Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!
Karnataka Assembly Election 2023: ಪ್ರಧಾನಿ ಮೋದಿ ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಪ್ರಚಾರ ಮಾಡಿದರೂ ಪಾಸಿಂಗ್ ಮಾರ್ಕ್ಸ್ ದಡದಲ್ಲಿ ಇರುವ ಅಭ್ಯರ್ಥಿಗಳನ್ನು ದಡ ಸೇರಿಸಿ ಬಿಡುತ್ತಾರೆ. ಇದು ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲೂ ಸಾಬೀತಾಗಿದೆ
By: Ravi Shivaram, Political Reporter, Asianet Suvarna News
ನವದೆಹಲಿ (ಸೆ. 16): ಕೇವಲ ರಾಜ್ಯ ಬಿಜೆಪಿ ನಾಯಕರು ಮಾತ್ರ ಪ್ರಧಾನಿ ಮೋದಿಯನ್ನು (PM Narendra Modi) ಕರ್ನಾಟಕಕ್ಕೆ ಮೇಲಿಂದ ಮೇಲೆ ಕರೆಸುವುದ್ದಕ್ಕೆ ಉತ್ಸುಕರಾಗಿಲ್ಲ. ಸ್ವತಃ ಪ್ರಧಾನಿ ಮೋದಿಯವರೇ ಕರ್ನಾಟಕಕ್ಕೆ ಮತ್ತೆ ಮತ್ತೆ ಬರೋದಕ್ಕೆ ಆಸಕ್ತಿ ಹೊಂದಿರುವಂತೆ ಕಾಣುತ್ತಿದೆ. ಮೊನ್ನೆಯ ಮಂಗಳೂರಿನ ಸಮಾವೇಶ ಇರಬಹುದು, ಬೆಂಗಳೂರಿನ ಸಮಾವೇಶ ಇರಬಹುದು, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ಇನ್ನು ಪ್ರತಿ ತಿಂಗಳು ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದಿದ್ದಾರೆ. ಕಾರಣ ಏನು ಎಂದು ಕೇಳಿದರೆ ಅಥವಾ ಪ್ರಧಾನಿಗಳ ಮಾತಿನ ಸೂಕ್ಷ್ಮತೆ ಗ್ರಹಿಸಿದರೆ ಅವರ ಮಾತಿನ ಹಿಂದಿನ ಉದ್ದೇಶ ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚು ಕಷ್ಟ ಪಡಬೇಕಿಲ್ಲ.
ಮೋದಿ ಪದೇ ಪದೆ ರಾಜ್ಯಕ್ಕೆ ಬರುವುದಕ್ಕೆ ಆಸಕ್ತಿ ಹೊಂದಿದ್ದು, ಇತ್ತ ಮೋದಿಯವರನ್ನು ಕರೆಸುವುದಕ್ಕೆ ರಾಜ್ಯ ನಾಯಕರು ಶ್ರಮ ಹಾಕುತ್ತಿದ್ದಾರೆ ಎಂದರೆ, ವರ್ಷದೊಳಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Assembly Election 2023) ಎದುರಾಗುತ್ತಿದೆ ಅನ್ನೋದು ಒಂದು ವಾಕ್ಯದ ಉತ್ತರ. ಆದರೆ ರಾಜ್ಯ ನಾಯಕರ ಕಣ್ಣು ಯಾಕಿಷ್ಟು ದೆಹಲಿಯ ಮೇಲೆ ನೆಟ್ಟಿದೆ ಅಥವಾ ಮೋದಿಯವರನ್ನೇ ಯಾಕೆ ಕರೆಸಬೇಕು ಎಂದು ತಲೆ ಕೆಡಿಸಿಕೊಳ್ತಾರೆ ಅಂದರೆ ಕಾರಣವನ್ನು ಈ ರೀತಿಯಾಗಿ ವಿಮರ್ಶೆ ಮಾಡಬಹುದು.
ಪಾಸಿಂಗ್ ಮಾರ್ಕ್ಸ್ ಕೊಡಿಸೋಕೆ ಮೋದಿ ಮಾಸ್ಟರ್: ಪ್ರಧಾನಿ ಮೋದಿ ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಪ್ರಚಾರ ಮಾಡಿದರೂ ಪಾಸಿಂಗ್ ಮಾರ್ಕ್ಸ್ ದಡದಲ್ಲಿ ಇರುವ ಅಭ್ಯರ್ಥಿಗಳನ್ನು ದಡ ಸೇರಿಸಿ ಬಿಡುತ್ತಾರೆ. ಇದು ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲೂ ಸಾಬೀತಾಗಿದೆ. ಅದೇ ರೀತಿ ಲೋಕಸಭಾ ಎಲೆಕ್ಷನ್ ಫಲಿತಾಂಶ ಕೂಡ ಮೋದಿ ಪ್ರಚಾರ ಯಾಕೆ ಅಗತ್ಯ ಅನ್ನೋದನ್ನು ಸಾಬೀತು ಮಾಡಿದೆ.
4 ದಿಕ್ಕು.. 100 ಗುರಿ.. ಶುರುವಾಯ್ತು ಮೋದಿ ಅಶ್ವಮೇಧ..!
2018ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರಲಿಲ್ಲ. ಕಾಂಗ್ರೆಸ್ ಆಡಳಿತ ಪಕ್ಷವಾಗಿತ್ತು. ಹೀಗಾಗಿ ವಿಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರದ ಹುಳುಕುಗಳನ್ನು ಬೊಟ್ಟು ಮಾಡಿ ತೋರಿಸೋಕೆ ಅನೇಕ ವಿಚಾರಗಳು ಇದ್ವು. ಆದ್ರೆ ಈ ಬಾರಿ ಹಾಗಲ್ಲ. ವಿಪಕ್ಷದ ಸೀಟಿನಿಂದ ಆಡಳಿತ ಪಕ್ಷದ ಖುರ್ಚಿಯಲ್ಲೇ ಬಿಜೆಪಿ ಪಕ್ಷದ ಸರ್ಕಾರ ವಿರಾಜಮಾನವಾಗಿದೆ. ಒಂದು ಸರ್ಕಾರವಾಗಿದ್ದು ವಿಪಕ್ಷಗಳ ಮೇಲೆ ಟೀಕಾಸ್ತ್ರ ಪ್ರಯೋಗಿಸೋದು ಬಹಳ ಸುಲಭ ಮತ್ತು ಅದು ವಿಪಕ್ಷಗಳ ಕರ್ತವ್ಯವೂ ಹೌದು.
ಆದರೆ ಆಡಳಿತ ಪಕ್ಷದಲ್ಲಿದ್ದು ಮರಳಿ ಅಧಿಕಾರ ಪಡೆಯಬೇಕು ಎಂದಾಗ ಜನರ ಮುಂದೆ ಹೋಗಿ ಮತ ಕೇಳಲು ಬೇಕಿರೋದು ಅಭಿವೃದ್ಧಿ ಮಾತ್ರ. ಆಯಾ ಕಾಲಕ್ಕೆ ಘಟಿಸುವ ಕೆಲವು ಸೈದ್ಧಾಂತಿಕ ಗದ್ದಲಗಳು, ಧರ್ಮ ಕದನ ಇದೆಲ್ಲಾ ಜನರ ಮುಂದೆ ಆ ಕ್ಷಣಕ್ಕೆ ರೋಚಕವಾಗಿ ಕಾಣುತ್ತವೆ. ಅಂತಹ ವಿಚಾರಗಳ ಮೇಲೆ ಆಸಕ್ತಿ ಉಳ್ಳವರಿಗೆ ಅದನ್ನು ಫಾಲೊ ಮಾಡುವವರರಿಗೆ ಭಾವನಾತ್ಮಕ ವಿಚಾರಗಳು ಚೆಂದ ಕಾಣುತ್ತದೆ.
ಆದರೆ ಇದೆಲ್ಲದರ ಜೊತೆಗೆ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ರಾಜ್ಯಕ್ಕೆ ಏನು ಮಾಡಿತು, ಯಾವ ಯೋಜನೆ ತಂದಿತು, ಎಷ್ಟು ಯೋಜನೆ ಜನರಿಗೆ ತಲುಪಿತು ಅನ್ನೋದಷ್ಟೇ ಜನಸಾಮಾನ್ಯನ ತಲೆಯಲ್ಲಿ ಇರುತ್ತದೆ ಅನ್ನೋದು ಸಾರ್ವಕಾಲಿಕ ಸತ್ಯ. ಆದರೆ ಆ ಸತ್ಯ ಹೇಳೋಕೆ ರಾಜ್ಯ ಬಿಜೆಪಿ ಗಾಡಿ ಇನ್ನೂ ಲೋಡಾಗಿಲ್ಲ. ಈಗ ಅದು ಸಮುದ್ರ ಮಧ್ಯೆ ನಿಂತ ಅರ್ಧಂಬರ್ದ ಹಡಗಿನ ರೀತಿ ಕಾಣುತ್ತಿದೆ. ಹಾಗಾಗಿ ದಡ ಸೇರಿಸಲು ಹಡಗಿನ ಕ್ಯಾಪ್ಟನ್ ಸ್ವತಃ ಸ್ಟೇರಿಂಗ್ ಹಿಡಿಯಬೇಕಾಗಿದೆ.
ಮೋದಿ - ಅಮಿತ್ ಶಾ ಭಾಷಣದ ಸರಕು ಕೇವಲ ಅಭಿವೃದ್ಧಿ: ಮೋದಿ, ಅಮಿತ್ ಶಾ ಯಾವ ರಾಜ್ಯಕ್ಕೆ ಹೋಗಲಿ ಅವರು ತಮ್ಮ ಒಂದು ತಾಸಿನ ಭಾಷಣದಲ್ಲಿ ಮುಕ್ಕಾಲು ಗಂಟೆ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. 2014ರಿಂದ ಇಲ್ಲಿಯ ತನಕ ಏನೇನು ಯೋಜನೆ ತಂದಿದ್ದೇವೆ? ಯಾವ ಯೋಜನೆ ಜನರಿಗೆ ತಲುಪಿದೆ? ಎಂಬ ವಿಚಾರಗಳ ಕುರಿತು ಭಾಷಣ ಮಾಡುತ್ತಾರೆ ಹೊರತು, ವಿಪಕ್ಷಗಳಿಗೆ ಪುಕ್ಕಟ್ಟೆ ಬೈದಾಡಿಕೊಂಡು ಓಡಾಡೋದಿಲ್ಲ.
ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿ: ಸಂಸದ ಕರಡಿ
ಯಾವತ್ತಿಗೂ ವಿಪಕ್ಷಗಳು ಇರುವುದೇ ಟೀಕೆ ಮಾಡೋದಕ್ಕೆ. ಆ ಟೀಕೆಗಳಿಗೆ ಆಡಳಿತ ಪಕ್ಷ ಉತ್ತರವಾಗಬೇಕಿರುವುದು ತಾವು ಮಾಡಿದ ಕಾರ್ಯ ಸಾಧನೆಯನ್ನು ಜನರ ಮುಂದೆ ಇಟ್ಟಾಗಲೇ ಹೊರತು, ವಿಪಕ್ಷಗಳೂ ಚೀರಾಡುತ್ತವೆ ಎಂದು ಮೈಕ್ ಸೆಟ್ ವಾಲ್ಯುಮ್ ಜಾಸ್ತಿ ಮಾಡಿಕೊಂಡು ವಿಪಕ್ಷಗಳಿಗಿಂತ ಜೋರಾಗಿ ಒದರಾಡುವುದಲ್ಲ.
ಮೋದಿ ಕರ್ನಾಟಕ್ಕೆ ಪ್ರಚಾರಕ್ಕೆ ಬರುವುದು ಬಿಜೆಪಿ ನಾಯಕರಿಗೆ ಎಷ್ಟು ಮುಖ್ಯ?: 2018ರ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯದ ಇಬ್ಬರು ಘಟಾನುಘಟಿ ನಾಯಕರಿಗೆ ಮೋದಿ ಸಮಾವೇಶದ ಸಲುವಾಗಿಯೆ ಗಲಾಟೆ ಆಗಿತ್ತು. ಮೋದಿ ಸಮಾವೇಶವನ್ನು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಿಸಲು ಇನ್ನೊಬ್ಬ ಲೀಡರ್ ವಿರೋಧ ಮಾಡಿ ತಪ್ಪಿಸಿದರು ಅನ್ನುವದಷ್ಟೇ ತಿಕ್ಕಾಟಕ್ಕೆ ಕಾರಣವಾಗಿತ್ತು.
ಮದುವೆ ಸೀಜನ್‌ನಲ್ಲಿ ಪುರೋಹಿತರಿಗೆ, ಪಂಚವಾದ್ಯ ನುಡಿಸೋರಿಗೆ, ಹಾಗೂ ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣಿಗೆ ಬೇಡಿಕೆ ಬರುವಷ್ಟು ಪ್ರಧಾನಿ ಮೋದಿ ಸಾಹೇಬರಿಗೆ ಯಾವುದೇ ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಪ್ರಚಾರಕ್ಕೆ ಬರಲು ರಾಜ್ಯ ನಾಯಕರ ಒತ್ತಡ ಅಷ್ಟೇ ಇರುತ್ತದೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಸಮೀಕ್ಷೆ ಪ್ರಕಾರ 80-85 ಸೀಟು ಗೆಲ್ಲಬಹುದು ಅನ್ನೋದಷ್ಟೇ ಇತ್ತು.
ಆದರೆ ಒಂದಿಷ್ಟು ತಂತ್ರ ಮತ್ತು ಮೋದಿಯವರ ಪ್ರಚಾರದ ಅಬ್ಭರದಿಂದಾಗಿ ಕಳೆದ ಬಾರಿ ಬಿಜೆಪಿ 104 ಸೀಟು ಗೆದ್ದು ಬಹುಮತದ ಸನೀಹ ಬಂದು ನಿಂತಿತ್ತು. ಬಹುತೇಕ ಬಹುಮತವೇ ಬಂದು ಬಿಡುತ್ತಿತ್ತೇನೊ ಆದರೆ ಸಂಸದ ಅನಂತ್ ಕುಮಾರ್ ಆ ಸಮಯದಲ್ಲಿ ನೀಡಿದ್ದ ಸಂವಿಧಾನ ಬದಲಿಸುವ ಹೇಳಿಕೆ 4-5 ಸೀಟ್ ಹೆಚ್ಚಾಗಿ ಸೋಲಬೇಕಾಯಿತು ಅನ್ನೋದನ್ನ ರಾಜ್ಯ ಬಿಜೆಪಿ ನಾಯಕರು ಖಾಸಗಿಯಾಗಿ ಹೇಳಿದ್ದುಂಟು.
ದಡ ಸೇರಿಸುವರೇ ಮೋದಿ?: ಸಮುದ್ರದ ಮಧ್ಯ ಅಥವಾ ದಡಕ್ಕೆ ಸನಿಹ ನಿಲ್ಲುವ ಬೋಟನ್ನು ದಡ ಸೇರಿಸುವ ಕಾರ್ಯವನ್ನು 2014 ರಿಂದ ಪ್ರಧಾನಿ ಮೋದಿ ಮಾಡುತ್ತಾ ಬರುತ್ತಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ದಡದ ಸಮೀಪ ಇದೆ ಆದರೆ ದಡ ಸೇರುವುದು ಸಂದೇಹ ಅನ್ನೋದು ಗೊತ್ತಾಗುತ್ತಲೆ ಬಿಜೆಪಿಯ ದೋಣಿಯನ್ನು ಎಳೆಯಲು ಮೋದಿ 3-4 ಸಮಾವೇಶ ಹೆಚ್ಚಿಸಿದರು. ಬಿಜೆಪಿ ಉತ್ತರಾಖಂಡದಲ್ಲಿ ಗೆಲುವು ಖಂಡಿತು.
ಉತ್ತರ ಪ್ರದೇಶ, ಗುಜರಾತ್ ಹಾಗೂ ಬಿಹಾರ ಇಲ್ಲೆಲ್ಲಾ ಸೋಲುವ ಅಪಾಯ ಎದುರಾದಾಗೆಲ್ಲಾ ಮೋದಿ ಅಬ್ಭರವೇ ಬಿಜೆಪಿಗೆ ಬೂಸ್ಟರ್ ಡೋಸ್ ರೀತಿ ಕೆಲಸ ಮಾಡಿತು ಅನ್ನುವುದು ಕಟು ಸತ್ಯ. ಆದರೆ ಮೋದಿ ಪ್ರಚಾರ ಮಾಡಿದಾಕ್ಷಣ ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿದೆ ಬಿಡುತ್ತದೆ ಎಂದು ಈ ಕ್ಷಣ ಅನಿಸುತ್ತಿಲ್ಲ.
ಪ್ರತಿದಿನ ಕಾಂಗ್ರೆಸ್ ಒಂದೊಂದು ಆರೋಪ ಮಾಡುತ್ತಿದೆ. 40% ಸರ್ಕಾರ ಎನ್ನುವ ಟ್ಯಾಗ್ ಲೈನ್ ಗಟ್ಟಿ ಮಾಡಲು ಕಾಂಗ್ರೆಸ್ ಹೋರಾಟ ಮಾಡುತ್ತಿದ್ದರೆ, ಅದರಿಂದ ಪಾರಾಗಲು ಮೋದಿ ಎಂಬ ವೋಟ್ ಮಷಿನ್ ಬಂದು ಅಬ್ಬರಿಸಿದ್ರೆ ಬಚಾವ್ ಆಗಬಹುದು ಎನ್ನುವ ಲೆಕ್ಕಾಚಾರ ರಾಜ್ಯ ಬಿಜೆಪಿ ನಾಯಕರದ್ದಾಗಿದೆ. ಹೀಗಾಗಿ ಆರು ಸಮಾವೇಶಗಳಲ್ಲಿ ಎರಡರಲ್ಲಾದರೂ ಮೋದಿ ಕರೆಸುವ ಗುರಿ ರಾಜ್ಯ ನಾಯಕರಿಗೆ ಇದೆ.
ಅದೇ ರೀತಿ ರಾಜ್ಯ ಸರ್ಕಾರದ ಸಾಧನೆ ಏನು ಎಂದು ಪಿನ್ ಟು ಪಿನ್ ಮಾಹಿತಿ ಹೊಂದಿರುವ ಮೋದಿ ಕೂಡ ಪಕ್ಷದ ಗೆಲುವಿಗಾಗಿ ತಮ್ಮ ಅನಿವಾರ್ಯತೆ ಅರಿತಂತೆ ಕಾಣುತ್ತಿದೆ. ಆದರೆ ರಾಜ್ಯ ಸರ್ಕಾರದ ಜನಪರ ಯೋಜನೆಗಳಲ್ಲಿ ಒಂದೆರಡನ್ನಾದರೂ ಮೋದಿ ಪ್ರಸ್ತಾಪಿಸಬೇಕೆಂದರೆ, ಕೇಂದ್ರ ಸರ್ಕಾರದ ಯೋಜನೆಗಳಂತೆ ರಾಜ್ಯ ಸರ್ಕಾರದ ಕಾರ್ಯ ಯೋಜನೆ ಥಟ್ ಅಂತ ನೆನಪಿಗೆ ಬರುವುದು ಕಷ್ಟ.
ಆರು ಸಮಾವೇಶ ಬದಲಿಸಿತೇ ರಾಜ್ಯ ಬಿಜೆಪಿ ಭವಿಷ್ಯ?: ಈಗ ಮತ್ತೆ ವಿಧಾನಸಭೆ ಚುನಾವಣೆ ಎದುರಾಗಿದೆ. ಜನಸ್ಪಂದನ ಸಮಾವೇಶದ ಮೂಲಕ ಪಾಂಚಜನ್ಯ ಮೊಳಗಿಸಿದೆ ಬಿಜೆಪಿ. ಅದರ ಬೆನ್ನಲ್ಲೆ ಬರೋಬ್ಬರಿ ಆರು ಸಮಾವೇಶಗಳಿಗೆ ಸಜ್ಜಾಗಿದೆ. ಯುವಮೋರ್ಚಾ ಸಮಾವೇಶ, ಎಸ್ ಸಿ, ಎಸ್ ಟಿ ಸಮಾವೇಶ, ರೈತ ಮೋರ್ಚಾ, ಓಬಿಸಿ, ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಲು ಕೇಸರಿ ಪಾಳಯ ನಿರ್ಧರಿಸಿದೆ.
ಮೋದಿಯನ್ನ ಮಣಿಸೋಕೆ ರಾಹುಲ್ ಗಾಂಧಿ ಸಜ್ಜು, ಸಫಲವಾಗುತ್ತಾ‘ಭಾರತ್ ಜೋಡೋ ಯಾತ್ರೆ’ ?
ಈ ಎಲ್ಲಾ ಸಮಾವೇಶಗಳನ್ನು ಮಂಗಳೂರು, ಕಲಬುರಗಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಗಳಲ್ಲಿ ಮಾಡಲು ನಿರ್ಧಾರ ಮಾಡಿದೆ. ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯುವ, ಸಣ್ಣ ಸಣ್ಣ ಜಾತಿಯನ್ನೂ ಒಟ್ಟಿಗೆ ತರುವ ಉದ್ದೇಶ ಈ ಸಮಾವೇಶದ ಹಿಂದೆ ಅಡಗಿದೆ ಅನ್ನೋದು ರಾಜಕೀಯ ಸತ್ಯ.
ಈ ಆರು ಸಮಾವೇಶಗಳ ಪೈಕಿ ಕನಿಷ್ಟ ಎರಡು ಸಮಾವೇಶಕ್ಕಾದರೂ ಪ್ರಧಾನಿ ಮೋದಿ ಕರೆಸುವ ಉದ್ದೇಶ ರಾಜ್ಯ ಬಿಜೆಪಿ ನಾಯಕರದ್ದು. ಕಾಂಗ್ರೆಸ್ ಪಡಸಾಲೆಯಿಂದ ಬಂದಂತಹ ಒಂದು ಮಾತು ಬಹಳ ಆಸಕ್ತಿದಾಯಕವಾಗಿತ್ತು. ರಾಜ್ಯ ಬಿಜೆಪಿ ನಾಯಕರನ್ನು ನಂಬಿ ಕೇಂದ್ರ ಬಿಜೆಪಿ ನಾಯಕರು ಚುನಾವಣೆ ಮಾಡುತ್ತಾರೆಯೇ, ಕೇಂದ್ರ ನಾಯಕರ ಪ್ಲಾನ್ ಬೇರೆಯೇ ಇರುತ್ತದೆ ಎಂಬ ಚಿಕ್ಕ ಆತಂಕದ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆ ಆಗುತ್ತದೆ ಎಂದಾದರೆ ಅವರಿಗೆ ಇರೋದು ರಾಜ್ಯ ನಾಯಕರ ಮೇಲೆ ಭಯ ಅಲ್ಲ. ಪ್ರಧಾನಿ ಮೋದಿ ಮ್ಯಾಜಿಕ್ ಮೇಲೆ ಅನ್ನೋದು ಗಮನಾರ್ಹ.