್ಷದ ಸ್ಥಳಿಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ.‌ ಈ ಎಲ್ಲಾ ಕಾರಣಕ್ಕೆ ಬಿಜೆಪಿ ಆಗಬಹುದಾದ ಲಾಭಾಂಶವನ್ನು ಕಟ್ ಮಾಡಿದ್ರೆ ಅದು ಜೆಡಿಎಸ್‌ಗೆ ಲಾಭ ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಬಿಜೆಪಿ ಮೇಲೆ ಬ್ರಾಹ್ಮಣ ಅಸ್ತ್ರ ಪ್ರಯೋಗಿಸಿದ್ದಾರೆ ಎನಿಸುತ್ತಿದೆ. ಸಾಮಾನ್ಯವಾಗಿ ಜೆಡಿಎಸ್‌ಗೆ ಬ್ರಾಹ್ಮಣ ವೋಟ್‌ಗಳು ಬರೋದು ಅಷ್ಟಕ್ಕಷ್ಟೇ. ಬ್ರಾಹ್ಮಣರು ಜೆಡಿಎಸ್ ಮೇಲೆ ಬೇಸರ ಮಾಡಿಕೊಂಡರು, ಖುಷಿ ಪಟ್ಟರು ಜೆಡಿಎಸ್ ಗೆ ರಾಜಕೀಯವಾಗಿ ಪರಾಕ್ ಇಲ್ಲ. ಆದರೆ ಬ್ರಾಹ್ಮಣ ಅಸ್ತ್ರ ಪ್ರಯೋಗಿಸಿದರೆ ಬಿಜೆಪಿ ಜೊತೆ ಇರುವ ಲಿಂಗಾಯತ ಮತ್ತು ಮುಂದೆ ಬರುವ ಒಕ್ಕಲಿಗ ದಲಿತರು ನಾವೆಷ್ಟೇ ಬಿಜೆಪಿಗೆ ಸಪೋರ್ಟ್ ಮಾಡಿದರು, ಅಧಿಕಾರಕ್ಕೆ ಬಂದರೆ ಬಿಜೆಪಿ ಬ್ರಾಹ್ಮಣರನ್ನೇ ಮುಖ್ಯಮಂತ್ರಿ ಮಾಡುತ್ತದೆ ಎಂಬ ಯೋಚನೆ ಮಾಡುವಂತೆ ಆಗಲಿ ಎಂದೆ ಕುಮಾರಸ್ವಾಮಿ ಈ ದಾಳ ಉರುಳಿಸಿದ್ದರೆ. ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಪೇಶ್ವೇ ಬ್ರಾಹ್ಮಣ, ಗಾಂಧಿ ಕೊಂದ ಗೋಡ್ಸೆ ವಂಶಸ್ಥರು ಎಂಬ ವಿಷಗಳನ್ನು ತೇಲಿಬಿಟ್ಟಿದ್ದಾರೆ ಅನ್ನೋದು ಮೇಲ್ನೋಟಕ್ಕೆ ತಿಳಿಯುತ್ತದೆ. 

ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು ಪೇಶ್ವೆ ಬ್ರಾಹ್ಮಣರೇ?
ಪ್ರಹ್ಲಾದ್ ಜೋಷಿಯವರ ಜನ್ಮ, ಕುಂಡಲಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಶೃಂಗೇರಿ ಮಠದ ಪ್ರಸ್ತಾಪ ಮಾಡಿದ್ದಾರೆ. ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು ಇದೇ ಪೇಶ್ವೆ ಬ್ರಾಹ್ಮಣರು ಎಂದು ಕುಮಾರಸ್ವಾಮಿ ಸಿಡಿಸಿದ ಬಾಂಬ್ ಭಾವನಾತ್ಮಕ ವಿಚಾರ. ಆದರೆ ನಿಜವಾಗಿಯೂ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು ಪೇಶ್ವೆ ಬ್ರಾಹ್ಮಣರೇ? ಇತಿಹಾಸ ಕೆದಕಿದರೆ ಕುಮಾರಸ್ವಾಮಿ ಹೇಳಿಕೆ ಇತಿಹಾಸದ ವಿರುದ್ಧವಾಗಿದೆ. ಶೃಂಗೇರಿ ಮೇಲೆ ದಾಳಿ ಮಾಡಿದ್ದು ಪಿಂಡಾರಿಗಳು. ಈ ಪಿಂಡಾರಿಗಳು 17 ಮತ್ತು 19ನೇ ಶತಮಾನದ ಮಧ್ಯಭಾಗದಲ್ಲಿ ಇದ್ದವರು. ಭಾರತದ ಉಪಖಂಡದಲ್ಲಿ ಇದ್ದ ಮುಸ್ಲಿಮ್ ಅಕ್ರಮ ಲೂಟಿಕೋರರು. ಇವರಿಗೆ ವೇತನ ಇರಲಿಲ್ಲ. ಯುದ್ಧದಲ್ಲಿ ಗೆದ್ದ ವಸ್ತುಗಳೇ ಇವರ ಆದಾಯ ಆಗಿತ್ತು ಅನ್ನೋದನ್ನ ಇತಿಹಾಸ ಹೇಳುತ್ತದೆ. ಈ ಪಿಂಡಾರಿಗಳು ಮೊದಲು ಮೊಘಲರ ಜೊತೆ ಗುರುತಿಸಿಕೊಂಡವರು. ಬಳಿಕ ಮರಾಠ ಸೈನ್ಯದ ಜೊತೆಯೂ ಇದ್ದವರು. ಇವರ ಕೆಲಸ ಕುದರೆ ಸವಾರಿ. ಗೌಪ್ಯ ಮಾಹಿತಿ ವಿನಿಮಯ. ಶತ್ರುಗಳ ವ್ಯವಸ್ಥೆ ಹದಗೆಡಿಸುವುದು.  ಸದಾ ಶಸ್ತ್ರ ಸಜ್ಜಿತವಾಗಿ ಇರುತ್ತಿದ್ದರು. ಈ ಪಿಂಡಾರಿಗಳು ಮರಾಠ ಸೈನ್ಯದ ಜೊತೆ ಇದ್ದ ವೇಳೆಯಲ್ಲೇ ಮಿತ್ರಪಡೆಗಳಿಗೆ ವಿಶ್ವಾಸಕ್ಕೆ ದ್ರೋಹ ಮಾಡಿ 1791 ರಲ್ಲಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದರು ಎಂದು ಇತಿಹಾಸ ಪುಠದಲ್ಲಿ ದಾಖಲಾಗಿದೆ. ಆದರೆ ರಾಜಕೀಯ ನಾಯಕರು ಇತಿಹಾಸವನ್ನು ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡೋದು ಹೊಸತೇನು ಅಲ್ಲ. ಅದಕ್ಕೆ ಹೇಳ್ತಾರೆ, ಈಗ ಇರುವ ಅನೇಕರು ಇತಿಹಾಸ ರಚಿಸುವವರಲ್ಲ. ಇತಿಹಾಸ ತಿರುಚುವವರು.

Follow Us:
Download App:
  • android
  • ios